Revised Common Lectionary (Semicontinuous)
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15 ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.
16 ದೇವಭಕ್ತರೆಲ್ಲರೂ ಬನ್ನಿರಿ,
ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
ಆತನು ನನಗೆ ವಿಮುಖನಾಗದೆ,
ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!
ಜಲಪ್ರಳಯದ ಪ್ರಾರಂಭ
7 ಆಮೇಲೆ ಯೆಹೋವನು ನೋಹನಿಗೆ, “ಈ ಕಾಲದವರಲ್ಲಿ ನೀನೊಬ್ಬನೇ ನೀತಿವಂತನಾಗಿರುವೆ. ಆದ್ದರಿಂದ ನಿನ್ನ ಕುಟುಂಬದವರೆಲ್ಲರನ್ನು ಕರೆದುಕೊಂಡು ನಾವೆಯೊಳಗೆ ಹೋಗು. 2 ಎಲ್ಲಾ ಬಗೆಯ ಶುದ್ಧಪ್ರಾಣಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಭೂಮಿಯ ಮೇಲಿನ ಇತರ ಪ್ರಾಣಿಗಳಲ್ಲಿ ಒಂದೊಂದು ಜೋಡಿಯನ್ನು (ಒಂದು ಗಂಡನ್ನು ಮತ್ತು ಒಂದು ಹೆಣ್ಣನ್ನು) ತೆಗೆದುಕೊ. 3 ಎಲ್ಲಾ ಬಗೆಯ ಪಕ್ಷಿಗಳಲ್ಲಿ ಏಳೇಳು ಜೋಡಿಗಳನ್ನು (ಏಳು ಗಂಡನ್ನು ಮತ್ತು ಏಳು ಹೆಣ್ಣನ್ನು) ತೆಗೆದುಕೊ. ಉಳಿದ ಜೀವಿಗಳೆಲ್ಲ ನಾಶವಾದಮೇಲೆ, ಇವು ತಮ್ಮ ಸಂತತಿಗಳನ್ನು ಮುಂದುವರಿಸಲಿ. 4 ಏಳು ದಿನಗಳ ನಂತರ ನಾನು ದೊಡ್ಡ ಮಳೆಯನ್ನು ಭೂಮಿಯ ಮೇಲೆ ಸುರಿಸುವೆನು. ಈ ಮಳೆಯು ನಲವತ್ತು ದಿವಸ ಹಗಲಿರುಳು ಸುರಿಯುವುದು. ನಾನು ನಿರ್ಮಿಸಿದ ಪ್ರತಿಯೊಂದು ಜೀವಿಯನ್ನೂ ನಾನು ಭೂಮಿಯ ಮೇಲಿಂದ ಅಳಿಸಿಬಿಡುವೆನು” ಎಂದು ಹೇಳಿದನು. 5 ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.
6 ಮಳೆಯು ಆರಂಭವಾದಾಗ ನೋಹನ ವಯಸ್ಸು ಆರುನೂರು ವರ್ಷ. 7 ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಹೆಂಡತಿ, ತನ್ನ ಗಂಡುಮಕ್ಕಳು ಮತ್ತು ಸೊಸೆಯರೊಂದಿಗೆ ನಾವೆಯೊಳಗೆ ಹೋದನು. 8 ಎಲ್ಲಾ ಶುದ್ಧಪ್ರಾಣಿಗಳು, ಭೂಮಿಯ ಮೇಲಿರುವ ಇತರ ಎಲ್ಲಾ ಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದೂ 9 ನೋಹನೊಂದಿಗೆ ನಾವೆಯೊಳಗೆ ಹೋದವು. ದೇವರ ಆಜ್ಞೆಯಂತೆ ಈ ಪ್ರಾಣಿಗಳು ಜೋಡಿಜೋಡಿಯಾಗಿ ನಾವೆಯೊಳಗೆ ಹೋದವು. 10 ಏಳು ದಿನಗಳ ನಂತರ ಜಲಪ್ರಳಯ ಪ್ರಾರಂಭವಾಯಿತು. ಭೂಮಿಯ ಮೇಲೆ ಮಳೆ ಸುರಿಯತೊಡಗಿತು.
11-13 ಎರಡನೆ ತಿಂಗಳಿನ ಹದಿನೇಳನೆಯ ದಿನದಂದು ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದು ಭೂಮಿಯೊಳಗಿಂದ ನೀರು ಮೇಲೇರತೊಡಗಿತು; ಭೂಮಿಯ ಮೇಲೆ ಭಾರಿಮಳೆ ಸುರಿಯತೊಡಗಿತು. ಆಕಾಶದ ಕಿಟಕಿ ತೆರೆದಿದೆಯೋ ಎಂಬಂತೆ ನಲವತ್ತು ದಿವಸ ಹಗಲಿರುಳು ಮಳೆ ಸುರಿಯಿತು. ಆ ದಿನದಂದು ನೋಹ ಮತ್ತು ಅವನ ಹೆಂಡತಿ, ಅವನ ಗಂಡುಮಕ್ಕಳಾದ ಶೇಮ್, ಹಾಮ್, ಯೆಫೆತ್ ಮತ್ತು ಅವನ ಸೊಸೆಯಂದಿರು ನಾವೆಯೊಳಗೆ ಹೋದರು. ಆಗ ನೋಹನು ಆರುನೂರು ವರ್ಷವಾಗಿತ್ತು. 14 ಅವರು ನಾವೆಯೊಳಗೆ ಇದ್ದರು. ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪ್ರಾಣಿಗಳು, ಪ್ರತಿಯೊಂದು ಬಗೆಯ ಪಶುಗಳು, ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಬಗೆಯ ಕ್ರಿಮಿಗಳು ಮತ್ತು ಪ್ರತಿಯೊಂದು ಬಗೆಯ ಪಕ್ಷಿಗಳು ನಾವೆಯೊಳಗೆ ಇದ್ದವು. 15 ಉಸಿರಾಡುವ ಪ್ರತಿಯೊಂದು ಬಗೆಯ ಪ್ರಾಣಿಗಳು ತಮ್ಮತಮ್ಮ ಜಾತಿಗನುಸಾರವಾಗಿ ಎರಡೆರಡಾಗಿ ಬಂದವು. 16 ದೇವರ ಆಜ್ಞೆಯಂತೆ ಈ ಪ್ರಾಣಿಗಳೆಲ್ಲಾ ನಾವೆಯೊಳಗೆ ಪ್ರವೇಶಿಸಿದವು. ಆಗ ಯೆಹೋವನು ನಾವೆಯ ಬಾಗಿಲನ್ನು ಮುಚ್ಚಿದನು.
17 ಭೂಮಿಯ ಮೇಲೆ ಜಲಪ್ರಳಯವು ನಲವತ್ತು ದಿನಗಳವರೆಗೆ ಇತ್ತು. ನೀರು ಮೇಲೇರುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲತೊಡಗಿತು. 18 ನೀರು ಇನ್ನೂ ಮೇಲೇರತೊಡಗಿದ್ದರಿಂದ ನಾವೆಯೂ ಭೂಮಿಯಿಂದ ಬಹು ಮೇಲೆ ಚಲಿಸತೊಡಗಿತು. 19 ನೀರು ಬಹಳವಾಗಿ ಹೆಚ್ಚಿದ್ದರಿಂದ, ಎತ್ತರವಾದ ಬೆಟ್ಟಗಳು ಸಹ ನೀರಿನಿಂದ ಮುಚ್ಚಿಕೊಂಡವು. 20 ಬೆಟ್ಟಗಳ ಮೇಲೂ ನೀರು ಹೆಚ್ಚತೊಡಗಿತು. ಅತೀ ಎತ್ತರವಾದ ಬೆಟ್ಟಕ್ಕಿಂತಲೂ ಇಪ್ಪತ್ತು ಅಡಿ ಹೆಚ್ಚಾಗಿ ನೀರು ಆವರಿಸಿಕೊಂಡಿತು.
21-22 ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯು ಸತ್ತುಹೋಯಿತು. ಎಲ್ಲಾ ಪುರುಷರು ಮತ್ತು ಸ್ತ್ರೀಯರು ಸತ್ತುಹೋದರು. ಎಲ್ಲಾ ಪಕ್ಷಿಗಳು, ಪಶುಗಳು, ಪ್ರಾಣಿಗಳು ಮತ್ತು ಪ್ರತಿಯೊಂದು ಬಗೆಯ ಕ್ರಿಮಿಗಳು ಸತ್ತುಹೋದವು. 23 ಹೀಗೆ ದೇವರು ಭೂಮಿಯ ಮೇಲಿದ್ದ ಪ್ರತಿಯೊಂದು ಜೀವಿಯನ್ನು ನಾಶಗೊಳಿಸಿದನು. ಪ್ರತಿಯೊಬ್ಬ ಮನುಷ್ಯನು ನಾಶವಾದನು; ಪ್ರತಿಯೊಂದು ಪ್ರಾಣಿಯು, ಹರಿದಾಡುವ ಪ್ರತಿಯೊಂದು ಕ್ರಿಮಿಯು ಮತ್ತು ಪ್ರತಿಯೊಂದು ಪಕ್ಷಿಯು ನಾಶವಾದವು. ಉಳಿದುಕೊಂಡವರೆಂದರೆ, ನೋಹ ಮತ್ತು ಅವನ ಕುಟುಂಬದವರು ಹಾಗೂ ಅವನೊಡನೆ ನಾವೆಯೊಳಗಿದ್ದ ಜೀವಿಗಳು. 24 ನೂರೈವತ್ತು ದಿನಗಳವರೆಗೆ ನೀರು ಭೂಮಿಯನ್ನು ಆವರಿಸಿಕೊಂಡಿತ್ತು.
ಬಿರುಗಾಳಿ
13 ಬಳಿಕ ಒಳ್ಳೆಯ ಗಾಳಿಯು ದಕ್ಷಿಣದ ಕಡೆಯಿಂದ ಬೀಸತೊಡಗಿತು. ಹಡಗಿನಲ್ಲಿದ್ದ ಜನರು, “ನಮಗೆ ಬೇಕಾಗಿದ್ದು ಈ ಗಾಳಿಯೇ, ಈಗ ಅದು ನಮಗೆ ದೊರಕಿತು!” ಎಂದು ಭಾವಿಸಿಕೊಂಡರು. ಆದ್ದರಿಂದ ಅವರು ಹಡಗಿನ ಲಂಗರನ್ನು[a] ಮೇಲಕ್ಕೆ ಎಳೆದರು. ನಾವು ಕ್ರೇಟ್ ದ್ವೀಪದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. 14 ಆದರೆ “ಈಶಾನ್ಯ ಮಾರುತ”[b] ಎಂಬ ಬಿರುಗಾಳಿಯು ದ್ವೀಪದಲ್ಲಿ ಬೀಸತೊಡಗಿ 15 ಹಡಗನ್ನು ಬಡಿದುಕೊಂಡು ಹೋಯಿತು. ಹಡಗು ಅದಕ್ಕೆ ಎದುರಾಗಿ ಚಲಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಗಾಳಿಯು ಬೀಸುವ ಕಡೆಗೆ ಹೋಗತೊಡಗಿದೆವು.
16 ನಾವು “ಕಾವ್ದ” ಎಂಬ ಚಿಕ್ಕ ದ್ವೀಪದ ಮರೆಯಲ್ಲಿ ಹಾದುಹೋದೆವು. ಆಗ ನಾವು ಹಡಗಿನಲ್ಲಿದ್ದ ಚಿಕ್ಕ ದೋಣಿಯನ್ನು ಒಳಗೆ ತೆಗೆದುಕೊಳ್ಳಲು ಸಾಧ್ಯವಾಯಿತು. ಆದರೂ ಆ ಕೆಲಸ ಬಹಳ ಪ್ರಯಾಸಕರವಾಗಿತ್ತು. 17 ಬಳಿಕ ಹಡಗು ಒಡೆದುಹೋಗದಂತೆ ಹಡಗಿನ ಸುತ್ತಲೂ ಹಗ್ಗಗಳನ್ನು ಬಿಗಿದರು. ಅನಂತರ “ಸರ್ತಿಸ್” ಎಂಬ ಕಳ್ಳುಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೊ ಎಂದು ಅವರಿಗೆ ಭಯವಾಯಿತು. ಆದ್ದರಿಂದ ಅವರು ಹಾಯಿಯನ್ನು[c] ಇಳಿಸಿ ಹಡಗನ್ನು ಬಡಿದುಕೊಂಡು ಹೋಗಲು ಗಾಳಿಗೆ ಅವಕಾಶ ಮಾಡಿಕೊಟ್ಟರು.
18 ಮರುದಿನ, ಬಿರುಗಾಳಿ ರಭಸವಾಗಿ ಬೀಸುತ್ತಿದ್ದುದರಿಂದ ಜನರು ಹಡಗಿನಲ್ಲಿದ್ದ ಕೆಲವು ಸಾಮಾನುಗಳನ್ನು ಎಸೆದುಬಿಟ್ಟರು. 19 ಒಂದು ದಿನವಾದ ನಂತರ ಹಡಗಿನ ಉಪಕರಣಗಳನ್ನು ತಮ್ಮ ಕೈಯಾರೆ ಎಸೆದು ಬಿಟ್ಟರು. 20 ಅನೇಕ ದಿನಗಳವರೆಗೆ ನಾವು ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಬಿರುಗಾಳಿಯು ಭೀಕರವಾಗಿತ್ತು. ನಾವು ಜೀವಸಹಿತ ಉಳಿಯುತ್ತೇವೆ ಎಂಬ ನಿರೀಕ್ಷೆ ಕಳೆದುಹೋಯಿತು. ನಾವು ಸಾಯುತ್ತೇವೆ ಎಂದು ಭಾವಿಸಿಕೊಂಡೆವು.
21 ಆ ಜನರು ಬಹಳ ದಿನಗಳವರೆಗೆ ಊಟಮಾಡಲಿಲ್ಲ. ಆಗ ಒಂದು ದಿನ ಪೌಲನು ಎದ್ದುನಿಂತುಕೊಂಡು ಅವರಿಗೆ, “ಜನರೇ, ಕ್ರೇಟ್ ದ್ವೀಪದಿಂದ ಹೊರಡಬೇಡಿರಿ ಎಂದು ನಾನು ನಿಮಗೆ ಹೇಳಿದೆ. ನೀವು ನನ್ನ ಮಾತನ್ನು ಕೇಳಬೇಕಿತ್ತು. ಆಗ ನಿಮಗೆ ಇಷ್ಟು ಕಷ್ಟವಾಗಲಿ ನಷ್ಟವಾಗಲಿ ಆಗುತ್ತಿರಲಿಲ್ಲ. 22 ಈಗಲಾದರೋ ನೀವು ಸಂತೋಷದಿಂದ ಇರಬೇಕೆಂದು ನಾನು ನಿಮಗೆ ಹೇಳುತ್ತಿದ್ದೇನೆ. ನಿಮ್ಮಲ್ಲಿ ಒಬ್ಬರೂ ಸಾಯುವುದಿಲ್ಲ! ಆದರೆ ಹಡಗು ನಾಶವಾಗುವುದು. 23 ಕಳೆದ ರಾತ್ರಿ ದೇವರ ಬಳಿಯಿಂದ ದೂತನೊಬ್ಬನು ನನ್ನ ಬಳಿಗೆ ಬಂದಿದ್ದನು. ಆ ದೇವರನ್ನೇ ನಾನು ಆರಾಧಿಸುವುದು. ನಾನು ಆತನವನು. 24 ದೇವರ ದೂತನು, ‘ಪೌಲನೇ, ಭಯಪಡಬೇಡ! ನೀನು ಸೀಸರನ ಮುಂದೆ ನಿಂತುಕೊಳ್ಳಬೇಕು. ನಿನ್ನೊಂದಿಗೆ ನೌಕಾಯಾನ ಮಾಡತ್ತಿರುವ ಎಲ್ಲಾ ಜನರ ಪ್ರಾಣಗಳನ್ನು ಉಳಿಸುವುದಾಗಿ ದೇವರು ನಿನಗೆ ವಾಗ್ದಾನವನ್ನು ಮಾಡಿದ್ದಾನೆ’ ಎಂದು ಹೇಳಿದನು. 25 ಆದ್ದರಿಂದ ಜನರೇ, ಸಂತೋಷದಿಂದಿರಿ! ನಾನು ದೇವರಲ್ಲಿ ಭರವಸೆಯಿಟ್ಟಿದ್ದೇನೆ. ಆತನ ದೂತನು ಹೇಳಿದಂತೆ ಪ್ರತಿಯೊಂದೂ ನೆರವೇರುವುದು. 26 ಆದರೆ ನಾವು ಒಂದು ದ್ವೀಪದ ದಡವನ್ನು ತಲುಪಬೇಕಾಗಿದೆ” ಎಂದು ಹೇಳಿದನು.
27 ಹದಿನಾಲ್ಕನೆಯ ರಾತ್ರಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡುತ್ತಾ ಪ್ರಯಾಣವನ್ನು ಮುಂದುವರಿಸಿದೆವು. ನಾವು ಭೂಮಿಗೆ ಸಮೀಪವಾಗಿದ್ದೇವೆಂದು ನಾವಿಕರು ಆಲೋಚಿಸಿಕೊಂಡರು. 28 ಅವರು ಅಳತೆ ಗುಂಡನ್ನು ಹಗ್ಗದ ತುದಿಗೆ ಕಟ್ಟಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ನೀರು ನೂರಿಪ್ಪತ್ತು ಅಡಿ ಆಳವಾಗಿತ್ತು. ಅವರು ಇನ್ನೂ ಸ್ವಲ್ಪದೂರ ಹೋಗಿ ಹಗ್ಗವನ್ನು ನೀರಿನಲ್ಲಿ ಇಳಿಯಬಿಟ್ಟರು. ಅಲ್ಲಿ ನೀರಿನ ಆಳ ತೊಂಭತ್ತು ಅಡಿಯಿತ್ತು. 29 ಹಡಗು ಬಂಡೆಗೆ ಅಪ್ಪಳಿಸಬಹುದೆಂದು ನಾವಿಕರು ಭಯಪಟ್ಟರು. ಆದ್ದರಿಂದ ಅವರು ನಾಲ್ಕು ಲಂಗರುಗಳನ್ನು ನೀರಿನೊಳಗೆ ಇಳಿಯಬಿಟ್ಟರು. ಬಳಿಕ ಅವರು ಬೆಳಗಾಗಲೆಂದು ಪ್ರಾರ್ಥಿಸಿದರು. 30 ನಾವಿಕರಲ್ಲಿ ಕೆಲವರು ಹಡಗನ್ನು ಬಿಟ್ಟುಹೋಗಬೇಕೆಂದಿದ್ದರು. ಅವರು ದೋಣಿಯನ್ನು ನೀರಿಗೆ ಇಳಿಸಿ, ಹಡಗಿನ ಮುಂಭಾಗದಲ್ಲಿ ಇನ್ನೂ ಕೆಲವು ಲಂಗರುಗಳನ್ನು ಇಳಿಸುವವರಂತೆ ನಟಿಸಿದರು. 31 ಆದರೆ ಪೌಲನು ಸೇನಾಧಿಕಾರಿಗೆ ಮತ್ತು ಇತರ ಸೈನಿಕರಿಗೆ, “ಈ ನಾವಿಕರು ಹಡಗಿನಲ್ಲಿ ಇರದಿದ್ದರೆ ನಿಮ್ಮ ಪ್ರಾಣಗಳು ಉಳಿಯಲು ಸಾಧ್ಯವಿಲ್ಲ” ಎಂದು ಹೇಳಿದನು. 32 ಆದ್ದರಿಂದ ಸೈನಿಕರು ಹಗ್ಗಗಳನ್ನು ಕತ್ತರಿಸಿ ದೋಣಿಯನ್ನು ನೀರುಪಾಲು ಮಾಡಿದರು.
33 ಇನ್ನೂ ಬೆಳಕಾಗುತ್ತಿರುವಾಗಲೇ ಏನಾದರೂ ತಿನ್ನುವಂತೆ ಪೌಲನು ಅವರನ್ನು ಒತ್ತಾಯಿಸುತ್ತಾ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಊಟವನ್ನೇ ಮಾಡಿಲ್ಲ. 34 ಈಗ ನೀವು ಸ್ವಲ್ಪವಾದರೂ ತಿನ್ನುವಂತೆ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ಜೀವಂತವಾಗಿ ಉಳಿಯಬೇಕಾದರೆ ನಿಮಗೆ ಊಟ ಅವಶ್ಯಕವಾಗಿದೆ. ನಿಮ್ಮಲ್ಲಿರುವ ಯಾರೂ ನಿಮ್ಮ ತಲೆಕೂದಲುಗಳಲ್ಲಿ ಒಂದನ್ನಾದರೂ ಕಳೆದುಕೊಳ್ಳುವುದಿಲ್ಲ” ಎಂದು ಹೇಳಿದನು. 35 ಹೀಗೆ ಹೇಳಿದ ಬಳಿಕ, ಪೌಲನು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ಅವರೆಲ್ಲರ ಮುಂದೆ ದೇವರಿಗೆ ಸ್ತೋತ್ರ ಮಾಡಿದನು. ಬಳಿಕ ಅವನು ಒಂದು ತುಂಡನ್ನು ಮುರಿದು ತಿನ್ನತೊಡಗಿದನು. 36-37 ಆಗ ಜನರೆಲ್ಲರೂ ಪ್ರೋತ್ಸಾಹಗೊಂಡು ತಿನ್ನತೊಡಗಿದರು. ಆ ಹಡಗಿನಲ್ಲಿ ಇನ್ನೂರ ಎಪ್ಪತ್ತಾರು ಮಂದಿ ಇದ್ದರು. 38 ನಾವು ತೃಪ್ತಿಯಾಗುವಷ್ಟು ತಿಂದೆವು. ಬಳಿಕ ದವಸವನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದೆವು.
Kannada Holy Bible: Easy-to-Read Version. All rights reserved. © 1997 Bible League International