Revised Common Lectionary (Semicontinuous)
105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.
ಉರಿಯುವ ಪೊದೆ
3 ಮೋಶೆಯ ಮಾವನ ಹೆಸರು ಇತ್ರೋನನು. ಇತ್ರೋನನು ಮಿದ್ಯಾನಿನ ಯಾಜಕನಾಗಿದ್ದನು. ಮೋಶೆಯು ಇತ್ರೋನನ ಕುರಿಗಳಿಗೆ ಕುರುಬನಾಗಿದ್ದನು. ಒಂದು ದಿನ, ಮೋಶೆಯು ಕುರಿಗಳನ್ನು ಮರುಭೂಮಿಯ ಪಶ್ಚಿಮಭಾಗಕ್ಕೆ ನಡೆಸಿಕೊಂಡು ದೇವರ ಬೆಟ್ಟವೆಂದು ಕರೆಯಲ್ಪಡುವ ಸೀನಾಯಿ ಎಂಬ ಹೋರೇಬ್ ಬೆಟ್ಟಕ್ಕೆ ಹೋದನು. 2 ಆ ಬೆಟ್ಟದಲ್ಲಿ ಯೆಹೋವನ ದೂತನು ಮೋಶೆಗೆ ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡನು.
ಪೊದೆಯು ಉರಿಯುತ್ತಿದ್ದರೂ ಸುಟ್ಟು ಹೋಗದಿರುವುದನ್ನು ಮೋಶೆ ಗಮನಿಸಿದನು. 3 ಪೊದೆಯು ಉರಿಯುತ್ತಿದ್ದರೂ ಸುಟ್ಟುಹೋಗದಿರುವುದಕ್ಕೆ ಕಾರಣವೇನೆಂದು ತಿಳಿದುಕೊಳ್ಳಲು ಮೋಶೆಯು ಪೊದೆಯ ಸಮೀಪಕ್ಕೆ ಹೋಗತೊಡಗಿದನು.
4 ಮೋಶೆಯು ಪೊದೆಯನ್ನು ನೋಡಲು ಬರುತ್ತಿರುವುದನ್ನು ಯೆಹೋವನು ನೋಡಿದನು. ದೇವರು ಆ ಪೊದೆಯೊಳಗಿಂದ, “ಮೋಶೆ, ಮೋಶೆ!” ಎಂದು ಕರೆದನು.
ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು.
5 ಆಗ ಯೆಹೋವನು, “ಇನ್ನೂ ಹತ್ತಿರ ಬರಬೇಡ. ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು. ಏಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ. 6 ನಾನು ನಿನ್ನ ಪೂರ್ವಿಕರ ದೇವರು, ನಾನು ಅಬ್ರಹಾಮನ ದೇವರು, ನಾನು ಇಸಾಕನ ದೇವರು, ನಾನು ಯಾಕೋಬನ ದೇವರು” ಎಂದು ಹೇಳಿದನು.
ದೇವರನ್ನು ನೋಡುವುದಕ್ಕೆ ಭಯಪಟ್ಟು ಮೋಶೆ ತನ್ನ ಮುಖವನ್ನು ಮುಚ್ಚಿಕೊಂಡನು.
12 ಧರ್ಮಶಾಸ್ತ್ರವನ್ನು ಹೊಂದಿರುವ ಜನರು ಮತ್ತು ಧರ್ಮಶಾಸ್ತ್ರದ ಬಗ್ಗೆ ಕೇಳಿಯೂ ಇಲ್ಲದ ಜನರು ಪಾಪ ಮಾಡುವಾಗ ಅವರಿಬ್ಬರಿಗೂ ಯಾವ ವ್ಯತ್ಯಾಸವಿರುವುದಿಲ್ಲ. ಧರ್ಮಶಾಸ್ತ್ರವಿಲ್ಲದವರಾಗಿ ಪಾಪ ಮಾಡುವವರು ನಾಶವಾಗುವರು. ಅದೇ ರೀತಿಯಲ್ಲಿ, ಧರ್ಮಶಾಸ್ತ್ರವನ್ನು ಹೊಂದಿದವರಾಗಿ ಪಾಪ ಮಾಡುವವರು ಧರ್ಮಶಾಸ್ತ್ರಕ್ಕನುಸಾರವಾಗಿ ತೀರ್ಪನ್ನು ಹೊಂದುವರು. 13 ಧರ್ಮಶಾಸ್ತ್ರವನ್ನು ಕೇಳಿದ ಮಾತ್ರಕ್ಕೆ ಜನರು ನೀತಿವಂತರಾಗುವುದಿಲ್ಲ. ಧರ್ಮಶಾಸ್ತ್ರ ಹೇಳುವ ಪ್ರತಿಯೊಂದಕ್ಕೂ ವಿಧೇಯರಾಗುವ ಜನರನ್ನು ಧರ್ಮಶಾಸ್ತ್ರವು ನೀತಿವಂತರನ್ನಾಗಿ ಮಾಡುತ್ತದೆ.
14 ಯೆಹೂದ್ಯರಲ್ಲದವರು ಧರ್ಮಶಾಸ್ತ್ರವನ್ನು ಹೊಂದಿಲ್ಲ. ಆದರೆ ಅವರು ಧರ್ಮಶಾಸ್ತ್ರವನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇಯಾದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ. 15 ಧರ್ಮಶಾಸ್ತ್ರದ ಆಜ್ಞಾವಿಧಿಗಳಿಗನುಸಾರವಾಗಿ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಮ್ಮ ಹೃದಯಗಳು ಬಲ್ಲವೆಂದು ಅವರು ತಮ್ಮ ನಡತೆಯಿಂದಲೇ ತೋರ್ಪಡಿಸುತ್ತಾರೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
16 ಮನುಷ್ಯರ ಅಂತರಂಗದಲ್ಲಿರುವ ರಹಸ್ಯ ಸಂಗತಿಗಳಿಗೆ ದೇವರು ತೀರ್ಪುಮಾಡುವ ದಿನದಂದು ಇವುಗಳೆಲ್ಲಾ ನೆರವೇರುವವು. ದೇವರು ಯೇಸು ಕ್ರಿಸ್ತನ ಮೂಲಕ ಜನರಿಗೆ ತೀರ್ಪು ಮಾಡುತ್ತಾನೆ ಎಂಬುದಾಗಿ ಸುವಾರ್ತೆಯು ತಿಳಿಸುತ್ತದೆ. ನಾನು ಜನರಿಗೆ ತಿಳಿಸುವುದು ಆ ಸುವಾರ್ತೆಯನ್ನೇ.
Kannada Holy Bible: Easy-to-Read Version. All rights reserved. © 1997 Bible League International