Revised Common Lectionary (Semicontinuous)
ದಾವೀದನು ಗುಹೆಯಲ್ಲಿದ್ದಾಗ ಮಾಡಿದ ಪ್ರಾರ್ಥನೆ. ರಚನೆಗಾರ: ದಾವೀದ.
142 ನಾನು ಯೆಹೋವನಿಗೆ ಮೊರೆಯಿಡುವೆನು;
ಯೆಹೋವನನ್ನು ಕೂಗಿಕೊಳ್ಳುವೆನು.
2 ನನ್ನ ಕಷ್ಟಗಳನ್ನೂ ಚಿಂತೆಗಳನ್ನೂ
ಆತನಿಗೆ ಅರಿಕೆಮಾಡಿಕೊಳ್ಳುವೆನು.
3 ನನ್ನ ವೈರಿಗಳು ನನಗೆ ಉರುಲನ್ನು ಒಡ್ಡಿದ್ದಾರೆ.
ನನ್ನ ಆತ್ಮವು ಕುಂದಿಹೋಗಿದೆ.
ನನ್ನ ಮಾರ್ಗವನ್ನು ತಿಳಿದಿರುವಾತನು ನೀನೇ.
4 ನಾನು ಸುತ್ತಮುತ್ತ ನೋಡಿದರೂ
ನನ್ನ ಸ್ನೇಹಿತರಲ್ಲಿ ಯಾರೂ ಕಾಣುತ್ತಿಲ್ಲ.
ಓಡಿಹೋಗಲು ನನಗೆ ಯಾವ ಸ್ಥಳವೂ ಇಲ್ಲ.
ನನ್ನನ್ನು ರಕ್ಷಿಸಲು ಯಾರೂ ಪ್ರಯತ್ನಿಸುತ್ತಿಲ್ಲ.
5 ಆದ್ದರಿಂದ ಯೆಹೋವನನ್ನು ಕೂಗಿಕೊಳ್ಳುವೆನು.
ನನ್ನ ಆಶ್ರಯಸ್ಥಾನವೂ ನೀನೇ,
ನನ್ನನ್ನು ಬದುಕಿಸಬಲ್ಲಾತನೂ ನೀನೇ ಎಂದು ಆತನಿಗೆ ಮೊರೆಯಿಡುವೆನು.
6 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು.
ನೀನು ನನಗೆ ಬೇಕೇಬೇಕು.
ನನ್ನನ್ನು ಬೆನ್ನಟ್ಟುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
ಅವರು ನನಗಿಂತ ಬಹು ಬಲಿಷ್ಠರಾಗಿದ್ದಾರೆ.
7 ಈ ಉರುಲಿನಿಂದ ಪಾರಾಗಲು ನನಗೆ ಸಹಾಯಮಾಡು.
ಯೆಹೋವನೇ, ಆಗ ನಾನು ನಿನ್ನ ಹೆಸರನ್ನು ಕೊಂಡಾಡುವೆನು.
ನೀನು ನನ್ನನ್ನು ಕಾಪಾಡಿದ್ದರಿಂದ
ನೀತಿವಂತರು ನನ್ನೊಂದಿಗೆ ಕೊಂಡಾಡುವರು.
ಇಸ್ರೇಲ್ ಮತ್ತು ಸಮಾರ್ಯವು ಶಿಕ್ಷಿಸಲ್ಪಡಬೇಕು
1 ಯೆಹೋವನ ಮಾತುಗಳು ಮೀಕನಿಗೆ ಬಂದವು. ಅರಸರಾದ ಯೋಥಾಮ, ಅಹಾಜ ಮತ್ತು ಹಿಜ್ಕೀಯರ ಆಳ್ವಿಕೆಯ ಸಮಯದಲ್ಲಿ ಇದು ನಡೆಯಿತು. ಇವರು ಯೆಹೂದ ರಾಜ್ಯದ ಅರಸರು. ಮೀಕನು ಮೋರೆಷೆತ್‌ನವನು. ಇವನು ಸಮಾರ್ಯ ಮತ್ತು ಜೆರುಸಲೇಮಿನ ವಿಷಯವಾಗಿ ದೇವದರ್ಶನವನ್ನು ಹೊಂದಿದನು.
2 ಎಲ್ಲಾ ಜನರೇ, ಕೇಳಿರಿ!
ಭೂಮಿಯೂ ಅದರಲ್ಲಿರುವವರೆಲ್ಲರೂ ಕೇಳಿರಿ!
ನನ್ನ ಒಡೆಯನಾದ ಯೆಹೋವನು ತನ್ನ ಪವಿತ್ರ ಆಲಯದಿಂದ ಬರುವನು.
ನಿಮ್ಮ ವಿರುದ್ಧ ಸಾಕ್ಷಿಯಾಗಿ ಆತನು ಬರುವನು.
3 ಯೆಹೋವನು ತನ್ನ ಸ್ಥಳದಿಂದ ಹೊರಟು ಬರುವುದನ್ನು ನೋಡಿರಿ.
ಆತನು ಲೋಕದ ಬೆಟ್ಟಗಳ ಮೇಲೆ ನಡೆಯಲು ಬರುತ್ತಿದ್ದಾನೆ.
4 ಬೆಂಕಿಯಲ್ಲಿ ಮೇಣವು ಕರಗುವಂತೆ
ಬೆಟ್ಟಗಳು ಆತನ ಪಾದದಡಿಯಿಂದ ಕರಗಿಹೋಗುತ್ತವೆ.
ತಗ್ಗುಗಳು ಇಬ್ಭಾಗವಾಗಿ ನೀರಿನಂತೆ
ಕಡಿದಾದ ಸ್ಥಳದಿಂದ ಹರಿದುಹೋಗುತ್ತವೆ.
5 ಇದಕ್ಕೆಲ್ಲಾ ಕಾರಣ ಯಾಕೋಬನ ಪಾಪಗಳೇ,
ಇಸ್ರೇಲರ ದ್ರೋಹಗಳೇ!
ಪಾಪಕ್ಕೆ ಕಾರಣ ಸಮಾರ್ಯವೇ
ಯಾಕೋಬು ಪಾಪಮಾಡಿದ್ದಕ್ಕೆ ಕಾರಣವೇನು?
ಸಮಾರ್ಯವೇ ಕಾರಣ.
ಯೆಹೂದದ ಎತ್ತರವಾದ ಸ್ಥಳ ಯಾವುದು?[a]
ಅದೇ ಜೆರುಸಲೇಮ್.
ದೇವರನ್ನು ಹರ್ಷಗೊಳಿಸುವ ಜೀವನ
4 ಸಹೋದರ ಸಹೋದರಿಯರೇ, ಈಗ ನಿಮಗೆ ಇತರ ಕೆಲವು ವಿಚಾರಗಳನ್ನು ತಿಳಿಸುತ್ತೇನೆ. ದೇವರನ್ನು ಮೆಚ್ಚಿಸಲು ಹೇಗೆ ಜೀವಿಸಬೇಕೆಂದು ನಿಮಗೆ ಕಲಿಸಿದ್ದೇವೆ. ನೀವು ಅದೇ ರೀತಿಯಲ್ಲಿ ಜೀವಿಸುತ್ತಿರುವಿರಿ. ಅದೇ ರೀತಿಯಲ್ಲಿ ಇನ್ನೂ ಹೆಚ್ಚು ಸಮರ್ಪಕವಾಗಿ ಜೀವಿಸಬೇಕೆಂದು ನಾವು ನಿಮ್ಮನ್ನು ಕ್ರಿಸ್ತನಲ್ಲಿ ಕೇಳಿಕೊಳ್ಳುತ್ತೇವೆ ಮತ್ತು ಪ್ರೋತ್ಸಾಹಿಸುತ್ತೇವೆ. 2 ನೀವು ಯಾವ ಕಾರ್ಯಗಳನ್ನು ಮಾಡಬೇಕೆಂದು ನಾವು ನಿಮಗೆ ಹೇಳಿದೆವೋ ಅವುಗಳೆಲ್ಲಾ ನಿಮಗೆ ತಿಳಿದೇ ಇವೆ. ಪ್ರಭು ಯೇಸುವಿನ ಅಧಿಕಾರದಿಂದ ನಾವು ಆ ಸಂಗತಿಗಳನ್ನು ನಿಮಗೆ ಹೇಳಿದೆವು. 3 ನೀವು ಪವಿತ್ರರಾಗಿರಬೇಕೆಂಬುದು ದೇವರ ಚಿತ್ತವಾಗಿದೆ. ಆದುದರಿಂದ ನೀವು ಲೈಂಗಿಕ ಪಾಪಗಳಿಂದ ದೂರವಿರಿ. 4 ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಸ್ವಂತ ದೇಹಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕೆಂಬುದು ದೇವರ ಅಪೇಕ್ಷೆ. ನಿಮ್ಮ ದೇಹವನ್ನು ಪವಿತ್ರವಾದ ಮಾರ್ಗದಲ್ಲಿ ಬಳಸಿದರೆ, ದೇವರಿಗೆ ಗೌರವವನ್ನು ನೀಡಿದಂತಾಗುವುದು.[a] 5 ನಿಮ್ಮ ದೇಹವನ್ನು ಲೈಂಗಿಕ ಪಾಪಗಳಿಗಾಗಿ ಬಳಸಬೇಡಿ. ದೇವರನ್ನು ತಿಳಿಯದ ಜನರು ತಮ್ಮ ದೇಹಗಳನ್ನು ಅದಕ್ಕೆ ಬಳಸುತ್ತಾರೆ. 6 ಈ ವಿಷಯದಲ್ಲಿ ನಿಮ್ಮಲ್ಲಿ ಯಾರೂ ಕ್ರಿಸ್ತನಲ್ಲಿ ಸಹೋದರನಾದವನನ್ನು ವಂಚಿಸಿ ಕೇಡುಮಾಡಬಾರದು. ನಾವು ಈಗಾಗಲೇ ನಿಮಗೆ ಹೇಳಿದಂತೆ ಮತ್ತು ಎಚ್ಚರಿಕೆ ನೀಡಿದಂತೆ ಇವೆಲ್ಲವುಗಳ ವಿಷಯದಲ್ಲಿ ದೇವರು ದಂಡಿಸುತ್ತಾನೆ. 7 ದೇವರು ನಮ್ಮನ್ನು ಪರಿಶುದ್ಧರಾಗಿ ಜೀವಿಸುವುದಕ್ಕೆ ಕರೆದಿದ್ದಾನೆ. ನಾವು ಪಾಪದಲ್ಲಿ ಜೀವಿಸಲು ಆತನು ಇಷ್ಟಪಡುವುದಿಲ್ಲ. 8 ಆದುದರಿಂದ ಈ ಉಪದೇಶವನ್ನು ಅನುಸರಿಸದವನು ಅವಿಧೇಯನಾಗಿರುವುದು ದೇವರಿಗೇ ಹೊರತು ಮಾನವನಿಗಲ್ಲ. ನಮಗೆ ತನ್ನ ಪವಿತ್ರಾತ್ಮನನ್ನು ನೀಡಿದಾತನು ದೇವರೇ.
Kannada Holy Bible: Easy-to-Read Version. All rights reserved. © 1997 Bible League International