Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 93

93 ಯೆಹೋವನೇ ರಾಜನು.
    ಆತನು ವೈಭವವನ್ನೂ ಬಲವನ್ನೂ ವಸ್ತ್ರದಂತೆ ಧರಿಸಿಕೊಂಡಿದ್ದಾನೆ.
ಆತನು ಸಿದ್ಧನಾಗಿರುವುದರಿಂದ ಇಡೀ ಪ್ರಂಪಚವೇ ಸುರಕ್ಷಿತವಾಗಿರುವುದು.
    ಅದು ಕದಲುವುದೇ ಇಲ್ಲ.
ದೇವರೇ, ಆದಿಯಿಂದಲೂ ನಿನ್ನ ರಾಜ್ಯವು ಶಾಶ್ವತವಾಗಿದೆ.
    ಆದಿಯಿಂದಲೂ ಇರುವಾತನು ನೀನೊಬ್ಬನೇ!
ಯೆಹೋವನೇ, ನದಿಗಳ ಶಬ್ದವು ಮೊರೆಯುತ್ತಿದೆ.
    ರಭಸದಿಂದ ಬಡಿಯುತ್ತಿರುವ ಅಲೆಗಳು ಭೋರ್ಗರೆಯುತ್ತಿವೆ.
ಬಿರುಸಾಗಿ ಬಡಿಯುತ್ತಿರುವ ಸಮುದ್ರದ ಅಲೆಗಳು ಭೋರ್ಗರೆಯುತ್ತಾ ಪ್ರಬಲವಾಗಿವೆ.
    ಆದರೆ ಉನ್ನತದಲ್ಲಿರುವ ಯೆಹೋವನು ಅದಕ್ಕಿಂತ ಎಷ್ಟೋ ಬಲಿಷ್ಠನಾಗಿದ್ದಾನೆ.
ಯೆಹೋವನೇ, ನಿನ್ನ ಕಟ್ಟಳೆಗಳು ಶಾಶ್ವತವಾಗಿವೆ.
    ನಿನ್ನ ಪವಿತ್ರಾಲಯವು ಬಹುಕಾಲದವರೆಗೆ ಇರುತ್ತದೆ.

ಆದಿಕಾಂಡ 9:8-17

8-9 ಆಮೇಲೆ ದೇವರು ನೋಹನಿಗೂ ಅವನ ಮಕ್ಕಳಿಗೂ, “ನಾನು ನಿಮಗೆ ಮತ್ತು ಮುಂದೆ ಜೀವಿಸುವ ನಿಮ್ಮ ಜನರಿಗೆ ವಾಗ್ದಾನ ಮಾಡುತ್ತೇನೆ. 10 ನಾವೆಯೊಳಗಿಂದ ಬಂದ ಎಲ್ಲಾ ಪಕ್ಷಿಗಳಿಗೆ, ಎಲ್ಲಾ ಪಶುಗಳಿಗೆ ಮತ್ತು ಪ್ರಾಣಿಗಳಿಗೆ ನಾನು ವಾಗ್ದಾನ ಮಾಡುತ್ತೇನೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗೆ ವಾಗ್ದಾನ ಮಾಡುತ್ತೇನೆ. 11 ನಾನು ನಿಮಗೆ ಮಾಡುವ ವಾಗ್ದಾನವೇನೆಂದರೆ: ಭೂಮಿಯ ಮೇಲಿದ್ದ ಎಲ್ಲಾ ಜೀವಿಗಳು ಜಲಪ್ರಳಯದಿಂದ ನಾಶವಾದವು. ಆದರೆ ಮತ್ತೆಂದಿಗೂ ಈ ರೀತಿ ಆಗುವುದಿಲ್ಲ. ಜಲಪ್ರಳಯವು ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ಇನ್ನೆಂದಿಗೂ ನಾಶಗೊಳಿಸುವುದಿಲ್ಲ” ಎಂದು ಹೇಳಿದನು.

12 ಇದಲ್ಲದೆ ದೇವರು, “ನನ್ನ ವಾಗ್ದಾನಕ್ಕೆ ಸಾಕ್ಷಿಯಾಗಿ ನಾನು ನಿಮಗೊಂದು ಗುರುತನ್ನು ಕೊಡುವೆನು. ನಾನು ನಿಮ್ಮೊಡನೆ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೊಡನೆ ಒಡಂಬಡಿಕೆ ಮಾಡಿಕೊಂಡಿರುವುದನ್ನು ಈ ಗುರುತು ತೋರಿಸುತ್ತದೆ. ಈ ಗುರುತು ಯಾವಾಗಲೂ ಇರುವುದು. 13 ನಾನು ಮೋಡಗಳಲ್ಲಿ ಇಟ್ಟಿರುವ ಮುಗಿಲುಬಿಲ್ಲು ನನಗೂ ಭೂಮಿಗೂ ಆಗಿರುವ ಒಡಂಬಡಿಕೆಗೆ ಗುರುತಾಗಿರುವುದು. 14 ನಾನು ಮೋಡಗಳನ್ನು ಭೂಮಿಯ ಮೇಲೆ ಕವಿಸುವಾಗ, ಮೋಡದಲ್ಲಿ ಮುಗಿಲುಬಿಲ್ಲನ್ನು ಕಾಣುವಿರಿ. 15 ನಾನು ಈ ಮುಗಿಲುಬಿಲ್ಲನ್ನು ನೋಡುವಾಗ, ನನಗೂ ನಿಮಗೂ ಮತ್ತು ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಆಗಿರುವ ಒಡಂಬಡಿಕೆಯನ್ನು ನೆನಪುಮಾಡಿಕೊಳ್ಳುವೆನು. ಜಲಪ್ರಳಯವು ಇನ್ನೆಂದಿಗೂ ಭೂಮಿಯ ಮೇಲಿರುವ ಎಲ್ಲಾ ಜೀವಿಗಳನ್ನು ನಾಶಗೊಳಿಸುವುದಿಲ್ಲ ಎಂಬುದೇ ಈ ಒಡಂಬಡಿಕೆ. 16 ನಾನು ಮೋಡಗಳಲ್ಲಿರುವ ಮುಗಿಲುಬಿಲ್ಲನ್ನು ನೋಡುವಾಗ, ಶಾಶ್ವತವಾದ ಈ ಒಡಂಬಡಿಕೆಯನ್ನು ಜ್ಞಾಪಕ ಮಾಡಿಕೊಳ್ಳುವೆನು. ನನಗೂ ಮತ್ತು ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಗಳಿಗೂ ಆದ ಒಡಂಬಡಿಕೆಯನ್ನು ನೆನಸಿಕೊಳ್ಳುವೆನು” ಎಂದು ಹೇಳಿದನು.

17 ಆದ್ದರಿಂದ ದೇವರು ನೋಹನಿಗೆ, “ಭೂಮಿಯ ಮೇಲಿರುವ ಎಲ್ಲಾ ಜೀವಿಗಳೊಡನೆ ನಾನು ಮಾಡಿಕೊಂಡ ಒಡಂಬಡಿಕೆಗೆ ಈ ಮುಗಿಲುಬಿಲ್ಲು ಗುರುತಾಗಿರುವುದು” ಎಂದು ಹೇಳಿದನು.

ಅಪೊಸ್ತಲರ ಕಾರ್ಯಗಳು 27:39-44

ನೌಕೆಯ ನಾಶ

39 ಬೆಳಗಾದಾಗ ನಾವಿಕರು ಭೂಮಿಯನ್ನು ಕಂಡರು. ಆದರೆ ಅದು ಯಾವ ಭೂಮಿಯೆಂದು ಗೊತ್ತಿರಲಿಲ್ಲ. ಅವರು ಕಂಡದ್ದು ಉಸುಬಿನ ದಡವುಳ್ಳ ಒಂದು ಕೊಲ್ಲಿ. ಸಾಧ್ಯವಾದರೆ ಹಡಗನ್ನು ಆ ಕೊಲ್ಲಿಗೆ ನಡೆಸಬೇಕೆಂದು ನಾವಿಕರು ಬಯಸಿದರು. 40 ಆದ್ದರಿಂದ ಅವರು ಚುಕ್ಕಾಣಿಗಳನ್ನು[a] ಬಿಗಿಯಾಗಿ ಹಿಡಿದುಕೊಂಡಿದ್ದ ಹಗ್ಗಗಳನ್ನು ಕತ್ತರಿಸಿಹಾಕಿದರು. ಬಳಿಕ ಮುಂಭಾಗದ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ದಡದತ್ತ ನಡೆಸತೊಡಗಿದರು. 41 ಆದರೆ ಹಡಗು ಉಸುಬಿನ ದಿಬ್ಬಕ್ಕೆ ಅಪ್ಪಳಿಸಿತು. ಹಡಗಿನ ಮುಂಭಾಗವು ಅದರಲ್ಲಿ ಸಿಕ್ಕಿಕೊಂಡಿತು. ಹಡಗು ಚಲಿಸಲಾಗಲಿಲ್ಲ. ಬಳಿಕ ದೊಡ್ಡ ಅಲೆಗಳು ಹಡಗಿನ ಹಿಂಭಾಗಕ್ಕೆ ಬಡಿದು ಚೂರುಚೂರು ಮಾಡಲಾರಂಭಿಸಿದವು.

42 ಕೈದಿಗಳಲ್ಲಿ ಯಾರೂ ಈಜಿಕೊಂಡು ಹೋಗಿ ತಪ್ಪಿಸಿಕೊಳ್ಳಬಾರದೆಂದು ಸೈನಿಕರು ಕೈದಿಗಳನ್ನು ಕೊಲ್ಲಲು ನಿರ್ಧರಿಸಿದರು. 43 ಆದರೆ ಸೇನಾಧಿಕಾರಿಯಾದ ಜೂಲಿಯಸನು ಪೌಲನನ್ನು ಉಳಿಸಲಪೇಕ್ಷಿಸಿ ಕೈದಿಗಳನ್ನು ಕೊಲ್ಲಲು ಸೈನಿಕರಿಗೆ ಅಪ್ಪಣೆ ಕೊಡಲಿಲ್ಲ. ಈಜು ಬಲ್ಲವರೆಲ್ಲರು ನೀರಿಗೆ ಧುಮುಕಿ ಈಜಿಕೊಂಡು ದಡಕ್ಕೆ ಹೋಗಬೇಕೆಂದು ಜೂಲಿಯಸನು ಹೇಳಿದನು. 44 ಉಳಿದ ಜನರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ಹೋಗಬೇಕೆಂದು ತಿಳಿಸಿದನು. ಹೀಗೆ ಜನರೆಲ್ಲರೂ ದಡವನ್ನು ಸೇರಿದರು. ಅವರಲ್ಲಿ ಒಬ್ಬರೂ ಸಾಯಲಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International