Revised Common Lectionary (Semicontinuous)
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
ಹಡಗು ಸಮುದ್ರದ ಮೇಲೆ ಸಂಚರಿಸುವುದು.
27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.
31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
ಅವು ಜ್ವಾಲಾಮುಖಿಗಳಾಗುತ್ತವೆ.
33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!
ಯೆಹೋವನನ್ನು ಕೊಂಡಾಡು!
24 ಮೋಶೆಯು ಹೊರಟುಹೋಗಿ, ಯೆಹೋವನು ಹೇಳಿದ್ದನ್ನು ಜನರಿಗೆ ತಿಳಿಸಿ, ಇಸ್ರೇಲರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಒಟ್ಟಾಗಿ ಸೇರಿಸಿದನು. ಅವರು ದೇವದರ್ಶನಗುಡಾರದ ಸುತ್ತಲೂ ನಿಲ್ಲುವಂತೆ ಆಜ್ಞಾಪಿಸಿದನು. 25 ಆಗ ಯೆಹೋವನು ಮೇಘದಲ್ಲಿ ಇಳಿದುಬಂದು ಮೋಶೆಯೊಡನೆ ಮಾತಾಡಿ ಅವನಲ್ಲಿದ್ದ ಆತ್ಮವನ್ನೇ[a] ಆ ಎಪ್ಪತ್ತು ಮಂದಿ ಹಿರಿಯರಿಗೆ ಕೊಟ್ಟನು. ಆತ್ಮಿಕ ವರಗಳು ಅವರಿಗೆ ಕೊಡಲ್ಪಟ್ಟಾಗ ಅವರು ಪ್ರವಾದಿಗಳಂತೆ ಪ್ರವಾದಿಸಿದರು. ಆದರೆ ಮತ್ತೆ ಅವರು ಹಾಗೆ ಪ್ರವಾದಿಸಲಿಲ್ಲ.
26 ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರು ಗುಡಾರದ ಬಳಿಗೆ ಹೋಗಲಿಲ್ಲ. ಹಿರಿಯರ ಹೆಸರುಗಳಿದ್ದ ಪಟ್ಟಿಯಲ್ಲಿ ಅವರ ಹೆಸರುಗಳಿದ್ದವು. ಆದರೆ ಅವರು ಪಾಳೆಯದಲ್ಲೇ ಉಳಿದುಕೊಂಡರು. ಆದರೆ ಅವರಿಗೆ ಆತ್ಮಿಕ ವರಗಳು ಕೊಡಲ್ಪಟ್ಟಿದ್ದರಿಂದ ಅವರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸತೊಡಗಿದರು. 27 ಒಬ್ಬ ಯೌವನಸ್ಥನು ಮೋಶೆಯ ಬಳಿಗೆ ಓಡಿಹೋಗಿ, “ಎಲ್ದಾದ್ ಮತ್ತು ಮೇದಾದ್ ಎಂಬಿಬ್ಬರು ಪಾಳೆಯದಲ್ಲಿ ಪ್ರವಾದಿಗಳಂತೆ ಪ್ರವಾದಿಸುತ್ತಿದ್ದಾರೆ” ಎಂದು ಹೇಳಿದನು.
28 ನೂನನ ಮಗನಾದ ಯೆಹೋಶುವನು ಮೋಶೆಗೆ, “ಸ್ವಾಮೀ, ನೀನು ಅವರನ್ನು ತಡೆಯಬೇಕು” ಎಂದನು. (ಯೆಹೋಶುವನು ಯೌವನಸ್ಥನಾಗಿದ್ದಾಗಿನಿಂದಲೂ ಮೋಶೆಯ ಸಹಾಯಕನಾಗಿದ್ದನು.)
29 ಆದರೆ ಮೋಶೆಯು, “ನೀನು ನನ್ನ ವಿಷಯದಲ್ಲಿ ಚಿಂತೆಪಡುತ್ತಿರುವುದೇಕೆ? ಯೆಹೋವನ ಜನರೆಲ್ಲರೂ ಪ್ರವಾದಿಗಳಾಗಿರಬೇಕೆಂದು ನಾನು ಬಯಸುತ್ತೇನೆ. ಅವರೆಲ್ಲರ ಮೇಲೆ ಯೆಹೋವನು ತನ್ನ ಆತ್ಮನನ್ನು ಇರಿಸಬೇಕೆಂದು ನಾನು ಬಯಸುತ್ತೇನೆ” ಎಂದು ಉತ್ತರಿಸಿದನು. 30 ಬಳಿಕ ಮೋಶೆಯು ಮತ್ತು ಇಸ್ರೇಲರ ನಾಯಕರು ಪಾಳೆಯಕ್ಕೆ ಹಿಂತಿರುಗಿದರು.
ಪವಿತ್ರಾತ್ಮನ ಬಗ್ಗೆ ಉಪದೇಶ
37 ಹಬ್ಬದ ಕೊನೆಯ ದಿನ ಬಂದಿತು. ಅದು ಅತ್ಯಂತ ಮುಖ್ಯವಾದ ದಿನವಾಗಿತ್ತು. ಅಂದು ಯೇಸು ನಿಂತುಕೊಂಡು, “ಯಾವನಿಗಾದರೂ ಬಾಯಾರಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. 38 ನನ್ನಲ್ಲಿ ನಂಬಿಕೆ ಇಡುವವನ ಹೊಟ್ಟೆಯೊಳಗಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುತ್ತವೆ. ಪವಿತ್ರ ಗ್ರಂಥವು ತಿಳಿಸುವುದು ಇದನ್ನೇ” ಎಂದು ಗಟ್ಟಿಯಾಗಿ ಹೇಳಿದನು. 39 ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮನನ್ನು ಕುರಿತು ಹೇಳಿದನು. ಆತನು ಇನ್ನೂ ತನ್ನ ಮಹಿಮೆಯನ್ನು ಹೊಂದಿಲ್ಲದಿದ್ದ ಕಾರಣ ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ.
Kannada Holy Bible: Easy-to-Read Version. All rights reserved. © 1997 Bible League International