Revised Common Lectionary (Semicontinuous)
99 ಯೆಹೋವನೇ ರಾಜನು!
ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
ಭೂಮಿಯು ಭಯದಿಂದ ನಡುಗಲಿ.
2 ಚೀಯೋನಿನ ಯೆಹೋವನು ದೊಡ್ಡವನು!
ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
ಆತನೇ ಪರಿಶುದ್ಧನು.
4 ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
5 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
6 ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
7 ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
ಅವರು ಆಜ್ಞೆಗಳಿಗೆ ವಿಧೇಯರಾದರು.
ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
8 ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
ನೀನು ಕ್ಷಮಿಸುವ ದೇವರೆಂದೂ
ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
9 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!
54 ಸೊಲೊಮೋನನು ಯಜ್ಞವೇದಿಕೆಯ ಸನ್ನಿಧಿಯಲ್ಲಿ ತನ್ನ ಮೊಣಕಾಲುಗಳನ್ನೂರಿ, ದೇವರಿಗೆ ಪ್ರಾರ್ಥನೆಯನ್ನು ಮಾಡಿದನು. ಸೊಲೊಮೋನನು ತನ್ನ ಕೈಗಳನ್ನು ಪರಲೋಕದತ್ತ ಚಾಚಿ ಪ್ರಾರ್ಥಿಸಿದನು. ಬಳಿಕ ಸೊಲೊಮೋನನು ಪ್ರಾರ್ಥನೆಯನ್ನು ಮುಗಿಸಿ ಎದ್ದುನಿಂತನು. 55 ಬಳಿಕ ಇಸ್ರೇಲಿನ ಜನರೆಲ್ಲರನ್ನು ಆಶೀರ್ವದಿಸಬೇಕೆಂದು ಅವನು ಗಟ್ಟಿಯಾದ ಧ್ವನಿಯಲ್ಲಿ ದೇವರನ್ನು ಕೇಳಿಕೊಂಡನು. ಸೊಲೊಮೋನನು ಹೀಗೆ ಹೇಳಿದನು:
56 “ಯೆಹೋವನಿಗೆ ಸ್ತೋತ್ರ ಮಾಡಿರಿ! ಆತನು ಇಸ್ರೇಲಿನ ತನ್ನ ಜನರಿಗೆ ವಿಶ್ರಾಂತಿಯನ್ನು ಕೊಡುವುದಾಗಿ ವಾಗ್ದಾನ ಮಾಡಿದ್ದಾನೆ. ಆತನು ನಮಗೆ ವಿಶ್ರಾಂತಿಯನ್ನು ದಯಪಾಲಿಸಿರುವನು! ಯೆಹೋವನು ತನ್ನ ಸೇವಕನಾದ ಮೋಶೆಯಿಂದ, ಇಸ್ರೇಲಿನ ಜನರಿಗೆ ಅನೇಕ ಒಳ್ಳೆಯ ವಾಗ್ದಾನಗಳನ್ನು ಮಾಡಿದ್ದಾನೆ. ಯೆಹೋವನು ತನ್ನ ವಾಗ್ದಾನಗಳನ್ನೆಲ್ಲ ಈಡೇರಿಸಿರುವನು. 57 ನಮ್ಮ ದೇವರಾದ ಯೆಹೋವನು ನಮ್ಮೊಂದಿಗಿರಲೆಂದು ನಾನು ಮೊರೆಯಿಡುತ್ತೇನೆ. ಆತನು ನಮ್ಮ ಪೂರ್ವಿಕರ ಜೊತೆಯಲ್ಲಿದ್ದಂತೆ ನಮ್ಮ ಜೊತೆಯಲ್ಲಿಯೂ ಇರಲೆಂದು ನಾನು ಮೊರೆಯಿಡುತ್ತೇನೆ. ಆತನು ನಮ್ಮನ್ನು ಎಂದಿಗೂ ಬಿಟ್ಟುಹೋಗಕೂಡದೆಂದು ನಾನು ಪ್ರಾರ್ಥಿಸುತ್ತೇನೆ. 58 ಈ ರೀತಿಯಲ್ಲಿ ನಾವು ಆತನ ಕಡೆಗೆ ತಿರುಗಿ, ಆತನನ್ನು ಅನುಸರಿಸುವಂತೆ ಆತನು ಮಾಡಲಿ. ಆತನು ನಮ್ಮ ಪೂರ್ವಿಕರಿಗೆ ನೀಡಿದ ಎಲ್ಲ ಕಟ್ಟಳೆಗಳಿಗೆ, ತೀರ್ಪುಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯರಾಗಿರಲು ಆಗ ನಮಗೆ ಸಾಧ್ಯವಾಗುತ್ತದೆ. 59 ನನ್ನ ಈ ಪ್ರಾರ್ಥನೆಯನ್ನು ಮತ್ತು ನಾನು ಕೇಳಿಕೊಂಡವುಗಳನ್ನು ನಮ್ಮ ದೇವರಾದ ಯೆಹೋವನು ಸದಾ ಜ್ಞಾಪಿಸಿಕೊಳ್ಳಲಿ. ಯೆಹೋವನು ತನ್ನ ಸೇವಕನಾದ ರಾಜನಿಗೋಸ್ಕರವಾಗಿಯೂ ತನ್ನ ಜನರಾದ ಇಸ್ರೇಲರಿಗೋಸ್ಕರವಾಗಿಯೂ ಇವುಗಳನ್ನು ಈ ಹೊತ್ತೇ ನೆರವೇರಿಸಲಿ. 60 ಆಗ ಯೆಹೋವನೇ ನಿಜವಾದ ದೇವರೆಂದು ಪ್ರಪಂಚದ ಜನರೆಲ್ಲರಿಗೂ ತಿಳಿಯುತ್ತದೆ. 61 ನಮ್ಮ ದೇವರಾದ ಯೆಹೋವನಿಗೆ ನೀವು ಪೂರ್ಣ ಭಯಭಕ್ತಿಯುಳ್ಳವರಾಗಿದ್ದು ಆತನ ಕಟ್ಟಳೆಗಳನ್ನೂ ಆಜ್ಞೆಗಳನ್ನೂ ಸದಾ ಅನುಸರಿಸಿರಿ; ಅವುಗಳಿಗೆ ವಿಧೇಯರಾಗಿರಿ. ಈಗ ನೀವು ವಿಧೇಯರಾಗಿರುವಂತೆಯೇ ಇನ್ನು ಮುಂದೆಯೂ ಆತನಿಗೆ ವಿಧೇಯರಾಗಿರಿ” ಎಂದನು.
62 ಬಳಿಕ ರಾಜನಾದ ಸೊಲೊಮೋನನೂ ಇಸ್ರೇಲಿನ ಜನರೆಲ್ಲರೂ ಯೆಹೋವನಿಗೆ ಯಜ್ಞಗಳನ್ನು ಸಮರ್ಪಿಸಿದರು. 63 ಸೊಲೊಮೋನನು ಇಪ್ಪತ್ತೆರಡು ಸಾವಿರ ಹೋರಿಗಳನ್ನು, ಒಂದು ಲಕ್ಷದ ಇಪ್ಪತ್ತು ಸಾವಿರ ಕುರಿಗಳನ್ನು ಸಮಾಧಾನಯಜ್ಞವನ್ನಾಗಿ ಅರ್ಪಿಸಿದನು. ಹೀಗೆ ರಾಜನು ಮತ್ತು ಇಸ್ರೇಲರು ಆಲಯವನ್ನು ಯೆಹೋವನಿಗೆ ಪ್ರತಿಷ್ಠಿಸಿದರು.
64 ಅಂದು ರಾಜನಾದ ಸೊಲೊಮೋನನು ಆಲಯದ ಮುಂದಿನ ಅಂಗಳವನ್ನು ಪ್ರತಿಷ್ಠಿಸಿದನು. ಅವನು ಸರ್ವಾಂಗಹೋಮಗಳನ್ನು, ಧಾನ್ಯಸಮರ್ಪಣೆಗಳನ್ನು ಮತ್ತು ಸಮಾಧಾನಯಜ್ಞಕ್ಕಾಗಿ ವಧಿಸಿದ್ದ ಪಶುಗಳ ಕೊಬ್ಬನ್ನು ಅಂಗಳದಲ್ಲಿ ಅರ್ಪಿಸಿದನು. ಯಾಕೆಂದರೆ ಯೆಹೋವನ ಮುಂದೆ ಇದ್ದ ಹಿತ್ತಾಳೆಯ ಯಜ್ಞವೇದಿಕೆಯು ಈ ಎಲ್ಲವನ್ನು ಹಿಡಿಸಲಾರದಷ್ಟು ಚಿಕ್ಕದಾಗಿತ್ತು.
65 ರಾಜನಾದ ಸೊಲೊಮೋನನು ಮತ್ತು ಇಸ್ರೇಲಿನ ಜನರೆಲ್ಲರು ವಿಶ್ರಾಂತಿ ಹಬ್ಬವನ್ನು ಆಚರಿಸಿದರು. ಉತ್ತರದಲ್ಲಿದ್ದ ಹಮಾತ್ ದಾರಿಯಿಂದ ದಕ್ಷಿಣದ ಈಜಿಪ್ಟಿನ ಗಡಿಯವರೆಗಿನ ಎಲ್ಲ ಇಸ್ರೇಲರು ಅಲ್ಲಿದ್ದರು. ಅವರೆಲ್ಲರೂ ಒಟ್ಟಾಗಿ ಏಳು ದಿನಗಳ ಕಾಲ ಯೆಹೋವನ ಮುಂದೆ ತಿಂದು, ಕುಡಿದು ಆನಂದಿಸಿದರು. ಆಗ ಅವರು ಮತ್ತೆ ಏಳು ದಿನಗಳು ಅಲ್ಲಿಯೇ ಉಳಿದರು. ಅವರು ಒಟ್ಟಿಗೆ ಹದಿನಾಲ್ಕು ದಿನಗಳು ಹಬ್ಬವನ್ನು ಆಚರಿಸಿದರು!
ಪರಲೋಕದಿಂದ ಬರುವ ವ್ಯಕ್ತಿ
31 “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32 ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33 ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34 ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35 ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36 ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International