Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
126 ಯೆಹೋವನು ನಮ್ಮನ್ನು ಸೆರೆಯಿಂದ ತಿರಿಗಿ
ಚೀಯೋನಿಗೆ ಬರಮಾಡಿದಾಗ ನಾವು ಕನಸು ಕಂಡವರಂತಿದ್ದೆವು!
2 ನಾವು ನಗುತ್ತಿದ್ದೆವು; ಹರ್ಷಗೀತೆಗಳನ್ನು ಹಾಡುತ್ತಿದ್ದೆವು.
“ಯೆಹೋವನು ಇಸ್ರೇಲರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ”
ಎಂದು ಅನ್ಯ ಜನಾಂಗಗಳು ಮಾತಾಡಿಕೊಂಡರು.
3 ಹೌದು, ನಾವು ಸಂತೋಷದಿಂದ್ದೇವೆ ಯಾಕೆಂದರೆ ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದನು.
4 ಯೆಹೋವನೇ, ಬತ್ತಿಹೋದ ತೊರೆಗಳು ನೀರಿನಿಂದ
ಮತ್ತೆ ತುಂಬಿ ಹರಿಯುವಂತೆ ನಮ್ಮನ್ನು ಬಿಡಿಸು.
5 ಅಳುತ್ತಾ ಬೀಜವನ್ನು ಬಿತ್ತುವವನು
ಹರ್ಷದಿಂದ ಕೊಯ್ಯುವನು.
6 ಅಳುತ್ತಾ ಹೊಲಕ್ಕೆ ಬೀಜವನ್ನು ಹೊತ್ತುಕೊಂಡು ಹೋಗುವವನು
ಹರ್ಷದಿಂದ ಸಿವುಡುಗಳನ್ನು ಹೊತ್ತುಕೊಂಡು ಬರುವನು!
7 ಅಬ್ರಹಾಮನು ನೂರೆಪ್ಪತ್ತೈದು ವರ್ಷ ಜೀವಿಸಿದನು. 8 ಅವನು ಪೂರ್ಣಾಯುಷ್ಯದಿಂದ ದಿನತುಂಬಿದ ವೃದ್ಧನಾಗಿ ಪ್ರಾಣಬಿಟ್ಟು ತನ್ನ ಪಿತೃಗಳ ಬಳಿಗೆ ಸೇರಿದನು. 9 ಅವನ ಗಂಡುಮಕ್ಕಳಾದ ಇಸಾಕ ಮತ್ತು ಇಷ್ಮಾಯೇಲರು ಅವನನ್ನು ಮಕ್ಪೇಲದ ಗವಿಯಲ್ಲಿ ಸಮಾಧಿಮಾಡಿದರು. ಈ ಗವಿಯು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಜಮೀನಿನಲ್ಲಿದೆ. ಅದು ಮಮ್ರೆಗೆ ಪೂರ್ವದಿಕ್ಕಿನಲ್ಲಿದೆ. 10 ಅಬ್ರಹಾಮನು ಹಿತ್ತಿಯರಿಂದ ಕೊಂಡುಕೊಂಡ ಈ ಗವಿಯಲ್ಲೇ ಅಬ್ರಹಾಮನನ್ನು ಅವನ ಹೆಂಡತಿಯಾದ ಸಾರಳ ಜೊತೆಯಲ್ಲಿ ಸಮಾಧಿಮಾಡಲಾಯಿತು. 11 ಅಬ್ರಹಾಮನು ತೀರಿಕೊಂಡ ಮೇಲೆ, ದೇವರು ಇಸಾಕನನ್ನು ಆಶೀರ್ವದಿಸಿದನು; ಇಸಾಕನು ಬೀರ್‌ಲಹೈರೋಯಿಯಲ್ಲಿ ತನ್ನ ಜೀವನವನ್ನು ಮುಂದುವರೆಸಿದನು.
ರಕ್ಷಣೆಗಾಗಿ ನೀವು ಆರಿಸಲ್ಪಟ್ಟಿರುವಿರಿ
13 ಸಹೋದರ ಸಹೋದರಿಯರೇ, ಪ್ರಭುವು ನಿಮ್ಮನ್ನು ಪ್ರೀತಿಸುತ್ತಾನೆ. ನಿಮ್ಮನ್ನು ರಕ್ಷಿಸಬೇಕೆಂದು ದೇವರು ನಿಮ್ಮನ್ನು ಆದಿಯಲ್ಲಿಯೇ ಆರಿಸಿಕೊಂಡನು. ಆದ್ದರಿಂದ ನಿಮ್ಮ ವಿಷಯದಲ್ಲಿ ದೇವರಿಗೆ ಯಾವಾಗಲೂ ಕೃತಜ್ಞತೆ ಸಲ್ಲಿಸಬೇಕು. ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡುವ ಪವಿತ್ರಾತ್ಮನಿಂದ ಮತ್ತು ಸತ್ಯದ ಮೇಲೆ ನಿಮಗಿರುವ ನಂಬಿಕೆಯಿಂದ ನೀವು ರಕ್ಷಣೆ ಹೊಂದಿದ್ದೀರಿ. 14 ನೀವು ರಕ್ಷಣೆಯನ್ನು ಹೊಂದಿಕೊಂಡು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮಹಿಮೆಯಲ್ಲಿ ಪಾಲುಗಾರರಾಗಬೇಕೆಂದು, ನಾವು ಸಾರಿದ ಸುವಾರ್ತೆಯ ಮೂಲಕ ದೇವರು ನಿಮ್ಮನ್ನು ಕರೆದನು. 15 ಸಹೋದರ ಸಹೋದರಿಯರೇ, ದೃಢವಾಗಿರಿ. ನಾವು ಮಾತಿನ ಮೂಲಕ ಮತ್ತು ಪತ್ರಗಳ ಮೂಲಕ ನಿಮಗೆ ತಿಳಿಸಿದ ಬೋಧನೆಗಳನ್ನು ನಂಬಿಕೊಂಡೇ ಇರಿ.
16-17 ನೀವು ಹೇಳುವ ಒಳ್ಳೆಯ ಸಂಗತಿಗಳಲ್ಲಿ ಮತ್ತು ಮಾಡುವ ಒಳ್ಳೆಯ ಕಾರ್ಯಗಳಲ್ಲಿ ನಿಮಗೆ ಬಲವನ್ನೂ ಆದರಣೆಯನ್ನೂ ಪ್ರಭುವಾದ ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು ನಿಮಗೆ ದಯಪಾಲಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ. ದೇವರು ನಮ್ಮನ್ನು ಪ್ರೀತಿಸಿದನು. ಆತನು ತನ್ನ ಕೃಪೆಯಿಂದಲೇ ನಮಗೆ ಒಳ್ಳೆಯ ನಿರೀಕ್ಷೆಯನ್ನೂ ಶಾಶ್ವತವಾದ ಆದರಣೆಯನ್ನೂ ದಯಪಾಲಿಸಿದನು.
ನಮಗೋಸ್ಕರ ಪ್ರಾರ್ಥಿಸಿ
3 ಸಹೋದರ ಸಹೋದರಿಯರೇ, ನಮಗೋಸ್ಕರ ಪ್ರಾರ್ಥಿಸಿರಿ. ಪ್ರಭುವಿನ ಉಪದೇಶವು ತ್ವರಿತಗತಿಯಲ್ಲಿ ಹಬ್ಬಲೆಂದು ಪ್ರಾರ್ಥಿಸಿ. ನಿಮ್ಮಂತೆಯೇ ಇತರ ಜನರು ಈ ಉಪದೇಶವನ್ನು ಗೌರವಿಸುವಂತೆ ಪ್ರಾರ್ಥಿಸಿ. 2 ಕೆಟ್ಟವರಾದ ಮತ್ತು ದುಷ್ಟರಾದ ಜನರ ಕೈಯಿಂದ ನಮ್ಮನ್ನು ರಕ್ಷಿಸುವಂತೆ ದೇವರಲ್ಲಿ ಪ್ರಾರ್ಥಿಸಿ. (ಪ್ರಭುವಿನಲ್ಲಿ ಜನರೆಲ್ಲರೂ ನಂಬಿಕೆಯಿಟ್ಟಿಲ್ಲ.)
3 ಆದರೆ ಪ್ರಭುವು ನಂಬಿಗಸ್ತನು. ಆತನು ನಿಮ್ಮನ್ನು ಬಲಗೊಳಿಸುವನು ಮತ್ತು ಕೆಡುಕನಿಂದ (ಸೈತಾನನಿಂದ) ನಿಮ್ಮನ್ನು ರಕ್ಷಿಸುವನು. 4 ನಾವು ನಿಮಗೆ ತಿಳಿಸಿದ ಸಂಗತಿಗಳನ್ನು ನೀವು ಮಾಡುತ್ತಿದ್ದೀರೆಂಬ ಭರವಸೆಯನ್ನು ಪ್ರಭುವೇ ನಮಗೆ ಕೊಟ್ಟಿದ್ದಾನೆ. ನೀವು ಇನ್ನು ಮುಂದೆಯೂ ಇವುಗಳನ್ನು ಮಾಡುವಿರೆಂದು ನಮಗೆ ತಿಳಿದದೆ. 5 ದೇವರ ಪ್ರೀತಿಯ ಕಡೆಗೂ ಮತ್ತು ಕ್ರಿಸ್ತನ ತಾಳ್ಮೆಯ ಕಡೆಗೂ ನಿಮ್ಮ ಹೃದಯಗಳನ್ನು ಪ್ರಭುವೇ ಮುನ್ನಡೆಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International