Revised Common Lectionary (Semicontinuous)
11 ಯೆಹೋವನೇ, ನಿನ್ನ ಮಾರ್ಗಗಳನ್ನು ನನಗೆ ಉಪದೇಶಿಸು.
ನಾನು ಜೀವಿಸುತ್ತಾ ನಿನ್ನ ಸತ್ಯತೆಗಳಿಗೆ ವಿಧೇಯನಾಗುವೆನು.
ನಿನ್ನ ಹೆಸರನ್ನು ಆರಾಧಿಸಲು ನನಗೆ ಸಹಾಯಮಾಡು.
ನನ್ನ ಜೀವನದಲ್ಲಿ ಅದೇ ಅತ್ಯಂತ ಮುಖ್ಯವಾದದ್ದು.
12 ನನ್ನ ದೇವರಾದ ಯೆಹೋವನೇ, ಪೂರ್ಣಹೃದಯದಿಂದ ನಿನ್ನನ್ನು ಸ್ತುತಿಸುವೆನು;
ನಿನ್ನ ಹೆಸರನ್ನು ಎಂದೆಂದಿಗೂ ಸನ್ಮಾನಿಸುವೆನು!
13 ನೀನು ನನ್ನ ಮೇಲೆ ಎಷ್ಟೋ ಪ್ರೀತಿಯನ್ನು ಇಟ್ಟಿರುವೆ.
ನೀನು ನನ್ನನ್ನು ಪಾತಾಳದಿಂದ ರಕ್ಷಿಸಿದೆ.
14 ದೇವರೇ, ಅಹಂಕಾರಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ.
ಕ್ರೂರಜನರು ಗುಂಪುಕೂಡಿಕೊಂಡು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ.
ಅವರು ನನ್ನನ್ನು ಗೌರವಿಸುವುದಿಲ್ಲ.
15 ಯೆಹೋವನೇ, ಕನಿಕರವೂ ದಯೆಯೂ ಉಳ್ಳ ದೇವರು ನೀನೇ.
ನೀನು ತಾಳ್ಮೆಯುಳ್ಳವನೂ ನಂಬಿಗಸ್ತನೂ ಪ್ರೀತಿಪೂರ್ಣನೂ ಆಗಿರುವೆ.
16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.
ಸೇವಕಿಯಾಗಿದ್ದ ಹಾಗರಳು
16 ಸಾರಯಳು ಅಬ್ರಾಮನ ಹೆಂಡತಿ. ಆಕೆಗೆ ಮಕ್ಕಳಿರಲಿಲ್ಲ. ಸಾರಯಳಿಗೆ ಈಜಿಪ್ಟಿನ ಒಬ್ಬ ಸೇವಕಿಯಿದ್ದಳು. ಅವಳ ಹೆಸರು ಹಾಗರಳು. 2 ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ನನ್ನ ಸೇವಕಿಯಾದ ಹಾಗರಳ ಬಳಿಗೆ ಹೋಗು. ಆಕೆಯಲ್ಲಿ ಹುಟ್ಟುವ ಮಗುವನ್ನು ನನ್ನ ಮಗುವಂತೆ ಸ್ವೀಕರಿಸಿಕೊಳ್ಳುವೆನು” ಎಂದು ಹೇಳಿದಳು. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳಿಗೆ ವಿಧೇಯನಾದನು.
3 ಅಬ್ರಾಮನು ಕಾನಾನಿಗೆ ಬಂದು ಹತ್ತು ವರ್ಷಗಳಾದ ಮೇಲೆ ಇದು ನಡೆಯಿತು. ಹೀಗೆ ಸಾರಯಳು ತನ್ನ ಗಂಡನಾದ ಅಬ್ರಾಮನಿಗೆ ಹಾಗರಳನ್ನು ಕೊಟ್ಟಳು. ಹಾಗರಳು ಆಕೆಯ ಈಜಿಪ್ಟಿನ ಸೇವಕಿಯಾಗಿದ್ದಳು. 4 ಹಾಗರಳು ಅಬ್ರಾಮನಿಂದ ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಯಳನ್ನೇ ಕಡೆಗಣಿಸತೊಡಗಿದಳು. 5 ಆಗ ಸಾರಯಳು ಅಬ್ರಾಮನಿಗೆ, “ನನ್ನ ಸಂಕಟಕ್ಕೆ ನೀನೇ ಕಾರಣ. ನಾನು ಅವಳನ್ನು ನಿನಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ನನ್ನನ್ನೇ ಕಡೆಗಣಿಸುತ್ತಿದ್ದಾಳೆ. ಯೆಹೋವನೇ ನನಗೂ ನಿನಗೂ ನ್ಯಾಯ ತೀರಿಸಲಿ” ಎಂದು ಹೇಳಿದಳು.
6 ಅದಕ್ಕೆ ಅಬ್ರಾಮನು ಸಾರಯಳಿಗೆ, “ನೀನು ಹಾಗರಳ ಯಜಮಾನಿ. ನೀನು ಅವಳಿಗೆ ಏನುಬೇಕಾದರೂ ಮಾಡಬಹುದು” ಎಂದು ಹೇಳಿದನು. ಆದ್ದರಿಂದ ಸಾರಯಳು ಹಾಗರಳನ್ನು ಶಿಕ್ಷಿಸಿದಳು. ಆಗ ಹಾಗರಳು ಓಡಿಹೋದಳು.
ಹಾಗರಳ ಮಗನಾದ ಇಷ್ಮಾಯೇಲ
7 ಯೆಹೋವನ ದೂತನು ಹಾಗರಳನ್ನು ಮರುಳುಗಾಡಿನ ಒರತೆಯೊಂದರ ಬಳಿಯಲ್ಲಿ ಕಂಡನು. ಆ ಒರತೆಯು ಶೂರಿಗೆ ಹೋಗುವ ದಾರಿಯ ಬಳಿಯಲ್ಲಿತ್ತು. 8 ದೇವದೂತನು ಅವಳಿಗೆ, “ಹಾಗರಳೇ, ನೀನು ಸಾರಯಳ ಸೇವಕಿಯಾಗಿದ್ದರೂ ಯಾಕೆ ಇಲ್ಲಿರುವೆ? ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
ಹಾಗರಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಿರುವೆ” ಎಂದು ಹೇಳಿದಳು.
9 ಯೆಹೋವನ ದೂತನು ಹಾಗರಳಿಗೆ, “ಸಾರಯಳು ನಿನ್ನ ಯಜಮಾನಿ. ನೀನು ಆಕೆಯ ಬಳಿಗೆ ಹಿಂತಿರುಗಿ ಹೋಗಿ ಆಕೆಗೆ ವಿಧೇಯಳಾಗಿರು” ಎಂದು ಹೇಳಿದನು. 10 ಇದಲ್ಲದೆ ಯೆಹೋವನ ದೂತನು ಹಾಗರಳಿಗೆ, “ನಾನು ನಿನ್ನ ಸಂತತಿಯವರನ್ನು ಅಸಂಖ್ಯಾತರನ್ನಾಗಿ ಮಾಡುವೆನು” ಅಂದನು.
11 ಇದಲ್ಲದೆ ದೇವದೂತನು ಆಕೆಗೆ,
“ಹಾಗರಳೇ, ಈಗ ನೀನು ಗರ್ಭಿಣಿಯಾಗಿರುವೆ;
ನಿನಗೆ ಒಬ್ಬ ಮಗನು ಹುಟ್ಟುವನು.
ನೀನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು;
ಯಾಕೆಂದರೆ ಯೆಹೋವನು ನಿನ್ನ ಕಷ್ಟಗಳನ್ನು ಕೇಳಿದ್ದಾನೆ; ಆತನು ನಿನಗೆ ಸಹಾಯ ಮಾಡುವನು.
12 ಇಷ್ಮಾಯೇಲನು ಕಾಡುಕತ್ತೆಯಂತೆ
ಗಡುಸಾಗಿದ್ದು ಸ್ವತಂತ್ರವಾಗಿರುವನು.
ಅವನು ಪ್ರತಿಯೊಬ್ಬರಿಗೂ ವಿರೋಧವಾಗಿರುವನು;
ಪ್ರತಿಯೊಬ್ಬರೂ ಅವನಿಗೆ ವಿರೋಧವಾಗಿರುವರು.
ಅವನು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾ
ತನ್ನ ಸಹೋದರರ ಸಮೀಪದಲ್ಲಿ ವಾಸಿಸಿದರೂ ಅವರಿಗೆ ವಿರೋಧವಾಗಿರುವನು.”
ಎಂದು ಹೇಳಿ ಹೊರಟುಹೋದನು.
13 ಯೆಹೋವನು ತನ್ನೊಡನೆ ಮಾತಾಡಿದ್ದರಿಂದ ಹಾಗರಳು, “ಈ ಸ್ಥಳದಲ್ಲಿಯೂ ದೇವರು ನನ್ನನ್ನು ನೋಡಿ ನನಗಾಗಿ ಚಿಂತಿಸುತ್ತಾನೆ ಎಂದುಕೊಂಡು ಆತನಿಗೆ ‘ನನ್ನನ್ನು ನೋಡುವ ದೇವರು’” ಎಂದು ಹೆಸರಿಟ್ಟಳು. 14 ಆದ್ದರಿಂದ ಆ ಬಾವಿಗೆ ಬೀರ್‌ಲಹೈರೋಯಿ (ಬೀರ್‌ಲಹೈರೋಯಿ. ಇದರರ್ಥ: “ನನ್ನನ್ನು ನೋಡುವ ಜೀವಸ್ವರೂಪನ ಬಾವಿ.”) ಎಂದು ಹೆಸರಾಯಿತು. ಈ ಬಾವಿಯು ಕಾದೇಶಿಗೂ ಬೆರೆದಿಗೂ ನಡುವೆ ಇದೆ.
15 ಹಾಗರಳು ಅಬ್ರಾಮನ ಮಗನಿಗೆ ಜನ್ಮಕೊಟ್ಟಳು. ಅಬ್ರಾಮನು ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.
ಎಫೆಸದಲ್ಲಿರುವ ಸಭೆಗೆ ಯೇಸುವಿನ ಪತ್ರ
2 “ಎಫೆಸದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ತನ್ನ ಬಲಗೈಯಲ್ಲಿ ಏಳು ನಕ್ಷತ್ರಗಳನ್ನು ಹಿಡಿದಿರುವಾತನು ಮತ್ತು ಏಳು ದೀಪಸ್ತಂಭಗಳ ನಡುವೆ ತಿರುಗಾಡುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.
2 “ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಕಷ್ಟಪಟ್ಟು ಕೆಲಸಮಾಡುತ್ತಾ ತಾಳ್ಮೆಯಿಂದಿರುವೆ. ನೀನು ಕೆಟ್ಟ ಜನರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಅಪೊಸ್ತಲರಾಗಿಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ, ಅವರು ಸುಳ್ಳುಗಾರರೆಂಬುದನ್ನು ಕಂಡುಹಿಡಿದಿರುವೆ. 3 ನೀನು ತಾಳ್ಮೆಯಿಂದ ಸತತವಾಗಿ ಪ್ರಯತ್ನಿಸುತ್ತಿರುವೆ; ನನ್ನ ಹೆಸರಿನ ನಿಮಿತ್ತ ಬಾಧೆಯನ್ನು ಬೇಸರಪಡದೆ ಸಹಿಸಿಕೊಂಡೆ.
4 “ಆದರೆ ನಿನ್ನ ವಿರುದ್ಧವಾಗಿ ನಾನು ಹೇಳುವುದೇನೆಂದರೆ: ನಿನ್ನ ಮೊದಲಿನ ಪ್ರೀತಿಯನ್ನು ತೊರೆದುಬಿಟ್ಟಿರುವೆ. 5 ಆದ್ದರಿಂದ ನೀನು ಎಲ್ಲಿಂದ ಬಿದ್ದಿದ್ದೀ ಎಂಬುದನ್ನು ನೆನಪು ಮಾಡಿಕೊ; ಮನಸ್ಸನ್ನು ಪರಿವರ್ತಿಸಿಕೊ. ನೀನು ಮೊದಲು ಮಾಡಿದ ಕಾರ್ಯಗಳನ್ನು ಮಾಡು. ನೀನು ಪರಿವರ್ತನೆಗೊಳ್ಳದಿದ್ದರೆ ನಾನು ನಿನ್ನಲ್ಲಿಗೆ ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಬಿಡುತ್ತೇನೆ. 6 ಆದರೆ ನೀನು ಯೋಗ್ಯವಾದ ಒಂದನ್ನು ಮಾಡುತ್ತಿರುವೆ. ಅದೇನೆಂದರೆ, ನಿಕೊಲಾಯಿತರು[a] ಮಾಡುವ ಕಾರ್ಯಗಳನ್ನು ನೀನು ದ್ವೇಷಿಸುತ್ತಿ. ನಾನು ಸಹ ಅವರ ಕಾರ್ಯಗಳನ್ನು ದ್ವೇಷಿಸುತ್ತೇನೆ.
7 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿಸುತ್ತಾನೋ ಅವನಿಗೆ ತಿನ್ನಲು ಜೀವದಾಯಕ ಮರದ ಹಣ್ಣನ್ನು ಕೊಡುತ್ತೇನೆ. ಈ ಮರವು ದೇವರ ತೋಟದಲ್ಲಿದೆ.
Kannada Holy Bible: Easy-to-Read Version. All rights reserved. © 1997 Bible League International