Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 47

ರಚನೆಗಾರರು: ಕೋರಹೀಯರು.

47 ಸರ್ವಜನಾಂಗಗಳೇ, ಚಪ್ಪಾಳೆ ತಟ್ಟಿರಿ;
    ದೇವರಿಗೆ ಆನಂದಘೋಷ ಮಾಡಿರಿ!
ಮಹೋನ್ನತನಾದ ಯೆಹೋವನು ಭಯಂಕರನಾಗಿದ್ದಾನೆ.
    ಆತನು ಭೂಲೋಕಕ್ಕೆಲ್ಲಾ ಮಹಾರಾಜನಾಗಿದ್ದಾನೆ.
ಆತನು ಜನಾಂಗಗಳನ್ನು ಸೋಲಿಸಲು ನಮಗೆ ಸಹಾಯಮಾಡಿ
    ಅವುಗಳನ್ನು ನಮಗೆ ಅಧೀನಪಡಿಸಿದ್ದಾನೆ.
ದೇವರು ಈ ದೇಶವನ್ನು ನಮಗೋಸ್ಕರವಾಗಿ ಆರಿಸಿಕೊಂಡನು;
    ತನಗೆ ಪ್ರಿಯರಾದ ಯಾಕೋಬನ ವಂಶಸ್ಥರಿಗಾಗಿ ಆತನು ಮನೋಹರವಾದ ಈ ದೇಶವನ್ನು ಆರಿಸಿಕೊಂಡನು.

ಯೆಹೋವನು ಆನಂದಘೋಷದೊಡನೆಯೂ
    ತುತ್ತೂರಿಗಳ ಧ್ವನಿಯೊಡನೆಯೂ ಸಿಂಹಾಸನಾರೂಢನಾಗುವನು.
ದೇವರನ್ನು ಸಂಕೀರ್ತಿಸಿರಿ, ಕೀರ್ತಿಸಿರಿ.
    ನಮ್ಮ ರಾಜನನ್ನು ಸಂಕೀರ್ತಿಸಿರಿ, ಸಂಕೀರ್ತಿಸಿರಿ.
ದೇವರು ಇಡೀಲೋಕಕ್ಕೆ ರಾಜನಾಗಿದ್ದಾನೆ;
    ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
ದೇವರು ತನ್ನ ಪರಿಶುದ್ಧ ಸಿಂಹಾಸನದ ಮೇಲೆ ಕುಳಿತುಕೊಂಡಿದ್ದಾನೆ;
    ದೇವರು ಎಲ್ಲಾ ಜನಾಂಗಗಳನ್ನು ಆಳುವನು.
ಜನಾಂಗಗಳ ನಾಯಕರು
    ಅಬ್ರಹಾಮನ ದೇವಜನರೊಡನೆ ಕೂಡಿಬರುವರು.
ಎಲ್ಲಾ ಜನಾಂಗಗಳ ಎಲ್ಲಾ ನಾಯಕರುಗಳು ದೇವರಿಗೆ ಅಧೀನರಾಗಿದ್ದಾರೆ.
    ದೇವರು ಅವರಿಗೆ ಸರ್ವಾಧಿಕಾರಿ!

ಯೆಶಾಯ 51:1-3

ಇಸ್ರೇಲ್ ಅಬ್ರಹಾಮನಂತೆ ಇರಬೇಕು

51 “ಒಳ್ಳೆಯವರಾಗಿ ಜೀವಿಸಲು ಬಹಳವಾಗಿ ಪ್ರಯತ್ನಿಸುತ್ತಿರುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೇ ದೃಷ್ಟಿಸಿ ನೋಡಿರಿ; ಆ ಬಂಡೆಯೊಳಗಿಂದಲೇ ನೀವು ತೆಗೆಯಲ್ಪಟ್ಟಿದ್ದೀರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮ ಮಾತೆಯಾದ ಸಾರಳನ್ನೂ ದೃಷ್ಟಿಸಿರಿ; ನಾನು ಕರೆದಾಗ ಅಬ್ರಹಾಮನು ಒಬ್ಬಂಟಿಗನಾಗಿದ್ದನು. ನಾನು ಅವನನ್ನು ಆಶೀರ್ವದಿಸಿ, ಅವನ ಸಂತಾನವನ್ನು ಅಭಿವೃದ್ಧಿಪಡಿಸಿ, ಅವನನ್ನು ಮಹಾಜನಾಂಗದ ಮೂಲಪುರುಷನನ್ನಾಗಿ ಮಾಡಿದೆನು.”

ಅದೇ ರೀತಿಯಲ್ಲಿ ಯೆಹೋವನು ಚೀಯೋನನ್ನು ಮತ್ತು ನಿರ್ಜನವಾದ ಅದರ ಸ್ಥಳಗಳನ್ನು ಆದರಿಸುವನು; ಅವರಿಗಾಗಿ ಮಹಾದೊಡ್ಡ ಕಾರ್ಯವನ್ನು ಮಾಡುವನು. ಯೆಹೋವನು ಮರುಭೂಮಿಯನ್ನು ಏದೆನ್ ಉದ್ಯಾನವನದಂತೆ ಮಾಡುವನು. ಆ ದೇಶವು ಬರಿದಾಗಿತ್ತು. ಆದರೆ ಅದು ಯೆಹೋವನ ಉದ್ಯಾನವನವಾಗುವದು. ಅದರೊಳಗಿರುವ ಜನರು ಸಂತೋಷಭರಿತರಾಗುವರು. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವರು. ಅವರು ಕೃತಜ್ಞತಾಸ್ತುತಿ ಮಾಡುವರು, ಜಯಗೀತೆಯನ್ನು ಹಾಡುವರು.

ಮತ್ತಾಯ 11:20-24

ನಂಬದ ಜನರಿಗೆ ಯೇಸುವಿನ ಎಚ್ಚರಿಕೆ

(ಲೂಕ 10:13-15)

20 ನಂತರ ಯೇಸು, ತಾನು ಯಾವ ಪಟ್ಟಣಗಳಲ್ಲಿ ಹೇರಳವಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನೋ ಆ ಪಟ್ಟಣಗಳನ್ನು ಖಂಡಿಸಿದನು. ಏಕೆಂದರೆ ಆ ಪಟ್ಟಣಗಳಲ್ಲಿದ್ದ ಜನರು ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳಲಿಲ್ಲ ಮತ್ತು ಪಾಪ ಮಾಡುವುದನ್ನು ನಿಲ್ಲಿಸಲಿಲ್ಲ. 21 ಯೇಸು ಹೇಳಿದ್ದೇನೆಂದರೆ: “ಖೊರಾಜಿನೇ, ನಿನ್ನ ಗತಿಯನ್ನು ಏನು ಹೇಳಲಿ? ಬೆತ್ಸಾಯಿದವೇ, ನಿನ್ನ ಗತಿಯನ್ನು ಏನು ಹೇಳಲಿ! ನಾನು ನಿಮ್ಮಲ್ಲಿ ಅನೇಕ ಅದ್ಭುತಕಾರ್ಯಗಳನ್ನು ಮಾಡಿದೆನು. ಅದೇ ಅದ್ಭುತಕಾರ್ಯಗಳನ್ನು ಟೈರ್, ಸೀದೋನ್‌ಗಳಲ್ಲಿ ಮಾಡಿದ್ದರೆ, ಅವುಗಳ ಜನರು ಬಹಳ ಕಾಲದ ಹಿಂದೆಯೇ ತಮ್ಮ ಜೀವಿತವನ್ನು ಬದಲಾಯಿಸಿಕೊಳ್ಳುತ್ತಿದ್ದರು; ತಮ್ಮ ಪಾಪಗಳಿಗಾಗಿ ದುಃಖಪಟ್ಟು ಗೋಣಿತಟ್ಟನ್ನು ಕಟ್ಟಿಕೊಳ್ಳುತ್ತಿದ್ದರು; ಮೈಮೇಲೆ ಬೂದಿಯನ್ನು ಹಾಕಿಕೊಳ್ಳುತ್ತಿದ್ದರು. 22 ಆದರೆ ನ್ಯಾಯತೀರ್ಪಿನ ದಿನದಲ್ಲಿ ಟೈರ್, ಸೀದೋನ್‌ಗಳಿಗಿಂತಲೂ ನಿಮ್ಮ ಸ್ಥಿತಿಯು ಬಹಳ ದುಸ್ಥಿತಿಗೆ ಒಳಗಾಗುವುದೆಂದು ನಾನು ನಿಮಗೆ ಹೇಳುತ್ತೇನೆ.

23 “ಕಪೆರ್ನೌಮೇ, ನೀನು ಪರಲೋಕಕ್ಕೆ ಎತ್ತಲ್ಪಡುವುದಾಗಿ ಯೋಚಿಸುವಿಯೋ? ಇಲ್ಲ! ನೀನು ಪಾತಾಳಕ್ಕೆ ಇಳಿಯುವೆ. ನಾನು ನಿನ್ನಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದೆ. ಸೊದೋಮಿನಲ್ಲಿ ಆ ಅದ್ಭುತಕಾರ್ಯಗಳನ್ನು ನಡೆಸಿದ್ದರೆ ಆ ಜನರು ಪಾಪಮಾಡುವುದನ್ನು ನಿಲ್ಲಿಸಿಬಿಡುತ್ತಿದ್ದರು ಮತ್ತು ಇಂದಿನವರೆಗೂ ಅದು ಪಟ್ಟಣವಾಗಿಯೇ ಉಳಿದಿರುತ್ತಿತ್ತು. 24 ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿನ್ನ ಪರಿಸ್ಥಿತಿ ಸೊದೋಮಿಗಿಂತಲೂ ದುಸ್ಥಿತಿಗೆ ಒಳಗಾಗುವುದು ಎಂದು ನಾನು ನಿನಗೆ ಹೇಳುತ್ತೇನೆ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International