Revised Common Lectionary (Semicontinuous)
ಪರಲೋಕಾರೋಹಣ
6 ಅಪೊಸ್ತಲರು ಒಟ್ಟಾಗಿ ಸೇರಿದ್ದಾಗ, ಅವರು ಯೇಸುವಿಗೆ, “ಪ್ರಭುವೇ, ನೀನು ಯೆಹೂದ್ಯರಿಗೆ ಮತ್ತೆ ಅವರ ರಾಜ್ಯವನ್ನು ಕೊಡುವಂಥದ್ದು ಈ ಕಾಲದಲ್ಲೋ?” ಎಂದು ಕೇಳಿದರು.
7 ಯೇಸು ಅವರಿಗೆ, “ದಿನಗಳನ್ನು ಮತ್ತು ಕಾಲಗಳನ್ನು ನಿರ್ಧರಿಸುವ ಅಧಿಕಾರವಿರುವುದು ತಂದೆಯೊಬ್ಬನಿಗಷ್ಟೇ. ನೀವು ಅವುಗಳನ್ನು ತಿಳಿದುಕೊಳ್ಳಲಾಗುವುದಿಲ್ಲ. 8 ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲಹೊಂದಿ ಜೆರುಸಲೇಮಿನಲ್ಲಿಯೂ ಇಡೀ ಜುದೇಯದಲ್ಲಿಯೂ ಸಮಾರ್ಯದಲ್ಲಿಯೂ ಮತ್ತು ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದನು.
9 ಯೇಸು ಈ ಸಂಗತಿಗಳನ್ನು ಅಪೊಸ್ತಲರಿಗೆ ಹೇಳಿದ ಮೇಲೆ ಅಪೊಸ್ತಲರು ನೋಡುತ್ತಿರುವಾಗಲೇ ಆಕಾಶಕ್ಕೆ ಎತ್ತಲ್ಪಟ್ಟನು. ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರು ಆತನನ್ನು ಕಾಣಲಾಗಲಿಲ್ಲ. 10 ಯೇಸು ಹೋಗುತ್ತಿರಲು ಅಪೊಸ್ತಲರು ಆಕಾಶವನ್ನೇ ನೋಡುತ್ತಾ ನಿಂತಿದ್ದರು. ಆಗ, ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ಪುರುಷರು (ದೇವದೂತರು) ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತುಕೊಂಡು, 11 “ಗಲಿಲಾಯದವರೇ, ಏಕೆ ಆಕಾಶವನ್ನೇ ನೋಡುತ್ತಾ ನಿಂತುಕೊಂಡಿದ್ದೀರಿ? ಯೇಸು ನಿಮ್ಮ ಕಣ್ಣೆದುರಿನಲ್ಲಿ ಪರಲೋಕಕ್ಕೆ ಹೇಗೆ ಏರಿ ಹೋದನೋ ಅದೇ ರೀತಿಯಲ್ಲಿ ಹಿಂತಿರುಗಿ ಬರುತ್ತಾನೆ” ಎಂದು ಹೇಳಿದರು.
ಹೊಸ ಅಪೊಸ್ತಲನೊಬ್ಬನ ಆಯ್ಕೆ
12 ಬಳಿಕ ಅಪೊಸ್ತಲರು ಆಲಿವ್ ಮರಗಳ ಗುಡ್ಡದಿಂದ ಜೆರುಸಲೇಮಿಗೆ ಹಿಂತಿರುಗಿಹೋದರು. (ಈ ಗುಡ್ಡಕ್ಕೂ ಜೆರುಸಲೇಮಿಗೂ ಸುಮಾರು ಅರ್ಧ ಮೈಲಿ ಅಂತರವಿದೆ.) 13 ಅಪೊಸ್ತಲರು ಪಟ್ಟಣವನ್ನು ಪ್ರವೇಶಿಸಿ ತಾವು ವಾಸವಾಗಿದ್ದಲ್ಲಿಗೆ ಹೋದರು. ಅದು ಮೇಲಂತಸ್ತಿನಲ್ಲಿತ್ತು. ಆ ಅಪೊಸ್ತಲರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಯಾಕೋಬ (ಅಲ್ಫಾಯನ ಮಗ), ದೇಶಾಭಿಮಾನಿಯಾದ ಸಿಮೋನ ಮತ್ತು ಯೂದ (ಯಾಕೋಬನ ಮಗ).
14 ಅಪೊಸ್ತಲರೆಲ್ಲರೂ ಒಟ್ಟಾಗಿ ಸೇರಿದ್ದರು. ಅವರು ಒಂದೇ ಉದ್ದೇಶದಿಂದ ಎಡಬಿಡದೆ ಪ್ರಾರ್ಥಿಸುತ್ತಿದ್ದರು. ಕೆಲವು ಸ್ತ್ರೀಯರೂ ಯೇಸುವಿನ ತಾಯಿ ಮರಿಯಳೂ ಆತನ ಸಹೋದರರೂ ಅಪೊಸ್ತಲರ ಸಂಗಡವಿದ್ದರು.
ರಚನೆಗಾರ: ದಾವೀದ.
68 ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು.
ಆತನ ಶತ್ರುಗಳೆಲ್ಲಾ ಆತನ ಬಳಿಯಿಂದ ಓಡಿಹೋಗಲಿ.
2 ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ
ನಿನ್ನ ಶತ್ರುಗಳು ಚದರಿಹೋಗಲಿ.
ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ
ನಿನ್ನ ಶತ್ರುಗಳು ನಾಶವಾಗಲಿ.
3 ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ;
ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ!
4 ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ.
ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ.
ಆತನ ಹೆಸರು ಯಾಹು.
ಆತನ ಹೆಸರನ್ನು ಕೊಂಡಾಡಿರಿ!
5 ದೇವರು ತನ್ನ ಪವಿತ್ರ ಆಲಯದಲ್ಲಿ,
ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ.
6 ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು.
ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು.
ದೇವದ್ರೋಹಿಗಳಾದರೋ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.
7 ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ.
ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು,
8 ಭೂಮಿಯೇ ಕಂಪಿಸಿತು.
ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು.
9 ದೇವರೇ, ನೀನು ಮಳೆ ಸುರಿಸಿ,
ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ.
10 ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು.
ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ.
32 ಭೂರಾಜರುಗಳೇ, ದೇವರಿಗೆ ಗಾಯನ ಮಾಡಿರಿ!
ನಮ್ಮ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿರಿ!
33 ದೇವರಿಗೆ ಗಾಯನ ಮಾಡಿರಿ!
ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು.
ಆತನ ಗರ್ಜನೆಗೆ ಕಿವಿಗೊಡಿರಿ!
34 ದೇವರ ಬಲವನ್ನು ಕೊಂಡಾಡಿರಿ.
ಆತನ ಗಾಂಭೀರ್ಯವು ಇಸ್ರೇಲರ ಆಶ್ರಯವಾಗಿದೆ.
ಆತನ ಶಕ್ತಿಯು ಆಕಾಶಗಳಲ್ಲಿ ವ್ಯಾಪಿಸಿದೆ.
35 ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತಸ್ವರೂಪನಾಗಿರುವೆ.
ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು.
ದೇವರಿಗೆ ಸ್ತೋತ್ರ!
ಕ್ರೈಸ್ತನಾಗಿ ಸಂಕಟಪಡುವುದು
12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ.
6 ಆದ್ದರಿಂದ ದೇವರ ಶಕ್ತಿಯುತವಾದ ಹಸ್ತದ ಕೆಳಗೆ ನಮ್ರತೆಯಿಂದಿರಿ. ಯೋಗ್ಯಕಾಲವು ಸಮೀಪಿಸಿದಾಗ ಆತನು ನಿಮ್ಮನ್ನು ಮೇಲೆತ್ತುವನು. 7 ಆತನು ನಿಮ್ಮನ್ನು ಪರಿಪಾಲಿಸುವುದರಿಂದ ನಿಮ್ಮ ಚಿಂತೆಗಳನ್ನೆಲ್ಲಾ ಆತನಿಗೆ ಒಪ್ಪಿಸಿರಿ.
8 ಸ್ವಸ್ಥಚಿತ್ತರಾಗಿರಿ ಮತ್ತು ಎಚ್ಚರವಾಗಿರಿ! ಸೈತಾನನು ನಿಮ್ಮ ಶತ್ರು. ಗರ್ಜಿಸುವ ಸಿಂಹವು ಯಾರನ್ನು ತಿನ್ನಲಿ ಎಂದು ಹುಡುಕುತ್ತಿರುವಂತೆ ಅವನು ಮನುಷ್ಯನನ್ನು ಹುಡುಕುತ್ತಿದ್ದಾನೆ. 9 ನಿಮ್ಮ ನಂಬಿಕೆಯಲ್ಲಿ ಸ್ಥಿರವಾಗಿದ್ದು ಅವನನ್ನು ಎದುರಿಸಿರಿ. ಯಾಕೆಂದರೆ ಲೋಕದಲ್ಲಿರುವ ನಿಮ್ಮ ಸಹೋದರ ಸಹೋದರಿಯರೆಲ್ಲರೂ ನಿಮಗಿರುವಂಥ ಬಾಧೆಗಳನ್ನು ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.
10 ಹೌದು, ನೀವು ಸ್ವಲ್ಪಕಾಲ ಮಾತ್ರ ಸಂಕಟವನ್ನು ಅನುಭವಿಸುವಿರಿ. ಆದರೆ ಅನಂತರ ದೇವರು ಎಲ್ಲವನ್ನು ಸರಿಪಡಿಸುತ್ತಾನೆ. ಆತನು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಕೆಳಕ್ಕೆ ಬೀಳದಂತೆ ಆತನು ನಿಮಗೆ ಆಧಾರವಾಗುವನು. ಎಲ್ಲರಿಗೂ ಕೃಪೆಯನ್ನು ತೋರುವ ದೇವರು ಆತನೇ. ತನ್ನ ಪ್ರಭಾವದಲ್ಲಿ ಪಾಲುಗಾರರಾಗಲು ಕ್ರಿಸ್ತನೇ ನಿಮ್ಮನ್ನು ಕರೆದನು. ಆ ಪ್ರಭಾವವು ಶಾಶ್ವತವಾದದ್ದು. 11 ಸರ್ವಾಧಿಪತ್ಯವು ಎಂದೆಂದಿಗೂ ಆತನದೇ. ಆಮೆನ್.
ಶಿಷ್ಯರಿಗೋಸ್ಕರ ಯೇಸುವಿನ ಪ್ರಾರ್ಥನೆ
17 ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಪರಲೋಕದ ಕಡೆಗೆ ನೋಡಿ ಹೀಗೆ ಪ್ರಾರ್ಥಿಸಿದನು: “ತಂದೆಯೇ, ಸಮಯವು ಬಂದಿದೆ. ನಿನ್ನ ಮಗನನ್ನು ಮಹಿಮೆಪಡಿಸು. ಆಗ ಮಗನು ನಿನ್ನನ್ನು ಮಹಿಮೆಪಡಿಸಬಲ್ಲನು. 2 ನೀನು ಮಗನಿಗೆ ಯಾರ್ಯಾರನ್ನು ಕೊಟ್ಟೆಯೋ ಅವರೆಲ್ಲರಿಗೂ ಮಗನು ನಿತ್ಯಜೀವವನ್ನು ಕೊಡಬೇಕೆಂದು ನೀನು ಮಗನಿಗೆ ಅಧಿಕಾರವನ್ನು ಕೊಟ್ಟಿರುವೆ. 3 ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನು ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ನಿತ್ಯಜೀವ. 4 ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮಾಡಿ ಪೂರೈಸಿದ್ದೇನೆ. ನಾನು ಭೂಲೋಕದಲ್ಲಿ ನಿನ್ನನ್ನು ಮಹಿಮೆ ಪಡಿಸಿದೆನು. 5 ಈಗ, ತಂದೆಯೇ, ನೀನು ನಿನ್ನ ಸನ್ನಿಧಿಯಲ್ಲಿ ನನ್ನನ್ನು ಮಹಿಮೆಪಡಿಸು. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು ನಾನು ನಿನ್ನೊಂದಿಗೆ ಹೊಂದಿದ್ದ ಮಹಿಮೆಯನ್ನು ನನಗೆ ಕೊಡು.
6 “ನೀನು ಈ ಲೋಕದೊಳಗಿಂದ ಕೆಲವು ಜನರನ್ನು ನನಗೆ ಕೊಟ್ಟೆ. ನಿನ್ನ ಸ್ವರೂಪವನ್ನು ನಾನು ಇವರಿಗೆ ತೋರಿಸಿದೆನು. ಇವರು ನಿನ್ನವರಾಗಿದ್ದಾರೆ ಮತ್ತು ನೀನೇ ಇವರನ್ನು ನನಗೆ ಕೊಟ್ಟೆ. ಇವರು ನಿನ್ನ ಆಜ್ಞೆಗಳಿಗೆ ವಿಧೇಯರಾದರು. 7 ನೀನು ನನಗೆ ಕೊಟ್ಟ ಪ್ರತಿಯೊಂದೂ ನಿನ್ನಿಂದಲೇ ಬಂದಿದೆ ಎಂಬುದು ಇವರಿಗೆ ಈಗ ತಿಳಿದಿದೆ. 8 ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿಕೊಂಡಿದ್ದಾರೆ. ನಾನು ನಿಜವಾಗಿಯೂ ನಿನ್ನ ಬಳಿಯಿಂದ ಬಂದಿರುವುದಾಗಿಯೂ ನೀನೇ ನನ್ನನ್ನು ಕಳುಹಿಸಿರುವುದಾಗಿಯೂ ಇವರು ನಂಬಿದ್ದಾರೆ. 9 ಈಗ ನಾನು ಇವರಿಗಾಗಿ ಪ್ರಾರ್ಥಿಸುವೆನು. ಈ ಲೋಕದಲ್ಲಿರುವ ಜನರಿಗೋಸ್ಕರ ನಾನು ಪ್ರಾರ್ಥಿಸುತ್ತಿಲ್ಲ. ಆದರೆ ನೀನು ನನಗೆ ಕೊಟ್ಟ ಇವರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಏಕೆಂದರೆ ಇವರು ನಿನ್ನವರಾಗಿದ್ದಾರೆ. 10 ನನ್ನಲ್ಲಿರುವುದೆಲ್ಲಾ ನಿನ್ನದೇ ಮತ್ತು ನಿನ್ನಲ್ಲಿರುವುದೆಲ್ಲಾ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ.
11 “ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಇನ್ನು ನಾನು ಈ ಲೋಕದಲ್ಲಿರುವುದಿಲ್ಲ. ಆದರೆ ಇವರು ಇನ್ನೂ ಈ ಲೋಕದಲ್ಲಿರುತ್ತಾರೆ. ಪವಿತ್ರನಾದ ತಂದೆಯೇ, (ನೀನು ನನಗೆ ಕೊಟ್ಟ) ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡು. ನೀನೂ ನಾನೂ ಒಂದಾಗಿರುವಂತೆ ಇವರೂ ಒಂದಾಗಿರಲು ಆಗ ಸಾಧ್ಯವಾಗುವುದು.
Kannada Holy Bible: Easy-to-Read Version. All rights reserved. © 1997 Bible League International