Revised Common Lectionary (Semicontinuous)
22 ಆಗ ಪೌಲನು ಅರಿಯೊಪಾಗ ನ್ಯಾಯಸಭೆಯ ಮುಂದೆ ನಿಂತುಕೊಂಡು ಹೀಗೆಂದನು: “ಅಥೆನ್ಸಿನ ಜನರೇ, ನೀವು ಎಲ್ಲಾ ಸಂಗತಿಗಳಲ್ಲೂ ಬಹು ಧಾರ್ಮಿಕರೆಂದು ನನಗೆ ತೋರುತ್ತದೆ. 23 ನಾನು ನಿಮ್ಮ ಪಟ್ಟಣದಲ್ಲಿ ನಡೆದು ಹೋಗುವಾಗ ನೀವು ಪೂಜಿಸುವ ದೇವತಾ ಪ್ರತಿಮೆಗಳನ್ನು ಕಂಡೆನು. ಒಂದು ಯಜ್ಞವೇದಿಕೆಯ ಮೇಲೆ, ‘ತಿಳಿಯದ ದೇವರಿಗೆ’ ಎಂದು ಬರೆದಿತ್ತು. ನಿಮಗೆ ಗೊತ್ತಿಲ್ಲದ ದೇವರನ್ನು ನೀವು ಆರಾಧಿಸುತ್ತಿದ್ದೀರಿ.
24 “ದೇವರ ಬಗ್ಗೆಯೇ ನಾನು ನಿಮಗೆ ಹೇಳುತ್ತಿದ್ದೇನೆ! ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಪ್ರತಿಯೊಂದನ್ನು ಸೃಷ್ಟಿಮಾಡಿದಾತನೇ ಆ ದೇವರು. ಆತನೇ ಭೂಮ್ಯಾಕಾಶಗಳ ಒಡೆಯನು. ಮನುಷ್ಯರು ನಿರ್ಮಿಸುವ ಗುಡಿಗಳಲ್ಲಿ ಆತನು ಜೀವಿಸುವವನಲ್ಲ. 25 ಮನುಷ್ಯರಿಗೆ ಜೀವವನ್ನೂ ಉಸಿರನ್ನೂ ಸಮಸ್ತವನ್ನೂ ಕೊಡುವಾತನು ಆ ದೇವರೇ. ಆತನಿಗೆ ಜನರ ಸೇವೆಯ ಅಗತ್ಯವೇನೂ ಇಲ್ಲ. ಆತನಿಗೆ ಕೊರತೆಯೆಂಬುದೂ ಇಲ್ಲ. 26 ದೇವರು ಒಬ್ಬ ಮನುಷ್ಯನನ್ನು ಸೃಷ್ಟಿ ಮಾಡುವುದರ ಮೂಲಕ ಮಾನವ ಜನಾಂಗವನ್ನು ಆರಂಭಿಸಿದನು. ಅವನಿಂದ ಬೇರೆಲ್ಲ ಜನರನ್ನು ಉತ್ಪತ್ತಿಮಾಡಿ, ಪ್ರಪಂಚದ ಎಲ್ಲೆಲ್ಲಿಯೂ ಅವರು ವಾಸಿಸುವಂತೆ ಮಾಡಿದನು; ಅವರು ಯಾವಾಗ ಮತ್ತು ಎಲ್ಲೆಲ್ಲಿ ವಾಸಿಸಬೇಕೆಂಬುದನ್ನು ಸರಿಯಾಗಿ ನಿರ್ಧರಿಸಿದನು.
27 “ಜನರು ತನ್ನನ್ನು ಹುಡುಕಬೇಕೆಂಬುದು ದೇವರ ಉದ್ದೇಶವಾಗಿತ್ತು. ತನಗಾಗಿ ಸುತ್ತಮುತ್ತಲೆಲ್ಲಾ ಹುಡುಕಿ ಕಂಡುಕೊಳ್ಳಬಹುದೆಂದು ದೇವರು ಹಾಗೆ ಮಾಡಿದನು. ಆದರೆ ಆತನು ನಮ್ಮಲ್ಲಿ ಯಾರಿಗೂ ಬಹುದೂರವಾಗಿಲ್ಲ. 28 ನಾವು ಆತನೊಂದಿಗೆ ವಾಸಿಸುತ್ತೇವೆ, ನಡೆಯುತ್ತೇವೆ, ಇರುತ್ತೇವೆ. ನಿಮ್ಮವರೇ ಆದ ಕೆಲವು ಲೇಖಕರು, ‘ನಾವು ಆತನ ಸಂತಾನದವರೇ’ ಎಂದು ಹೇಳಿದ್ದಾರೆ.
29 “ನಾವು ದೇವರ ಮಕ್ಕಳಾಗಿದ್ದೇವೆ. ಆದ್ದರಿಂದ ಜನರು ಊಹಿಸಿಕೊಳ್ಳುವ ರೀತಿಯಲ್ಲಾಗಲಿ ನಿರ್ಮಿಸುವ ರೀತಿಯಲ್ಲಾಗಲಿ ದೇವರಿದ್ದಾನೆಂದು ನೀವು ಯೋಚಿಸಕೂಡದು. ಆತನು ಬೆಳ್ಳಿಬಂಗಾರ ಮತ್ತು ಕಲ್ಲುಗಳ ರೂಪದಲ್ಲಿಲ್ಲ. 30 ಹಿಂದಿನ ಕಾಲದಲ್ಲಿ ಜನರು ದೇವರನ್ನು ಅರ್ಥಮಾಡಿಕೊಳ್ಳಲಿಲ್ಲ. ಆದರೆ ದೇವರು ಅದಕ್ಕೆ ಲಕ್ಷ್ಯಕೊಡಲಿಲ್ಲ. ಈಗಲಾದರೋ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವವರು ಪಶ್ಚಾತ್ತಾಪಪಡಬೇಕೆಂದು ಆತನು ಆಜ್ಞಾಪಿಸುತ್ತಾನೆ. 31 ಪ್ರಪಂಚದ ಜನರೆಲ್ಲರಿಗೂ ನ್ಯಾಯತೀರಿಸುವುದಕ್ಕಾಗಿ ದೇವರು ಒಂದು ದಿನವನ್ನು ಗೊತ್ತುಪಡಿಸಿದ್ದಾನೆ. ಅಂದು ನ್ಯಾಯತೀರಿಸುವುದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನು ಬಹುಕಾಲದ ಹಿಂದೆಯೇ ಆರಿಸಿಕೊಂಡಿದ್ದಾನೆ. ಇದನ್ನು ಎಲ್ಲರಿಗೂ ಖಚಿತಪಡಿಸುವುದಕ್ಕಾಗಿ ಆ ವ್ಯಕ್ತಿಯನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾನೆ.”
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15 ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.
16 ದೇವಭಕ್ತರೆಲ್ಲರೂ ಬನ್ನಿರಿ,
ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
ಆತನು ನನಗೆ ವಿಮುಖನಾಗದೆ,
ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!
13 ನೀವು ಯಾವಾಗಲೂ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತಿದ್ದರೆ, ಯಾರೂ ನಿಮಗೆ ಕೇಡು ಮಾಡುವುದಿಲ್ಲ. 14 ಆದರೆ ಯೋಗ್ಯವಾದುದನ್ನು ಮಾಡುವಾಗ ನೀವು ಸಂಕಟಪಡಬೇಕಾಗಬಹುದು. ಆದರೆ “ನಿಮ್ಮನ್ನು ಸಂಕಟಕ್ಕೆ ಒಳಪಡಿಸುವ ಜನರಿಗೆ ಹೆದರಬೇಡಿರಿ ಮತ್ತು ಚಿಂತಿಸಬೇಡಿರಿ.”(A) 15 ನಿಮ್ಮ ಹೃದಯಗಳಲ್ಲಿ ಕ್ರಿಸ್ತನೇ ಪ್ರಭುವಾಗಿರಲಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ನಿಮ್ಮನ್ನು ಕೇಳುವ ಪ್ರತಿಯೊಬ್ಬರಿಗೂ ಉತ್ತರ ಹೇಳಲು ಯಾವಾಗಲೂ ಸಿದ್ಧವಾಗಿರಿ. 16 ಆದರೆ ಸಾತ್ವಿಕತೆಯಿಂದ ಗೌರವಕರವಾದ ರೀತಿಯಲ್ಲಿ ಅವರಿಗೆ ಉತ್ತರವನ್ನು ಹೇಳಿ. ನೀವು ಮಾಡುತ್ತಿರುವುದು ಯೋಗ್ಯವಾದದ್ದೆಂಬುದು ನಿಮಗೆ ಯಾವಾಗಲೂ ಖಚಿತವಾಗಿ ತಿಳಿದಿರಬೇಕು. ಆಗ, ನೀವು ಕ್ರಿಸ್ತನಲ್ಲಿ ಒಳ್ಳೆಯವರಾಗಿ ಜೀವಿಸುವುದನ್ನು ನೋಡಿ ನಿಮ್ಮ ಬಗ್ಗೆ ಕೆಟ್ಟಮಾತುಗಳನ್ನು ಹೇಳುವವರು ತಾವು ಹೇಳಿದ ಕೆಟ್ಟ ಸಂಗತಿಗಳಿಗಾಗಿ ನಾಚಿಕೆಪಡುವರು.
17 ಕೆಟ್ಟದ್ದನ್ನು ಮಾಡಿ ಸಂಕಟ ಪಡುವುದಕ್ಕಿಂತ ಒಳ್ಳೆಯದನ್ನು ಮಾಡಿ ಸಂಕಟಪಡುವುದು ಉತ್ತಮ. ಹೌದು, ಅದು ದೇವರ ಅಪೇಕ್ಷೆಯಾಗಿದ್ದರೆ ಅದೇ ಒಳ್ಳೆಯದು.
18 ನಿಮ್ಮ ಪಾಪಗಳಿಗಾಗಿ ಕ್ರಿಸ್ತನು ಒಂದೇಸಾರಿ
ಬಾಧೆ ಅನುಭವಿಸಿ ಸತ್ತನು.
ನೀತಿವಂತನಾಗಿದ್ದ ಆತನು
ಅಪರಾಧಿಗಳಿಗಾಗಿ ಪ್ರಾಣಕೊಟ್ಟನು.
ನಿಮ್ಮೆಲ್ಲರನ್ನು ದೇವರ ಬಳಿಗೆ ನಡೆಸುವುದಕ್ಕಾಗಿ ಆತನು ಹೀಗೆ ಮಾಡಿದನು.
ಆತನ ದೇಹವು ಕೊಲ್ಲಲ್ಪಟ್ಟಿತು,
ಆದರೆ ಆತನು ಆತ್ಮಸಂಬಂಧದಲ್ಲಿ ಮತ್ತೆ ಜೀವಂತನಾದನು.
19 ಬಳಿಕ ಆತನು ಆತ್ಮರೂಪದಲ್ಲಿ ಹೋಗಿ ಸೆರೆಮನೆಯಲ್ಲಿದ್ದ ಆತ್ಮಗಳಿಗೆ ಸುವಾರ್ತೆ ಸಾರಿದನು. 20 ಬಹಳ ಹಿಂದೆ ನೋಹನ ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದವರೇ ಅವರು. ನೋಹನು ನಾವೆಯನ್ನು ಕಟ್ಟುತ್ತಿದ್ದಾಗ ದೇವರು ತಾಳ್ಮೆಯಿಂದ ಕಾಯುತ್ತಿದ್ದನು. ಕೆಲವರು ಅಂದರೆ ಎಂಟು ಮಂದಿ ಮಾತ್ರ, ಆ ನಾವೆಯಲ್ಲಿ ನೀರಿನ ಮೂಲಕ ರಕ್ಷಿಸಲ್ಪಟ್ಟರು. 21 ಆ ನೀರು ಈಗ ನಿಮ್ಮನ್ನು ರಕ್ಷಿಸುತ್ತಿರುವ ದೀಕ್ಷಾಸ್ನಾನದಂತಿದೆ. ದೀಕ್ಷಾಸ್ನಾನವು ಮೈಕೊಳೆಯನ್ನು ತೊಳೆಯುವಂಥದ್ದಲ್ಲ. ಅದು ಪರಿಶುದ್ಧ ಹೃದಯ ಬೇಕೆಂದು ವಿಜ್ಞಾಪಿಸಿಕೊಳ್ಳುವಂಥದಾಗಿದೆ. ಯೇಸು ಕ್ರಿಸ್ತನು ಸಾವಿನಿಂದ ಎದ್ದುಬಂದದ್ದರಿಂದ ಅದು ನಿಮ್ಮನ್ನು ರಕ್ಷಿಸುತ್ತದೆ. 22 ಈಗ ಯೇಸು ಪರಲೋಕಕ್ಕೆ ಹೋಗಿರುವನು. ಆತನು ದೇವರ ಬಲಗಡೆಯಲ್ಲಿದ್ದಾನೆ. ಆತನು ದೇವದೂತರನ್ನೂ ಅಧಿಕಾರಿಗಳನ್ನೂ ಶಕ್ತಿಗಳನ್ನೂ ಆಳುತ್ತಿದ್ದಾನೆ.
ಪವಿತ್ರಾತ್ಮನನ್ನು ಕೊಡುವುದಾಗಿ ವಾಗ್ದಾನ
15 “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ಆಜ್ಞಾಪಿಸುವವುಗಳನ್ನು ಮಾಡುವಿರಿ. 16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ಆತನು ಬೇರೊಬ್ಬ ಸಹಾಯಕನನ್ನು ನಿಮಗೆ ಕೊಡುವನು. ಆ ಸಹಾಯಕನು ಸದಾಕಾಲ ನಿಮ್ಮೊಂದಿಗಿರುವನು. 17 ಸತ್ಯದ ಆತ್ಮನೇ ಈ ಸಹಾಯಕನು. ಈ ಲೋಕವು ಆತನನ್ನು ಸ್ವೀಕರಿಸಿಕೊಳ್ಳಲಾರದು. ಏಕೆಂದರೆ ಲೋಕವು ಆತನನ್ನು ಕಾಣುವುದೂ ಇಲ್ಲ, ತಿಳಿದುಕೊಳ್ಳುವುದೂ ಇಲ್ಲ. ಆದರೆ ನೀವು ಆತನನ್ನು ಬಲ್ಲಿರಿ. ಆತನು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ವಾಸಿಸುವವನಾಗಿದ್ದಾನೆ.
18 “ನಾನು ನಿಮ್ಮನ್ನು ತಂದೆತಾಯಿಗಳಿಲ್ಲದ ಮಕ್ಕಳಂತೆ ಒಬ್ಬಂಟಿಗರನ್ನಾಗಿ ಬಿಟ್ಟುಹೋಗುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತೇನೆ. 19 ಇನ್ನು ಸ್ವಲ್ಪ ಕಾಲವಾದ ಮೇಲೆ ಈ ಲೋಕದ ಜನರು ನನ್ನನ್ನು ಇನ್ನೆಂದಿಗೂ ಕಾಣುವುದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20 ನಾನು ನನ್ನ ತಂದೆಯಲ್ಲಿರುವುದನ್ನು ನೀವು ಆ ದಿನದಂದು ತಿಳಿದುಕೊಳ್ಳುವಿರಿ. ನೀವು ನನ್ನಲ್ಲಿರುವುದನ್ನೂ ನಾನು ನಿಮ್ಮಲ್ಲಿರುವುದನ್ನೂ ತಿಳಿದುಕೊಳ್ಳುವಿರಿ. 21 ಒಬ್ಬನು ನನ್ನ ಆಜ್ಞೆಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ವಿಧೇಯನಾದರೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುವವನಾಗಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು ಮತ್ತು ನಾನೂ ಅವನನ್ನು ಪ್ರೀತಿಸುವೆನು. ನಾನು ಅವನಿಗೆ ನನ್ನನ್ನೇ ತೋರ್ಪಡಿಸಿಕೊಳ್ಳುವೆನು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International