Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
ಇಸ್ರೇಲ್ ಜನರು ತಮ್ಮ ಪಾಪಗಳನ್ನು ಅರಿಕೆ ಮಾಡಿದ್ದು
9 ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಇಸ್ರೇಲರು ತಿರಿಗಿ ಸೇರಿಬಂದು ಒಂದು ದಿನದ ಉಪವಾಸ ಮಾಡಿದರು. ಶೋಕಬಟ್ಟೆಯನ್ನು ಧರಿಸಿ, ತಲೆಗೆ ಬೂದಿಯನ್ನು ಹಾಕಿ ತಮ್ಮತಮ್ಮ ದುಃಖವನ್ನು ವ್ಯಕ್ತಪಡಿಸಿದರು. 2 ಅನ್ಯರ ಮಧ್ಯದಿಂದ ಇಸ್ರೇಲರು ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ದೇವಾಲಯದೊಳಗೆ ನಿಂತು ತಮ್ಮ ಮತ್ತು ತಮ್ಮ ಪೂರ್ವಿಕರ ಪಾಪಗಳನ್ನು ಅರಿಕೆ ಮಾಡಿದರು. 3 ಮೂರು ತಾಸಿನ ತನಕ ಅವರು ನಿಂತುಕೊಂಡೇ ತಮ್ಮ ದೇವರಾದ ಯೆಹೋವನ ಧರ್ಮಶಾಸ್ತ್ರವನ್ನು ಕೇಳಿದರು; ಇನ್ನು ಮೂರು ತಾಸಿನ ತನಕ ತಮ್ಮತಮ್ಮ ಪಾಪಗಳನ್ನು ಅರಿಕೆ ಮಾಡಿಕೊಂಡು ತಮ್ಮ ದೇವರಾದ ಯೆಹೋವನಿಗೆ ತಲೆಬಾಗಿ ಆರಾಧಿಸಿದರು.
4 ಆಮೇಲೆ ಲೇವಿಯರಾದ ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ ಮತ್ತು ಕೆನಾನೀ ಎಂಬವರು ಮೆಟ್ಟಿಲ ಮೇಲೆ ನಿಂತುಕೊಂಡು ಗಟ್ಟಿಯಾದ ಸ್ವರದಲ್ಲಿ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು. 5 ಆ ಬಳಿಕ, ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ ಮತ್ತು ಪೆತಹ್ಯ ಎಂಬವರು, “ಎದ್ದುನಿಂತುಕೊಂಡು ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಿದರು.
“ದೇವರು ಯಾವಾಗಲೂ ಇದ್ದಾತನಾಗಿದ್ದಾನೆ ಮತ್ತು ಯಾವಾಗಲೂ ಇರುವಾತನಾಗಿದ್ದಾನೆ.
ನಿನ್ನ ಮಹಿಮಾಪೂರ್ಣವಾದ ಹೆಸರನ್ನು ಜನರು ಕೊಂಡಾಡಲಿ;
ನಿನ್ನ ಹೆಸರು ಎಲ್ಲಾ ಸ್ತುತಿಕೀರ್ತನೆಗಳಿಗೆ ಮಿಗಿಲಾಗಿ ಎತ್ತಲ್ಪಡಲಿ.
6 ನೀನು ದೇವರಾಗಿರುವೆ.
ಯೆಹೋವನೇ, ನೀನೊಬ್ಬನೇ ದೇವರು.
ನೀನು ಆಕಾಶವನ್ನು ಉಂಟುಮಾಡಿರುವೆ.
ಪರಲೋಕವನ್ನು ನೀನೇ ಮಾಡಿರುವೆ.
ಅದರಲ್ಲಿರುವದನ್ನೆಲ್ಲಾ ನೀನೇ ನಿರ್ಮಿಸಿರುವೆ.
ಭೂಮಿಯನ್ನೂ ಅದರಲ್ಲಿರುವ
ಸಮಸ್ತವನ್ನೂ ಸೃಷ್ಟಿಸಿದ್ದು ನೀನೇ.
ಸಮುದ್ರಗಳನ್ನೂ ಅವುಗಳಲ್ಲಿರುವ
ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ.
ಎಲ್ಲಾದಕ್ಕೂ ಜೀವಕೊಡುವಾತನು ನೀನೇ.
ಪರಲೋಕದ ದೂತರು ನಿನಗಡ್ಡಬಿದ್ದು ಆರಾಧಿಸುವರು.
7 ನೀನೇ ದೇವರಾದ ಯೆಹೋವನು.
ಅಬ್ರಾಮನನ್ನು ನೀನೇ ಆರಿಸಿಕೊಂಡೆ.
ಬಾಬಿಲೋನಿನ ಊರ್ ಎಂಬಲ್ಲಿಂದ ನೀನು ಅವನನ್ನು ನಡೆಸಿದೆ.
ಅವನ ಹೆಸರನ್ನು ಬದಲಾಯಿಸಿ ಅಬ್ರಹಾಮನೆಂದು ಕರೆದೆ.
8 ಅವನು ನ್ಯಾಯವಂತನೂ ಪ್ರಾಮಾಣಿಕನೂ ಆಗಿದ್ದಾನೆಂದು ತಿಳಿದು
ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡೆ.
ಹಿತ್ತಿಯರ, ಕಾನಾನ್ಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ ಮತ್ತು ಗಿರ್ಗಾಷಿಯರ ನಾಡನ್ನು
ಅವನಿಗೂ ಅವನ ಸಂತತಿಯವರಿಗೂ ಕೊಡುವುದಾಗಿ ವಾಗ್ದಾನ ಮಾಡಿದೆ.
ನೀನು ನಿನ್ನ ವಾಗ್ದಾನವನ್ನು ನೆರವೇರಿಸಿದೆ.
ಯಾಕೆಂದರೆ ನೀನು ಒಳ್ಳೆಯವನಾಗಿರುವೆ.
ಯೇಸುವಿನ ಹನ್ನೆರಡು ಮಂದಿ ಅಪೊಸ್ತಲರು
(ಮತ್ತಾಯ 10:1-4; ಮಾರ್ಕ 3:13-19)
12 ಆ ಸಮಯದಲ್ಲಿ ಯೇಸು ಪ್ರಾರ್ಥನೆ ಮಾಡುವುದಕ್ಕಾಗಿ ಬೆಟ್ಟಕ್ಕೆ ಹೋದನು. ದೇವರಲ್ಲಿ ಪ್ರಾರ್ಥಿಸುತ್ತಾ ರಾತ್ರಿಯೆಲ್ಲಾ ಅಲ್ಲೇ ಇದ್ದನು. 13 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರನ್ನು ಕರೆದನು. ಅವರಲ್ಲಿ ಹನ್ನೆರಡು ಮಂದಿಯನ್ನು ಆತನು ಆರಿಸಿಕೊಂಡನು. ಯೇಸು ಈ ಹನ್ನೆರಡು ಜನರಿಗೆ, “ಅಪೊಸ್ತಲರು” ಎಂದು ಹೆಸರಿಟ್ಟನು. ಅವರು ಯಾರೆಂದರೆ:
14 ಸೀಮೋನ (ಯೇಸು ಅವನಿಗೆ ಪೇತ್ರನೆಂದು ಹೆಸರಿಟ್ಟನು.)
ಮತ್ತು ಪೇತ್ರನ ಸಹೋದರನಾದ ಅಂದ್ರೆಯ,
ಯಾಕೋಬ
ಮತ್ತು ಯೋಹಾನ,
ಫಿಲಿಪ್ಪ
ಮತ್ತು ಬಾರ್ತೊಲೊಮಾಯ,
15 ಮತ್ತಾಯ,
ತೋಮ,
ಯಾಕೋಬ (ಅಲ್ಫಾಯನ ಮಗ)
ಮತ್ತು ದೇಶಾಭಿಮಾನಿ[a] ಎನಿಸಿಕೊಂಡಿದ್ದ ಸಿಮೋನ,
16 ಯೂದ (ಯಾಕೋಬನ ಮಗ)
ಮತ್ತು ಇಸ್ಕರಿಯೋತ ಯೂದ (ಯೇಸುವಿಗೆ ದ್ರೋಹ ಮಾಡಿದವನು ಇವನೇ.)
ಯೇಸುವಿನ ಉಪದೇಶ ಮತ್ತು ಜನರಿಗೆ ಆರೋಗ್ಯದಾನ
(ಮತ್ತಾಯ 4:23-25; 5:1-12)
17 ಯೇಸು ಮತ್ತು ಅಪೊಸ್ತಲರು ಬೆಟ್ಟದಿಂದಿಳಿದು ಸಮತಟ್ಟಾದ ಸ್ಥಳಕ್ಕೆ ಬಂದರು. ಆತನ ಹಿಂಬಾಲಕರ ಒಂದು ದೊಡ್ಡ ಗುಂಪು ಅಲ್ಲಿ ನೆರೆದಿತ್ತು. ಜುದೇಯ ಪ್ರಾಂತ್ಯದಿಂದಲೂ ಜೆರುಸಲೇಮಿನಿಂದಲೂ ಜನಸಮೂಹವು ಅಲ್ಲಿಗೆ ಬಂದಿತ್ತು. 18 ಅವರೆಲ್ಲರು ಯೇಸುವಿನ ಉಪದೇಶವನ್ನು ಕೇಳುವುದಕ್ಕೂ ಆತನಿಂದ ವಾಸಿಮಾಡಿಸಿಕೊಳ್ಳುವುದಕ್ಕೂ ಬಂದಿದ್ದರು. ದೆವ್ವಗಳಿಂದ ಪೀಡಿತರಾಗಿದ್ದ ಜನರನ್ನು ಯೇಸು ವಾಸಿಮಾಡಿದನು. 19 ಜನರೆಲ್ಲರೂ ಯೇಸುವನ್ನು ಮುಟ್ಟುವುದಕ್ಕೆ ಪ್ರಯತ್ನಿಸಿದರು, ಏಕೆಂದರೆ ಆತನಿಂದ ಶಕ್ತಿಯು ಹರಿದುಬಂದು ಎಲ್ಲರನ್ನೂ ಗುಣಪಡಿಸುತ್ತಿತ್ತು!
Kannada Holy Bible: Easy-to-Read Version. All rights reserved. © 1997 Bible League International