Revised Common Lectionary (Semicontinuous)
24 ಯೆಹೋವನೇ, ನೀನು ಅನೇಕ ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ನೀನು ಸೃಷ್ಟಿಸಿದ ವಸ್ತುಗಳಿಂದ ಭೂಮಿಯು ತುಂಬಿಹೋಗಿದೆ.
ನಿನ್ನ ಪ್ರತಿಯೊಂದು ಕಾರ್ಯದಲ್ಲೂ ನಿನ್ನ ಜ್ಞಾನವನ್ನು ಕಾಣಬಲ್ಲವು.
25 ಇಗೋ ವಿಶಾಲವಾದ ಸಮುದ್ರವನ್ನು ನೋಡು.
ಅದರೊಳಗೆ ಅನೇಕ ಬಗೆಯ ದೊಡ್ಡ ಜೀವಿಗಳೂ
ನಾನಾ ಬಗೆಯ ಚಿಕ್ಕ ಜೀವಿಗಳೂ ಅಸಂಖ್ಯಾತವಾಗಿವೆ.
26 ನೀನು ಸೃಷ್ಟಿಸಿದ ಲಿವ್ಯಾತಾನನು ಸಮುದ್ರದಲ್ಲಿ ಆಟವಾಡುತ್ತಿದ್ದರೂ
ಹಡಗು ಸಮುದ್ರದ ಮೇಲೆ ಸಂಚರಿಸುವುದು.
27 ಈ ಜೀವಿಗಳೆಲ್ಲಾ ನಿನ್ನನ್ನು ಅವಲಂಭಿಸಿಕೊಂಡಿವೆ.
ಅವುಗಳಿಗೆ ಸರಿಸಮಯದಲ್ಲಿ ಆಹಾರವನ್ನು ಕೊಡುವಾತನು ನೀನೇ.
28 ಸರ್ವಜೀವಿಗಳಿಗೆ ಆಹಾರವನ್ನು ಕೊಡುವಾತನು ನೀನೇ.
ನೀನು ಕೈತೆರೆದು ಒಳ್ಳೆಯ ಆಹಾರವನ್ನು ಕೊಡಲು ಅವು ತಿಂದು ತೃಪ್ತಿಯಾಗುತ್ತವೆ.
29 ನೀನು ಅವುಗಳಿಗೆ ವಿಮುಖನಾದಾಗ
ಅವು ಭಯಗೊಳ್ಳುತ್ತವೆ.
ಅವುಗಳ ಶ್ವಾಸವು ಹೋಗಿ
ಬಲಹೀನತೆಯಿಂದ ಸತ್ತು ಮತ್ತೆ ಮಣ್ಣಾಗುತ್ತವೆ.
30 ನಿನ್ನ ಜೀವಶ್ವಾಸವನ್ನು ಊದುವಾಗ ಅವು ಸೃಷ್ಟಿಯಾಗುತ್ತವೆ.
ನೀನು ಭೂಮಿಯನ್ನು ಮತ್ತೆ ನೂತನ ಪಡಿಸುವೆ.
31 ಯೆಹೋವನ ಮಹಿಮೆಯು ಶಾಶ್ವತವಾಗಿರಲಿ!
ಯೆಹೋವನು ತಾನು ಸೃಷ್ಟಿಸಿದವುಗಳಲ್ಲಿ ಆನಂದಿಸಲಿ.
32 ಆತನು ಭೂಮಿಯ ಕಡೆಗೆ ನೋಡಿದರೆ ಸಾಕು,
ಭೂಮಿಯು ನಡುಗುವುದು;
ಆತನು ಬೆಟ್ಟಗಳನ್ನು ಮುಟ್ಟಿದರೆ ಸಾಕು,
ಅವು ಜ್ವಾಲಾಮುಖಿಗಳಾಗುತ್ತವೆ.
33 ನನ್ನ ಜೀವಮಾನವೆಲ್ಲಾ ನಾನು ಯೆಹೋವನಿಗೆ ಗಾನ ಮಾಡುವೆನು.
ನಾನು ಬದುಕಿರುವವರೆಗೂ ಆತನನ್ನು ಸಂಕೀರ್ತಿಸುವೆನು.
34 ನಾನು ಹೇಳಿದ ಈ ವಿಷಯಗಳು ಆತನನ್ನು ಸಂತೋಷಗೊಳಿಸಲಿ.
ನಾನಾದರೋ ಯೆಹೋವನಲ್ಲಿ ಸಂತೋಷಿಸುವೆನು.
35 ಪಾಪಾತ್ಮರು ಭೂಮಿಯಿಂದ ಕಾಣದೆಹೋಗಲಿ.
ದುಷ್ಟರು ಎಂದೆಂದಿಗೂ ನಿರ್ಮೂಲವಾಗಲಿ.
ನನ್ನ ಆತ್ಮವೇ, ಯೆಹೋವನನ್ನು ಸ್ತುತಿಸು!
ಯೆಹೋವನನ್ನು ಕೊಂಡಾಡು!
ಯೆಹೋವನು ದೇಶವನ್ನು ಸುಸ್ಥಿತಿಗೆ ತರುವನು
18 ಆಗ ಯೆಹೋವನು ತನ್ನ ದೇಶದ ಬಗ್ಗೆ ಆಸಕ್ತಿ ತೋರಿಸಿದನು.
ತನ್ನ ಜನರ ಬಗ್ಗೆ ದುಃಖಿಸಿದನು.
19 ಯೆಹೋವನು ತನ್ನ ಜನರೊಂದಿಗೆ ಮಾತನಾಡಿ ಹೀಗೆ ಹೇಳಿದನು:
“ನಾನು ನಿಮಗೆ ಧಾನ್ಯ, ದ್ರಾಕ್ಷಾರಸ, ಎಣ್ಣೆಯನ್ನು ಕಳುಹಿಸುವೆನು.
ನಿಮಗೆ ಬೇಕಾದಷ್ಟು ಇರುವದು.
ಅನ್ಯ ಜನಾಂಗದವರೆದುರು ನಿಮ್ಮನ್ನು ಇನ್ನು ಮುಂದೆ ನಾಚಿಕೆಗೆ ಗುರಿಪಡಿಸುವುದಿಲ್ಲ.
20 ಉತ್ತರದಿಂದ ಬಂದ ದಂಡನ್ನು ನಿಮ್ಮ ದೇಶದಿಂದ ಹೊರಡಿಸುವೆನು.
ಅವರನ್ನು ಒಣ ಬೆಂಗಾಡಿಗೆ ಕಳುಹಿಸುವೆನು.
ಅವರಲ್ಲಿ ಕೆಲವರು ಪೂರ್ವದ ಸಮುದ್ರಕ್ಕೆ ಹೋಗುವರು,
ಕೆಲವರು ಪಶ್ಚಿಮದ ಸಮುದ್ರಕ್ಕೆ ಹೋಗುವರು.
ಅವರು ಭಯಂಕರ ಕೃತ್ಯಗಳನ್ನು ಮಾಡಿದುದರಿಂದ
ಸತ್ತು ಕೊಳೆಯುವ ಸ್ಥಿತಿಗೆ ಬರಮಾಡುವೆನು.
ಆಗ ಭಯಂಕರ ಹೊಲಸು ವಾಸನೆ ಇರುವದು.”
ದೇಶವು ಹೊಸತಾಗಿ ಮಾಡಲ್ಪಡುವದು
21 ದೇಶವೇ, ಭಯಪಡದಿರು.
ಯೆಹೋವನು ಮಹತ್ಕಾರ್ಯವನ್ನು ಮಾಡಲಿರುವದರಿಂದ
ಸಂತೋಷದಿಂದ ಆನಂದಿಸು.
22 ಅಡವಿಯಲ್ಲಿರುವ ಪ್ರಾಣಿಗಳೇ, ಭಯಪಡಬೇಡಿ.
ಮರುಭೂಮಿಯು ಹುಲ್ಲುಗಾವಲಾಗುವದು.
ಮರಗಳು ಹಣ್ಣುಗಳನ್ನು ಬಿಡುವವು.
ಅಂಜೂರದ ಮರಗಳೂ ದ್ರಾಕ್ಷಿಬಳ್ಳಿಗಳೂ ಬಹಳ ಹಣ್ಣುಗಳನ್ನು ಬಿಡುವವು.
23 ಆದ್ದರಿಂದ ಚೀಯೋನಿನ ಜನರೇ, ಸಂತೋಷಪಡಿರಿ.
ನಿಮ್ಮ ದೇವರಾದ ಯೆಹೋವನಲ್ಲಿ ಸಂತೋಷಿಸಿರಿ.
ಆತನು ನಿಮಗೆ ಮಳೆ ಸುರಿಸುವನು.
ಹಿಂದಿನಂತೆ ನಿಮಗೆ ಮುಂಗಾರು, ಹಿಂಗಾರು ಮಳೆಗಳನ್ನು ಸುರಿಸುವನು.
24 ಕಣಜಗಳು ಗೋದಿಯಿಂದ ತುಂಬಿರುವವು.
ಪಿಪಾಯಿಗಳು ಎಣ್ಣೆಯಿಂದಲೂ ದ್ರಾಕ್ಷಾರಸದಿಂದಲೂ ತುಂಬಿತುಳುಕುವವು.
25 “ಯೆಹೋವನಾದ ನಾನು ನಿಮಗೆ ವಿರುದ್ಧವಾಗಿ ನನ್ನ ಸೈನ್ಯವನ್ನು ಕಳುಹಿಸಿದೆನು.
ಮಿಡತೆಗಳ ಗುಂಪು, ದೊಡ್ಡ ಮಿಡತೆ,
ನಾಶಮಾಡುವ ಮಿಡತೆ, ಹಾರುವ ಮಿಡತೆ, ಚೂರಿ ಮಿಡತೆಗಳು ಬಂದು ನಿಮಗಿದ್ದದ್ದನ್ನೆಲ್ಲಾ ತಿಂದುಬಿಟ್ಟವು.
ಆದರೆ ಯೆಹೋವನಾದ ನಾನು ನಿಮ್ಮ ಸಂಕಟಕಾಲಕ್ಕೆ ಬದಲಾಗಿ
ಸುಭಿಕ್ಷ ಕಾಲವನ್ನು ದಯಪಾಲಿಸುವೆನು.
26 ಆಗ ನಿಮಗೆ ತಿನ್ನಲು ಏನೂ ಕಡಿಮೆ ಇರುವುದಿಲ್ಲ.
ನೀವು ಸಂತೃಪ್ತರಾಗುವಿರಿ.
ನಿಮ್ಮ ದೇವರಾದ ಯೆಹೋವನ ನಾಮವನ್ನು ಕೊಂಡಾಡುವಿರಿ.
ಆತನು ನಿಮಗೆ ಆಶ್ಚರ್ಯವಾದ ಕಾರ್ಯವನ್ನು ಮಾಡಿದ್ದಾನೆ.
ನನ್ನ ಜನರು ಇನ್ನು ಮುಂದೆ ಎಂದೂ ನಾಚಿಕೆಗೆ ಗುರಿಯಾಗರು.
27 ಇಸ್ರೇಲರೊಂದಿಗೆ ನಾನು ಇದ್ದೇನೆ ಎಂದು ನೀವು ತಿಳಿಯುವಿರಿ.
ನಿಮ್ಮ ದೇವರಾದ ಯೆಹೋವನು ನಾನೇ ಎಂದು ನೀವು ತಿಳಿಯುವಿರಿ.
ನನ್ನ ಹೊರತು ಬೇರೆ ದೇವರುಗಳಿಲ್ಲ.
ನನ್ನ ಜನರು ಇನ್ನು ಮುಂದೆ ನಾಚಿಕೆಗೆ ಗುರಿಯಾಗುವುದಿಲ್ಲ.”
ದೇವರು ಎಲ್ಲಾ ಜನರ ಮೇಲೆ ತನ್ನ ಆತ್ಮವನ್ನು ಸುರಿಸುವನು
28 “ಆ ಬಳಿಕ ನಾನು
ನನ್ನ ಆತ್ಮವನ್ನು ಎಲ್ಲಾ ತರದ ಜನರ ಮೇಲೆ ಸುರಿಸುವೆನು.
ನಿಮ್ಮ ಗಂಡುಹೆಣ್ಣು ಮಕ್ಕಳು ಪ್ರವಾದಿಸುವರು.
ನಿಮ್ಮ ವೃದ್ಧರು ಕನಸು ಕಾಣುವರು.
ನಿಮ್ಮ ಯುವಕರಿಗೆ ದರ್ಶನಗಳಾಗುವವು.
29 ಆ ಸಮಯದಲ್ಲಿ ಸೇವಕಸೇವಕಿಯರ ಮೇಲೆಯೂ
ನನ್ನ ಆತ್ಮವನ್ನು ಸುರಿಸುವೆನು.
ಭವಿಷ್ಯತ್ತಿನಲ್ಲಿ ನಮಗೆ ಮಹಿಮೆ ದೊರೆಯುವುದು
18 ಈಗ ನಾವು ಕಷ್ಟಸಂಕಟಗಳನ್ನು ಸಹಿಸಿಕೊಳ್ಳುತ್ತೇವೆ. ಆದರೆ ನಮಗೆ ಮುಂದೆ ಕೊಡಲ್ಪಡುವ ಮಹಿಮೆಗೆ ಈ ಕಷ್ಟಸಂಕಟಗಳನ್ನು ಹೋಲಿಸಿದರೆ ಇವು ಗಣನೆಗೆ ಬರುವುದಿಲ್ಲ. 19 ದೇವರು ತನ್ನ ಮಕ್ಕಳನ್ನು ಪ್ರತ್ಯಕ್ಷಪಡಿಸುವ ಕಾಲಕ್ಕಾಗಿ ದೇವರ ಸರ್ವಸೃಷ್ಟಿಯು ಉತ್ಸುಕತೆಯಿಂದ ಎದುರು ನೋಡುತ್ತಿದೆ. ಅದು ಸಂಭವಿಸಲೆಂದು ಇಡೀ ಜಗತ್ತೇ ಹಂಬಲಿಸುತ್ತಿದೆ. 20 ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಹೀಗಾದದ್ದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ. ಆದರೂ ಅದಕ್ಕೆ ನಿರೀಕ್ಷೆಯಿತ್ತು. ಅದೇನೆಂದರೆ: 21 ಸರ್ವಸೃಷ್ಟಿಯು ನಾಶನದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಸ್ವಾತಂತ್ರವನ್ನೂ ಮಹಿಮೆಯನ್ನೂ ಹೊಂದಿಕೊಳ್ಳುತ್ತದೆ ಎಂಬುದೇ.
22 ದೇವರು ಸೃಷ್ಟಿಮಾಡಿದ ಪ್ರತಿಯೊಂದೂ, ಪ್ರಸವವೇದನೆ ಪಡುತ್ತಿರುವ ಸ್ತ್ರೀಯಂತೆ ನೋವಿನಿಂದ ನರಳುತ್ತಾ ಇಂದಿನವರೆಗೂ ಕಾಯುತ್ತಿದೆ ಎಂಬುದು ನಮಗೆ ಗೊತ್ತಿದೆ. 23 ಜಗತ್ತು ಮಾತ್ರವೇ ಅಲ್ಲ, ನಾವು ಸಹ ನಮ್ಮೊಳಗೆ ನೋವಿನಿಂದ ನರಳುತ್ತಾ ಕಾಯುತ್ತಿದ್ದೇವೆ. ದೇವರ ವಾಗ್ದಾನದ ಮೊದಲನೆ ಭಾಗವಾಗಿರುವ ಪವಿತ್ರಾತ್ಮನನ್ನು ನಾವು ಹೊಂದಿಕೊಂಡಿದ್ದೇವೆ. ನಮ್ಮನ್ನು ತನ್ನ ಸ್ವಂತ ಮಕ್ಕಳನ್ನಾಗಿ ಮಾಡಿಕೊಳ್ಳಲು ದೇವರು ಮಾಡುತ್ತಿರುವ ಕಾರ್ಯವು ಸಂಪೂರ್ಣಗೊಳ್ಳುವುದನ್ನೇ ಅಂದರೆ, ನಮ್ಮ ದೇಹಗಳಿಗಾಗುವ ಬಿಡುಗಡೆಯನ್ನೇ ನಾವು ಎದುರು ನೋಡುತ್ತಿದ್ದೇವೆ. 24 ನಾವು ರಕ್ಷಣೆ ಹೊಂದಿದ್ದೇವೆ ಮತ್ತು ನಮಗಿನ್ನೂ ಆ ನಿರೀಕ್ಷೆಯಿದೆ. ನಾವು ಯಾವುದಕ್ಕೋಸ್ಕರ ಕಾಯುತ್ತಿದ್ದೇವೊ ಅದನ್ನು ಕಾಣಬಲ್ಲವರಾಗಿದ್ದರೆ, ಅದು ನಿಜವಾದ ನಿರೀಕ್ಷೆಯಲ್ಲ. ಜನರು ತಾವು ಈಗಾಗಲೇ ಹೊಂದಿರುವ ಯಾವುದನ್ನೂ ನಿರೀಕ್ಷಿಸುವುದಿಲ್ಲ.
Kannada Holy Bible: Easy-to-Read Version. All rights reserved. © 1997 Bible League International