Revised Common Lectionary (Semicontinuous)
ಪ್ರಾರ್ಥನೆ. ರಚನೆಗಾರ: ದಾವೀದ.
86 ನಾನು ಬಡವನೂ ನಿಸ್ಸಹಾಯಕನೂ ಆಗಿದ್ದೇನೆ.
ಯೆಹೋವನೇ, ದಯವಿಟ್ಟು ನನಗೆ ಕಿವಿಗೊಡು; ನನ್ನ ಪ್ರಾರ್ಥನೆಗೆ ಉತ್ತರಿಸು.
2 ಯೆಹೋವನೇ, ನಾನು ನಿನ್ನ ಭಕ್ತನು! ದಯವಿಟ್ಟು ನನ್ನನ್ನು ಸಂರಕ್ಷಿಸು!
ನಾನು ನಿನ್ನ ಸೇವಕನು, ನೀನು ನನ್ನ ದೇವರು.
ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ರಕ್ಷಿಸು.
3 ನನ್ನ ಯೆಹೋವನೇ, ನನಗೆ ಕರುಣೆತೋರು.
ನಾನು ದಿನವೆಲ್ಲಾ ನಿನಗೆ ಪ್ರಾರ್ಥಿಸುತ್ತಿದ್ದೇನೆ.
4 ಯೆಹೋವನೇ, ನನ್ನ ಜೀವಿತವನ್ನು ನಿನ್ನ ಕೈಗಳಲ್ಲಿಟ್ಟಿದ್ದೇನೆ.
ನಿನ್ನ ಸೇವಕನಾದ ನನ್ನನ್ನು ಸಂತೋಷಗೊಳಿಸು.
5 ಯೆಹೋವನೇ, ನೀನು ಒಳ್ಳೆಯವನೂ ಕರುಣಾಮಯನೂ ಆಗಿರುವೆ.
ನಿನ್ನ ಜನರು ಸಹಾಯಕ್ಕಾಗಿ ನಿನಗೆ ಮೊರೆಯಿಡುವರು.
ನೀನು ಅವರನ್ನು ನಿಜವಾಗಿಯೂ ಪ್ರೀತಿಸುವಿ.
6 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ಕರುಣೆಗೋಸ್ಕರ ಮೊರೆಯಿಡುತ್ತಿರುವ ನನಗೆ ಕಿವಿಗೊಡು.
7 ಯೆಹೋವನೇ, ಆಪತ್ತಿನ ಸಮಯದಲ್ಲಿ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನೀನು ಉತ್ತರವನ್ನು ದಯಪಾಲಿಸುವೆಯೆಂದು ನನಗೆ ಗೊತ್ತಿದೆ.
8 ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
ನೀನು ಮಾಡಿರುವ ಕಾರ್ಯಗಳನ್ನು ಬೇರೆ ಯಾರೂ ಮಾಡಲಾರರು.
9 ಯೆಹೋವನೇ, ಪ್ರತಿಯೊಬ್ಬ ವ್ಯಕ್ತಿಯನ್ನು ಸೃಷ್ಟಿಸಿದವನು ನೀನೇ.
ಅವರೆಲ್ಲರೂ ಬಂದು ನಿನ್ನನ್ನು ಆರಾಧಿಸಲಿ.
ಅವರೆಲ್ಲರೂ ನಿನ್ನ ಹೆಸರನ್ನು ಸನ್ಮಾನಿಸಲಿ.
10 ದೇವರೇ, ನೀನು ಮಹೋನ್ನತನಾಗಿರುವೆ! ನೀನು ಅದ್ಭುತಕಾರ್ಯಗಳನ್ನು ಮಾಡುವಾತನಾಗಿರುವೆ!
ನೀನೇ, ಹೌದು, ನೀನೊಬ್ಬನೇ ದೇವರು!
3 ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳಿದ್ದಾನೆ ಎಂದು ಅವರಿಗೆ ತಿಳಿಸು,
“‘ಈಜಿಪ್ಟಿನ ರಾಜನಾದ ಫರೋಹನೇ, ನಾನು ನಿನಗೆ ವಿರುದ್ಧವಾಗಿದ್ದೇನೆ.
ನೀನು ನೈಲ್ ನದಿಯ ದಡದಲ್ಲಿ ಮಲಗಿರುವ ಪೇರ್ಮೊಸಳೆ,
“ಇದು ನಾನು ನಿರ್ಮಿಸಿದ ಹೊಳೆ”
ಎಂದು ನೀನು ಹೇಳಿಕೊಳ್ಳುವೆ.
4 “‘ಆದರೆ ನಾನು ನಿನ್ನ ದವಡೆಗಳಿಗೆ ಕೊಂಡಿಗಳನ್ನು ಸಿಕ್ಕಿಸುವೆನು.
ನೈಲ್ ನದಿಯ ಮೀನುಗಳು ನಿನ್ನ ಪೊರೆಗಳಿಗೆ ಸಿಲುಕಿಕೊಳ್ಳುವವು.
5 ನಾನು ನಿನ್ನನ್ನೂ ನಿನ್ನ ಮೀನುಗಳನ್ನೂ
ನೀರಿನೊಳಗಿಂದ ಹೊರಕ್ಕೆತ್ತಿ ಒಣನೆಲದ ಮೇಲೆ ಹಾಕುವೆನು.
ನೀನು ನೆಲದ ಮೇಲೆ ಬೀಳುವೆ.
ಯಾರೂ ನಿನ್ನನ್ನು ಮೇಲಕ್ಕೆ ಎತ್ತುವುದೂ ಇಲ್ಲ ಹೂಣಿಡುವುದೂ ಇಲ್ಲ.
ನಾನು ನಿನ್ನನ್ನು ಕಾಡುಪ್ರಾಣಿಗಳಿಗೂ ಪಕ್ಷಿಗಳಿಗೂ ಕೊಡುವೆನು.
ಅವರಿಗೆ ನೀನು ಆಹಾರವಾಗುವೆ.
6 ಆಗ ಈಜಿಪ್ಟಿನಲ್ಲಿ ವಾಸಮಾಡುವವರೆಲ್ಲರೂ
ನಾನು ಒಡೆಯನಾದ ಯೆಹೋವನು ಎಂದು ತಿಳಿದುಕೊಳ್ಳುವರು.
“‘ನಾನು ಯಾಕೆ ಹೀಗೆ ಮಾಡುತ್ತಿದ್ದೇನೆ?
ಯಾಕೆಂದರೆ ಇಸ್ರೇಲಿನ ಜನರು ಈಜಿಪ್ಟಿನ ಸಹಾಯದ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಪೊಳ್ಳು ಬೆತ್ತದಂತಿತ್ತು.
7 ಇಸ್ರೇಲ್ ಜನರು ಈಜಿಪ್ಟಿನ ಮೇಲೆ ಆತುಕೊಂಡರು.
ಆದರೆ ಈಜಿಪ್ಟ್ ಅವರ ಕೈಗಳನ್ನೂ ಭುಜಗಳನ್ನೂ ಗಾಯಗೊಳಿಸಿತು.
ನಿನ್ನ ಸಹಾಯಕ್ಕಾಗಿ ಅವರು ನಿನ್ನನ್ನು ಆಶ್ರಯಿಸಿದರು.
ಆದರೆ ನೀನು ಅವರ ಬೆನ್ನೆಲುಬನ್ನು ತಿರುಗಿಸಿ ಮುರಿದುಬಿಟ್ಟೆ.’”
53 ಯೇಸು ಅಲ್ಲಿಂದ ಹೊರಟಾಗ ಧರ್ಮೋಪದೇಶಕರು ಮತ್ತು ಫರಿಸಾಯರು ಆತನಿಗೆ ಮತ್ತಷ್ಟು ತೊಂದರೆ ಕೊಡಲು ಪ್ರಾರಂಭಿಸಿದರು. ಅವರು ಅನೇಕ ಸಂಗತಿಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಆತನಿಂದ ಉತ್ತರ ಹೇಳಿಸುವುದಕ್ಕೆ ಪ್ರಯತ್ನಿಸಿದರು. 54 ಯೇಸುವನ್ನು ಮಾತಿನಲ್ಲಿ ಹಿಡಿಯಬೇಕೆಂದು ಯೋಚಿಸಿ, ಆತನು ಏನಾದರೂ ತಪ್ಪು ಹೇಳುವಂತೆ ಮಾಡಲು ಪ್ರಯತ್ನಿಸುತ್ತಿದ್ದರು.
ಫರಿಸಾಯರಂತಾಗಬೇಡಿ
12 ಸಾವಿರಾರು ಜನರು ಒಬ್ಬರನ್ನೊಬ್ಬರು ನೂಕುತ್ತಾ ಕಿಕ್ಕಿರಿದು ನೆರೆದಿದ್ದರು. ಜನರಿಗೆ ಉಪದೇಶಿಸುವ ಮೊದಲು ಯೇಸು ತನ್ನ ಶಿಷ್ಯರಿಗೆ, “ಫರಿಸಾಯರ ಹುಳಿಹಿಟ್ಟಿನ ಬಗ್ಗೆ ಅಂದರೆ ಅವರ ಕಪಟತನದ ಬಗ್ಗೆ ಎಚ್ಚರಿಕೆಯಾಗಿರಿ. 2 ಮರೆಯಾದ ಪ್ರತಿಯೊಂದೂ ಬಯಲಾಗುವುದು. ಗುಪ್ತವಾಗಿರುವ ಪ್ರತಿಯೊಂದೂ ಪ್ರಕಟಿಸಲ್ಪಡುವುದು. 3 ಕತ್ತಲಿನಲ್ಲಿ (ಗುಪ್ತವಾಗಿ) ನೀವು ಹೇಳುವ ವಿಷಯಗಳು ಬೆಳಕಿನಲ್ಲಿ (ಬಹಿರಂಗವಾಗಿ) ತಿಳಿಸಲ್ಪಡುವವು. ಗುಪ್ತವಾಗಿ ಕೋಣೆಯಲ್ಲಿ ನೀವು ಪಿಸುಗುಟ್ಟುವ ವಿಷಯಗಳು, ಮನೆಯ ಮೇಲಿನಿಂದ ಗಟ್ಟಿಯಾಗಿ ಪ್ರಕಟಿಸಲ್ಪಡುವವು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International