Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 116:1-2

116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
    ನಾನು ಆತನನ್ನು ಪ್ರೀತಿಸುತ್ತೇನೆ.
ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
    ಆತನು ನನಗೆ ಕಿವಿಗೊಡುತ್ತಾನೆ.

ಕೀರ್ತನೆಗಳು 116:12-19

12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
    ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
    ಜನರ ಮುಂದೆ ಆತನಿಗೆ ಸಲ್ಲಿಸುವೆನು.

15 ಯೆಹೋವನು ತನ್ನ ಭಕ್ತರ ಮರಣವನ್ನು
    ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
    ನಿನ್ನ ದಾಸಿಯರಲ್ಲೊಬ್ಬಳ ಮಗ.
    ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
    ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
    ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
    ಈ ಯಜ್ಞಗಳನ್ನು ಅರ್ಪಿಸುವೆನು.

ಯೆಹೋವನಿಗೆ ಸ್ತೋತ್ರವಾಗಲಿ!

ಆದಿಕಾಂಡ 21:1-7

ಸಾರಳಿಗೆ ಮಗುವಾಯಿತು

21 ಯೆಹೋವನು ಸಾರಳಿಗೆ ಮಾಡಿದ ವಾಗ್ದಾನವನ್ನು ಮರೆಯದೆ ಈಡೇರಿಸಿದನು. ಸಾರಳು ವೃದ್ಧನಾಗಿದ್ದ ಅಬ್ರಹಾಮನಿಂದ ಗರ್ಭಿಣಿಯಾಗಿ, ಒಂದು ಗಂಡುಮಗುವನ್ನು ಹೆತ್ತಳು. ದೇವರು ವಾಗ್ದಾನ ಮಾಡಿದಂತೆಯೇ ಈ ಸಂಗತಿಗಳೆಲ್ಲ ತಕ್ಕಕಾಲದಲ್ಲಿ ನಡೆದವು. ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ ಇಸಾಕ ಎಂದು ಹೆಸರಿಟ್ಟನು. ಇಸಾಕನಿಗೆ ಎಂಟು ದಿನಗಳಾಗಿದ್ದಾಗ, ದೇವರ ಆಜ್ಞೆಗನುಸಾರವಾಗಿ ಅಬ್ರಹಾಮನು ಅವನಿಗೆ ಸುನ್ನತಿ ಮಾಡಿದನು.

ಅಬ್ರಹಾಮನಿಗೆ ನೂರು ವರ್ಷಗಳಾಗಿದ್ದಾಗ, ಅವನ ಮಗನಾದ ಇಸಾಕನು ಹುಟ್ಟಿದನು. ಸಾರಳು, “ದೇವರು, ನನ್ನನ್ನು ನಗುವಂತೆ ಮಾಡಿದ್ದಾನೆ, ಇದನ್ನು ಕೇಳಿದ ಪ್ರತಿಯೊಬ್ಬರು ನನ್ನೊಡನೆ ನಗುವರು. ಅಬ್ರಹಾಮನಿಗೆ ಸಾರಳಲ್ಲಿ ಮಗನು ಹುಟ್ಟುತ್ತಾನೆಂದು ಯಾರೂ ಯೋಚಿಸಿರಲಿಲ್ಲ. ಅಬ್ರಹಾಮನು ವೃದ್ಧನಾಗಿದ್ದರೂ ಈಗ ನಾನು ಅವನಿಗೆ ಒಬ್ಬ ಮಗನನ್ನು ಕೊಟ್ಟಿದ್ದೇನೆ” ಅಂದಳು.

ಇಬ್ರಿಯರಿಗೆ 3:1-6

ಯೇಸು ಮೋಶೆಗಿಂತ ಶ್ರೇಷ್ಠನು

ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು. ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು. ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ. ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು. ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು. ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International