Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 45:10-17

10 ರಾಣಿಯೇ, ನನಗೆ ಕಿವಿಗೊಡು.
    ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊ.
ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು.
11     ಆಗ ರಾಜನು ನಿನ್ನ ಸೌಂದರ್ಯವನ್ನು ಮೆಚ್ಚಿಕೊಳ್ಳುವನು.
ಅವನು ನಿನಗೆ ಹೊಸ ಯಜಮಾನನಾಗಿರುವನು.
    ಆದ್ದರಿಂದ ನೀನು ಅವನನ್ನು ಗೌರವಿಸಬೇಕು.[a]
12 ತೂರ್ ಪಟ್ಟಣದ ಶ್ರೀಮಂತರು
    ನಿನ್ನನ್ನು ಸಂಧಿಸಲು ನಿನಗಾಗಿ ಉಡುಗೊರೆಗಳನ್ನು ತರುವರು.

13 ಅಂತಃಪುರದಲ್ಲಿ ರಾಜಕುಮಾರಿಯು ವೈಭವದಿಂದಿರುವಳು;
    ಆಕೆಯು ಜರತಾರಿಯ ವಸ್ತ್ರವನ್ನು ಧರಿಸಿಕೊಂಡಿದ್ದಾಳೆ.
14 ಆಕೆಯು ಕಸೂತಿ ರಚಿತವಾದ ವಸ್ತ್ರಗಳನ್ನು ಧರಿಸಿಕೊಂಡು
    ತನ್ನ ಸಖಿಯರಾದ ಕನ್ಯಾಪರಿವಾರದೊಡನೆ ರಾಜನ ಬಳಿಗೆ ಬರುವಳು.
15 ಅವರು ಸಂತೋಷದಿಂದಲೂ ಉಲ್ಲಾಸದಿಂದಲೂ
    ರಾಜನ ಅರಮನೆಯೊಳಕ್ಕೆ ಪ್ರವೇಶಿಸುವರು.

16 ರಾಜನೇ, ನಿನ್ನ ಗಂಡುಮಕ್ಕಳು ನಿನ್ನ ತರುವಾಯ ಆಡಳಿತ ಮಾಡುವರು;
    ನೀನು ಅವರನ್ನು ನಿನ್ನ ದೇಶದಲ್ಲೆಲ್ಲಾ ಅಧಿಪತಿಗಳನ್ನಾಗಿ ನೇಮಿಸುವೆ.
17 ನಾನು ನಿನ್ನ ಹೆಸರನ್ನು ಯಾವಾಗಲೂ ಪ್ರಖ್ಯಾತಿಪಡಿಸುವೆನು;
    ಜನಾಂಗಗಳು ನಿನ್ನನ್ನು ಸದಾಕಾಲ ಕೊಂಡಾಡುವರು.

ಆದಿಕಾಂಡ 27:1-17

ಯಾಕೋಬನು ಇಸಾಕನಿಗೆ ಮಾಡಿದ ಮೋಸ

27 ಇಸಾಕನು ಮುದುಕನಾದಾಗ ಅವನಿಗೆ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಒಂದು ದಿನ ಅವನು ತನ್ನ ಹಿರಿಮಗನಾದ ಏಸಾವನನ್ನು ತನ್ನ ಬಳಿಗೆ ಕರೆದು ಅವನಿಗೆ, “ಮಗನೇ” ಅಂದನು.

ಏಸಾವನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.

ಇಸಾಕನು ಅವನಿಗೆ, “ನನಗೆ ವಯಸ್ಸಾಯಿತು. ನಾನು ಬಹುಬೇಗನೆ ಸಾಯಬಹುದು. ಆದ್ದರಿಂದ ನಿನ್ನ ಬಿಲ್ಲುಬಾಣಗಳನ್ನು ತೆಗೆದುಕೊಂಡು ಬೇಟೆಗೆ ಹೋಗು. ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಆದ್ದರಿಂದ ಏಸಾವನು ಬೇಟೆಗಾಗಿ ಹೋದನು.

ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಈ ವಿಷಯಗಳನ್ನೆಲ್ಲ ರೆಬೆಕ್ಕಳು ಕೇಳಿಸಿಕೊಂಡಳು. ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ಕೇಳು, ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನೊಡನೆ ಮಾತಾಡುತ್ತಿರುವುದನ್ನು ನಾನು ಕೇಳಿಸಿಕೊಂಡೆ. ನಿನ್ನ ತಂದೆ ಅವನಿಗೆ, ‘ನನಗೋಸ್ಕರ ಒಂದು ಪ್ರಾಣಿಯನ್ನು ಬೇಟೆಯಾಡಿಕೊಂಡು ಬಂದು ನನಗೆ ಇಷ್ಟವಾದ ಅಡಿಗೆಯನ್ನು ತಯಾರಿಸಿ ತೆಗೆದುಕೊಂಡು ಬಾ. ನಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವೆನು’ ಎಂದು ಹೇಳಿದನು. ಆದ್ದರಿಂದ ಮಗನೇ, ನನ್ನ ಮಾತನ್ನು ಕೇಳು ಮತ್ತು ನಾನು ಹೇಳಿದ್ದನ್ನು ಮಾಡು. ನಮ್ಮ ಆಡುಗಳ ಬಳಿಗೆ ಹೋಗಿ ಎರಡು ಆಡುಮರಿಗಳನ್ನು ತೆಗೆದುಕೊಂಡು ಬಾ. ನಿಮ್ಮ ತಂದೆಗೆ ಇಷ್ಟವಾದ ಅಡಿಗೆಯನ್ನು ನಾನು ಅವುಗಳ ಮಾಂಸದಿಂದ ಸಿದ್ಧಪಡಿಸುವೆ. 10 ನೀನು ಆ ಅಡಿಗೆಯನ್ನು ನಿನ್ನ ತಂದೆಗೆ ತೆಗೆದುಕೊಂಡು ಹೋಗು. ಆಗ ಅವನು ತಾನು ಸಾಯುವ ಮೊದಲೇ ನಿನ್ನನ್ನು ಆಶೀರ್ವದಿಸುವನು” ಅಂದಳು.

11 ಅದಕ್ಕೆ ಯಾಕೋಬನು ತನ್ನ ತಾಯಿಯಾದ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನಿಗೆ ಮೈತುಂಬ ರೋಮಗಳಿವೆ, ಆದರೆ ನನಗೆ ರೋಮಗಳಿಲ್ಲ. 12 ನನ್ನ ತಂದೆ ನನ್ನನ್ನು ಮುಟ್ಟಿದರೆ, ನಾನು ಏಸಾವನಲ್ಲವೆಂದು ತಿಳಿದುಕೊಳ್ಳುವನು. ಆಗ ಅವನು ನನ್ನನ್ನು ಆಶೀರ್ವದಿಸುವುದಿಲ್ಲ. ನಾನು ಅವನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದರಿಂದ ಅವನು ನನ್ನನ್ನು ಶಪಿಸುವನು” ಎಂದು ಹೇಳಿದನು.

13 ಅದಕ್ಕೆ ರೆಬೆಕ್ಕಳು ಅವನಿಗೆ, “ಅವನು ನಿನಗೆ ಶಾಪಕೊಟ್ಟರೆ, ಆ ಶಾಪವು ನನಗಾಗಲಿ. ನಾನು ಹೇಳಿದಂತೆ ಮಾಡು. ನನಗೋಸ್ಕರ ಆಡುಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.

14 ಆದ್ದರಿಂದ ಯಾಕೋಬನು ಹೋಗಿ ಎರಡು ಆಡುಗಳನ್ನು ತೆಗೆದುಕೊಂಡು ಬಂದನು. ಇಸಾಕನಿಗೆ ಇಷ್ಟವಾದ ರುಚಿಕರವಾದ ಪದಾರ್ಥಗಳನ್ನು ಆಕೆ ಅವುಗಳ ಮಾಂಸದಿಂದ ತಯಾರಿಸಿದಳು. 15 ಅನಂತರ ರೆಬೆಕ್ಕಳು ತನ್ನ ಹಿರಿಯ ಮಗನಾದ ಏಸಾವನಿಗೆ ಇಷ್ಟವಾದ ಉಡುಪನ್ನು ತೆಗೆದುಕೊಂಡಳು. ರೆಬೆಕ್ಕಳು ಆ ಉಡುಪನ್ನು ತನ್ನ ಕಿರಿಮಗನಾದ ಯಾಕೋಬನಿಗೆ ತೊಡಿಸಿದಳು. 16 ಆಡುಗಳ ಚರ್ಮವನ್ನು ಯಾಕೋಬನ ಕೈಗಳಿಗೂ ಕೊರಳಿಗೂ ಸುತ್ತಿದಳು. 17 ಅನಂತರ ಆಕೆ ತಾನು ಸಿದ್ಧಪಡಿಸಿದ್ದ ಅಡಿಗೆಯನ್ನು ಯಾಕೋಬನಿಗೆ ಕೊಟ್ಟಳು.

ರೋಮ್ನಗರದವರಿಗೆ 7:7-20

ಪಾಪದೊಡನೆ ಹೋರಾಟ

ಪಾಪ ಮತ್ತು ಧರ್ಮಶಾಸ್ತ್ರ ಇವೆರಡೂ ಒಂದೇ ಎಂದು ನಾನು ಹೇಳುತ್ತಿರುವುದಾಗಿ ನೀವು ಭಾವಿಸಬಹುದು. ಆದರೆ ಅದು ನಿಜವಲ್ಲ. ಪಾಪವೆಂದರೆ ಏನೆಂಬುದನ್ನು ಕಲಿತುಕೊಳ್ಳಲು ಧರ್ಮಶಾಸ್ತ್ರವೊಂದೇ ನನಗೆ ಏಕೈಕ ಮಾರ್ಗವಾಗಿದೆ. ಧರ್ಮಶಾಸ್ತ್ರವಿಲ್ಲದಿದ್ದರೆ, ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ. “ಬೇರೆಯವರ ವಸ್ತುಗಳನ್ನು ನೀವು ಆಶಿಸಕೂಡದು”(A) ಎಂದು ಧರ್ಮಶಾಸ್ತ್ರವು ಹೇಳಿದ್ದರಿಂದಲೇ ಅದು ನನಗೆ ತಿಳಿಯಿತು. ಆದರೆ ಪಾಪವು ಆ ಆಜ್ಞೆಯನ್ನೇ ಬಳಸಿಕೊಂಡು ನನ್ನಲ್ಲಿ ಎಲ್ಲಾ ಬಗೆಯ ದುರಾಶೆಗಳನ್ನು ಕೆರಳಿಸಿತು. ಆದ್ದರಿಂದ ಆ ಆಜ್ಞೆಯಿಂದಾಗಿ ಪಾಪವು ನನ್ನ ಬಳಿಗೆ ಬಂದಿತು. ಆದರೆ ಧರ್ಮಶಾಸ್ತ್ರವಿಲ್ಲದಿದ್ದರೆ, ಪಾಪಕ್ಕೆ ಅಧಿಕಾರವೇ ಇಲ್ಲ. ನಾನು ಧರ್ಮಶಾಸ್ತ್ರವನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ಧರ್ಮಶಾಸ್ತ್ರವಿಲ್ಲದವನಾಗಿ ಜೀವಂತವಾಗಿದ್ದೆನು. ಆದರೆ ಧರ್ಮಶಾಸ್ತ್ರದ ಆಜ್ಞೆಯು ನನ್ನ ಬಳಿಗೆ ಬಂದಾಗ, ಪಾಪವು ಜೀವಿಸತೊಡಗಿತು. 10 ನಾನು ಪಾಪದ ನಿಮಿತ್ತ ಆತ್ಮಿಕವಾಗಿ ಸತ್ತುಹೋದೆನು. ಜೀವವನ್ನು ತರಬೇಕಾಗಿದ್ದ ಆಜ್ಞೆಯೇ ನನಗೆ ಮರಣವನ್ನು ತಂದಿತು. 11 ಪಾಪವು ಆ ಆಜ್ಞೆಯನ್ನು ಬಳಸಿಕೊಂಡು ನನ್ನನ್ನು ವಂಚಿಸಿ, ನನ್ನಲ್ಲಿ ಆತ್ಮಿಕ ಮರಣವನ್ನು ಉಂಟುಮಾಡಿತು.

12 ಹೀಗಿರಲು ಧರ್ಮಶಾಸ್ತ್ರ ಪರಿಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಒಳ್ಳೆಯದೂ ಆಗಿದೆ. 13 ಹಾಗಾದರೆ, ಒಳ್ಳೆಯದೇ ನನಗೆ ಮರಣವನ್ನು ಬರಮಾಡಿತೆಂದರ್ಥವೇ? ಇಲ್ಲ! ಆದರೆ ಪಾಪವು ಒಳ್ಳೆಯದನ್ನೇ ಬಳಸಿಕೊಂಡು ನನಗೆ ಮರಣವನ್ನು ಬರಮಾಡಿತು. ಇದರಿಂದಾಗಿ, ನಾನು ಪಾಪದ ನಿಜಸ್ವರೂಪವನ್ನು ಕಾಣುವಂತಾಯಿತು. ಪಾಪವು ಬಹು ಕೆಟ್ಟದ್ದೆಂದು ಆಜ್ಞೆಯ ಮೂಲಕ ಸ್ಪಷ್ಟವಾಯಿತು.

ಮನುಷ್ಯನಲ್ಲಿ ಗೊಂದಲ

14 ಧರ್ಮಶಾಸ್ತ್ರವು ಆತ್ಮಿಕವಾದದ್ದೆಂದು ನಾವು ಬಲ್ಲೆವು. ಆದರೆ ನಾನು ಆತ್ಮಿಕನಲ್ಲ. ನಾನು ಪಾಪಕ್ಕೆ ಮಾರಲ್ಪಟ್ಟ ಗುಲಾಮನೋ ಎಂಬಂತೆ ಪಾಪವು ನನ್ನನ್ನು ಆಳುತ್ತದೆ. 15 ನಾನು ಮಾಡುವ ಕಾರ್ಯಗಳು ನನಗೇ ಅರ್ಥವಾಗುವುದಿಲ್ಲ. ನಾನು ಯಾವ ಒಳ್ಳೆಯ ಕಾರ್ಯಗಳನ್ನು ಮಾಡಬೇಕೆಂದು ಇಚ್ಛಿಸುತ್ತೇನೋ ಆ ಕಾರ್ಯಗಳನ್ನು ಮಾಡದೆ ನಾನು ದ್ವೇಷಿಸುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 16 ನಾನು ಮಾಡುವ ಕೆಟ್ಟಕಾರ್ಯಗಳನ್ನು ಮಾಡಲು ನನಗೆ ಇಷ್ಟವಿಲ್ಲದಿದ್ದರೆ, ಧರ್ಮಶಾಸ್ತ್ರವು ಒಳ್ಳೆಯದೆಂದು ನಾನು ಒಪ್ಪಿಕೊಂಡಂತಾಯಿತು. 17 ಹೀಗಿರಲಾಗಿ ಈ ಕೆಟ್ಟಕಾರ್ಯಗಳನ್ನು ಮಾಡುವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಈ ಕೆಟ್ಟಕಾರ್ಯಗಳನ್ನು ಮಾಡುತ್ತದೆ. 18 ಹೌದು, ನನ್ನಲ್ಲಿ ಅಂದರೆ ನನ್ನ ಪಾಪಾಧೀನಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂಬುದು ನನಗೆ ಗೊತ್ತಿದೆ. ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ನನಗೆ ಮನಸ್ಸಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ನನಗೆ ಸಾಧ್ಯವಿಲ್ಲ. 19 ನಾನು ಮಾಡಲಿಚ್ಛಿಸುವ ಒಳ್ಳೆಯ ಕಾರ್ಯಗಳನ್ನು ಮಾಡದೆ ಮಾಡಲಿಚ್ಛಿಸದಿರುವ ಕೆಟ್ಟಕಾರ್ಯಗಳನ್ನೇ ಮಾಡುತ್ತೇನೆ. 20 ಹೀಗಿರಲಾಗಿ, ನಾನು ಮಾಡಲಿಚ್ಛಿಸದಿರುವ ಕಾರ್ಯಗಳನ್ನು ನಾನು ಮಾಡಿದರೆ, ಅವುಗಳನ್ನು ಮಾಡವವನು ನಿಜವಾಗಿಯೂ ನಾನಲ್ಲ. ನನ್ನಲ್ಲಿ ವಾಸವಾಗಿರುವ ಪಾಪವೇ ಆ ಕೆಟ್ಟಕಾರ್ಯಗಳನ್ನು ಮಾಡುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International