Revised Common Lectionary (Semicontinuous)
99 ಯೆಹೋವನೇ ರಾಜನು!
ಜನಾಂಗಗಳು ಭಯದಿಂದ ನಡುಗಲಿ.
ಆತನು ಕೆರೂಬಿಗಳ ಮೇಲೆ ರಾಜನಂತೆ ಕುಳಿತುಕೊಂಡಿದ್ದಾನೆ.
ಭೂಮಿಯು ಭಯದಿಂದ ನಡುಗಲಿ.
2 ಚೀಯೋನಿನ ಯೆಹೋವನು ದೊಡ್ಡವನು!
ಆತನು ಜನಾಂಗಗಳಿಗೆಲ್ಲಾ ಮಹಾನಾಯಕನಾಗಿದ್ದಾನೆ.
3 ಅವರೆಲ್ಲರೂ ನಿನ್ನ ಭಯಂಕರವಾದ ಹೆಸರನ್ನು ಕೊಂಡಾಡಲಿ.
ಆತನೇ ಪರಿಶುದ್ಧನು.
4 ಶಕ್ತಿಪೂರ್ಣನಾದ ರಾಜನು ನ್ಯಾಯವನ್ನು ಪ್ರೀತಿಸುವನು.
ದೇವರೇ, ನೀತಿಯನ್ನು ಸೃಷ್ಟಿಸಿದಾತನು ನೀನೇ.
ಯಾಕೋಬ್ಯರಲ್ಲಿ ನ್ಯಾಯನೀತಿಗಳನ್ನು ಸ್ಥಾಪಿಸಿದವನು ನೀನೇ.
5 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ,
ಆತನ ಪವಿತ್ರ ಪಾದಪೀಠಕ್ಕೆ[a] ಅಡ್ಡಬೀಳಿರಿ.
6 ಮೋಶೆಯೂ ಆರೋನನೂ ದೇವರ ಯಾಜಕರುಗಳಾಗಿದ್ದರು.
ಸಮುವೇಲನೂ ಆತನ ಹೆಸರಿನಲ್ಲಿ ಪ್ರಾರ್ಥಿಸಿದನು.
ಆತನು ಅವರೆಲ್ಲರ ಪ್ರಾರ್ಥನೆಗಳಿಗೆ ಉತ್ತರಿಸಿದನು.
7 ಆತನು ಮೇಘಸ್ತಂಭದಿಂದ ಅವರೊಂದಿಗೆ ಮಾತಾಡಿದನು.
ಅವರು ಆಜ್ಞೆಗಳಿಗೆ ವಿಧೇಯರಾದರು.
ಆತನು ಅವರಿಗೆ ಧರ್ಮಶಾಸ್ತ್ರವನ್ನು ಕೊಟ್ಟನು.
8 ನಮ್ಮ ದೇವರಾದ ಯೆಹೋವನೇ, ನೀನು ಅವರ ಪ್ರಾರ್ಥನೆಗಳಿಗೆ ಉತ್ತರಿಸಿದೆ.
ನೀನು ಕ್ಷಮಿಸುವ ದೇವರೆಂದೂ
ದುಷ್ಕೃತ್ಯಗಳಿಗೆ ದಂಡಿಸುವವನೆಂದೂ ಅವರಿಗೆ ತೋರ್ಪಡಿಸಿದೆ.
9 ನಮ್ಮ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನ ಪವಿತ್ರ ಪರ್ವತದ ಕಡೆಗೆ ಅಡ್ಡಬಿದ್ದು ಆತನನ್ನು ಆರಾಧಿಸಿರಿ.
ನಮ್ಮ ದೇವರಾದ ಯೆಹೋವನೇ ಪರಿಶುದ್ಧನು!
ದೇವರು ಯಾಜಕರನ್ನು ಸ್ವೀಕರಿಸಿದನು
9 ಎಂಟನೆಯ ದಿನದಲ್ಲಿ ಮೋಶೆಯು ಆರೋನನನ್ನೂ ಅವನ ಪುತ್ರರನ್ನೂ ಇಸ್ರೇಲರ ಹಿರಿಯರನ್ನೂ ಕರೆದನು. 2 ಮೋಶೆಯು ಆರೋನನಿಗೆ ಹೀಗೆಂದನು; “ಒಂದು ಎಳೆಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊ. ಆ ಪಶುಗಳಲ್ಲಿ ಏನೂ ದೋಷವಿರಬಾರದು. ಹೋರಿಯನ್ನು ಪಾಪಪರಿಹಾರಕ ಯಜ್ಞವಾಗಿಯೂ ಟಗರನ್ನು ಸರ್ವಾಂಗಹೋಮವಾಗಿಯೂ ಯೆಹೋವನಿಗೆ ಸಮರ್ಪಿಸು. 3 ಇಸ್ರೇಲರಿಗೆ ಹೀಗೆ ಹೇಳು: ‘ಪಾಪಪರಿಹಾರಕ ಯಜ್ಞಕ್ಕಾಗಿ ಹೋತವನ್ನು ತೆಗೆದುಕೊಳ್ಳಿರಿ; ಸರ್ವಾಂಗಹೋಮಕ್ಕಾಗಿ ಕರುವನ್ನೂ ಕುರಿಮರಿಯನ್ನೂ ತೆಗೆದುಕೊಳ್ಳಿರಿ. ಕರುವೂ ಕುರಿಮರಿಯೂ ಒಂದು ವರ್ಷದ್ದಾಗಿರಬೇಕು. ಆ ಪ್ರಾಣಿಗಳಲ್ಲಿ ಯಾವ ದೋಷವಿರಬಾರದು. 4 ಸಮಾಧಾನಯಜ್ಞಕ್ಕಾಗಿ ಒಂದು ಹೋರಿಯನ್ನೂ ಒಂದು ಟಗರನ್ನೂ ತೆಗೆದುಕೊಂಡು ಎಣ್ಣೆ ಬೆರೆಸಿದ ಧಾನ್ಯಸಮರ್ಪಣೆಗಳೊಡನೆ ಅವುಗಳನ್ನು ಯೆಹೋವನ ಮುಂದೆ ಅರ್ಪಿಸಿರಿ. ಯಾಕೆಂದರೆ ಈ ದಿನ ಯೆಹೋವನು ನಿಮಗೆ ಪ್ರತ್ಯಕ್ಷವಾಗುವನು.’”
5 ಆದ್ದರಿಂದ ಜನರೆಲ್ಲರೂ ದೇವದರ್ಶನಗುಡಾರಕ್ಕೆ ಬಂದರು. ಮೋಶೆ ಆಜ್ಞಾಪಿಸಿದ ವಸ್ತುಗಳನ್ನು ಅವರು ತಂದರು. ಎಲ್ಲಾ ಜನರು ಯೆಹೋವನ ಸನ್ನಿಧಿಯಲ್ಲಿ ನಿಂತರು. 6 ಮೋಶೆ, “ಯೆಹೋವನು ಆಜ್ಞಾಪಿಸಿದವುಗಳನ್ನು ನೀವು ಮಾಡಿದರೆ ಯೆಹೋವನ ಮಹಿಮೆಯು ನಿಮಗೆ ಪ್ರತ್ಯಕ್ಷವಾಗುವುದು” ಎಂದು ಹೇಳಿದನು.
7 ಮೋಶೆಯು ಆರೋನನಿಗೆ, “ಯೆಹೋವನು ಆಜ್ಞಾಪಿಸಿದವುಗಳನ್ನು ಮಾಡು. ಯಜ್ಞವೇದಿಕೆಯ ಬಳಿಗೆ ಹೋಗಿ ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಅರ್ಪಿಸು. ನಿನ್ನನ್ನೂ ಜನರನ್ನೂ ಶುದ್ಧಿಮಾಡುವ ಆ ಕಾರ್ಯಗಳನ್ನು ಮಾಡು. ಜನರು ತಂದದ್ದನ್ನು ತೆಗೆದುಕೊಂಡು ಅವರಿಗಾಗಿ ಪಾಪಪರಿಹಾರಕ ಯಜ್ಞವನ್ನು ಅರ್ಪಿಸಿ ಅವರನ್ನು ಶುದ್ಧಿಮಾಡು” ಎಂದು ಹೇಳಿದನು.
8 ಆದ್ದರಿಂದ ಆರೋನನು ಯಜ್ಞವೇದಿಕೆಯ ಬಳಿಗೆ ಹೋದನು. ಅವನು ತನಗೋಸ್ಕರ ಪಾಪಪರಿಹಾರಕ ಯಜ್ಞವಾಗಿ ಎಳೆ ಹೋರಿಯನ್ನು ವಧಿಸಿದನು. 9 ಆರೋನನ ಪುತ್ರರು ಅದರ ರಕ್ತವನ್ನು ಆರೋನನ ಬಳಿಗೆ ತಂದರು. ಆರೋನನ ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಯಜ್ಞವೇದಿಕೆಯ ಮೂಲೆಗಳಿಗೆ ಹಚ್ಚಿದನು. ಬಳಿಕ ಆರೋನನು ರಕ್ತವನ್ನು ಯಜ್ಞವೇದಿಕೆಯ ಬುಡದಲ್ಲಿ ಸುರಿದನು. 10 ಆರೋನನು ಪಾಪಪರಿಹಾರಕ ಯಜ್ಞಪಶುವಿನ ಕೊಬ್ಬನ್ನು, ಮೂತ್ರಪಿಂಡಗಳನ್ನು ಮತ್ತು ಪಿತ್ತಾಶಯವನ್ನು ಆವರಿಸಿರುವ ಕೊಬ್ಬನ್ನು ತೆಗೆದುಕೊಂಡನು. ಅವನು ಆ ವಸ್ತುಗಳನ್ನು ವೇದಿಕೆಯ ಮೇಲೆ ಹೋಮಮಾಡಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವನು ಮಾಡಿದನು. 11 ಬಳಿಕ ಆರೋನನು ಮಾಂಸವನ್ನು ಮತ್ತು ಚರ್ಮವನ್ನು ಪಾಳೆಯದ ಹೊರಗೆ ಬೆಂಕಿಯಲ್ಲಿ ಸುಟ್ಟುಹಾಕಿದನು.
22 ತರುವಾಯ ಆರೋನನು ತನ್ನ ಕೈಗಳನ್ನು ಜನರ ಕಡೆಗೆ ಎತ್ತಿ ಅವರನ್ನು ಆಶೀರ್ವದಿಸಿದನು. ಆರೋನನು ಪಾಪಪರಿಹಾರಕ ಯಜ್ಞವನ್ನೂ ಸರ್ವಾಂಗಹೋಮವನ್ನೂ ಸಮಾಧಾನಯಜ್ಞವನ್ನೂ ಅರ್ಪಿಸಿ ಮುಗಿಸಿದ ನಂತರ ಯಜ್ಞವೇದಿಕೆಯಿಂದ ಕೆಳಗಿಳಿದು ಬಂದನು.
23 ಮೋಶೆ ಮತ್ತು ಆರೋನನು ದೇವದರ್ಶನದ ಗುಡಾರದೊಳಗೆ ಹೋದರು. ಅವರು ಹೊರಗೆ ಬಂದು ಜನರನ್ನು ಆಶೀರ್ವದಿಸಿದರು. ಆಗ ಯೆಹೋವನ ಮಹಿಮೆಯು ಜನರೆಲ್ಲರಿಗೆ ಪ್ರತ್ಯಕ್ಷವಾಯಿತು. 24 ಯೆಹೋವನ ಬಳಿಯಿಂದ ಬೆಂಕಿಯು ಬಂದು ವೇದಿಕೆಯ ಮೇಲಿದ್ದ ಸರ್ವಾಂಗಹೋಮವನ್ನು ಮತ್ತು ಕೊಬ್ಬನ್ನು ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿದಾಗ, ಅವರು ಆನಂದದಿಂದ ಆರ್ಭಟಿಸಿ ಅಡ್ಡಬಿದ್ದು ನಮಸ್ಕರಿಸಿದರು.
ಮಾರ್ಪಾಟಾದ ಜೀವಿತ
4 ಕ್ರಿಸ್ತನು ದೇಹಾರೂಢನಾಗಿದ್ದಾಗ ಸಂಕಟಪಟ್ಟನು. ಆದ್ದರಿಂದ ಕ್ರಿಸ್ತನಲ್ಲಿದ್ದ ಮನೋಭಾವವನ್ನೇ ನೀವೂ ಹೊಂದಿದವರಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಶಾರೀರಿಕವಾಗಿ ಸಂಕಟವನ್ನು ಅನುಭವಿಸಿದ ವ್ಯಕ್ತಿಯು ಪಾಪದಿಂದ ಮುಕ್ತನಾಗಿದ್ದಾನೆ. 2 ಆದ್ದರಿಂದ ಈ ಲೋಕದಲ್ಲಿ ನೀವು ಜನರ ಅಪೇಕ್ಷೆಗೆ ತಕ್ಕಂತೆ ಕೆಟ್ಟಕಾರ್ಯಗಳನ್ನು ಮಾಡದೆ, ದೇವರು ಅಪೇಕ್ಷಿಸುವಂಥ ಕಾರ್ಯಗಳನ್ನೇ ಮಾಡುತ್ತಾ ಜೀವಿಸಲು ನಿಮ್ಮನ್ನು ಬಲಪಡಿಸಿಕೊಳ್ಳಿರಿ. 3 ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.
4 ನೀವು ಅಸಹ್ಯಕರವಾದ ನಿರರ್ಥಕಗೋಷ್ಠಿಗಳನ್ನು ಮಾಡದಿರುವುದನ್ನು ಕಂಡ ಅವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ಆಶ್ಚರ್ಯಪಡುವರು. ಆದ್ದರಿಂದಲೇ ಅವರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳುವರು. 5 ಆದರೆ ಅವಿಶ್ವಾಸಿಗಳು ತಾವು ಮಾಡುವ ಕಾರ್ಯಗಳ ಬಗ್ಗೆ ತಾವೇ ವಿವರಣೆಯನ್ನು ನೀಡಬೇಕಾಗುತ್ತದೆ. ಜೀವಂತವಾಗಿರುವ ಮತ್ತು ಸತ್ತಿರುವ ಜನರಿಗೆ ತೀರ್ಪು ನೀಡಲು ಸಿದ್ಧನಾಗಿರುವ ಕ್ರಿಸ್ತನಿಗೆ ಅವರು ವಿವರಣೆ ನೀಡಬೇಕಾಗುವುದು. 6 ಸತ್ತುಹೋಗಿರುವ ಜನರಿಗೂ ಸುವಾರ್ತೆಯನ್ನು ಉಪದೇಶಿಸಲಾಯಿತು. ಅವರು ಶರೀರಸಂಬಂಧವಾಗಿ ಮರಣದಂಡನೆಗೆ ಗುರಿಯಾಗಿದ್ದರೂ ಸಹ ಆತ್ಮ ಸಂಬಂಧವಾಗಿ ದೇವರಂತೆ ಸದಾಕಾಲ ಜೀವಿಸಲೆಂದೇ ಅವರಿಗೆ ಉಪದೇಶಿಸಲಾಯಿತು.
Kannada Holy Bible: Easy-to-Read Version. All rights reserved. © 1997 Bible League International