Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 13

ರಚನೆಗಾರ: ದಾವೀದ.

13 ಯೆಹೋವನೇ, ನನ್ನನ್ನು ಇನ್ನೆಷ್ಟುಕಾಲ ಮರೆತಿರುವೆ?
    ನನ್ನನ್ನು ಶಾಶ್ವತವಾಗಿ ಮರೆತುಬಿಡುವೆಯಾ?
    ಇನ್ನೆಷ್ಟುಕಾಲ ನನಗೆ ಮರೆಯಾಗಿರುವೆ?
ನಾನು ದುಃಖಕ್ರಾಂತನಾಗಿ ಇನ್ನೆಷ್ಟುಕಾಲ ಆಲೋಚಿಸುತ್ತಿರಬೇಕು?
    ನನ್ನ ವೈರಿಗಳು ಇನ್ನೆಷ್ಟುಕಾಲ ನನ್ನ ಮೇಲೆ ಜಯಗಳಿಸಬೇಕು?

ನನ್ನ ದೇವರಾದ ಯೆಹೋವನೇ, ನನ್ನ ಮೇಲೆ ದೃಷ್ಟಿಯಿಟ್ಟು ಸದುತ್ತರವನ್ನು ದಯಪಾಲಿಸು.
    ಇಲ್ಲವಾದರೆ, ನಾನು ಸಾಯಲೇಬೇಕಾಗುವುದು!
ಆಗ ವೈರಿಯು, “ನಾನು ಅವನನ್ನು ಸೋಲಿಸಿದೆ!” ಎಂದು ಹೇಳುತ್ತಾ
    ನನ್ನ ಬೀಳುವಿಕೆಯನ್ನು ಕಂಡು ಸಂತೋಷಪಡುವನು.

ನಾನಂತೂ ನಿನ್ನ ಶಾಶ್ವತವಾದ ಪ್ರೀತಿಯಲ್ಲಿ ಭರವಸೆಯಿಟ್ಟಿದ್ದೇನೆ.
    ನಿನ್ನ ರಕ್ಷಣೆಯ ನಿಮಿತ್ತ ನನ್ನ ಹೃದಯವು ಹರ್ಷಿಸುವುದು.
ಯೆಹೋವನು ಮಹೋಪಕಾರಗಳನ್ನು ಮಾಡಿರುವುದರಿಂದ
    ಆತನಿಗೆ ಹರ್ಷಗೀತೆಗಳನ್ನು ಹಾಡುವೆನು.

2 ಪೂರ್ವಕಾಲವೃತ್ತಾಂತ 20:5-12

ಯೆಹೋಷಾಫಾಟನು ದೇವಾಲಯದ ಹೊಸ ಅಂಗಳದಲ್ಲಿ ಕೂಡಿಬಂದ ಜನರೆದುರು ಎದ್ದುನಿಂತು,

“ನಮ್ಮ ಪಿತೃಗಳ ದೇವರಾದ ಯೆಹೋವನೇ, ನೀನು ಪರಲೋಕದಲ್ಲಿರುವ ದೇವರು. ಲೋಕದ ಎಲ್ಲಾ ದೇಶಗಳನ್ನಾಳುವವನು ನೀನೇ. ಬಲಸಾಮರ್ಥ್ಯವುಳ್ಳವನು ನೀನೇ, ಯಾರೂ ನಿನಗೆದುರಾಗಿ ನಿಲ್ಲಲಾರರು. ನೀನೇ ನಮ್ಮ ದೇವರಾಗಿರುವೆ. ನೀನು ಈ ದೇಶದಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿ ಈ ದೇಶವನ್ನು ಅಬ್ರಹಾಮನ ಸಂತತಿಯವರಾದ ಇಸ್ರೇಲರಿಗೆ ಕೊಟ್ಟೆ. ಅಬ್ರಹಾಮನು ನಿನ್ನ ಸ್ನೇಹಿತನಾಗಿದ್ದನು. ಅಬ್ರಹಾಮನ ಸಂತತಿಯವರು ಈ ದೇಶದಲ್ಲಿ ವಾಸವಾಗಿ ನಿನ್ನ ಹೆಸರನ್ನು ಸ್ಥಾಪಿಸಲು ನಿನಗೊಂದು ದೇವಾಲಯವನ್ನು ಕಟ್ಟಿದರು. ಅವರು, ‘ನಮಗೆ ಖಡ್ಗ, ಕಾಯಿಲೆ, ಬರ, ಶಿಕ್ಷೆಗಳಿಂದ ಸಂಕಷ್ಟ ಉಂಟಾದರೆ ನಾವು ನಿನ್ನ ಮತ್ತು ನಿನ್ನ ಆಲಯದೆದುರು ನಿಂತು ನಿನಗೆ ಮೊರೆಯಿಡುವಾಗ ನೀನು ನಮ್ಮ ಮೊರೆಯನ್ನು ಕೇಳಿ ನಮಗೆ ಸಹಾಯ ಮಾಡುವೆ. ನಿನ್ನ ಹೆಸರು ಈ ಆಲಯದ ಮೇಲಿದೆ’ ಎಂದು ಹೇಳಿದರು.

10 “ಈಗ ಅಮ್ಮೋನಿಯರೂ ಮೋವಾಬಿನವರೂ ಸೇಯೀರ್ ಬೆಟ್ಟಪ್ರದೇಶದವರೂ ನಮಗೆ ವಿರೋಧವಾಗಿ ಬಂದಿದ್ದಾರೆ. ಈಜಿಪ್ಟಿನಿಂದ ಇಸ್ರೇಲರು ಹೊರಬಂದಾಗ ಅವರ ದೇಶದೊಳಗಿಂದ ಪ್ರಯಾಣ ಮಾಡಲು ನೀನು ಬಿಡಲಿಲ್ಲ. ಆದ್ದರಿಂದ ಇಸ್ರೇಲರು ಅವರನ್ನು ನಾಶಮಾಡದೆ ಬೇರೆ ಕಡೆಗೆ ತಿರುಗಿದರು.[a] 11 ಅವರನ್ನು ನಾಶಮಾಡದೆ ಹೋದದ್ದಕ್ಕೆ ಈಗ ಅವರು ಮಾಡುತ್ತಿರುವುದನ್ನು ನೀನೇ ನೋಡು. ನೀನು ನಮಗೆ ಕೊಟ್ಟ ದೇಶದಿಂದ ನಮ್ಮನ್ನು ಹೊರಡಿಸಲು ಬಂದಿದ್ದಾರೆ. 12 ನಮ್ಮ ದೇವರೇ, ನೀನೇ ಅವರನ್ನು ಶಿಕ್ಷಿಸು. ನಮಗೆ ವಿರುದ್ಧವಾಗಿ ಬರುತ್ತಿರುವ ಅವರ ದೊಡ್ಡಸೈನ್ಯವನ್ನು ಎದುರಿಸಲು ನಮ್ಮಿಂದಾಗದು. ಏನು ಮಾಡಬೇಕೋ ನಮಗೆ ತಿಳಿಯುತ್ತಿಲ್ಲ. ನಾವು ನಿನ್ನ ಸಹಾಯವನ್ನೇ ಎದುರುನೋಡುತ್ತಿದ್ದೇವೆ” ಎಂದು ಪ್ರಾರ್ಥಿಸಿದನು.

ಗಲಾತ್ಯದವರಿಗೆ 5:7-12

ನೀವು ಚೆನ್ನಾಗಿ ಓಡುತ್ತಾ ಇದ್ದಿರಿ. ನೀವು ಸತ್ಯಕ್ಕೆ ವಿಧೇಯರಾಗಿದ್ದಿರಿ. ಸತ್ಯಮಾರ್ಗವನ್ನು ಅನುಸರಿಸದಂತೆ ನಿಮ್ಮನ್ನು ಒತ್ತಾಯಪಡಿಸಿದವರ್ಯಾರು? ಆ ಒತ್ತಾಯವು ಬಂದದ್ದು ನಿಮ್ಮನ್ನು ಆರಿಸಿಕೊಂಡಾತನಿಂದಲ್ಲ. ಎಚ್ಚರಿಕೆಯಿಂದಿರಿ! “ಸ್ವಲ್ಪ ಹುಳಿಯಿಂದ ಪಾತ್ರೆಯಲ್ಲಿರುವ ನಾದಿದ ಹಿಟ್ಟೆಲ್ಲಾ ಹುಳಿಯಾಗುವುದು.” 10 ಆ ಬೇರೆ ಅಭಿಪ್ರಾಯಗಳನ್ನು ನೀವು ನಂಬುವುದಿಲ್ಲವೆಂದು ಪ್ರಭುವಿನಲ್ಲಿ ನಿಮ್ಮನ್ನು ಕುರಿತು ಭರವಸೆಯಿಂದಿದ್ದೇನೆ. ಯಾರೊ ಒಬ್ಬನು ಆ ಅಭಿಪ್ರಾಯಗಳಿಂದ ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾನೆ. ಅವನು ಯಾರೇ ಆಗಿದ್ದರೂ ದಂಡನೆ ಹೊಂದುವನು.

11 ನನ್ನ ಸಹೋದರ ಸಹೋದರಿಯರೇ, ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನು ಬೋಧಿಸುವುದಿಲ್ಲ. ಸುನ್ನತಿಯ ಅಗತ್ಯತೆಯನ್ನು ಕುರಿತು ಉಪದೇಶಿಸುವವನಾಗಿದ್ದರೆ, ನಾನಿನ್ನೂ ಹಿಂಸೆಗೆ ಒಳಗಾಗಿರುವುದೇಕೆ? ಜನರು ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಾನಿನ್ನೂ ಉಪದೇಶಿಸುವುದಾಗಿದ್ದರೆ, ಶಿಲುಬೆಯ ವಿಷಯವಾದ ನನ್ನ ಬೋಧನೆಗೆ ಅಡ್ಡಿಯಾಗುವುದೇ ಇಲ್ಲ. 12 ನಿಮ್ಮನ್ನು ಕಳವಳಪಡಿಸುತ್ತಿರುವವರು ತಮಗಾಗಿರುವ ಸುನ್ನತಿಯಲ್ಲದೆ ತಮ್ಮ ಅಂಗವನ್ನೇ ಕತ್ತರಿಸಿಕೊಂಡರೆ ಒಳ್ಳೆಯದು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International