Revised Common Lectionary (Semicontinuous)
10 ರಾಣಿಯೇ, ನನಗೆ ಕಿವಿಗೊಡು.
ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11 ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[a]
12 ತೂರ್ ಪಟ್ಟಣದ ಶ್ರೀಮಂತರು
ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.
13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.
16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.
18 ಯಾಕೋಬನು ತನ್ನ ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆದನು.
ಅವನ ತಂದೆ, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.
19 ಯಾಕೋಬನು ತನ್ನ ತಂದೆಗೆ, “ನಾನು ಏಸಾವ, ನಿನ್ನ ಮೊದಲನೆ ಮಗ. ನೀನು ಹೇಳಿದಂತೆ ನಾನು ಮಾಡಿಕೊಂಡು ಬಂದಿದ್ದೇನೆ. ನಾನು ನಿನಗೋಸ್ಕರ ಬೇಟೆಯಾಡಿದ ಪ್ರಾಣಿಯ ಮಾಂಸವನ್ನು ಕುಳಿತುಕೊಂಡು ತಿನ್ನು. ಅನಂತರ ನೀನು ನನ್ನನ್ನು ಆಶೀರ್ವದಿಸಬಹುದು” ಎಂದು ಹೇಳಿದನು.
20 ಆದರೆ ಇಸಾಕನು ತನ್ನ ಮಗನಿಗೆ, “ನೀನು ಇಷ್ಟು ಬೇಗನೆ ಬೇಟೆಯಾಡಿಕೊಂಡು ಬಂದೆಯಾ?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ನಾನು ಬಹುಬೇಗನೆ ಪ್ರಾಣಿಗಳನ್ನು ಕಂಡುಕೊಳ್ಳುವಂತೆ ನಿನ್ನ ದೇವರಾದ ಯೆಹೋವನು ಸಹಾಯ ಮಾಡಿದನು” ಎಂದು ಉತ್ತರಿಸಿದನು.
21 ಬಳಿಕ ಇಸಾಕನು ಯಾಕೋಬನಿಗೆ, “ನನ್ನ ಬಳಿಗೆ ಬಾ, ನನ್ನ ಮಗನನ್ನು ನಾನು ಮುಟ್ಟಿ ತಿಳಿದುಕೊಳ್ಳಬಲ್ಲೆ. ನಾನು ನಿನ್ನನ್ನು ಮುಟ್ಟಿದರೆ, ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಲ್ಲೆ” ಎಂದು ಹೇಳಿದನು.
22 ಆದ್ದರಿಂದ ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಹೋದನು. ಇಸಾಕನು ಅವನನ್ನು ಮುಟ್ಟಿ, “ನಿನ್ನ ಸ್ವರ ಯಾಕೋಬನ ಸ್ವರವಿದ್ದಂತಿದೆ. ಆದರೆ ನಿನ್ನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿವೆ” ಅಂದನು. 23 ಅವನು ಯಾಕೋಬನೆಂಬುದು ಇಸಾಕನಿಗೆ ತಿಳಿಯಲಿಲ್ಲ. ಯಾಕೆಂದರೆ ಅವನ ಕೈಗಳು ಏಸಾವನ ಕೈಗಳಂತೆ ರೋಮದಿಂದ ಕೂಡಿದ್ದವು. ಆದ್ದರಿಂದ ಇಸಾಕನು ಯಾಕೋಬನನ್ನು ಆಶೀರ್ವದಿಸಿದನು.
24 ಇಸಾಕನು ಅವನಿಗೆ, “ನೀನು ನಿಜವಾಗಿಯೂ ನನ್ನ ಮಗನಾದ ಏಸಾವನೋ?” ಎಂದು ಕೇಳಿದನು.
ಅದಕ್ಕೆ ಯಾಕೋಬನು, “ಹೌದು, ನಾನೇ” ಎಂದು ಉತ್ತರಕೊಟ್ಟನು.
ಯಾಕೋಬನಿಗೆ ಆಶೀರ್ವಾದ
25 ಆಗ ಇಸಾಕನು, “ಊಟವನ್ನು ತೆಗೆದುಕೊಂಡು ಬಾ. ನಾನು ಊಟಮಾಡಿ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಅಂತೆಯೇ ಯಾಕೋಬನು ಊಟವನ್ನು ತಂದು ಕೊಟ್ಟಾಗ ಊಟಮಾಡಿದನು; ದ್ರಾಕ್ಷಾರಸವನ್ನು ಕುಡಿದನು.
26 ಬಳಿಕ ಇಸಾಕನು ಅವನಿಗೆ, “ಮಗನೇ, ನನ್ನ ಬಳಿಗೆ ಬಂದು ನನಗೆ ಮುದ್ದಿಡು” ಅಂದನು. 27 ಅದರಂತೆಯೇ ಯಾಕೋಬನು ತಂದೆಯ ಬಳಿಗೆ ಹೋಗಿ ಅವನಿಗೆ ಮುದ್ದಿಟ್ಟನು. ಇಸಾಕನು ಅವನ ಉಡುಪಿನ ವಾಸನೆಯನ್ನು ನೋಡಿ ಅವನನ್ನು ಹೀಗೆ ಆಶೀರ್ವದಿಸಿದನು:
“ನನ್ನ ಮಗನ ಸುವಾಸನೆಯು
ಯೆಹೋವನು ಆಶೀರ್ವದಿಸಿದ ಪ್ರದೇಶಗಳಂತಿದೆ.
28 ಯೆಹೋವನು ನಿನಗೆ ಬೇಕಾದಷ್ಟು ಮಳೆಯನ್ನು ಕೊಡಲಿ;
ನಿನಗೆ ಸಾರವುಳ್ಳ ಭೂಮಿಯೂ ಮಹಾಸುಗ್ಗಿಗಳೂ ಮತ್ತು ದ್ರಾಕ್ಷಾರಸವೂ ದೊರೆಯಲಿ.
29 ಎಲ್ಲಾ ಜನರು ನಿನ್ನ ಸೇವೆಮಾಡಲಿ;
ಜನಾಂಗಗಳು ನಿನಗೆ ತಲೆಬಾಗಲಿ.
ನೀನು ನಿನ್ನ ಸಹೋದರರ ಮೇಲೆ ಆಡಳಿತ ಮಾಡುವೆ.
ನಿನ್ನ ತಾಯಿಯ ಗಂಡುಮಕ್ಕಳು ನಿನಗೆ ತಲೆಬಾಗಿ ವಿಧೇಯರಾಗುವರು.
ನಿನ್ನನ್ನು ಶಪಿಸುವ ಪ್ರತಿಯೊಬ್ಬನು ಶಾಪಗ್ರಸ್ಥನಾಗುವನು.
ನಿನ್ನನ್ನು ಆಶೀರ್ವದಿಸುವ ಪ್ರತಿಯೊಬ್ಬನು ಆಶೀರ್ವದಿಸಲ್ಪಡುವನು.”
ಯೇಸು ತಂದೆಗೆ ಮಾಡಿದ ಪ್ರಾರ್ಥನೆ
(ಮತ್ತಾಯ 11:25-27; 13:16-17)
21 ಬಳಿಕ ಯೇಸು ಪವಿತ್ರಾತ್ಮನ ಮೂಲಕ ಬಹಳ ಸಂತೋಷಗೊಂಡು ಹೀಗೆ ಪ್ರಾರ್ಥಿಸಿದನು: “ಪರಲೋಕ ಭೂಲೋಕಗಳ ಪ್ರಭುವಾದ ತಂದೆಯೇ, ನಾನು ನಿನ್ನನ್ನು ಸ್ತುತಿಸುತ್ತೇನೆ. ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಸಂಗತಿಗಳನ್ನು ಮರೆಮಾಡಿದ್ದಕ್ಕಾಗಿ ನಾನು ನಿನ್ನನ್ನು ಸ್ತುತಿಸುತ್ತೇನೆ. ಆದರೆ ನೀನು ಚಿಕ್ಕಮಕ್ಕಳಂತಿರುವ ಜನರಿಗೆ ಈ ಸಂಗತಿಗಳನ್ನು ಪ್ರಕಟಮಾಡಿದೆ. ಹೌದು, ತಂದೆಯೇ, ಅದೇ ನಿನ್ನ ಅಪೇಕ್ಷೆಯಾಗಿತ್ತು.
22 “ನನ್ನ ತಂದೆಯು ಎಲ್ಲವನ್ನೂ ನನಗೆ ಕೊಟ್ಟಿದ್ದಾನೆ. ಮಗನು ಯಾರೆಂಬುದು ಯಾರಿಗೂ ಗೊತ್ತಿಲ್ಲ. ತಂದೆಯೊಬ್ಬನಿಗೇ ಗೊತ್ತಿದೆ. ತಂದೆಯು ಯಾರೆಂಬುದು ಮಗನಿಗೆ ಮಾತ್ರ ಗೊತ್ತಿದೆ. ಮಗನು ತಂದೆಯ ಬಗ್ಗೆ ಯಾರಿಗೆ ತಿಳಿಸುತ್ತಾನೋ ಅವರು ಮಾತ್ರ ತಂದೆಯ ಬಗ್ಗೆ ತಿಳಿದುಕೊಳ್ಳುವರು.”
23 ಬಳಿಕ ಯೇಸು ತನ್ನ ಶಿಷ್ಯರ ಕಡೆಗೆ ತಿರುಗಿ ನೋಡಿದನು. ಅಲ್ಲಿ ಆತನ ಶಿಷ್ಯರು ಮಾತ್ರವಿದ್ದರು. ಯೇಸು ಅವರಿಗೆ, “ಈಗ ನಡೆಯುವ ಸಂಗತಿಗಳನ್ನು ನೋಡುತ್ತಿರುವ ನೀವು ಧನ್ಯರು! 24 ಅನೇಕ ಪ್ರವಾದಿಗಳೂ ಅರಸರೂ ಈಗ ನೀವು ನೋಡುತ್ತಿರುವ ಈ ಸಂಗತಿಗಳನ್ನು ನೋಡಬೇಕೆಂದು ಮತ್ತು ಈಗ ನೀವು ಕೇಳುತ್ತಿರುವ ಸಂಗತಿಗಳನ್ನು ಕೇಳಬೇಕೆಂದು ಅಪೇಕ್ಷಿಸಿದರು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International