Revised Common Lectionary (Semicontinuous)
33 ನೀತಿವಂತರೇ, ಯೆಹೋವನಲ್ಲಿ ಉಲ್ಲಾಸಪಡಿರಿ.
ಯಥಾರ್ಥವಂತರು ಆತನನ್ನು ಸ್ತುತಿಸುವುದು ಯೋಗ್ಯವಾಗಿದೆ.
2 ಲೈರ್[a] ವಾದ್ಯವನ್ನು ನುಡಿಸುತ್ತಾ ಯೆಹೋವನನ್ನು ಸ್ತುತಿಸಿರಿ!
ಹತ್ತುತಂತಿಗಳ ಹಾರ್ಪ್‌ವಾದ್ಯವನ್ನು ಬಾರಿಸುತ್ತಾ ಆತನನ್ನು ಕೊಂಡಾಡಿರಿ.
3 ಆತನಿಗೆ ಹೊಸ ಹಾಡನ್ನು[b] ಹಾಡಿರಿ!
ಹಾರ್ಪ್‌ವಾದ್ಯಗಳನ್ನು ಇಂಪಾಗಿ ನುಡಿಸುತ್ತಾ ಆನಂದದಿಂದ ಆರ್ಭಟಿಸಿರಿ.
4 ಯೆಹೋವನ ವಾಕ್ಯವು ಸತ್ಯವಾದದ್ದು!
ಆತನ ಕಾರ್ಯಗಳೆಲ್ಲಾ ಭರವಸೆಗೆ ಯೋಗ್ಯವಾಗಿವೆ.
5 ಆತನು ನೀತಿಯನ್ನೂ ನ್ಯಾಯವನ್ನೂ ಪ್ರೀತಿಸುವನು.
ಯೆಹೋವನ ಶಾಶ್ವತವಾದ ಪ್ರೀತಿಯು ಭೂಲೋಕವನ್ನೆಲ್ಲಾ ತುಂಬಿಕೊಂಡಿದೆ.
6 ಯೆಹೋವನು ಆಜ್ಞಾಪಿಸಲು ಆಕಾಶವು ಸೃಷ್ಟಿಯಾಯಿತು!
ಆತನ ಉಸಿರು ಭೂಮಿಯ ಮೇಲಿರುವ ಸಮಸ್ತವನ್ನು ಸೃಷ್ಟಿಸಿತು.
7 ಆತನು ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ನಿರ್ಮಿಸಿದನು;
ಮಹಾಸಾಗರಕ್ಕೆ ಸ್ಥಳವನ್ನು ಗೊತ್ತುಪಡಿಸಿದನು.[c]
8 ಭೂಲೋಕದವರೆಲ್ಲರೂ ಯೆಹೋವನಲ್ಲಿ ಭಯಭಕ್ತಿಯಿಂದಿರಲಿ.
ಭೂನಿವಾಸಿಗಳೆಲ್ಲರೂ ಆತನಿಗೆ ಭಯಪಡಲಿ.
9 ಯಾಕೆಂದರೆ ಆತನು ನುಡಿದಾಗ ಭೂಲೋಕವು ಸೃಷ್ಟಿಯಾಯಿತು;
ಆತನು ಆಜ್ಞಾಪಿಸಿದಾಗ ಸಮಸ್ತವು ಉಂಟಾಯಿತು.
10 ಯೆಹೋವನು ಜನಾಂಗಗಳ ಉದ್ದೇಶಗಳನ್ನು ವ್ಯರ್ಥಗೊಳಿಸಬಲ್ಲನು;
ಅವರ ಆಲೋಚನೆಗಳನ್ನು ನಿಷ್ಪಲ ಮಾಡಬಲ್ಲನು.
11 ಆದರೆ ಯೆಹೋವನ ಯೋಜನೆಗಳು ಶಾಶ್ವತವಾಗಿವೆ.
ಆತನ ಆಲೋಚನೆಗಳು ಸದಾಕಾಲಕ್ಕೂ ಒಳ್ಳೆಯದಾಗಿವೆ.
12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
ಕಾನಾನಿಗೆ ಅಬ್ರಾಮನ ಮರುಪ್ರಯಾಣ
13 ಅಬ್ರಾಮನು ಈಜಿಪ್ಟಿನಿಂದ ಹೊರಟನು. ಅಬ್ರಾಮನು ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನವುಗಳನ್ನೆಲ್ಲಾ ತೆಗೆದುಕೊಂಡು ನೆಗೆವ್ ಮೂಲಕ ಪ್ರಯಾಣ ಮಾಡಿದನು. ಲೋಟನು ಸಹ ಅವರೊಡನೆ ಇದ್ದನು. 2 ಆಗ ಅಬ್ರಾಮನು ತುಂಬ ಐಶ್ವರ್ಯವಂತನಾಗಿದ್ದನು. ಅವನಿಗೆ ಅನೇಕ ಪಶುಗಳಿದ್ದವು; ಬಹಳ ಬೆಳ್ಳಿಬಂಗಾರಗಳಿದ್ದವು.
3 ಅಬ್ರಾಮನು ತನ್ನ ಪ್ರಯಾಣವನ್ನು ಮುಂದುವರಿಸಿ ನೆಗೆವ್‌ವನ್ನು ಬಿಟ್ಟು ಬೇತೇಲಿಗೆ ಹಿಂತಿರುಗಿಹೋದನು. ಅವನು ಬೇತೇಲ್ ನಗರಕ್ಕೂ ಆಯಿ ನಗರಕ್ಕೂ ಮಧ್ಯದಲ್ಲಿರುವ ಸ್ಥಳಕ್ಕೆ ಹೋದನು. ಅಬ್ರಾಮನು ಮತ್ತು ಅವನ ಕುಟುಂಬದವರು ಇಳಿದುಕೊಂಡಿದ್ದ ಸ್ಥಳವೇ ಇದು. 4 ಅಬ್ರಾಮನು ಯಜ್ಞವೇದಿಕೆಯನ್ನು ಕಟ್ಟಿದ್ದು ಈ ಸ್ಥಳದಲ್ಲೇ. ಅಬ್ರಾಮನು ಯೆಹೋವನನ್ನು ಆರಾಧಿಸಿದ್ದು ಈ ಸ್ಥಳದಲ್ಲೇ.
ಅಬ್ರಾಮನು ಮತ್ತು ಲೋಟನು ಅಗಲಿದ್ದು
5 ಈ ಕಾಲದಲ್ಲಿ ಲೋಟನು ಸಹ ಅಬ್ರಾಮನೊಡನೆ ಪ್ರಯಾಣಮಾಡುತ್ತಿದ್ದನು. ಲೋಟನಿಗೂ ಸಹ ಕುರಿಮಂದೆಗಳೂ ಪಶುಹಿಂಡುಗಳೂ ಗುಡಾರಗಳೂ ಇದ್ದವು. 6 ಅಬ್ರಾಮನಿಗೂ ಲೋಟನಿಗೂ ಬಹಳ ಪಶುಗಳಿದ್ದುದರಿಂದ ಅವುಗಳ ಪೋಷಣೆಗೆ ಆ ಸ್ಥಳವು ಸಾಕಾಗಲಿಲ್ಲ. 7 ಅಬ್ರಾಮನ ಮಂದೆಕಾಯುವವರು ಮತ್ತು ಲೋಟನ ಮಂದೆಕಾಯುವವರು ವಾದ ಮಾಡಲಾರಂಭಿಸಿದರು. ಆ ಕಾಲದಲ್ಲಿ ಕಾನಾನ್ಯರು ಮತ್ತು ಪೆರಿಜೀಯರು ಸಹ ಆ ಸ್ಥಳದಲ್ಲಿ ವಾಸವಾಗಿದ್ದರು.
8 ಆದ್ದರಿಂದ ಅಬ್ರಾಮನು ಲೋಟನಿಗೆ, “ನಿನಗೂ ನನಗೂ ಯಾವ ವಾಗ್ವಾದವೂ ಇರಬಾರದು. ನಿನ್ನ ಜನರೂ ನನ್ನ ಜನರೂ ವಾಗ್ವಾದ ಮಾಡಬಾರದು; ನಾವೆಲ್ಲರೂ ಸಹೋದರರಾಗಿದ್ದೇವೆ. 9 ನಾವು ಪ್ರತ್ಯೇಕವಾಗೋಣ. ನಿನಗೆ ಬೇಕಾದ ಸ್ಥಳವನ್ನು ನೀನು ಆರಿಸಿಕೊ. ನೀನು ಎಡಗಡೆಗೆ ಹೋಗುವುದಾದರೆ, ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋಗುವುದಾದರೆ, ನಾನು ಎಡಗಡೆಗೆ ಹೋಗುತ್ತೇನೆ” ಎಂದು ಹೇಳಿದನು.
10 ಲೋಟನು ಕಣ್ಣೆತ್ತಿ ನೋಡಿದಾಗ ಜೋರ್ಡನ್ ಕಣಿವೆಯೆಲ್ಲಾ ಕಾಣಿಸಿತು. ಅಲ್ಲಿ ಬೇಕಾದಷ್ಟು ನೀರಿರುವುದನ್ನು ಲೋಟನು ನೋಡಿದನು. (ಆ ಕಾಲದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳು ಯೆಹೋವನಿಂದ ನಾಶವಾಗಿರಲಿಲ್ಲ. ಆ ಕಾಲದಲ್ಲಿ ಜೋರ್ಡನ್ ಕಣಿವೆಯು ಚೋಗರ್ ತನಕ ಯೆಹೋವನ ತೋಟದಂತಿತ್ತು. ಅದು ಈಜಿಪ್ಟಿನ ಭೂಮಿಯಂತೆ ಫಲವತ್ತಾಗಿತ್ತು.) 11 ಆದ್ದರಿಂದ ಲೋಟನು ಜೋರ್ಡನ್ ಕಣಿವೆಯನ್ನೆಲ್ಲಾ ತನಗಾಗಿ ಆರಿಸಿಕೊಂಡನು. ಅವರಿಬ್ಬರೂ ಪ್ರತ್ಯೇಕವಾದರು. ಲೋಟನು ಪೂರ್ವದ ಕಡೆಗೆ ಪ್ರಯಾಣ ಮಾಡಿದನು. 12 ಅಬ್ರಾಮನು ಕಾನಾನ್ ಪ್ರದೇಶದಲ್ಲಿ ಉಳಿದುಕೊಂಡನು. ಲೋಟನು ಕಣಿವೆಯಲ್ಲಿದ್ದ ಪಟ್ಟಣಗಳ ಮಧ್ಯದಲ್ಲಿ ವಾಸಿಸಿದನು; ದಕ್ಷಿಣದಲ್ಲಿದ್ದ ಸೊದೋಮಿನವರೆಗೂ ಗುಡಾರಗಳನ್ನು ಹಾಕಿಕೊಂಡು ಪಾಳೆಯಮಾಡಿಕೊಂಡನು. 13 ಸೊದೋಮಿನ ಜನರು ತುಂಬ ಕೆಟ್ಟವರಾಗಿದ್ದರು. ಅವರು ಯಾವಾಗಲೂ ಯೆಹೋವನಿಗೆ ವಿರೋಧವಾಗಿ ಪಾಪಮಾಡುತ್ತಿದ್ದರು.
14 ಲೋಟನು ಹೊರಟುಹೋದ ಮೇಲೆ ಯೆಹೋವನು ಅಬ್ರಾಮನಿಗೆ, “ಸುತ್ತಲೂ ನೋಡು, ಉತ್ತರದಕ್ಷಿಣಗಳ ಕಡೆಗೂ ಪೂರ್ವಪಶ್ಚಿಮಗಳ ಕಡೆಗೂ ನೋಡು. 15 ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ನಂತರ ಜೀವಿಸುವ ನಿನ್ನ ಸಂತತಿಯವರಿಗೂ ಕೊಡುತ್ತೇನೆ. ಇದು ಎಂದೆಂದಿಗೂ ನಿನ್ನದಾಗಿರುವುದು. 16 ನಾನು ನಿನ್ನ ಜನರನ್ನು ಭೂಮಿಯ ಮೇಲಿರುವ ಧೂಳಿನಷ್ಟು ಹೆಚ್ಚಿಸುವೆನು. ಯಾವನಾದರೂ ಭೂಮಿಯ ಮೇಲಿರುವ ಧೂಳಿನ ಕಣಗಳನ್ನು ಲೆಕ್ಕಮಾಡಬಹುದಾದರೆ ನಿನ್ನ ಸಂತತಿಯವರ ಸಂಖ್ಯೆಯು ಅದರಷ್ಟೇ ಇರುವುದು. 17 ಆದ್ದರಿಂದ ಹೋಗು, ನಿನ್ನ ಭೂಮಿಯಲ್ಲೆಲ್ಲಾ ತಿರುಗಾಡು. ಅದರ ಉದ್ದಗಲಗಳಲ್ಲೆಲ್ಲಾ ತಿರುಗಾಡು; ಯಾಕೆಂದರೆ ನಾನು ಅದನ್ನು ನಿನಗೆ ಕೊಡುತ್ತೇನೆ” ಎಂದು ಹೇಳಿದನು.
18 ಆದ್ದರಿಂದ ಅಬ್ರಾಮನು ತನ್ನ ಗುಡಾರಗಳನ್ನು ಕೀಳಿಸಿ, ದೊಡ್ಡ ಮರಗಳಿರುವ ಮಮ್ರೆಯ ಸಮೀಪಕ್ಕೆ ಹೋಗಿ ವಾಸಿಸತೊಡಗಿದನು. ಇದು ಹೆಬ್ರೋನ್ ನಗರಕ್ಕೆ ಸಮೀಪದಲ್ಲಿತ್ತು. ಆ ಸ್ಥಳದಲ್ಲಿ ಅಬ್ರಾಮನು ಯೆಹೋವನನ್ನು ಆರಾಧಿಸುವುದಕ್ಕಾಗಿ ಯಜ್ಞವೇದಿಕೆಯನ್ನು ಕಟ್ಟಿದನು.
17 ಈ ಸುಳ್ಳುಬೋಧಕರು ನೀರಿಲ್ಲದ ಒರತೆಗಳಂತಿದ್ದಾರೆ. ಅವರು ಬಿರುಗಾಳಿಯಿಂದ ಬಡಿದುಕೊಂಡು ಹೋಗುವ ಮೋಡಗಳಂತಿದ್ದಾರೆ. ಅವರಿಗಾಗಿ ಒಂದು ಕಗ್ಗತ್ತಲಾದ ಸ್ಥಳವನ್ನು ಕಾದಿರಿಸಲಾಗಿದೆ. 18 ಅವರು ಅರ್ಥವಿಲ್ಲದ ಮಾತು ಗಳಿಂದ ಬಡಾಯಿಕೊಚ್ಚಿಕೊಳ್ಳುತ್ತಾರೆ; ಜನರನ್ನು ಪಾಪಗಳ ಬಲೆಗೆ ನಡೆಸುತ್ತಿದ್ದಾರೆ. ತಪ್ಪುಮಾರ್ಗದಲ್ಲಿ ನಡೆಯುವ ಜನರ ಸಹವಾಸದಿಂದ ಹೊಸದಾಗಿ ತಪ್ಪಿಸಿಕೊಂಡು ಬಂದ ಜನರನ್ನು ದಾರಿತಪ್ಪಿಸುತ್ತಾರೆ. ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಮಾಡಲು ಇಚ್ಛಿಸುವ ಕೆಟ್ಟಕಾರ್ಯಗಳನ್ನು ಬಳಸಿಕೊಂಡು ಈ ಸುಳ್ಳುಬೋಧಕರು ಅವರನ್ನು ದಾರಿ ತಪ್ಪಿಸುತ್ತಾರೆ. 19 ಈ ಸುಳ್ಳುಬೋಧಕರು ಆ ಜನರಿಗೆ ಸ್ವಾತಂತ್ರ್ಯವನ್ನು ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಆದರೆ ಈ ಸುಳ್ಳುಬೋಧಕರೇ ಸ್ವತಂತ್ರರಾಗದೆ ನಾಶವಾಗುವಂಥ ಸಂಗತಿಗಳಿಗೆ ಗುಲಾಮರಾಗಿದ್ದಾರೆ. ಒಬ್ಬನು ಯಾವುದಕ್ಕೆ ಸೋತುಹೋಗಿದ್ದಾನೋ ಅದಕ್ಕೆ ಗುಲಾಮನಾಗಿದ್ದಾನೆ.
20 ಈ ಲೋಕದಲ್ಲಿನ ಕೆಟ್ಟಕಾರ್ಯಗಳಿಂದ ಆ ಜನರನ್ನು ಪಾರುಮಾಡಲಾಯಿತು. ನಮ್ಮ ಪ್ರಭುವಾದ ಮತ್ತು ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರ ಮೂಲಕ ಅವರಿಗೆ ಬಿಡುಗಡೆಯಾಯಿತು. ಆದರೆ ಆ ಜನರು ತಮ್ಮ ಹಿಂದಿನ ಸಂಗತಿಗಳ ಕಡೆಗೆ ಹಿಂದಿರುಗಿಹೋದರೆ ಮತ್ತು ಅವುಗಳು ಅವರನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವರು ಮೊದಲಿಗಿಂತಲೂ ಹೆಚ್ಚು ಕೆಟ್ಟುಹೋಗುತ್ತಾರೆ. 21 ಹೌದು, ಆ ಜನರು ಸರಿಯಾದ ಮಾರ್ಗವನ್ನು ತಿಳಿಯದೆ ಹೋಗಿದ್ದರೇ ಒಳ್ಳೆಯದಾಗುತ್ತಿತ್ತು. ಸರಿಯಾದ ಮಾರ್ಗವನ್ನು ಅರಿತುಕೊಂಡು, ಪವಿತ್ರ ಬೋಧನೆಗಳಿಗೆ ವಿಮುಖರಾಗುವುದಕ್ಕಿಂತ ಅದನ್ನು ತಿಳಿದುಕೊಳ್ಳದಿದ್ದರೇ ಚೆನ್ನಾಗಿರುತ್ತಿತ್ತು. 22 ನಿಜವಾಗಿ ಈ ಗಾದೆಗಳಂತೆಯೇ ಅವರು ಮಾಡಿದರು: “ನಾಯಿಯು ತಾನು ಕಕ್ಕಿದ್ದನ್ನೇ ನೆಕ್ಕಲು ತಿರುಗಿಕೊಂಡಿತು”(A) ಮತ್ತು “ತೊಳೆದ ಹಂದಿಯು ಕೆಸರಿನಲ್ಲಿ ಹೊರಳಾಡಲು ಹೋಯಿತು.”
Kannada Holy Bible: Easy-to-Read Version. All rights reserved. © 1997 Bible League International