Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 33:12-22

12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
    ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
    ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
    ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
    ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
    ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
    ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
    ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
    ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
    ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
    ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
    ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.

ವಿಮೋಚನಕಾಂಡ 19:16-25

16 ಮೂರನೆಯ ದಿನದ ಮುಂಜಾನೆಯಲ್ಲಿ ಆ ಬೆಟ್ಟದ ಮೇಲೆ ಗುಡುಗು ಮಿಂಚುಗಳು ಉಂಟಾದವು. ಒಂದು ಕಾರ್ಮುಗಿಲು ಬೆಟ್ಟದ ಮೇಲೆ ಇಳಿದುಬಂತು; ತುತ್ತೂರಿಯ ಮಹಾ ಧ್ವನಿಯು ಕೇಳಿಸಿತು. ಪಾಳೆಯದಲ್ಲಿದ್ದ ಜನರೆಲ್ಲರೂ ಭಯಭೀತರಾದರು. 17 ಆಗ ಮೋಶೆ ದೇವರನ್ನು ಸಂಧಿಸುವುದಕ್ಕಾಗಿ ಜನರನ್ನು ಪಾಳೆಯದಿಂದ ಹೊರಗೆ ನಡಿಸಿ, ಬೆಟ್ಟದ ಬಳಿಗೆ ಕರೆದುಕೊಂಡು ಬಂದನು. 18 ಸೀನಾಯಿ ಬೆಟ್ಟವು ಹೊಗೆಯಿಂದ ಕವಿದುಕೊಂಡಿತು. ಕುಲುಮೆಯಿಂದ ಬರುವ ಹೊಗೆಯಂತೆ, ಬೆಟ್ಟದಿಂದ ಹೊಗೆಯು ಮೇಲಕ್ಕೇರಿತು. ಯೆಹೋವನು ಬೆಂಕಿಯಲ್ಲಿ ಬೆಟ್ಟದ ಮೇಲೆ ಇಳಿದು ಬಂದದ್ದರಿಂದ ಇದು ಸಂಭವಿಸಿತು. ಇಡೀ ಬೆಟ್ಟ ನಡುಗಲಾರಂಭಿಸಿತು. 19 ತುತ್ತೂರಿಯ ಧ್ವನಿ ಹೆಚ್ಚುಹೆಚ್ಚಾಯಿತು. ಮೋಶೆಯು ದೇವರೊಂದಿಗೆ ಮಾತಾಡಿದಾಗಲೆಲ್ಲಾ ದೇವರು ಗುಡುಗಿನಂತಿದ್ದ ಧ್ವನಿಯಲ್ಲಿ ಅವನಿಗೆ ಉತ್ತರಕೊಟ್ಟನು.

20 ಯೆಹೋವನು ಸೀನಾಯಿ ಬೆಟ್ಟಕ್ಕೆ ಇಳಿದುಬಂದನು. ಬಳಿಕ ಯೆಹೋವನು ಮೋಶೆಯನ್ನು ಕರೆದು ಬೆಟ್ಟದ ತುದಿಗೆ ಬರಲು ಹೇಳಿದನು. ಆದ್ದರಿಂದ ಮೋಶೆ ಮೇಲಕ್ಕೆ ಹೋದನು.

21 ಯೆಹೋವನು ಮೋಶೆಗೆ, “ಕೆಳಗಿಳಿದು ಹೋಗಿ, ಜನರು ನನ್ನನ್ನು ನೋಡಲು ನನ್ನ ಹತ್ತಿರ ಬರಬಾರದೆಂದು ಅವರನ್ನು ಎಚ್ಚರಿಸು. ಇಲ್ಲವಾದರೆ ಅವರಲ್ಲಿ ಅನೇಕರು ಸಾಯುವರು. 22 ಮಾತ್ರವಲ್ಲದೆ ನನ್ನ ಸಮೀಪಕ್ಕೆ ಬರುವ ಯಾಜಕರು ಈ ವಿಶೇಷ ಸಂದರ್ಶನಕ್ಕಾಗಿ ತಮ್ಮನ್ನು ಸಿದ್ಧಪಡಿಸಿಕೊಳ್ಳಬೇಕೆಂದು ಹೇಳು. ಇಲ್ಲವಾದರೆ ನಾನು ಅವರನ್ನೂ ಶಿಕ್ಷಿಸುವೆನು” ಅಂದನು.

23 ಮೋಶೆಯು ಯೆಹೋವನಿಗೆ, “ಜನರು ಬೆಟ್ಟವನ್ನೇರಿ ಬರಲಾರರು. ಬೆಟ್ಟದ ಸುತ್ತಲೂ ಮೇರೆಯನ್ನು ಹಾಕಿ ಅದನ್ನು ಪವಿತ್ರ ಸ್ಧಳವನ್ನಾಗಿ ಪ್ರತ್ಯೇಕಿಸಬೇಕೆಂದು ನೀನೇ ನಮಗೆ ಎಚ್ಚರಿಕೆ ನೀಡಿದೆಯಲ್ಲಾ!” ಎಂದು ಹೇಳಿದನು.

24 ಯೆಹೋವನು ಅವನಿಗೆ, “ಜನರ ಬಳಿಗೆ ಇಳಿದುಹೋಗಿ ಆರೋನನನ್ನು ಕರೆದುಕೊಂಡು ಬಾ. ಆದರೆ ಯಾಜಕರಾಗಲಿ ಜನರಾಗಲಿ ಬರಕೂಡದು. ಅವರು ನನ್ನ ಸಮೀಪಕ್ಕೆ ಬಂದರೆ, ನಾನು ಅವರನ್ನು ದಂಡಿಸುವೆನು” ಎಂದು ಹೇಳಿದನು.

25 ಆದ್ದರಿಂದ ಮೋಶೆ ಜನರ ಬಳಿಗೆ ಇಳಿದುಹೋಗಿ ಈ ಸಂಗತಿಗಳನ್ನು ಅವರಿಗೆ ತಿಳಿಸಿದನು.

ರೋಮ್ನಗರದವರಿಗೆ 8:14-17

14 ಯಾರು ತಮ್ಮನ್ನು ದೇವರಾತ್ಮನ ನಡೆಸುವಿಕೆಗೆ ಒಪ್ಪಿಸಿಕೊಡುತ್ತಾರೊ ಅವರೇ ದೇವರ ಮಕ್ಕಳಾಗಿದ್ದಾರೆ. 15 ನಾವು ಹೊಂದಿಕೊಂಡಿರುವ ಆತ್ಮನು ನಮ್ಮನ್ನು ಮತ್ತೆ ಗುಲಾಮರನ್ನಾಗಿ ಮಾಡುವವನಲ್ಲ ಮತ್ತು ನಮ್ಮಲ್ಲಿ ಭಯವನ್ನು ಹುಟ್ಟಿಸುವವನಲ್ಲ. ನಾವು ಹೊಂದಿರುವ ಪವಿತ್ರಾತ್ಮನು ನಮ್ಮನ್ನು ದೇವರ ಮಕ್ಕಳನ್ನಾಗಿ ಮಾಡುತ್ತಾನೆ. ಈ ಆತ್ಮನ ಮೂಲಕವಾಗಿ ನಾವು, “ಅಪ್ಪಾ ತಂದೆಯೇ” ಎಂದು ಹೇಳುತ್ತೇವೆ. 16 ನಾವು ದೇವರ ಮಕ್ಕಳಾಗಿದ್ದೇವೆಂದು ಪವಿತ್ರಾತ್ಮನು ತಾನೇ ನಮ್ಮ ಅಂತರಾತ್ಮದೊಂದಿಗೆ ಹೇಳುತ್ತಾನೆ. 17 ನಾವು ದೇವರ ಮಕ್ಕಳಾಗಿದ್ದರೆ, ಬಾಧ್ಯರಾಗಿದ್ದೇವೆ. ಹೌದು, ದೇವರಿಗೆ ಬಾಧ್ಯರಾಗಿದ್ದೇವೆ ಮತ್ತು ಕ್ರಿಸ್ತನೊಂದಿಗೆ ಬಾಧ್ಯರಾಗಿದ್ದೇವೆ. ಹೇಗೆಂದರೆ, ಕ್ರಿಸ್ತನ ಬಾಧೆಯಲ್ಲಿ ನಾವು ಪಾಲುಗಾರರಾಗುವುದಾದರೆ ಆತನ ಮಹಿಮೆಯಲ್ಲಿಯೂ ಪಾಲುಗಾರರಾಗುವೆವು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International