Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 119:41-48

41 ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯನ್ನು ನನಗೆ ತೋರಿಸು.
    ನಿನ್ನ ವಾಗ್ದಾನದಂತೆ ನನ್ನನ್ನು ರಕ್ಷಿಸು.
42 ನನ್ನನ್ನು ಗೇಲಿಮಾಡುವ ಜನರಿಗೆ ಆಗ ನಾನು ಉತ್ತರ ಕೊಡುವೆನು.
    ಯೆಹೋವನೇ, ನಿನ್ನ ಮಾತುಗಳಲ್ಲೇ ನಾನು ಭರವಸವಿಟ್ಟಿದ್ದೇನೆ.
43 ನಿನ್ನ ಸತ್ಯೋಪದೇಶಗಳನ್ನು ನಾನು ಯಾವಾಗಲೂ ಮಾತಾಡುವಂತಾಗಲಿ.
    ನಿನ್ನ ಜ್ಞಾನದ ನಿರ್ಧಾರಗಳನ್ನೇ ನಾನು ಆಶ್ರಯಿಸಿಕೊಂಡಿದ್ದೇನೆ.
44 ನಿನ್ನ ಉಪದೇಶಗಳನ್ನು ಎಂದೆಂದಿಗೂ ಅನುಸರಿಸುವೆನು.
45 ಯಾಕೆಂದರೆ, ನಿನ್ನ ನಿಯಮಗಳಿಗೆ ವಿಧೇಯನಾಗಲು
    ನಾನು ಬಹಳವಾಗಿ ಪ್ರಯತ್ನಿಸುತ್ತಿರುವುದರಿಂದ ಯಾರ ಹಂಗಿಲ್ಲದೆ ನಡೆಯುವೆನು.
46 ರಾಜರುಗಳ ಮುಂದೆಯೂ
    ಯೆಹೋವನ ಒಡಂಬಡಿಕೆಯ ಕುರಿತು ಚರ್ಚಿಸುವೆನು, ನಾಚಿಕೆಪಡುವುದಿಲ್ಲ.
47 ನಿನ್ನ ಆಜ್ಞೆಗಳಲ್ಲಿ ಆನಂದಿಸುವೆನು;
    ಅವು ನನಗೆ ಇಷ್ಟವಾಗಿವೆ.
48 ನಿನ್ನ ಆಜ್ಞೆಗಳನ್ನು ಕೊಂಡಾಡುವೆನು, ಅವುಗಳನ್ನು ಧ್ಯಾನಿಸುವೆನು.
    ಅವು ನನಗೆ ಇಷ್ಟವಾಗಿವೆ.

ಆದಿಕಾಂಡ 16:1-15

ಸೇವಕಿಯಾಗಿದ್ದ ಹಾಗರಳು

16 ಸಾರಯಳು ಅಬ್ರಾಮನ ಹೆಂಡತಿ. ಆಕೆಗೆ ಮಕ್ಕಳಿರಲಿಲ್ಲ. ಸಾರಯಳಿಗೆ ಈಜಿಪ್ಟಿನ ಒಬ್ಬ ಸೇವಕಿಯಿದ್ದಳು. ಅವಳ ಹೆಸರು ಹಾಗರಳು. ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ನನ್ನ ಸೇವಕಿಯಾದ ಹಾಗರಳ ಬಳಿಗೆ ಹೋಗು. ಆಕೆಯಲ್ಲಿ ಹುಟ್ಟುವ ಮಗುವನ್ನು ನನ್ನ ಮಗುವಂತೆ ಸ್ವೀಕರಿಸಿಕೊಳ್ಳುವೆನು” ಎಂದು ಹೇಳಿದಳು. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳಿಗೆ ವಿಧೇಯನಾದನು.

ಅಬ್ರಾಮನು ಕಾನಾನಿಗೆ ಬಂದು ಹತ್ತು ವರ್ಷಗಳಾದ ಮೇಲೆ ಇದು ನಡೆಯಿತು. ಹೀಗೆ ಸಾರಯಳು ತನ್ನ ಗಂಡನಾದ ಅಬ್ರಾಮನಿಗೆ ಹಾಗರಳನ್ನು ಕೊಟ್ಟಳು. ಹಾಗರಳು ಆಕೆಯ ಈಜಿಪ್ಟಿನ ಸೇವಕಿಯಾಗಿದ್ದಳು. ಹಾಗರಳು ಅಬ್ರಾಮನಿಂದ ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಯಳನ್ನೇ ಕಡೆಗಣಿಸತೊಡಗಿದಳು. ಆಗ ಸಾರಯಳು ಅಬ್ರಾಮನಿಗೆ, “ನನ್ನ ಸಂಕಟಕ್ಕೆ ನೀನೇ ಕಾರಣ. ನಾನು ಅವಳನ್ನು ನಿನಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ನನ್ನನ್ನೇ ಕಡೆಗಣಿಸುತ್ತಿದ್ದಾಳೆ. ಯೆಹೋವನೇ ನನಗೂ ನಿನಗೂ ನ್ಯಾಯ ತೀರಿಸಲಿ” ಎಂದು ಹೇಳಿದಳು.

ಅದಕ್ಕೆ ಅಬ್ರಾಮನು ಸಾರಯಳಿಗೆ, “ನೀನು ಹಾಗರಳ ಯಜಮಾನಿ. ನೀನು ಅವಳಿಗೆ ಏನುಬೇಕಾದರೂ ಮಾಡಬಹುದು” ಎಂದು ಹೇಳಿದನು. ಆದ್ದರಿಂದ ಸಾರಯಳು ಹಾಗರಳನ್ನು ಶಿಕ್ಷಿಸಿದಳು. ಆಗ ಹಾಗರಳು ಓಡಿಹೋದಳು.

ಹಾಗರಳ ಮಗನಾದ ಇಷ್ಮಾಯೇಲ

ಯೆಹೋವನ ದೂತನು ಹಾಗರಳನ್ನು ಮರುಳುಗಾಡಿನ ಒರತೆಯೊಂದರ ಬಳಿಯಲ್ಲಿ ಕಂಡನು. ಆ ಒರತೆಯು ಶೂರಿಗೆ ಹೋಗುವ ದಾರಿಯ ಬಳಿಯಲ್ಲಿತ್ತು. ದೇವದೂತನು ಅವಳಿಗೆ, “ಹಾಗರಳೇ, ನೀನು ಸಾರಯಳ ಸೇವಕಿಯಾಗಿದ್ದರೂ ಯಾಕೆ ಇಲ್ಲಿರುವೆ? ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.

ಹಾಗರಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಿರುವೆ” ಎಂದು ಹೇಳಿದಳು.

ಯೆಹೋವನ ದೂತನು ಹಾಗರಳಿಗೆ, “ಸಾರಯಳು ನಿನ್ನ ಯಜಮಾನಿ. ನೀನು ಆಕೆಯ ಬಳಿಗೆ ಹಿಂತಿರುಗಿ ಹೋಗಿ ಆಕೆಗೆ ವಿಧೇಯಳಾಗಿರು” ಎಂದು ಹೇಳಿದನು. 10 ಇದಲ್ಲದೆ ಯೆಹೋವನ ದೂತನು ಹಾಗರಳಿಗೆ, “ನಾನು ನಿನ್ನ ಸಂತತಿಯವರನ್ನು ಅಸಂಖ್ಯಾತರನ್ನಾಗಿ ಮಾಡುವೆನು” ಅಂದನು.

11 ಇದಲ್ಲದೆ ದೇವದೂತನು ಆಕೆಗೆ,

“ಹಾಗರಳೇ, ಈಗ ನೀನು ಗರ್ಭಿಣಿಯಾಗಿರುವೆ;
    ನಿನಗೆ ಒಬ್ಬ ಮಗನು ಹುಟ್ಟುವನು.
ನೀನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು;
    ಯಾಕೆಂದರೆ ಯೆಹೋವನು ನಿನ್ನ ಕಷ್ಟಗಳನ್ನು ಕೇಳಿದ್ದಾನೆ; ಆತನು ನಿನಗೆ ಸಹಾಯ ಮಾಡುವನು.
12 ಇಷ್ಮಾಯೇಲನು ಕಾಡುಕತ್ತೆಯಂತೆ
    ಗಡುಸಾಗಿದ್ದು ಸ್ವತಂತ್ರವಾಗಿರುವನು.
ಅವನು ಪ್ರತಿಯೊಬ್ಬರಿಗೂ ವಿರೋಧವಾಗಿರುವನು;
    ಪ್ರತಿಯೊಬ್ಬರೂ ಅವನಿಗೆ ವಿರೋಧವಾಗಿರುವರು.
ಅವನು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾ
    ತನ್ನ ಸಹೋದರರ ಸಮೀಪದಲ್ಲಿ ವಾಸಿಸಿದರೂ ಅವರಿಗೆ ವಿರೋಧವಾಗಿರುವನು.”

ಎಂದು ಹೇಳಿ ಹೊರಟುಹೋದನು.

13 ಯೆಹೋವನು ತನ್ನೊಡನೆ ಮಾತಾಡಿದ್ದರಿಂದ ಹಾಗರಳು, “ಈ ಸ್ಥಳದಲ್ಲಿಯೂ ದೇವರು ನನ್ನನ್ನು ನೋಡಿ ನನಗಾಗಿ ಚಿಂತಿಸುತ್ತಾನೆ ಎಂದುಕೊಂಡು ಆತನಿಗೆ ‘ನನ್ನನ್ನು ನೋಡುವ ದೇವರು’” ಎಂದು ಹೆಸರಿಟ್ಟಳು. 14 ಆದ್ದರಿಂದ ಆ ಬಾವಿಗೆ ಬೀರ್‌ಲಹೈರೋಯಿ (ಬೀರ್‌ಲಹೈರೋಯಿ. ಇದರರ್ಥ: “ನನ್ನನ್ನು ನೋಡುವ ಜೀವಸ್ವರೂಪನ ಬಾವಿ.”) ಎಂದು ಹೆಸರಾಯಿತು. ಈ ಬಾವಿಯು ಕಾದೇಶಿಗೂ ಬೆರೆದಿಗೂ ನಡುವೆ ಇದೆ.

15 ಹಾಗರಳು ಅಬ್ರಾಮನ ಮಗನಿಗೆ ಜನ್ಮಕೊಟ್ಟಳು. ಅಬ್ರಾಮನು ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು.

2 ಕೊರಿಂಥದವರಿಗೆ 6:14-7:2

ಅವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವುದರ ಬಗ್ಗೆ ಎಚ್ಚರಿಕೆ

14 ಕ್ರಿಸ್ತನಂಬಿಕೆಯಿಲ್ಲದ ಜನರಿಗೂ ನಿಮಗೂ ವ್ಯತ್ಯಾಸವಿದೆ. ಆದ್ದರಿಂದ ನೀವು ಅವರೊಂದಿಗೆ ಸೇರಬೇಡಿ. ಒಳ್ಳೆಯದು ಮತ್ತು ಕೆಟ್ಟದು ಒಟ್ಟಾಗಿ ಸೇರಲು ಸಾಧ್ಯವಿಲ್ಲ. ಬೆಳಕು ಕತ್ತಲೆಯೊಡನೆ ಅನ್ಯೋನ್ಯವಾಗಿರಲು ಸಾಧ್ಯವೇ? 15 ಕ್ರಿಸ್ತನೂ ಸೈತಾನನೂ ಅನ್ಯೋನ್ಯವಾಗಿರಲು ಸಾಧ್ಯವೇ? ವಿಶ್ವಾಸಿಗಳಿಗೂ ಅವಿಶ್ವಾಸಿಗಳಿಗೂ ಪಾಲುಗಾರಿಕೆಯೇನು? 16 ದೇವರ ಆಲಯವು ವಿಗ್ರಹಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಲು ಸಾಧ್ಯವೇ? ನಾವು ಜೀವಸ್ವರೂಪನಾದ ದೇವರ ಆಲಯವಾಗಿದ್ದೇವೆ. ದೇವರು ಹೇಳಿದಂತೆ:

“ನಾನು ಅವರೊಂದಿಗೆ ವಾಸಿಸುವೆನು; ಅವರೊಂದಿಗೆ ನಡೆಯುವೆನು;
ಅವರ ದೇವರಾಗಿರುವೆನು; ಅವರು ನನ್ನ ಜನರಾಗಿರುವರು.”(A)

17 “ಆದ್ದರಿಂದ ಆ ಜನರನ್ನು ಬಿಟ್ಟು ಹೊರಬನ್ನಿರಿ;
    ಅವರಿಂದ ಬೇರ್ಪಡಿರಿ ಎನ್ನುತ್ತಾನೆ ಪ್ರಭುವು.
ಅಶುದ್ಧವಾದ ಯಾವುದನ್ನೂ ಮುಟ್ಟಬೇಡಿ,
    ಆಗ ನಾನು ನಿಮ್ಮನ್ನು ಸ್ವೀಕರಿಸಿಕೊಳ್ಳುವೆನು.”(B)

18 “ನಾನು ನಿಮ್ಮ ತಂದೆಯಾಗಿರುವೆನು
    ಮತ್ತು ನೀವು ನನ್ನ ಪುತ್ರಪುತ್ರಿಯರಾಗುವಿರಿ ಎನ್ನುತ್ತಾನೆ ಸರ್ವಶಕ್ತನಾದ ಪ್ರಭುವು.”(C)

ಪ್ರಿಯ ಸ್ನೇಹಿತರೇ, ನಾವು ದೇವರಿಂದ ಈ ವಾಗ್ದಾನಗಳನ್ನು ಹೊಂದಿದ್ದೇವೆ. ಆದ್ದರಿಂದ ನಮ್ಮನ್ನು ಶುದ್ಧರನ್ನಾಗಿ ಮಾಡಿಕೊಳ್ಳಬೇಕು. ನಮ್ಮ ದೇಹವನ್ನಾಗಲಿ ನಮ್ಮ ಆತ್ಮವನ್ನಾಗಲಿ ಅಶುದ್ಧಗೊಳಿಸುವ ಎಲ್ಲಾ ವಿಧದ ಮಲಿನತೆಯಿಂದ ನಾವು ದೂರವಿರೋಣ. ನಾವು ದೇವರನ್ನು ಗೌರವಿಸುವುದರಿಂದ ಪರಿಶುದ್ಧವಾದ ಬಾಳ್ವೆಯನ್ನು ನಡೆಸಲು ನಾವು ಪ್ರಯತ್ನಿಸಬೇಕು.

ಪೌಲನ ಆನಂದ

ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವನ್ನು ಕೊಡಿರಿ. ನಾವು ನಿಮ್ಮಲ್ಲಿ ಯಾರಿಗೂ ಕೆಟ್ಟದ್ದನ್ನು ಮಾಡಿಲ್ಲ. ಯಾರ ನಂಬಿಕೆಯನ್ನೂ ಹಾಳುಮಾಡಿಲ್ಲ; ಯಾರನ್ನೂ ವಂಚಿಸಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International