Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಆದಿಕಾಂಡ 21:8-21

ಕುಟುಂಬದಲ್ಲಾದ ಒಡಕು

ಇಸಾಕನು ಬೆಳೆದು ಊಟಮಾಡುವಷ್ಟು ದೊಡ್ಡವನಾದನು. ಆಗ ಅಬ್ರಹಾಮನು ಒಂದು ದೊಡ್ಡ ಔತಣವನ್ನು ಮಾಡಿಸಿದನು. ಮೊದಲು, ಈಜಿಪ್ಟಿನ ಸೇವಕಿಯಾದ ಹಾಗರಳಲ್ಲಿ ಒಬ್ಬ ಮಗನು ಹುಟ್ಟಿದ್ದನು. ಅವನಿಗೂ ಅಬ್ರಹಾಮನು ತಂದೆಯಾಗಿದ್ದನು. ಆದರೆ ಆ ಮೊದಲನೆ ಮಗನು ಇಸಾಕನಿಗೆ ತೊಂದರೆ ಕೊಡುವುದನ್ನು ಸಾರಳು ಗಮನಿಸಿದಳು. 10 ಸಾರಳು ಅಬ್ರಹಾಮನಿಗೆ, “ಆ ಸೇವಕಿಯನ್ನೂ ಅವಳ ಮಗನನ್ನೂ ಕಳುಹಿಸಿಬಿಡು. ನಾವು ಸತ್ತಾಗ ನಮ್ಮ ಆಸ್ತಿಯನ್ನೆಲ್ಲ ನಮ್ಮ ಮಗನಾದ ಇಸಾಕನೇ ಪಡೆದುಕೊಳ್ಳಲಿ; ನಮ್ಮ ಆಸ್ತಿಯಲ್ಲಿ ಇಸಾಕನೊಡನೆ ಅವನು ಪಾಲುಹೊಂದುವುದು ನನಗೆ ಇಷ್ಟವಿಲ್ಲ” ಎಂದು ಹೇಳಿದಳು.

11 ಅಬ್ರಹಾಮನಿಗೆ ತುಂಬ ದುಃಖವಾಯಿತು. ಅವನು ತನ್ನ ಮಗನಾದ ಇಷ್ಮಾಯೇಲನ ಬಗ್ಗೆ ಚಿಂತಿಸತೊಡಗಿದನು. 12 ಆದರೆ ದೇವರು ಅಬ್ರಹಾಮನಿಗೆ, “ಆ ಹುಡುಗನ ಕುರಿತಾಗಲಿ ಸೇವಕಿಯ ಕುರಿತಾಗಲಿ ಚಿಂತೆಮಾಡಬೇಡ. ಸಾರಳ ಇಷ್ಟದಂತೆ ಮಾಡು. ಇಸಾಕನೊಬ್ಬನೇ ಬಾಧ್ಯಸ್ತನಾಗಬೇಕು. 13 ಆದರೆ ನಿನ್ನ ಸೇವಕಿಯ ಮಗನನ್ನು ಸಹ ನಾನು ಆಶೀರ್ವದಿಸುವೆನು. ಅವನು ನಿನ್ನ ಮಗನು. ಆದ್ದರಿಂದ ಅವನಿಂದಲೂ ನಾನು ದೊಡ್ಡ ಜನಾಂಗವನ್ನು ಉಂಟುಮಾಡುವೆನು” ಎಂದು ಹೇಳಿದನು.

14 ಮರುದಿನ ಮುಂಜಾನೆ, ಅಬ್ರಹಾಮನು ಸ್ವಲ್ಪ ಆಹಾರವನ್ನು ಮತ್ತು ಸ್ವಲ್ಪ ನೀರನ್ನು ತೆಗೆದು ಹಾಗರಳಿಗೆ ಕೊಟ್ಟನು. ಹಾಗರಳು ಅವುಗಳನ್ನು ತೆಗೆದುಕೊಂಡು ತನ್ನ ಮಗನೊಡನೆ ಅಲ್ಲಿಂದ ಹೊರಟುಹೋದಳು. ಹಾಗರಳು ಆ ಸ್ಥಳವನ್ನು ಬಿಟ್ಟು ಬೇರ್ಷೆಬದ ಮರಳುಗಾಡಿನಲ್ಲಿ ಅಲೆಯತೊಡಗಿದಳು.

15 ಸ್ವಲ್ಪ ಸಮಯದ ನಂತರ, ಇದ್ದ ನೀರೆಲ್ಲಾ ಮುಗಿದುಹೋಯಿತು. ಕುಡಿಯುವುದಕ್ಕೆ ಏನೂ ಇರಲಿಲ್ಲ. ಆದ್ದರಿಂದ ಹಾಗರಳು ತನ್ನ ಮಗನನ್ನು ಪೊದೆಯ ಕೆಳಗೆ ಮಲಗಿಸಿದಳು. 16 ಹಾಗರಳು ಸ್ವಲ್ಪ ದೂರ ನಡೆದುಹೋಗಿ ಕುಳಿತುಕೊಂಡು ತನ್ನ ಮಗನು ಸಾಯುವುದನ್ನು ನೋಡಲಾರದೆ ಅಳತೊಡಗಿದಳು.

17 ಮಗುವಿನ ಕೂಗು ದೇವರಿಗೆ ಕೇಳಿಸಿತು. ಆಗ ದೇವದೂತನು ಆಕಾಶದಿಂದ ಆಕೆಯನ್ನು ಕರೆದು, “ಹಾಗರಳೇ, ನಿನಗೇನಾಯಿತು? ಭಯಪಡಬೇಡ; ಮಗುವಿನ ಕೂಗನ್ನು ಯೆಹೋವನು ಕೇಳಿದ್ದಾನೆ. 18 ಹೋಗಿ ಮಗುವನ್ನು ಎತ್ತಿಕೊ. ಅವನಿಂದ ದೊಡ್ಡ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.

19 ಆಮೇಲೆ ದೇವರು ಹಾಗರಳಿಗೆ ಒಂದು ಬಾವಿ ಕಾಣಿಸುವಂತೆ ಮಾಡಿದನು. ಹಾಗರಳು ಬಾವಿಗೆ ಹೋಗಿ ತನ್ನ ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಬಂದು ಮಗುವಿಗೆ ಕುಡಿಸಿದಳು.

20 ದೇವರು ಆ ಮಗುವಿನ ಸಂಗಡವಿದ್ದ ಕಾರಣ ಆ ಮಗುವು ಬೆಳೆದು ದೊಡ್ಡವನಾದನು; ಕಾಡಿನಲ್ಲಿ ವಾಸವಾಗಿದ್ದು ಚತುರ ಬಿಲ್ಲುಗಾರನಾದನು. 21 ಅವನ ತಾಯಿಯು ಅವನಿಗೆ ಈಜಿಪ್ಟಿನ ಹುಡುಗಿಯನ್ನು ತಂದು ಮದುವೆ ಮಾಡಿಸಿದಳು. ಅವರು ಪಾರಾನ್ ಕಾಡಿನಲ್ಲಿ ತಮ್ಮ ವಾಸವನ್ನು ಮುಂದುವರಿಸಿದರು.

ಕೀರ್ತನೆಗಳು 86:1-10

ಪ್ರಾರ್ಥನೆ. ರಚನೆಗಾರ: ದಾವೀದ.

86 ನಾನು ಬಡವನೂ ನಿಸ್ಸಹಾಯಕನೂ ಆಗಿದ್ದೇನೆ.
    ಯೆಹೋವನೇ, ದಯವಿಟ್ಟು ನನಗೆ ಕಿವಿಗೊಡು; ನನ್ನ ಪ್ರಾರ್ಥನೆಗೆ ಉತ್ತರಿಸು.
ಯೆಹೋವನೇ, ನಾನು ನಿನ್ನ ಭಕ್ತನು! ದಯವಿಟ್ಟು ನನ್ನನ್ನು ಸಂರಕ್ಷಿಸು!
    ನಾನು ನಿನ್ನ ಸೇವಕನು, ನೀನು ನನ್ನ ದೇವರು.
    ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ರಕ್ಷಿಸು.
ನನ್ನ ಯೆಹೋವನೇ, ನನಗೆ ಕರುಣೆತೋರು.
    ನಾನು ದಿನವೆಲ್ಲಾ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ಯೆಹೋವನೇ, ನನ್ನ ಜೀವಿತವನ್ನು ನಿನ್ನ ಕೈಗಳಲ್ಲಿಟ್ಟಿದ್ದೇನೆ.
    ನಿನ್ನ ಸೇವಕನಾದ ನನ್ನನ್ನು ಸಂತೋಷಗೊಳಿಸು.
ಯೆಹೋವನೇ, ನೀನು ಒಳ್ಳೆಯವನೂ ಕರುಣಾಮಯನೂ ಆಗಿರುವೆ.
    ನಿನ್ನ ಜನರು ಸಹಾಯಕ್ಕಾಗಿ ನಿನಗೆ ಮೊರೆಯಿಡುವರು.
    ನೀನು ಅವರನ್ನು ನಿಜವಾಗಿಯೂ ಪ್ರೀತಿಸುವಿ.
ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
    ಕರುಣೆಗೋಸ್ಕರ ಮೊರೆಯಿಡುತ್ತಿರುವ ನನಗೆ ಕಿವಿಗೊಡು.
ಯೆಹೋವನೇ, ಆಪತ್ತಿನ ಸಮಯದಲ್ಲಿ ನಿನಗೆ ಪ್ರಾರ್ಥಿಸುತ್ತಿದ್ದೇನೆ.
    ನೀನು ಉತ್ತರವನ್ನು ದಯಪಾಲಿಸುವೆಯೆಂದು ನನಗೆ ಗೊತ್ತಿದೆ.
ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
    ನೀನು ಮಾಡಿರುವ ಕಾರ್ಯಗಳನ್ನು ಬೇರೆ ಯಾರೂ ಮಾಡಲಾರರು.
ಯೆಹೋವನೇ, ಪ್ರತಿಯೊಬ್ಬ ವ್ಯಕ್ತಿಯನ್ನು ಸೃಷ್ಟಿಸಿದವನು ನೀನೇ.
    ಅವರೆಲ್ಲರೂ ಬಂದು ನಿನ್ನನ್ನು ಆರಾಧಿಸಲಿ.
    ಅವರೆಲ್ಲರೂ ನಿನ್ನ ಹೆಸರನ್ನು ಸನ್ಮಾನಿಸಲಿ.
10 ದೇವರೇ, ನೀನು ಮಹೋನ್ನತನಾಗಿರುವೆ! ನೀನು ಅದ್ಭುತಕಾರ್ಯಗಳನ್ನು ಮಾಡುವಾತನಾಗಿರುವೆ!
    ನೀನೇ, ಹೌದು, ನೀನೊಬ್ಬನೇ ದೇವರು!

ಕೀರ್ತನೆಗಳು 86:16-17

16 ನನ್ನ ಮೊರೆಗೆ ಕಿವಿಗೊಟ್ಟು ಕರುಣೆತೋರು.
    ನಿನ್ನ ಸೇವಕನಾದ ನನಗೆ ಬಲವನ್ನು ದಯಪಾಲಿಸು.
    ನಿನ್ನ ಸೇವಕನ ಮಗನನ್ನು ರಕ್ಷಿಸು.
17 ಯೆಹೋವನೇ, ನೀನು ನನಗೆ ಮಾಡಲಿರುವ ಸಹಾಯಕ್ಕಾಗಿ ಸೂಚನೆಯೊಂದನ್ನು ತೋರಿಸು.
    ನನ್ನ ಶತ್ರುಗಳು ಆ ಸೂಚನೆಯನ್ನು ಕಂಡು ನಿರಾಶರಾಗುವರು.
    ನೀನು ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಸಹಾಯ ಮಾಡಲಿರುವಿಯೆಂದು ಅದು ತೋರಿಸುತ್ತದೆ.

ರೋಮ್ನಗರದವರಿಗೆ 6:1-11

ಪಾಪದ ಪಾಲಿಗೆ ಸತ್ತವರು, ಆದರೆ ಕ್ರಿಸ್ತನಲ್ಲಿ ಜೀವಂತರು

ಹಾಗಾದರೆ ನಿಮ್ಮ ಅಭಿಪ್ರಾಯವೇನು? ದೇವರು ನಮಗೆ ಹೆಚ್ಚುಹೆಚ್ಚು ಕೃಪೆಯನ್ನು ತೋರಿಸಲೆಂದು ನಾವು ಪಾಪದಲ್ಲೇ ಮುಂದುವರಿಯಬೇಕೇ? ಇಲ್ಲ! ನಾವು ನಮ್ಮ ಹಿಂದಿನ ಪಾಪಮಯ ಜೀವಿತಗಳ ಪಾಲಿಗೆ ಸತ್ತುಹೋದೆವು. ಹೀಗಿರಲು, ನಾವು ಪಾಪದಲ್ಲೇ ಜೀವಿಸಲು ಹೇಗೆ ಸಾಧ್ಯ? ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ ಕ್ರಿಸ್ತನಲ್ಲಿ ಪಾಲುಗಾರರಾದೆವು ಎಂಬುದನ್ನು ನೀವು ಮರೆತುಬಿಟ್ಟಿರಾ? ನಮ್ಮ ದೀಕ್ಷಾಸ್ನಾನದ ಮೂಲಕ ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ಹೀಗಿರಲಾಗಿ, ನಾವು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು ಮತ್ತು ನಾವು ಆತನ ಮರಣದಲ್ಲಿ ಪಾಲುಗಾರರಾದೆವು. ನಾವು ಜೀವಂತವಾಗಿ ಎದ್ದು ಹೊಸ ಜೀವಿತವನ್ನು ನಡೆಸಬೇಕೆಂದು ನಮಗೆ ಕ್ರಿಸ್ತನೊಂದಿಗೆ ಸಮಾಧಿಯಾಯಿತು. ಕ್ರಿಸ್ತನು ತಂದೆಯ ಅದ್ಭುತವಾದ ಶಕ್ತಿಯ ಮೂಲಕ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಜೀವಂತವಾಗಿ ಎದ್ದುಬಂದೆವು.

ಕ್ರಿಸ್ತನ ಮರಣಕ್ಕೆ ಸದೃಶ್ಯವಾದ ಮರಣದ ಮೂಲಕ ನಾವು ಸಹ ಆತನೊಂದಿಗೆ ಐಕ್ಯರಾದೆವು. ಆದ್ದರಿಂದ ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಂತೆಯೇ ನಾವು ಸಹ ಜೀವಂತವಾಗಿ ಎದ್ದುಬರುವುದರ ಮೂಲಕವಾಗಿ ಆತನೊಂದಿಗೆ ಐಕ್ಯರಾಗುವೆವು. ನಮ್ಮ ಹಳೆಯ ಜೀವಿತವು ಕ್ರಿಸ್ತನೊಂದಿಗೆ ಶಿಲುಬೆಯ ಮೇಲೆ ಸತ್ತುಹೋಯಿತೆಂಬುದು ನಮಗೆ ಗೊತ್ತಿದೆ. ನಮ್ಮ ಪಾಪಸ್ವಭಾವಕ್ಕೆ ನಮ್ಮ ಮೇಲೆ ಯಾವ ಅಧಿಕಾರ ಇರಬಾರದೆಂತಲೂ ನಾವು ಪಾಪಕ್ಕೆ ಗುಲಾಮರಾಗಿರಬಾರದೆಂತಲೂ ಹೀಗಾಯಿತು. ಪಾಪದ ಪಾಲಿಗೆ ಸತ್ತವನು ಪಾಪದ ಹಿಡಿತದಿಂದ ಬಿಡುಗಡೆ ಹೊಂದಿದ್ದಾನೆ.

ನಾವು ಕ್ರಿಸ್ತನೊಂದಿಗೆ ಸತ್ತಿದ್ದರೆ, ಆತನೊಂದಿಗೆ ಜೀವಿಸುತ್ತೇವೆ ಎಂಬುದೂ ನಿಶ್ಚಯವಾಗಿದೆ. ಕ್ರಿಸ್ತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಆತನು ಮತ್ತೆ ಸಾಯಲು ಸಾಧ್ಯವಿಲ್ಲವೆಂಬುದು ನಮಗೆ ತಿಳಿದಿದೆ. ಈಗ ಮರಣಕ್ಕೆ ಆತನ ಮೇಲೆ ಯಾವ ಅಧಿಕಾರವೂ ಇಲ್ಲ. 10 ಹೌದು, ಕ್ರಿಸ್ತನು ಪಾಪದ ಶಕ್ತಿಯನ್ನು ಸೋಲಿಸುವುದಕ್ಕಾಗಿ ಒಂದೇ ಸಲ ಸತ್ತನು; ಅದು ಎಲ್ಲಾ ಕಾಲಕ್ಕೂ ಸಾಕಾಗಿದೆ. ಈಗ ಆತನಲ್ಲಿ ಹೊಸ ಜೀವಿತವಿದೆ. ದೇವರೊಂದಿಗೆ ಜೀವಿಸುವುದೇ ಆ ಹೊಸ ಜೀವಿತ. 11 ಅದೇ ರೀತಿಯಲ್ಲಿ ನೀವು ಸಹ ನಿಮ್ಮನ್ನು ಪಾಪದ ಶಕ್ತಿಯ ಪಾಲಿಗೆ ಸತ್ತವರೆಂದು ಮತ್ತು ಕ್ರಿಸ್ತ ಯೇಸುವಿನ ಮೂಲಕ ದೇವರಿಗಾಗಿ ಜೀವಿಸುವವರೆಂದು ಪರಿಗಣಿಸಿರಿ.

ಮತ್ತಾಯ 10:24-39

24 “ಶಿಷ್ಯನು ಗುರುವಿಗಿಂತ ಉತ್ತಮನಲ್ಲ. ಆಳು ತನ್ನ ದಣಿಗಿಂತ ಉತ್ತಮನಲ್ಲ. 25 ಶಿಷ್ಯನು ತನ್ನ ಗುರುವಿನಂತಾದರೆ ಸಾಕು. ಆಳು ತನ್ನ ದಣಿಯಂತಾದರೆ ಸಾಕು. ಕುಟುಂಬದ ಹಿರಿಯನನ್ನೇ ಬೆಲ್ಜೆಬೂಲ (ದೆವ್ವ) ಎಂದು ಕರೆದರೆ, ಆ ಕುಟುಂಬದ ಇತರರನ್ನು ಮತ್ತಷ್ಟು ಕೆಟ್ಟ ಹೆಸರಿನಿಂದ ಕರೆಯುವುದಿಲ್ಲವೇ?

ಭಯಪಡಬೇಕಾದದ್ದು ದೇವರಿಗೆ, ಮನುಷ್ಯರಿಗಲ್ಲ

(ಲೂಕ 12:2-7)

26 “ಆದಕಾರಣ ಆ ಜನರಿಗೆ ಹೆದರಬೇಡಿ. ಮರೆಯಾಗಿರುವ ಪ್ರತಿಯೊಂದೂ ಬಹಿರಂಗವಾಗುವುದು. ಗುಪ್ತವಾಗಿರುವ ಪ್ರತಿ ಸಂಗತಿಯು ಬಯಲಾಗುವುದು. 27 ನಾನು ಕತ್ತಲೆಯಲ್ಲಿ (ರಹಸ್ಯವಾಗಿ) ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದೇನೆ. ಆದರೆ ನೀವು ಈ ಸಂಗತಿಗಳನ್ನು ಬೆಳಕಿನಲ್ಲಿ ಹೇಳಬೇಕೆಂಬುದು ನನ್ನ ಇಷ್ಟ. ನಾನು ಈ ವಿಷಯಗಳನ್ನು ನಿಮಗೆ ಮೆಲ್ಲಗೆ ಹೇಳುತ್ತಿದ್ದೇನೆ. ಆದರೆ ನೀವು ಈ ವಿಷಯಗಳನ್ನು ಜನರಿಗೆಲ್ಲ ಗಟ್ಟಿಯಾಗಿ ಹೇಳಿರಿ.

28 “ಜನರಿಗೆ ಹೆದರಬೇಡಿ. ಅವರು ಶರೀರವನ್ನು ಮಾತ್ರ ಕೊಲ್ಲಬಹುದು. ಆತ್ಮವನ್ನು ಅವರು ಕೊಲ್ಲಲಾರರು. ಶರೀರವನ್ನೂ ಆತ್ಮವನ್ನೂ ನರಕಕ್ಕೆ ಹಾಕಬಲ್ಲ ದೇವರಿಗೆ ಭಯಪಡಿರಿ. 29 ಮಾರುಕಟ್ಟೆಯಲ್ಲಿ ಎರಡು ಗುಬ್ಬಚ್ಚಿಗಳನ್ನು ಒಂದು ನಾಣ್ಯಕ್ಕೆ[a] ಮಾರುತ್ತಾರೆ. ಆದರೆ ನಿಮ್ಮ ತಂದೆಯು ಅಪ್ಪಣೆ ಕೊಡದ ಹೊರತು ಅವುಗಳಲ್ಲಿ ಒಂದಾದರೂ ಸಾಯುವುದಿಲ್ಲ. 30 ನಿಮ್ಮ ತಲೆಯಲ್ಲಿ ಎಷ್ಟು ಕೂದಲುಗಳು ಇವೆ ಎಂಬುದು ಸಹ ದೇವರಿಗೆ ತಿಳಿದಿದೆ. 31 ಆದಕಾರಣ ಹೆದರಬೇಡಿ. ನೀವು ಅನೇಕ ಗುಬ್ಬಚ್ಚಿಗಳಿಗಿಂತಲೂ ಹೆಚ್ಚು ಬೆಲೆಯುಳ್ಳವರಾಗಿದ್ದೀರಿ.

ನಿಮ್ಮ ನಂಬಿಕೆಯ ಕುರಿತು ಬಹಿರಂಗ ಸಾಕ್ಷಿ

(ಲೂಕ 12:8-9)

32 “ಒಬ್ಬನು ಬೇರೆಯವರ ಮುಂದೆ, ತಾನು ನನ್ನವನೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನನ್ನು ನನ್ನವನೆಂದು ಹೇಳುತ್ತೇನೆ. 33 ಆದರೆ ಒಬ್ಬನು ಜನರ ಮುಂದೆ, ತಾನು ನನ್ನವನಲ್ಲವೆಂದು ಹೇಳಿದರೆ, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಅವನು ನನ್ನವನಲ್ಲವೆಂದು ಹೇಳುತ್ತೇನೆ.

ಯೇಸುವನ್ನು ಹಿಂಬಾಲಿಸುವವರಿಗೆ ಬರುವ ತೊಂದರೆಗಳು

(ಲೂಕ 12:51-53; 14:26-27)

34 “ಭೂಲೋಕದಲ್ಲಿ ಶಾಂತಿಯನ್ನು ಉಂಟುಮಾಡಲು ನಾನು ಬಂದಿದ್ದೇನೆಂದು ಯೋಚಿಸಬೇಡಿ. ನಾನು ಶಾಂತಿಯನ್ನು ಉಂಟುಮಾಡಲು ಬರಲಿಲ್ಲ, ಖಡ್ಗ ಹಾಕಲು ಬಂದಿದ್ದೇನೆ. 35-36 ಈ ಪ್ರವಾದನೆ ನೆರವೇರುವಂತೆ ಮಾಡಲು ನಾನು ಬಂದಿದ್ದೇನೆ:

‘ಒಬ್ಬನಿಗೆ ಅವನ ಮನೆಯವರೇ ವೈರಿಗಳಾಗುವರು.
ಮಗನು ತಂದೆಗೆ,
ಮಗಳು ತಾಯಿಗೆ,
ಸೊಸೆಯು ಅತ್ತೆಗೆ ವೈರಿಗಳಾಗುವರು.’(A)

37 “ಯಾರಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆ ಅಥವಾ ತಾಯಿಯನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. ಯಾವನಾದರೂ ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಇಲ್ಲವೆ ಮಗಳನ್ನು ಪ್ರೀತಿಸಿದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 38 ಯಾವನಾದರೂ ನನ್ನನ್ನು ಹಿಂಬಾಲಿಸುವಾಗ ಅವನಿಗೆ ಕೊಡುವಂಥ ಶಿಲುಬೆಯನ್ನು (ಸಂಕಟವನ್ನು) ಅಂಗೀಕರಿಸದಿದ್ದರೆ, ಅವನು ನನ್ನ ಹಿಂಬಾಲಕನಾಗಲು ಯೋಗ್ಯನಲ್ಲ. 39 ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಪಡೆದುಕೊಳ್ಳುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International