Revised Common Lectionary (Semicontinuous)
93 ಯೆಹೋವನೇ ರಾಜನು.
ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
ಅದು ಕದಲುವುದೇ ಇಲ್ಲ.
2 ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
ಆದಿಯಿಂದಲೂ ಇರುವಾತನು ನೀನೊಬ್ಬನೇ!
3 ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
4 ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
5 ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.
ಯೆಹೋಶುವನು ನಿಮ್ಮ ಹೊಸ ನಾಯಕನಾಗಿದ್ದಾನೆ
31 ಮೋಶೆಯು ಇಸ್ರೇಲರ ಸಮೂಹಕ್ಕೆ ಹೇಳಿದ್ದೇನೆಂದರೆ: 2 “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ. ನನಗೆ ನಿಮ್ಮನ್ನು ಇನ್ನೂ ನಡೆಸಲು ಸಾಧ್ಯವಿಲ್ಲ. ಯೆಹೋವನು, ‘ನೀನು ಜೋರ್ಡನ್ ಹೊಳೆಯನ್ನು ದಾಟಕೂಡದು’ ಎಂದು ಹೇಳಿರುತ್ತಾನೆ. 3 ಆದರೆ ನಿಮ್ಮನ್ನು ಯೆಹೋವನೇ, ಆಚೆ ಕಡೆಗೆ ನಡೆಸುವನು. ಆ ದೇಶದ ಜನರನ್ನು ಯೆಹೋವನು ನಾಶಮಾಡುವನು. ಅವರ ಕೈಯಿಂದ ನೀವು ಆ ದೇಶವನ್ನು ವಶಪಡಿಸಿಕೊಳ್ಳುವಿರಿ. ಯೆಹೋಶುವನು ನಿಮ್ಮನ್ನು ಇನ್ನು ಮುಂದೆ ನಡಿಸುವನು ಎಂದು ಯೆಹೋವನು ಹೇಳಿದ್ದಾನೆ.
4 “ಯೆಹೋವನು ಸೀಹೋನನನ್ನು ಮತ್ತು ಓಗನನ್ನು ನಾಶಮಾಡಿದನು. ಅಮೋರಿಯ ಅರಸರನ್ನು ನಾಶಮಾಡಿದನು; ಅದೇ ರೀತಿಯಾಗಿ ನೀವು ಹೋಗುವ ದೇಶದಲ್ಲಿಯೂ ಮಾಡುವನು. 5 ಯೆಹೋವನು ಆ ಜನಾಂಗಗಳನ್ನು ಸೋಲಿಸಲು ಸಹಾಯ ಮಾಡುವನು. ಆದರೆ ನಾನು ಹೇಳಿದ ಪ್ರಕಾರ ನೀವು ಅವರಿಗೆ ಮಾಡಬೇಕು. 6 ಧೈರ್ಯವಾಗಿರಿ, ಶಕ್ತಿಹೊಂದಿದವರಾಗಿರಿ, ಆ ಜನರಿಗೆ ಹೆದರಬೇಡಿರಿ. ಯಾಕೆಂದರೆ ದೇವರಾದ ಯೆಹೋವನು ನಿಮ್ಮ ಸಂಗಡ ಇರುವನು. ಆತನು ನಿಮ್ಮ ಕೈ ಬಿಡುವುದಿಲ್ಲ, ನಿಮ್ಮನ್ನು ತೊರೆಯುವುದಿಲ್ಲ.”
7 ಆಮೇಲೆ ಮೋಶೆಯು ಯೆಹೋಶುವನನ್ನು ಕರೆದು ಎಲ್ಲಾ ಇಸ್ರೇಲರ ಎದುರಿನಲ್ಲಿ, “ಶಕ್ತಿಶಾಲಿಯಾಗಿದ್ದು ಧೈರ್ಯಗೊಂಡಿರು. ನೀನು ಈ ಜನರನ್ನು ಯೆಹೋವನು ನಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂಥ ದೇಶಕ್ಕೆ ನಡೆಸು. ಆ ದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಇಸ್ರೇಲರಿಗೆ ಸಹಾಯ ಮಾಡು. 8 ಯೆಹೋವನು ನಿನ್ನನ್ನು ನಡೆಸುತ್ತಾನೆ, ಆತನು ತಾನೇ ನಿನ್ನೊಂದಿಗಿರುವನು. ಆತನು ನಿನ್ನ ಕೈಬಿಡುವುದಿಲ್ಲ, ನಿನ್ನನ್ನು ತೊರೆಯುವುದಿಲ್ಲ. ಆದ್ದರಿಂದ ಚಿಂತಿಸಬೇಡ, ಭಯಪಡಬೇಡ” ಎಂದು ಹೇಳಿದನು.
ಮೋಶೆಯು ಬೋಧನೆಗಳನ್ನೆಲ್ಲಾ ಬರೆದದ್ದು
9 ಆಮೇಲೆ ಮೋಶೆಯು ಬೋಧನೆಗಳನ್ನೆಲ್ಲಾ ಬರೆದು ಯಾಜಕರ ಕೈಯಲ್ಲಿ ಅದನ್ನು ಕೊಟ್ಟನು. ಯಾಜಕರು ಲೇವಿಯ ಕುಲದವರು. ಅವರ ಕರ್ತವ್ಯ ಏನಾಗಿತ್ತೆಂದರೆ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊರುವುದು. ಮೋಶೆಯು ಇಸ್ರೇಲರ ಎಲ್ಲಾ ಹಿರಿಯರಿಗೂ ಬೋಧನೆಯ ಪುಸ್ತಕವನ್ನು ಕೊಟ್ಟನು. 10 ಆಮೇಲೆ ಮೋಶೆಯು ನಾಯಕರೊಂದಿಗೆ ಮಾತನಾಡುತ್ತಾ, “ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಅಂದರೆ ಬಿಡುಗಡೆಯ ವರ್ಷದಲ್ಲಿ ನಡೆಯುವ ಪರ್ಣಶಾಲೆಗಳ ಹಬ್ಬದ ಸಮಯದಲ್ಲಿ ಈ ಬೋಧನಾಪುಸ್ತಕವನ್ನು ಓದಬೇಕು. 11 ಆ ಹಬ್ಬದ ಸಮಯದಲ್ಲಿ ಇಸ್ರೇಲರೆಲ್ಲರು ತಮ್ಮ ದೇವರಾದ ಯೆಹೋವನು ಆರಿಸುವ ವಿಶೇಷ ಸ್ಥಳದಲ್ಲಿ ಕೂಡಿಬರುವಾಗ ಈ ಬೋಧನೆಯ ಪುಸ್ತಕವನ್ನು ಎಲ್ಲರಿಗೂ ಕೇಳಿಸುವಂತೆ ಓದಬೇಕು. 12 ಎಲ್ಲರನ್ನು ಅಂದರೆ ಗಂಡಸರನ್ನೂ ಹೆಂಗಸರನ್ನೂ ಚಿಕ್ಕಮಕ್ಕಳನ್ನೂ ಮತ್ತು ನಿಮ್ಮನಿಮ್ಮ ಊರಿನಲ್ಲಿ ವಾಸಿಸುವ ಪರದೇಶಸ್ಥರನ್ನೂ ಒಟ್ಟಾಗಿ ಸೇರಿಸಬೇಕು. ಅವರು ಬೋಧನೆಯನ್ನು ಕೇಳಿ ತಮ್ಮ ದೇವರಾದ ಯೆಹೋವನನ್ನು ಸನ್ಮಾನಿಸಲು ಕಲಿಯುವರು ಮತ್ತು ಬೋಧನೆಯಲ್ಲಿ ತಿಳಿಸಿರುವ ಪ್ರಕಾರ ಮಾಡುವರು. 13 ಅವರ ಸಂತತಿಯವರಿಗೆ ಯೆಹೋವನ ಕಟ್ಟಳೆಯ ಬಗ್ಗೆ ಗೊತ್ತಿಲ್ಲದಿದ್ದರೆ ಅವರು ಬೋಧನಾಪುಸ್ತಕ ಓದುವಾಗ ತಿಳಿದುಕೊಳ್ಳುವರು. ನಿಮ್ಮ ದೇವರಾದ ಯೆಹೋವನನ್ನು ಗೌರವಿಸಲು ಅವರು ಅದರಿಂದ ಕಲಿತುಕೊಳ್ಳುವರು; ನೀವು ಜೋರ್ಡನ್ ನದಿ ದಾಟಿಹೋಗಿ ವಶಪಡಿಸಿಕೊಳ್ಳಲಿರುವ ದೇಶದಲ್ಲಿ ನೀವು ವಾಸವಾಗಿರುವ ತನಕ ಅವರು ಗೌರವಿಸುವರು.”
ದುಃಖವು ಸಂತೋಷವಾಗುವುದು
16 “ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಅನಂತರ ಸ್ವಲ್ಪಕಾಲವಾದ ಮೇಲೆ ನೀವು ನನ್ನನ್ನು ಮತ್ತೆ ನೋಡುವಿರಿ.”
17 ಶಿಷ್ಯರಲ್ಲಿ ಕೆಲವರು, “‘ಸ್ವಲ್ಪಕಾಲದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ಪಲ್ಪಕಾಲವಾದ ಬಳಿಕ ನನ್ನನ್ನು ಮತ್ತೆ ನೋಡುವಿರಿ. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ’ ಎಂದು ಆತನು ಹೇಳಿದ್ದರ ಅರ್ಥವೇನು?” ಎಂದು ಒಬ್ಬರಿಗೊಬ್ಬರು ಮಾತಾಡಿಕೊಂಡರು. 18 ಶಿಷ್ಯರು, “‘ಸ್ವಲ್ಪಕಾಲ’ ಎಂದರೇನು? ಆತನ ಮಾತೇ ನಮಗೆ ಅರ್ಥವಾಗುತ್ತಿಲ್ಲ” ಎಂದು ಒಬ್ಬರನ್ನೊಬ್ಬರು ಕೇಳತೊಡಗಿದರು.
19 ಶಿಷ್ಯರು ಇದರ ಬಗ್ಗೆ ತನ್ನನ್ನು ಕೇಳಬೇಕೆಂದಿದ್ದಾರೆ ಎಂಬುದು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಆತನು, “‘ಸ್ವಲ್ಪಕಾಲವಾದ ಬಳಿಕ ನೀವು ನನ್ನನ್ನು ಕಾಣುವುದಿಲ್ಲ. ಆದರೆ ಅನಂತರ ಸ್ವಲ್ಪಕಾಲವಾದ ಬಳಿಕ ನನ್ನನ್ನು ನೋಡುವಿರಿ’ ಎಂದು ನಾನು ಹೇಳಿದ್ದರ ಅರ್ಥವೇನೆಂದು ನೀವು ಒಬ್ಬರನ್ನೊಬ್ಬರು ಕೇಳುತ್ತಿದ್ದೀರಾ? 20 ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಅಳುವಿರಿ, ದುಃಖಪಡುವಿರಿ. ಆದರೆ ಲೋಕವು ಸಂತೋಷಪಡುವುದು. ನೀವು ದುಃಖಪಡುವಿರಿ, ಆದರೆ ನಿಮ್ಮ ದುಃಖವು ಆನಂದವಾಗುವುದು.
21 “ಗರ್ಭಿಣಿ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ. ಮಗುವು ಜನಿಸಿದಾಗ, ಲೋಕದಲ್ಲಿ ಮಗುವೊಂದು ಜನಿಸಿತೆಂಬ ಸಂತೋಷದಿಂದ ಆಕೆ ಆ ವೇದನೆಯನ್ನು ಮರೆತುಬಿಡುತ್ತಾಳೆ. 22 ಇದು ನಿಮಗೂ ಅನ್ವಯಿಸುತ್ತದೆ. ಈಗ ನೀವು ದುಃಖದಿಂದಿದ್ದೀರಿ. ಆದರೆ ನಾನು ನಿಮ್ಮನ್ನು ಮತ್ತೆ ನೋಡಿದಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳಲಾರರು. 23 ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಕೇಳುವುದಿಲ್ಲ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 24 ನೀವು ನನ್ನ ಹೆಸರಿನಲ್ಲಿ ಏನೂ ಕೇಳಿಕೊಳ್ಳಲಿಲ್ಲ. ಕೇಳಿರಿ, ಆಗ ನಿಮಗೆ ದೊರೆಯುವುದು ಮತ್ತು ನಿಮ್ಮ ಆನಂದವು ಪರಿಪೂರ್ಣವಾಗುವುದು.
Kannada Holy Bible: Easy-to-Read Version. All rights reserved. © 1997 Bible League International