Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 86:11-17

11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
    ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
    ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
    ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
    ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
    ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
    ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
    ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
    ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
    ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
    ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
    ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.

ಆದಿಕಾಂಡ 25:12-18

12 ಇದು ಇಷ್ಮಾಯೇಲನ ವಂಶಾವಳಿ: ಇಷ್ಮಾಯೇಲನು ಅಬ್ರಹಾಮನ ಮತ್ತು ಹಾಗರಳ ಮಗನು. (ಈಜಿಪ್ಟಿನವಳಾದ ಹಾಗರಳು ಸಾರಳ ಸೇವಕಿ.) 13 ಇಷ್ಮಾಯೇಲನ ಗಂಡುಮಕ್ಕಳ ಹೆಸರುಗಳು: ಮೊದಲನೆ ಮಗನು ನೆಬಾಯೋತ್. ಆಮೇಲೆ ಹುಟ್ಟಿದವರು: ಕೇದಾರ್, ಅದ್ಬಯೇಲ್, ಮಿಬ್ಸಾಮ್, 14 ಮಿಷ್ಮಾ, ದೂಮಾ, ಮಸ್ಸಾ, 15 ಹದದ್, ತೇಮಾ, ಯಟೂರ್, ನಾಫೀಷ್ ಮತ್ತು ಕೇದ್ಮಾ. 16 ಪ್ರತಿಯೊಬ್ಬನೂ ತನ್ನದೇ ಆದ ಪಾಳೆಯವನ್ನು ಹೊಂದಿದ್ದನು. ಆ ಪಾಳೆಯಗಳೇ ಮುಂದೆ ಚಿಕ್ಕ ಪಟ್ಟಣಗಳಾದವು. ಈ ಹನ್ನೆರಡು ಮಂದಿ ಗಂಡುಮಕ್ಕಳು ತಮ್ಮ ಜನರಿಗೆ ಹನ್ನೆರಡು ಮಂದಿ ರಾಜರುಗಳಂತಿದ್ದರು. 17 ಇಷ್ಮಾಯೇಲನು ನೂರ ಮೂವತ್ತೇಳು ವರ್ಷ ಬದುಕಿದನು. ಅವನು ಸತ್ತ ನಂತರ ಅವನನ್ನು ತನ್ನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ಟರು. 18 ಇಷ್ಮಾಯೇಲನ ಸಂತತಿಯವರು ಮರುಭೂಮಿ ಪ್ರದೇಶದ ಉದ್ದಕ್ಕೂ ಪಾಳೆಯಗಳನ್ನು ಮಾಡಿಕೊಂಡಿದ್ದರು. ಈ ಪ್ರದೇಶವು ಹವೀಲ ಮತ್ತು ಈಜಿಪ್ಟಿನ ಸಮೀಪದಲ್ಲಿರುವ ಶೂರಿನಿಂದ ಆರಂಭಗೊಂಡು ಅಶ್ಶೂರದವರೆಗೂ ಇತ್ತು. ಇಷ್ಮಾಯೇಲನ ಸಂತತಿಗಳವರು ಪದೇಪದೇ ತಮ್ಮ ಸಹೋದರನ ಜನರಿಗೆ ವಿರೋಧವಾಗಿ ಆಕ್ರಮಣ ಮಾಡುತ್ತಿದ್ದರು.

ಪ್ರಕಟನೆ 2:8-11

ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ

“ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.

“ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.

11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International