Revised Common Lectionary (Semicontinuous)
8 ಜನಾಂಗಗಳೇ, ನಮ್ಮ ದೇವರನ್ನು ಕೊಂಡಾಡಿರಿ.
ಆತನಿಗೆ ಸ್ತುತಿಗೀತೆಗಳನ್ನು ಹಾಡಿರಿ.
9 ನಮಗೆ ಜೀವಕೊಟ್ಟವನು ಆತನೇ.
ನಮ್ಮನ್ನು ಕಾಪಾಡುವವನೂ ಆತನೇ.
10 ಜನರು ಬೆಳ್ಳಿಯನ್ನು ಬೆಂಕಿಯಿಂದ ಶೋಧಿಸುವಂತೆ ದೇವರು ನಮ್ಮನ್ನು ಪರೀಕ್ಷಿಸಿದನು.
11 ದೇವರೇ, ನೀನು ನಮ್ಮನ್ನು ಬಲೆಯಲ್ಲಿ ಸಿಕ್ಕಿಸಿದೆ.
ನೀನು ನಮಗೆ ಭಾರವಾದ ಹೊರೆಗಳನ್ನು ಹೊರಿಸಿದೆ;
12 ಶತ್ರುಗಳು ನಮ್ಮ ಮೇಲೆ ನಡೆಯಮಾಡಿದೆ.
ನೀನು ನಮ್ಮನ್ನು ಬೆಂಕಿಯಲ್ಲಿಯೂ ನೀರಿನಲ್ಲಿಯೂ ಹಾಯಿಸಿದೆ.
ಆದರೂ ಸುರಕ್ಷಿತ ಸ್ಥಳಕ್ಕೆ ನಮ್ಮನ್ನು ತಂದು ಸೇರಿಸಿದೆ.
13 ಆದ್ದರಿಂದ ನಾನು ನಿನ್ನ ಆಲಯಕ್ಕೆ ಬಂದು ಯಜ್ಞಗಳನ್ನು ನಿನಗೆ ಸಮರ್ಪಿಸುವೆನು.
14 ನಾನು ಇಕ್ಕಟ್ಟಿನಲ್ಲಿದ್ದಾಗ ಸಹಾಯಕ್ಕಾಗಿ ನಿನ್ನನ್ನು ಕೂಗಿಕೊಂಡಾಗ
ಮಾಡಿದ ಹರಕೆಗಳನ್ನು ಸಲ್ಲಿಸುವೆನು.
15 ಪಾಪಪರಿಹಾರಕ ಯಜ್ಞಗಳನ್ನು ನಿನಗೆ ಅರ್ಪಿಸುವೆನು;
ಟಗರುಗಳನ್ನೂ ಧೂಪವನ್ನೂ ಅರ್ಪಿಸುವೆನು;
ಹೋರಿಗಳನ್ನೂ ಹೋತಗಳನ್ನೂ ಅರ್ಪಿಸುವೆನು.
16 ದೇವಭಕ್ತರೆಲ್ಲರೂ ಬನ್ನಿರಿ,
ದೇವರು ನನಗೋಸ್ಕರ ಮಾಡಿರುವುದನ್ನು ನಿಮಗೆ ತಿಳಿಸುವೆನು.
17 ನಾನು ಆತನಿಗೆ ಪ್ರಾರ್ಥಿಸಿದೆನು;
ಆತನನ್ನು ಸ್ತುತಿಸಿದೆನು.
18 ನನ್ನ ಶುದ್ಧಹೃದಯವನ್ನು ಕಂಡು
ಯೆಹೋವನು ಕಿವಿಗೊಟ್ಟನು.
19 ದೇವರು ನನ್ನ ಮೊರೆಯನ್ನು ಕೇಳಿದನು;
ನನ್ನ ಪ್ರಾರ್ಥನೆಯನ್ನು ಆಲಿಸಿದನು.
20 ದೇವರಿಗೆ ಸ್ತೋತ್ರವಾಗಲಿ!
ಆತನು ನನಗೆ ವಿಮುಖನಾಗದೆ,
ನನ್ನ ಪ್ರಾರ್ಥನೆಯನ್ನು ಆಲಿಸಿ, ತನ್ನ ಪ್ರೀತಿಯನ್ನು ತೋರಿದನು!
5 ಭೂಮಿಯ ಮೇಲಿರುವ ಜನರು ತುಂಬ ದುಷ್ಟರಾಗಿದ್ದು ಯಾವಾಗಲೂ ಕೆಟ್ಟವಿಷಯಗಳ ಬಗ್ಗೆ ಆಲೋಚಿಸುತ್ತಿರುವುದನ್ನು ಯೆಹೋವನು ನೋಡಿದನು. 6 ಭೂಮಿಯ ಮೇಲೆ ತಾನು ಮನುಷ್ಯರನ್ನು ಸೃಷ್ಟಿಸಿದ್ದಕ್ಕಾಗಿ ಯೆಹೋವನು ದುಃಖಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು.
7 ಆದ್ದರಿಂದ ಯೆಹೋವನು, “ನಾನು ಸೃಷ್ಟಿಸಿದ ಜನರನ್ನೆಲ್ಲ ಭೂಮುಖದಿಂದ ನಾಶಮಾಡುವೆನು. ಪ್ರತಿಯೊಬ್ಬ ಮನುಷ್ಯನನ್ನೂ ಪ್ರತಿಯೊಂದು ಪ್ರಾಣಿಯನ್ನೂ ನೆಲದ ಮೇಲೆ ಹರಿದಾಡುವ ಪ್ರತಿಯೊಂದು ಜಂತುವನ್ನೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳನ್ನೂ ನಾಶಮಾಡುವೆನು. ಇವುಗಳನ್ನೆಲ್ಲಾ ಸೃಷ್ಟಿಸಿದ್ದರಿಂದ ನನಗೆ ದುಃಖವಾಯಿತು” ಅಂದುಕೊಂಡನು.
8 ಆದರೆ ಯೆಹೋವನಿಗೆ ಮೆಚ್ಚಿಕೆಯಾಗುವಂತೆ ನಡೆದುಕೊಂಡ ಒಬ್ಬ ಮನುಷ್ಯನಿದ್ದನು. ಅವನೇ ನೋಹ.
ನೋಹ ಮತ್ತು ಮಹಾ ಜಲಪ್ರಳಯ
9 ಇದು ನೋಹನ ಚರಿತ್ರೆ. ಅವನು ತನ್ನ ಜೀವಮಾನವೆಲ್ಲಾ ನೀತಿವಂತನಾಗಿದ್ದನು; ಯಾವಾಗಲೂ ದೇವರನ್ನೇ ಅನುಸರಿಸುತ್ತಿದ್ದನು. 10 ಅವನಿಗೆ ಮೂವರು ಗಂಡುಮಕ್ಕಳಿದ್ದರು: ಶೇಮ್, ಹಾಮ್, ಯೆಫೆತ್.
11-12 ದೇವರು ಭೂಮಿಯ ಕಡೆಗೆ ನೋಡಿದಾಗ ಜನರಿಂದ ಅದು ಕೆಟ್ಟುಹೋಗಿರುವುದನ್ನು ಕಂಡನು. ಎಲ್ಲೆಲ್ಲೂ ಹಿಂಸೆ ತುಂಬಿಕೊಂಡಿತ್ತು; ಜನರು ದುಷ್ಟರಾಗಿಯೂ ಕ್ರೂರಿಗಳಾಗಿಯೂ ತಮ್ಮ ಜೀವಿತವನ್ನು ಕೆಡಿಸಿಕೊಂಡಿದ್ದರು.
13 ಆದ್ದರಿಂದ ದೇವರು ನೋಹನಿಗೆ, “ನಾನು ಎಲ್ಲಾ ಜನರಿಗೂ ಅಂತ್ಯವನ್ನು ಬರಮಾಡಬೇಕೆಂದಿದ್ದೇನೆ; ಯಾಕೆಂದರೆ ಅವರು ಕೋಪ, ಹಿಂಸೆಗಳಿಂದ ಭೂಮಿಯನ್ನು ತುಂಬಿಸಿದ್ದಾರೆ. ಆದಕಾರಣ ನಾನು ಎಲ್ಲಾ ಜೀವಿಗಳನ್ನು ನಾಶಮಾಡುವೆನು. 14 ನಿನಗೋಸ್ಕರ ಒಂದು ನಾವೆಯನ್ನು ತುರಾಯಿ ಮರದಿಂದ ತಯಾರಿಸು. ಆ ನಾವೆಯಲ್ಲಿ ಕೋಣೆಗಳನ್ನು ಮಾಡು. ಇಡೀ ನಾವೆಗೆ ಒಳಭಾಗದಲ್ಲೂ ಹೊರಭಾಗದಲ್ಲೂ ರಾಳವನ್ನು ಹಚ್ಚು.
15 “ನೀನು ತಯಾರಿಸುವ ನಾವೆಯು ನಾನೂರೈವತ್ತು ಅಡಿ ಉದ್ದವಾಗಿಯೂ ಎಪ್ಪತ್ತೈದು ಅಡಿ ಅಗಲವಾಗಿಯೂ ನಲವತ್ತೈದು ಅಡಿ ಎತ್ತರವಾಗಿಯೂ ಇರಬೇಕು. 16 ಕಿಟಕಿಯ ಮೇಲ್ಛಾವಣಿಗೆ ಹದಿನೆಂಟು ಇಂಚು ಕೆಳಗಿರಲಿ. ನಾವೆಯ ಪಾರ್ಶ್ವದಲ್ಲಿ ಬಾಗಿಲಿರಲಿ. ನಾವೆಯಲ್ಲಿ ಮೇಲಂತಸ್ತು ಮಧ್ಯಂತಸ್ತು ಮತ್ತು ಕೆಳಂತಸ್ತು ಎಂಬ ಮೂರು ಅಂತಸ್ತುಗಳಿರಲಿ.
17 “ನಾನು ನಿನಗೆ ಹೇಳುತ್ತಿರುವುದನ್ನು ಅರ್ಥಮಾಡಿಕೊ. ನಾನು ಭೂಮಿಯ ಮೇಲೆ ಮಹಾ ಜಲಪ್ರಳಯವನ್ನು ತರುವೆನು. ಆಕಾಶದ ಕೆಳಗಿರುವ ಎಲ್ಲಾ ಜೀವಿಗಳನ್ನು ನಾಶಮಾಡುವೆನು. ಭೂಮಿಯ ಮೇಲಿರುವ ಪ್ರತಿಯೊಂದೂ ಸಾಯುವುದು. 18 ನಾನು ನಿನ್ನೊಂದಿಗೆ ವಿಶೇಷ ಒಡಂಬಡಿಕೆಯನ್ನು ಮಾಡಿಕೊಳ್ಳುವೆ. ಅದೇನೆಂದರೆ, ನೀನು ಮತ್ತು ನಿನ್ನ ಹೆಂಡತಿ, ನಿನ್ನ ಗಂಡುಮಕ್ಕಳು ಮತ್ತು ಸೊಸೆಯಂದಿರು ನಾವೆಯೊಳಗೆ ಹೋಗುವಿರಿ. 19 ಇದಲ್ಲದೆ, ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯಲ್ಲಿ ಒಂದು ಗಂಡನ್ನೂ ಒಂದು ಹೆಣ್ಣನ್ನೂ ನಾವೆಯೊಳಗೆ ಸೇರಿಸಿಕೊ. ನಿನ್ನೊಡನೆ ಅವುಗಳನ್ನು ಜೀವದಿಂದುಳಿಸಿ ಕಾಪಾಡು. 20 ಭೂಮಿಯ ಮೇಲಿರುವ ಪ್ರತಿಯೊಂದು ಬಗೆಯ ಪಕ್ಷಿಗಳಲ್ಲಿ ಎರಡೆರಡೂ ಪ್ರತಿಯೊಂದು ಪ್ರಾಣಿಗಳಲ್ಲಿ ಎರಡೆರಡೂ ಮತ್ತು ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಜಂತುಗಳಲ್ಲಿ ಎರಡೆರಡೂ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕಾಗಿ ನಿನ್ನೊಂದಿಗಿರಲಿ. 21 ಭೂಮಿಯ ಮೇಲೆ ದೊರೆಯುವ ಎಲ್ಲಾ ಬಗೆಯ ಆಹಾರವನ್ನು ನಿಮಗಾಗಿಯೂ ಮತ್ತು ಪ್ರಾಣಿಗಳಿಗಾಗಿಯೂ ನಾವೆಯಲ್ಲಿ ತುಂಬಿಸಿಕೊ” ಎಂದು ಹೇಳಿದನು.
22 ದೇವರು ಆಜ್ಞಾಪಿಸಿದಂತೆಯೇ ನೋಹನು ಮಾಡಿದನು.
ರೋಮಿಗೆ ಪೌಲನ ನೌಕಾಯಾನ
27 ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾಯಿತು. ಪೌಲನಿಗೂ ಇತರ ಕೆಲವು ಕೈದಿಗಳಿಗೂ ಜೂಲಿಯಸ್ ಎಂಬ ಸೇನಾಧಿಕಾರಿಯು ಕಾವಲಾಗಿದ್ದನು. ಜೂಲಿಯಸನು ಚಕ್ರವರ್ತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದನು. 2 ನಾವು ಹಡಗನ್ನು ಹತ್ತಿ ಅಲ್ಲಿಂದ ಹೊರಟೆವು. ಆ ಹಡಗು ಅದ್ರಮಿತ್ತಿ ಪಟ್ಟಣದಿಂದ ಬಂದಿತ್ತು ಮತ್ತು ಏಷ್ಯಾದ ಬೇರೆಬೇರೆ ಸ್ಥಳಗಳಿಗೆ ಹೋಗಲು ಸಿದ್ಧವಾಗಿತ್ತು. ಅರಿಸ್ತಾರ್ಕನು ನಮ್ಮೊಂದಿಗೆ ಬಂದನು. ಅವನು ಮಕೆದೋನಿಯಕ್ಕೆ ಸೇರಿದ ಥೆಸಲೋನಿಕ ಪಟ್ಟಣದವನು.
3 ಮರುದಿನ ನಾವು ಸಿದೋನ್ ಪಟ್ಟಣಕ್ಕೆ ಬಂದೆವು. ಜೂಲಿಯಸನು ಪೌಲನ ಬಗ್ಗೆ ಕನಿಕರವುಳ್ಳವನಾಗಿದ್ದನು. ಸ್ನೇಹಿತರ ಬಳಿಗೆ ಹೋಗಿ ಅವರನ್ನು ಭೇಟಿಯಾಗಲು ಅವನು ಪೌಲನಿಗೆ ಸ್ವತಂತ್ರವನ್ನು ಕೊಟ್ಟನು. ಸ್ನೇಹಿತರು ಪೌಲನ ಅಗತ್ಯತೆಗಳನ್ನು ಪೂರೈಸಿದನು. 4 ನಾವು ಸಿದೋನ್ ಪಟ್ಟಣದಿಂದ ಹೊರಟೆವು. ಎದುರುಗಾಳಿ ಬೀಸುತ್ತಿದ್ದ ಕಾರಣ ನಾವು ಸೈಪ್ರಸ್ ದ್ವೀಪದ ಸಮೀಪದಲ್ಲಿ ನೌಕಾಯಾನ ಮಾಡಿದೆವು. 5 ಸಿಲಿಸಿಯಾಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ನಾವು ದಾಟಿದೆವು. ಬಳಿಕ ನಾವು ಲುಸಿಯ ಪ್ರಾಂತ್ಯದಲ್ಲಿರುವ “ಮುರ” ಎಂಬ ಊರಿಗೆ ಬಂದೆವು. 6 ಅಲೆಕ್ಸಾಂಡ್ರಿಯಾದಿಂದ ಬಂದ ಹಡಗೊಂದು “ಮುರ”ದಲ್ಲಿ ಇದ್ದುದ್ದನ್ನು ಸೇನಾಧಿಕಾರಿಯು ಕಂಡನು. ಈ ಹಡಗು ಇಟಲಿಗೆ ಹೋಗಲಿತ್ತು. ಆದ್ದರಿಂದ ಅವನು ನಮ್ಮನ್ನು ಆ ಹಡಗಿಗೆ ಹತ್ತಿಸಿದನು.
7 ನಾವು ಅನೇಕ ದಿನಗಳವರೆಗೆ ನಿಧಾನವಾಗಿ ನೌಕಾಯಾನ ಮಾಡಿದೆವು. ಎದುರುಗಾಳಿ ಬೀಸುತ್ತಿದ್ದುದರಿಂದ ನಾವು ಸ್ನೀಡ ಪಟ್ಟಣವನ್ನು ತಲುಪುವುದೇ ಕಷ್ಟವಾಯಿತು. ಆ ಮಾರ್ಗದಲ್ಲಿ ಇನ್ನೂ ಮುಂದೆ ಪ್ರಯಾಣ ಮಾಡಲು ನಮಗೆ ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಸಾಲ್ಮೊನೆಯ ಸಮೀಪದಲ್ಲಿದ್ದ ಕ್ರೇಟ್ ದ್ವೀಪದ ದಕ್ಷಿಣದ ಭಾಗದಲ್ಲಿ ನೌಕಾಯಾನ ಮಾಡಿದೆವು. 8 ನಾವು ಪ್ರಯಾಸದಿಂದ ಕರಾವಳಿಯಲ್ಲೇ ನೌಕಾಯಾನ ಮಾಡಿದೆವು. ಬಳಿಕ ನಾವು “ಸುರಕ್ಷಿತ ರೇವು” ಎಂಬ ಸ್ಥಳಕ್ಕೆ ಬಂದೆವು. ಲಸಾಯ ಪಟ್ಟಣವು ಅದರ ಸಮೀಪದಲ್ಲಿತ್ತು.
9 ಆದರೆ ನಾವು ಬಹಳ ಸಮಯವನ್ನು ಕಳೆದುಕೊಂಡಿದ್ದೆವು. ಈಗ ನೌಕಾಯಾನ ಮಾಡುವುದು ಅಪಾಯಕರವಾಗಿತ್ತು. ಯಾಕೆಂದರೆ ಯೆಹೂದ್ಯರ ಉಪವಾಸ ದಿನ[a] ಆಗಲೇ ಕಳೆದಿತ್ತು. 10 ಆದ್ದರಿಂದ ಪೌಲನು ಅವರಿಗೆ, “ಜನರೇ, ಈ ಪ್ರಯಾಣದಲ್ಲಿ ನಮಗೆ ಬಹಳ ತೊಂದರೆಯಿದೆ ಎಂದು ನನಗೆ ತೋರುತ್ತದೆ. ಹಡಗು ಮತ್ತು ಹಡಗಿನಲ್ಲಿರುವ ವಸ್ತುಗಳು ನಾಶವಾಗುತ್ತವೆ. ನಮ್ಮ ಪ್ರಾಣಗಳು ಸಹ ನಷ್ಟವಾಗಬಹುದು!” ಎಂದು ಎಚ್ಚರಿಸಿದನು. 11 ಆದರೆ ನೌಕೆಯ ನಾಯಕನು ಮತ್ತು ನೌಕೆಯ ಯಜಮಾನನು ಪೌಲನ ಮಾತನ್ನು ಒಪ್ಪಿಕೊಳ್ಳಲಿಲ್ಲ. ಆದುದರಿಂದ ಸೇನಾಧಿಕಾರಿಯು ಪೌಲನ ಮಾತಿಗೆ ಗಮನ ಕೊಡದೆ, ನೌಕೆಯ ನಾಯಕನು ಮತ್ತು ಯಜಮಾನನು ಹೇಳಿದ ಮಾತುಗಳನ್ನು ನಂಬಿದನು. 12 ಆ ರೇವು (ಸುರಕ್ಷಿತ ರೇವು) ಚಳಿಗಾಲದಲ್ಲಿ ಹಡಗು ನಿಲ್ಲುವುದಕ್ಕೆ ಒಳ್ಳೆಯ ಸ್ಥಳವಾಗಿರಲಿಲ್ಲ. ಆದ್ದರಿಂದ ಹಡಗು ಅಲ್ಲಿಂದ ಹೊರಡಲೇಬೇಕೆಂದು ಹೆಚ್ಚುಮಂದಿ ನಿರ್ಧರಿಸಿದರು. ನಾವು ಫೆನಿಕ್ಸ್‌ಗೆ ತಲುಪಬಹುದೆಂದು ಅವರ ನಿರೀಕ್ಷೆಯಾಗಿತ್ತು. ಚಳಿಗಾಲದಲ್ಲಿ ಹಡಗು ಅಲ್ಲಿ ತಂಗಬಹುದಾಗಿತ್ತು. ಫೆನಿಕ್ಸ್ ಕ್ರೇಟ್ ದ್ವೀಪದ ಒಂದು ಪಟ್ಟಣ. ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದ್ದ ಬಂದರನ್ನು ಅದು ಹೊಂದಿತ್ತು.
Kannada Holy Bible: Easy-to-Read Version. All rights reserved. © 1997 Bible League International