Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 33:12-22

12 ಯಾರಿಗೆ ಯೆಹೋವನು ದೇವರಾಗಿದ್ದಾನೋ ಅವರೇ ಧನ್ಯರು.
    ಯಾಕೆಂದರೆ ಆತನು ಅವರನ್ನು ಸ್ವಕೀಯರನ್ನಾಗಿ ಆರಿಸಿಕೊಂಡಿದ್ದಾನೆ.
13 ಯೆಹೋವನು ಪರಲೋಕದಿಂದ
    ಮನುಷ್ಯರನ್ನು ದೃಷ್ಟಿಸಿ ನೋಡುವನು.
14 ಆತನು ತನ್ನ ಮಹಾಸಿಂಹಾಸನದಿಂದ
    ಭೂನಿವಾಸಿಗಳೆಲ್ಲರನ್ನು ನೋಡುವನು.
15 ಅವರೆಲ್ಲರ ಮನುಸ್ಸುಗಳನ್ನು ಸೃಷ್ಟಿಸಿದವನು ಆತನೇ.
    ಅವರೆಲ್ಲರ ಆಲೋಚನೆಗಳು ಆತನಿಗೆ ತಿಳಿದಿವೆ.
16 ಮಹಾಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ.
    ಭುಜಬಲದಿಂದಲೇ ಯಾವ ಯುದ್ಧವೀರನೂ ಸುರಕ್ಷಿತನಾಗಿರಲಾರನು.
17 ಯುದ್ಧದಲ್ಲಿ ದೊರೆಯುವ ಜಯ ಕುದುರೆಗಳಿಂದಲ್ಲ.
    ಅವುಗಳ ಬಲವು ನಿನ್ನನ್ನು ರಕ್ಷಿಸಲಾರದು.
18 ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಲಕ್ಷಿಸುವನು.
    ಆತನ ಶಾಶ್ವತವಾದ ಪ್ರೀತಿಯು ಆತನ ಭಕ್ತರನ್ನು ಕಾಪಾಡುವುದು.
19 ಅವರನ್ನು ಸಾವಿನಿಂದ ರಕ್ಷಿಸುವಾತನು ಆತನೇ.
    ಅವರು ಹಸಿವೆಯಿಂದಿರುವಾಗ ಆತನು ಅವರಿಗೆ ಶಕ್ತಿಕೊಡುವನು.
20 ಆದ್ದರಿಂದ ಯೆಹೋವನಿಗಾಗಿಯೇ ಕಾದುಕೊಂಡಿರುತ್ತೇವೆ.
    ಆತನೇ ನಮ್ಮ ಸಹಾಯಕನೂ ಗುರಾಣಿಯೂ ಆಗಿದ್ದಾನೆ.
21 ದೇವರು ನನ್ನನ್ನು ಸಂತೋಷಗೊಳಿಸುವನು.
    ನಾನು ಆತನ ಪರಿಶುದ್ಧ ಹೆಸರಿನಲ್ಲಿಯೇ ಭರವಸವಿಟ್ಟಿದ್ದೇನೆ.
22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ.
    ನಿನ್ನ ಶಾಶ್ವತವಾದ ಪ್ರೀತಿಯು ನಮ್ಮ ಮೇಲಿರಲಿ.

ವಿಮೋಚನಕಾಂಡ 19:1-9

ಇಸ್ರೇಲರ ಜೊತೆ ದೇವರ ಒಡಂಬಡಿಕೆ

19 ಇಸ್ರೇಲರು ಈಜಿಪ್ಟಿನಿಂದ ಹೊರಟ ಮೂರನೆಯ ತಿಂಗಳಲ್ಲಿ ಸೀನಾಯ್ ಮರುಭೂಮಿಯನ್ನು ತಲುಪಿದರು. ಜನರು ರೆಫೀದೀಮನ್ನು ಬಿಟ್ಟು ಸೀನಾಯ್ ಮರುಭೂಮಿಗೆ ಬಂದಿದ್ದರು. ಅಲ್ಲಿ ಅವರು ಬೆಟ್ಟದ ಬಳಿ ತಂಗಿದರು. ಆಗ ಮೋಶೆ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋದನು. ಮೋಶೆಯು ಬೆಟ್ಟದ ಮೇಲೆ ಇದ್ದಾಗ ಯೆಹೋವನು ಅವನಿಗೆ, “ಯಾಕೋಬನ ಮಹಾ ಕುಟುಂಬವಾದ ಇಸ್ರೇಲರಿಗೆ ಈ ಸಂಗತಿಗಳನ್ನು ಹೇಳು: ‘ನಾನು ನನ್ನ ವೈರಿಗಳಿಗೆ ಮಾಡುವ ಸಂಗತಿಗಳನ್ನು ನೀವು ನೋಡಿದ್ದೀರಿ. ನಾನು ಈಜಿಪ್ಟಿನವರಿಗೆ ಏನು ಮಾಡಿದೆನೆಂದು ನೀವು ನೋಡಿದಿರಿ. ಹದ್ದು ತನ್ನ ಮರಿಗಳನ್ನು ಹೊತ್ತುಕೊಂಡು ಬರುವಂತೆ ನಾನು ನಿಮ್ಮನ್ನು ಈಜಿಪ್ಟಿನಿಂದ ಇಲ್ಲಿಗೆ ಕರೆದುಕೊಂಡು ಬಂದದ್ದನ್ನು ನೀವು ನೋಡಿದಿರಿ. ಆದ್ದರಿಂದ ನನ್ನ ಆಜ್ಞೆಗಳಿಗೆ ವಿಧೇಯರಾಗಬೇಕೆಂದು ನಾನು ನಿಮಗೆ ಹೇಳುತ್ತೇನೆ. ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಿರಿ. ಆಗ ನೀವು ನನಗೆ ವಿಶೇಷವಾದ ಜನರಾಗುವಿರಿ. ಈ ಲೋಕವೆಲ್ಲಾ ನನ್ನದೇ. ಆದರೆ ನಾನು ನಿಮ್ಮನ್ನು ನನ್ನ ಸ್ವಂತ ಜನಾಂಗವನ್ನಾಗಿ ಆರಿಸಿಕೊಳ್ಳುತ್ತಿದ್ದೇನೆ. ನೀವು ಯಾಜಕರ ರಾಜ್ಯ’ ಎಂಬ ವಿಶೇಷವಾದ ಜನಾಂಗವಾಗುವಿರಿ. ಮೋಶೆಯೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ನೀನು ಇಸ್ರೇಲರಿಗೆ ಹೇಳಲೇಬೇಕು” ಎಂದನು.

ಆದ್ದರಿಂದ ಮೋಶೆ ಬೆಟ್ಟದಿಂದಿಳಿದು ಬಂದು ಜನರ ಹಿರಿಯರನ್ನು ಒಟ್ಟಾಗಿ ಕರೆಸಿದನು. ಯೆಹೋವನು ಹೇಳಬೇಕೆಂದು ಆಜ್ಞಾಪಿಸಿದ ಸಂಗತಿಗಳನ್ನೆಲ್ಲಾ ಮೋಶೆಯು ಹಿರಿಯರಿಗೆ ಹೇಳಿದನು. ಜನರೆಲ್ಲರೂ ಒಟ್ಟಾಗಿ ಮಾತಾಡಿದರು. “ಯೆಹೋವನು ಹೇಳುವ ಪ್ರತಿಯೊಂದಕ್ಕೂ ನಾವು ವಿಧೇಯರಾಗುವೆವು” ಎಂದು ಅವರು ಅರಿಕೆಮಾಡಿದರು.

ಬಳಿಕ ಮೋಶೆಯು ತಿರುಗಿ ಬೆಟ್ಟವನ್ನೇರಿ ಯೆಹೋವನ ಸನ್ನಿಧಿಗೆ ಹೋಗಿ ಜನರ ಪ್ರತಿಕ್ರಿಯೆಯನ್ನು ದೇವರಿಗೆ ತಿಳಿಸಿದನು. ಯೆಹೋವನು ಮೋಶೆಗೆ, “ನಾನು ಕಾರ್ಮುಗಿಲಲ್ಲಿ ನಿನ್ನ ಬಳಿಗೆ ಬಂದು ಜನರೆಲ್ಲರಿಗೂ ಕೇಳುವಂತೆ ನಿನ್ನೊಡನೆ ಮಾತಾಡುವೆನು. ನೀನು ಹೇಳುವುದನ್ನು ಜನರು ಯಾವಾಗಲೂ ನಂಬಲು ಇದು ಸಹಾಯಕವಾಗುವುದು” ಎಂದು ಹೇಳಿದನು.

ಆಗ ಮೋಶೆಯು ಜನರು ಹೇಳಿದ್ದನ್ನೆಲ್ಲಾ ದೇವರಿಗೆ ಅರಿಕೆಮಾಡಿದನು.

ಅಪೊಸ್ತಲರ ಕಾರ್ಯಗಳು 2:1-11

ಪವಿತ್ರಾತ್ಮನ ಆಗಮನ

ಪಂಚಾಶತ್ತಮ ಹಬ್ಬದ[a] ದಿನ ಬಂದಾಗ ಅವರೆಲ್ಲರು ಒಂದು ಸ್ಥಳದಲ್ಲಿ ಒಟ್ಟಾಗಿ ಸೇರಿದ್ದರು. ಆಗ, ಆಕಾಶದಿಂದ ಒಂದು ಶಬ್ದ ಇದ್ದಕ್ಕಿದ್ದಂತೆ ಬಂದಿತು. ಬಿರುಗಾಳಿ ಬೀಸುತ್ತಿದೆಯೋ ಎಂಬಂತಿತ್ತು ಆ ಶಬ್ದ. ಅವರು ಕುಳಿತುಕೊಂಡಿದ್ದ ಮನೆಯಲ್ಲೆಲ್ಲಾ ಆ ಶಬ್ದ ತುಂಬಿಕೊಂಡಿತು. ಬೆಂಕಿಯ ಜ್ವಾಲೆಗಳಂತಿದ್ದ ಏನನ್ನೊ ಅವರು ಕಂಡರು. ಜ್ವಾಲೆಗಳು ವಿಂಗಡವಾಗಿ ಅಲ್ಲಿದ್ದ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನೆಲೆಸಿದವು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ವಿವಿಧ ಭಾಷೆಗಳಲ್ಲಿ ಮಾತಾಡತೊಡಗಿದರು. ಪವಿತ್ರಾತ್ಮನೇ ಅವರಿಗೆ ಆ ಶಕ್ತಿಯನ್ನು ಕೊಟ್ಟನು.

ಬಹು ಧಾರ್ಮಿಕರಾದ ಅನೇಕ ಯೆಹೂದ್ಯರು ಆ ಸಮಯದಲ್ಲಿ ಜೆರುಸಲೇಮಿನಲ್ಲಿದ್ದರು. ಇವರಲ್ಲಿ ಪ್ರಪಂಚದ ಪ್ರತಿಯೊಂದು ದೇಶದಿಂದ ಬಂದ ಜನರಿದ್ದರು. ಈ ಶಬ್ದವನ್ನು ಕೇಳಿ ಈ ಜನರ ಒಂದು ದೊಡ್ಡ ಸಮೂಹವೇ ಅಲ್ಲಿಗೆ ಬಂದಿತು. ಅಪೊಸ್ತಲರು ಮಾತಾಡುತ್ತಿರುವುದು ಪ್ರತಿಯೊಬ್ಬರಿಗೂ ಅವರವರ ಸ್ವಂತ ಭಾಷೆಗಳಲ್ಲಿ ಕೇಳಿಸುತ್ತಿರುವುದನ್ನು ಕಂಡು ಅವರಿಗೆ ಆಶ್ಚರ್ಯವಾಯಿತು.

ಇದನ್ನು ನೋಡಿದ ಯೆಹೂದ್ಯರೆಲ್ಲರೂ ವಿಸ್ಮಯಗೊಂಡರು. ಹೀಗೆ ಮಾಡಲು ಅಪೊಸ್ತಲರಿಗೆ ಹೇಗೆ ಸಾಧ್ಯವಾಯಿತೆಂದು ಅವರಿಗೆ ಅರ್ಥವಾಗಲಿಲ್ಲ. ಅವರು, “ಮಾತಾಡುತ್ತಿರುವ ಈ ಜನರು (ಅಪೊಸ್ತಲರು) ಗಲಿಲಾಯದವರು![b] ಆದರೆ ಇವರು ನಮ್ಮ ಸ್ವಂತ ಭಾಷೆಗಳಲ್ಲಿ ಮಾತಾಡುತ್ತಿರುವಂತೆ ಕೇಳಿಸುತ್ತಿದೆ. ಇದು ಹೇಗೆ ಸಾಧ್ಯ? ನಾವು ಬೇರೆಬೇರೆ ಸ್ಥಳಗಳವರು. ನಮ್ಮಲ್ಲಿ ಪಾರ್ಥ್ಯರು, ಮೇದ್ಯರು, ಏಲಾಮಿನವರು, ಮೆಸೊಪೊಟೇಮದವರು, ಯೂದಾಯದವರು, ಕಪ್ಪದೋಕ್ಯಯದವರು, ಪೊಂತದವರು, ಏಷ್ಯಾದವರು,[c] 10 ಫ್ರಿಜಿಯದವರು, ಪಾಂಫಿಲಿಯದವರು, ಈಜಿಪ್ಟ್‌ನವರು ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರು, ರೋಮ್‌ನವರು, 11 ಕ್ರೇಟ್‌ನವರು ಮತ್ತು ಅರೇಬಿಯವರು ಇದ್ದಾರೆ. ನಮ್ಮಲ್ಲಿರುವ ಕೆಲವು ಜನರು ಹುಟ್ಟು ಯೆಹೂದ್ಯರು. ಉಳಿದವರು ಮತಾಂತರ ಹೊಂದಿದವರು. ನಾವು ಬೇರೆಬೇರೆ ದೇಶಗಳವರು. ಆದರೆ ಈ ಜನರು ಮಾತಾಡುತ್ತಿರುವುದು ನಮ್ಮ ಸ್ವಂತ ಭಾಷೆಗಳಲ್ಲಿ ನಮಗೆ ಕೇಳಿಸುತ್ತಿದೆ! ಅವರು ದೇವರ ಬಗ್ಗೆ ಹೇಳುತ್ತಿರುವ ಮಹಾಸಂಗತಿಗಳು ನಮಗೆಲ್ಲರಿಗೂ ಅರ್ಥವಾಗುತ್ತಿವೆ” ಎಂದು ಹೇಳಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International