Revised Common Lectionary (Semicontinuous)
ಪ್ರಾರ್ಥನೆ. ರಚನೆಗಾರ: ದಾವೀದ.
86 ನಾನು ಬಡವನೂ ನಿಸ್ಸಹಾಯಕನೂ ಆಗಿದ್ದೇನೆ.
ಯೆಹೋವನೇ, ದಯವಿಟ್ಟು ನನಗೆ ಕಿವಿಗೊಡು; ನನ್ನ ಪ್ರಾರ್ಥನೆಗೆ ಉತ್ತರಿಸು.
2 ಯೆಹೋವನೇ, ನಾನು ನಿನ್ನ ಭಕ್ತನು! ದಯವಿಟ್ಟು ನನ್ನನ್ನು ಸಂರಕ್ಷಿಸು!
ನಾನು ನಿನ್ನ ಸೇವಕನು, ನೀನು ನನ್ನ ದೇವರು.
ನಾನು ನಿನ್ನಲ್ಲಿ ಭರವಸವಿಟ್ಟಿರುವೆ, ಆದ್ದರಿಂದ ನನ್ನನ್ನು ರಕ್ಷಿಸು.
3 ನನ್ನ ಯೆಹೋವನೇ, ನನಗೆ ಕರುಣೆತೋರು.
ನಾನು ದಿನವೆಲ್ಲಾ ನಿನಗೆ ಪ್ರಾರ್ಥಿಸುತ್ತಿದ್ದೇನೆ.
4 ಯೆಹೋವನೇ, ನನ್ನ ಜೀವಿತವನ್ನು ನಿನ್ನ ಕೈಗಳಲ್ಲಿಟ್ಟಿದ್ದೇನೆ.
ನಿನ್ನ ಸೇವಕನಾದ ನನ್ನನ್ನು ಸಂತೋಷಗೊಳಿಸು.
5 ಯೆಹೋವನೇ, ನೀನು ಒಳ್ಳೆಯವನೂ ಕರುಣಾಮಯನೂ ಆಗಿರುವೆ.
ನಿನ್ನ ಜನರು ಸಹಾಯಕ್ಕಾಗಿ ನಿನಗೆ ಮೊರೆಯಿಡುವರು.
ನೀನು ಅವರನ್ನು ನಿಜವಾಗಿಯೂ ಪ್ರೀತಿಸುವಿ.
6 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ಕರುಣೆಗೋಸ್ಕರ ಮೊರೆಯಿಡುತ್ತಿರುವ ನನಗೆ ಕಿವಿಗೊಡು.
7 ಯೆಹೋವನೇ, ಆಪತ್ತಿನ ಸಮಯದಲ್ಲಿ ನಿನಗೆ ಪ್ರಾರ್ಥಿಸುತ್ತಿದ್ದೇನೆ.
ನೀನು ಉತ್ತರವನ್ನು ದಯಪಾಲಿಸುವೆಯೆಂದು ನನಗೆ ಗೊತ್ತಿದೆ.
8 ದೇವರೇ, ನಿನ್ನಂತೆ ಬೇರೆ ಯಾರೂ ಇಲ್ಲ.
ನೀನು ಮಾಡಿರುವ ಕಾರ್ಯಗಳನ್ನು ಬೇರೆ ಯಾರೂ ಮಾಡಲಾರರು.
9 ಯೆಹೋವನೇ, ಪ್ರತಿಯೊಬ್ಬ ವ್ಯಕ್ತಿಯನ್ನು ಸೃಷ್ಟಿಸಿದವನು ನೀನೇ.
ಅವರೆಲ್ಲರೂ ಬಂದು ನಿನ್ನನ್ನು ಆರಾಧಿಸಲಿ.
ಅವರೆಲ್ಲರೂ ನಿನ್ನ ಹೆಸರನ್ನು ಸನ್ಮಾನಿಸಲಿ.
10 ದೇವರೇ, ನೀನು ಮಹೋನ್ನತನಾಗಿರುವೆ! ನೀನು ಅದ್ಭುತಕಾರ್ಯಗಳನ್ನು ಮಾಡುವಾತನಾಗಿರುವೆ!
ನೀನೇ, ಹೌದು, ನೀನೊಬ್ಬನೇ ದೇವರು!
43 ಯೆಹೋವನು ಮೋಶೆ ಆರೋನರಿಗೆ, “ಪಸ್ಕಹಬ್ಬದ ನಿಯಮಗಳು ಇಂತಿವೆ: ಯಾವ ಪರದೇಶಿಯೂ ಪಸ್ಕಹಬ್ಬದ ಊಟವನ್ನು ಮಾಡಬಾರದು. 44 ಆದರೆ ಸುನ್ನತಿ ಮಾಡಿಸಿಕೊಂಡಿರುವ ಗುಲಾಮನು ಪಸ್ಕಹಬ್ಬದ ಊಟವನ್ನು ಮಾಡಬಹುದು. 45 ಆದರೆ ನಿಮ್ಮ ದೇಶದಲ್ಲಿ ಕೇವಲ ವಾಸವಾಗಿರುವವರಾಗಲಿ ಕೂಲಿಯಾಳಾಗಲಿ ಪಸ್ಕಹಬ್ಬದ ಊಟ ಮಾಡಬಾರದು.
46 “ಪಸ್ಕಹಬ್ಬದ ಊಟವನ್ನು ಮನೆಯೊಳಗೆ ತಿನ್ನಬೇಕು. ಪಸ್ಕದ ಮಾಂಸವನ್ನು ಮನೆಯಿಂದ ಹೊರಗೆ ತೆಗೆದುಕೊಂಡು ಹೋಗಕೂಡದು. ಕುರಿಮರಿಯ ಎಲುಬುಗಳಲ್ಲಿ ಯಾವುದನ್ನೂ ಮುರಿಯಬಾರದು. 47 ಇಸ್ರೇಲರ ಇಡೀ ಸಮೂಹವು ಈ ಹಬ್ಬವನ್ನು ಆಚರಿಸಬೇಕು. 48 ನಿಮ್ಮ ಮಧ್ಯದಲ್ಲಿ ವಾಸವಾಗಿರುವ ಪರದೇಶದವನು ಯೆಹೋವನ ಪಸ್ಕ ಭೋಜನದಲ್ಲಿ ಪಾಲುಗಾರನಾಗಬೇಕೆಂದು ಬಯಸಿದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕು. ಆಗ ಅವನು ಇಸ್ರೇಲಿನವನಾಗುವುದರಿಂದ ಭೋಜನದಲ್ಲಿ ಪಾಲುಗಾರನಾಗಬಹುದು. ಆದರೆ ಸುನ್ನತಿಯಾಗಿಲ್ಲದವನು ಪಸ್ಕದ ಊಟ ಮಾಡಕೂಡದು. 49 ಪ್ರತಿಯೊಬ್ಬರಿಗೂ ಇದೇ ನಿಯಮ ಅನ್ವಯಿಸುತ್ತದೆ. ಸ್ವದೇಶದವನಿಗೂ ನಿಮ್ಮಲ್ಲಿ ವಾಸವಾಗಿರುವ ಪರದೇಶದವನಿಗೂ ಒಂದೇ ನಿಯಮವಿರಬೇಕು” ಅಂದನು.
ಜನರನ್ನು ರಕ್ಷಿಸಲು ಕ್ರಿಸ್ತನು ಜನರಂತೆಯೇ ಆದನು
5 ಮುಂದೆ ಬರುವ ನೂತನ ಲೋಕವನ್ನು ಆಳಲು ದೇವರು ದೇವದೂತರನ್ನು ಆರಿಸಲಿಲ್ಲ. ಈಗ ನಾವು ನಿಮಗೆ ಹೇಳುತ್ತಿರುವುದು ಆ ಲೋಕದ ಕುರಿತಾಗಿಯೇ. 6 ಅದನ್ನು ಪವಿತ್ರ ಗ್ರಂಥದಲ್ಲಿ ಬರೆಯಲಾಗಿದೆ:
“ದೇವರೇ, ನೀನು ಮಾನವರನ್ನು ಏಕೆ ನೆನಪುಮಾಡಿಕೊಳ್ಳಬೇಕು?
ನೀನು ಮನುಷ್ಯನಿಗೋಸ್ಕರ ಏಕೆ ಚಿಂತಿಸಬೇಕು?
ಅವನು ಅಷ್ಟೊಂದು ಮುಖ್ಯನಾದವನೇ?
7 ಕೇವಲ ಸ್ವಲ್ಪಕಾಲದವರೆಗೆ ನೀನು ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆ ಮಾಡಿದೆ.
ನೀನು ಅವನಿಗೆ ವೈಭವವನ್ನೂ ಗೌರವವನ್ನೂ ಕಿರೀಟವಾಗಿ ಇಟ್ಟಿರುವೆ.
8 ನೀನು ಎಲ್ಲವನ್ನು ಅವನಿಗೆ ಅಧೀನಗೊಳಿಸಿರುವೆ.”(A)
ದೇವರು ಎಲ್ಲವನ್ನೂ ಆತನಿಗೆ ಅಧೀನಗೊಳಿಸಿದ್ದರೆ, ಆತನು ಆಳದೆ ಇರುವಂಥದ್ದು ಒಂದಾದರೂ ಇಲ್ಲ. ಆದರೆ ಸಮಸ್ತದ ಮೇಲೆ ಅವನು ಆಳ್ವಿಕೆ ಮಾಡುತ್ತಿರುವುದು ನಮಗಿನ್ನೂ ಕಾಣುತ್ತಿಲ್ಲ. 9 ಕೇವಲ ಸ್ವಲ್ಪಕಾಲದವರೆಗೆ ಯೇಸುವು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಲ್ಪಟ್ಟನು. ಆದರೆ ನಾವೀಗ ವೈಭವ, ಗೌರವಗಳೆಂಬ ಕಿರೀಟ ಧರಿಸಿರುವ ಆತನನ್ನು ನೋಡುತ್ತೇವೆ. ಏಕೆಂದರೆ ದೇವರ ಕೃಪೆಯ ನಿಮಿತ್ತ ಆತನು ಎಲ್ಲರಿಗೋಸ್ಕರ ಸಂಕಟ ಅನುಭವಿಸಿ ಮರಣಹೊಂದಿದನು.
Kannada Holy Bible: Easy-to-Read Version. All rights reserved. © 1997 Bible League International