Revised Common Lectionary (Semicontinuous)
ರಚನೆಗಾರ: ದಾವೀದ.
29 ದೇವಪುತ್ರರೇ,[a] ಯೆಹೋವನನ್ನು ಸ್ತುತಿಸಿರಿ!
ಆತನ ಮಹಿಮೆಯನ್ನೂ ಶಕ್ತಿಯನ್ನೂ ಸ್ತುತಿಸಿರಿ.
2 ಯೆಹೋವನನ್ನು ಸ್ತುತಿಸುತ್ತಾ ಆತನ ಹೆಸರನ್ನು ಘನಪಡಿಸಿರಿ.
ಪರಿಶುದ್ಧ ವಸ್ತ್ರಗಳನ್ನು ಧರಿಸಿಕೊಂಡು ಆತನನ್ನು ಆರಾಧಿಸಿರಿ.[b]
3 ಯೆಹೋವನ ಸ್ವರವು ಸಮುದ್ರದ ಮೇಲೆ ಕೇಳಿ ಬರುವುದು.
ಮಹಾಸಾಗರದ ಮೇಲಿನ ಗುಡುಗಿನಂತೆ ಮಹಿಮಾಸ್ವರೂಪನಾದ ದೇವರ ಸ್ವರವು ಕೇಳಿಬರುವುದು.
4 ಯೆಹೋವನ ಸ್ವರವು
ಆತನ ಶಕ್ತಿಯನ್ನೂ ಮಹಿಮೆಯನ್ನೂ ತೋರ್ಪಡಿಸುವುದು.
5 ಯೆಹೋವನ ಸ್ವರವು ದೇವದಾರು ವೃಕ್ಷಗಳನ್ನು ತುಂಡುತುಂಡು ಮಾಡುತ್ತದೆ.
ಯೆಹೋವನು ಲೆಬನೋನಿನ ದೇವದಾರು ವೃಕ್ಷಗಳನ್ನೂ ಮುರಿದುಹಾಕುವನು.
6 ಯೆಹೋವನು ಲೆಬನೋನನ್ನು ನಡುಗಿಸಲು ಅದು ನರ್ತಿಸುತ್ತಿರುವ ಎಳೆಕರುವಿನಂತೆ ಕಾಣುತ್ತದೆ;
ಸಿರ್ಯೋನ್ ಪರ್ವತವು ಕಂಪಿಸುವಾಗ ಕುಣಿದಾಡುವ ಎಳೆ ಹೋರಿಯಂತೆ ಕಾಣುತ್ತದೆ.
7 ಯೆಹೋವನ ಗರ್ಜನಕ್ಕೆ ಮಿಂಚುಗಳು ಥಳಥಳನೆ ಹೊಳೆಯುತ್ತವೆ.
8 ಯೆಹೋವನ ಗರ್ಜನದಿಂದ ಅರಣ್ಯವು ಕಂಪಿಸುವುದು.
ಆತನ ಗರ್ಜನಕ್ಕೆ ಕಾದೇಶ್ ಅರಣ್ಯವು ನಡುಗುವುದು.
9 ಯೆಹೋವನ ಗರ್ಜನಕ್ಕೆ ಜಿಂಕೆಗಳು ಹೆದರಿಕೊಳ್ಳುತ್ತವೆ;
ಕಾಡಿನ ಮರಗಳು ಬರಿದಾಗುತ್ತವೆ;
ಆದರೆ ಆತನ ಆಲಯದಲ್ಲಿ ಜನರು ಆತನ ಮಹಿಮೆಯನ್ನು ಹಾಡಿಕೊಂಡಾಡುವರು.
10 ಜಲಪ್ರಳಯದ ಕಾಲದಲ್ಲೂ ಯೆಹೋವನು ರಾಜನಾಗಿದ್ದನು.
ಯೆಹೋವನು ಸದಾಕಾಲ ರಾಜನಾಗಿರುವನು.
11 ಯೆಹೋವನು ತನ್ನ ಜನರಿಗೆ ಬಲವನ್ನು ದಯಪಾಲಿಸಲಿ.
ಆತನು ತನ್ನ ಜನರಿಗೆ ಶಾಂತಿಯನ್ನು ಸ್ಥಾಪಿಸಲಿ.
39-40 “ಯೋಬನೇ, ಹೆಣ್ಣುಸಿಂಹಕ್ಕೆ ನೀನು ಆಹಾರವನ್ನು ಹುಡುಕುವೆಯಾ?
ಗವಿಗಳಲ್ಲಿ ಮಲಗಿಕೊಂಡಿರುವ ಸಿಂಹಗಳಿಗೂ ಪೊದೆಯಲ್ಲಿ ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಿಗೂ ನೀನು ಉಣಿಸಬಲ್ಲೆಯಾ?
41 ಕಾಗೆಗಳು ಆಹಾರವಿಲ್ಲದೆ ಅಲೆದಾಡುತ್ತಿರುವ ಅವುಗಳ ಮರಿಗಳು ದೇವರಿಗೆ ಮೊರೆಯಿಡುವಾಗ
ಅವುಗಳಿಗೆ ಆಹಾರವನ್ನು ಒದಗಿಸುವವರು ಯಾರು?
39 “ಯೋಬನೇ, ಬೆಟ್ಟದ ಮೇಕೆಗಳು ಯಾವಾಗ ಹುಟ್ಟುತ್ತವೆ ಎಂಬುದು ನಿನಗೆ ಗೊತ್ತಿದೆಯೋ?
ತಾಯಿ ಜಿಂಕೆಯು ಮರಿ ಈಯುವಾಗ ನೀನು ಸಹಾಯ ಮಾಡಬಲ್ಲೆಯಾ?
2 ಬೆಟ್ಟದ ಮೇಕೆಯೂ ಜಿಂಕೆಯೂ ತಮ್ಮ ಮರಿಗಳನ್ನು ಹೊಟ್ಟೆಯಲ್ಲಿ ಎಷ್ಟು ತಿಂಗಳವರೆಗೆ ಹೊತ್ತುಕೊಂಡಿರುತ್ತವೆ ಎಂಬುದು ನಿನಗೆ ಗೊತ್ತಿದೆಯೋ?
ಅವುಗಳು ಹುಟ್ಟುವುದಕ್ಕೆ ಸರಿಯಾದ ಸಮಯ ಯಾವುದೆಂದು ನಿನಗೆ ಗೊತ್ತಿದೆಯೋ?
3 ಅವು ಬಗ್ಗಿಕೊಂಡು ಮರಿಗಳನ್ನು ಈಯುತ್ತವೆ;
ಬಳಿಕ ಅವುಗಳ ಪ್ರಸವವೇದನೆ ಕೊನೆಗೊಳ್ಳುತ್ತದೆ.
4 ಬೆಟ್ಟದಮೇಕೆ ಮರಿಗಳೂ ಜಿಂಕೆಯ ಮರಿಗಳೂ ಬಯಲುಗಳಲ್ಲಿ ಪುಷ್ಟಿಯಾಗಿ ಬೆಳೆಯುತ್ತವೆ.
ಬಳಿಕ ಅವು ತಮ್ಮ ತಾಯಂದಿರನ್ನು ಬಿಟ್ಟುಹೋಗುತ್ತವೆ; ಹಿಂತಿರುಗಿ ಬರುವುದೇ ಇಲ್ಲ.
5 “ಯೋಬನೇ, ಸ್ವತಂತ್ರವಾಗಿರುವಂತೆ ಕಾಡುಕತ್ತೆಗಳನ್ನು ಕಳುಹಿಸಿದವರು ಯಾರು?
ಅವುಗಳ ಹಗ್ಗಗಳನ್ನು ಬಿಚ್ಚಿ, ಅವುಗಳನ್ನು ಬಿಟ್ಟುಬಿಟ್ಟವರು ಯಾರು?
6 ಕಾಡುಕತ್ತೆಗೆ ಅಡವಿಯನ್ನು ಮನೆಯನ್ನಾಗಿ ಕೊಟ್ಟವನೇ ನಾನು.
ಅವುಗಳಿಗೆ ಉಪ್ಪುಭೂಮಿಯನ್ನು ವಾಸಿಸುವ ಸ್ಥಳವನ್ನಾಗಿ ಕೊಟ್ಟವನೇ ನಾನು.
7 ಕಾಡುಕತ್ತೆಯು ಗದ್ದಲವಿರುವ ಊರುಗಳ ಸಮೀಪಕ್ಕೂ ಹೋಗುವುದಿಲ್ಲ,
ಯಾರೂ ಅವುಗಳನ್ನು ಪಳಗಿಸಿ ದುಡಿಸುವುದಿಲ್ಲ.
8 ಕಾಡುಕತ್ತೆಗಳು ಬೆಟ್ಟಗಳಲ್ಲಿ ವಾಸಿಸುತ್ತವೆ.
ಹಸಿರಾದ ಏನನ್ನಾದರೂ ತಿನ್ನುವುದಕ್ಕೆ ಅವು ಅಲ್ಲಿಯೇ ಹುಡುಕುತ್ತವೆ.
9 “ಯೋಬನೇ, ಕಾಡುಕೋಣಕ್ಕೆ ಮೂಗುದಾರವನ್ನು ಕಟ್ಟಿ ನಿನ್ನ ಹೊಲವನ್ನು ಉಳುವಂತೆ ಮಾಡಬಲ್ಲೆಯಾ?
ತಗ್ಗುಭೂಮಿಯಲ್ಲಿ ಕುಂಟೆ ಹೊಡೆಯಬಲ್ಲೆಯಾ?
10 ಕಾಡುಕೋಣವನ್ನು ಹಗ್ಗದಿಂದ ಕಟ್ಟಿ ಭೂಮಿಯನ್ನು ಉಳುಮೆ ಮಾಡಬಲ್ಲೆಯಾ?
ಅದು ತಗ್ಗುಗಳಲ್ಲಿ ನಿನ್ನನ್ನು ಹಿಂಬಾಲಿಸಿ ಕುಂಟೆ ಎಳೆಯುವುದೋ?
11 ನಿನ್ನ ಬೇಸಾಯಕ್ಕೆ ಕಾಡುಕೋಣದ ಶಕ್ತಿಯನ್ನು ಅವಲಂಭಿಸಿಕೊಳ್ಳಬಲ್ಲೆಯಾ?
ಪ್ರಯಾಸದ ಕೆಲಸವನ್ನು ಅದು ಮಾಡಬೇಕೆಂದು ಅಪೇಕ್ಷಿಸುವೆಯಾ?
12 ಅದು ನಿನ್ನ ಬೆಳೆಯನ್ನು ಕೂಡಿಸಿ,
ನಿನ್ನ ಕಣಕ್ಕೆ ಹೊತ್ತುಕೊಂಡು ಬರುವುದೆಂದು ಭರವಸವಿಡುವಿಯಾ?
ಪವಿತ್ರಾತ್ಮನ ವರಗಳು
12 ಸಹೋದರ ಸಹೋದರಿಯರೇ, ಆತ್ಮಿಕ ವರಗಳ ಬಗ್ಗೆ ನೀವು ಅರ್ಥಮಾಡಿಕೊಳ್ಳಬೇಕೆಂಬುದು ನನ್ನ ಅಪೇಕ್ಷೆಯಾಗಿದೆ. 2 ನೀವು ವಿಶ್ವಾಸಿಗಳಾಗುವುದಕ್ಕಿಂತ ಮುಂಚೆ ನಿಮ್ಮ ಜೀವಿತವು ಹೇಗಿತ್ತೆಂಬುದನ್ನು ಜ್ಞಾಪಿಸಿಕೊಳ್ಳಿರಿ. ನಿಮಗಿಷ್ಟ ಬಂದಂತೆ ನಿರ್ಜೀವ ವಸ್ತುಗಳಾದ ವಿಗ್ರಹಗಳನ್ನು ಆರಾಧಿಸುತ್ತಿದ್ದಿರಿ. 3 ಹೀಗಿರಲಾಗಿ, ನಾನು ನಿಮಗೆ ಹೇಳುವುದೇನೆಂದರೆ, ದೇವರಾತ್ಮನ ಸಹಾಯದಿಂದ ಮಾತಾಡುವ ಯಾವ ವ್ಯಕ್ತಿಯೇ ಆಗಲಿ, “ಯೇಸು ಶಾಪಗ್ರಸ್ತನಾಗಲಿ” ಎಂದು ಹೇಳುವುದಿಲ್ಲ. ಅಂತೆಯೇ ಪವಿತ್ರಾತ್ಮನ ಸಹಾಯವಿಲ್ಲದೆ ಯಾವ ವ್ಯಕ್ತಿಯೇ ಆಗಲಿ, “ಯೇಸುವೇ ಪ್ರಭು” ಎಂದು ಹೇಳಲಾರನು.
Kannada Holy Bible: Easy-to-Read Version. All rights reserved. © 1997 Bible League International