Revised Common Lectionary (Semicontinuous)
ಹಿಂಸೆ ಸಂಕಟಗಳಲ್ಲಿರುವವನ ಪ್ರಾರ್ಥನೆ.
102 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ಸಹಾಯಕ್ಕಾಗಿ ನಾನಿಡುವ ಮೊರೆಯನ್ನು ಲಾಲಿಸು.
2 ಯೆಹೋವನೇ, ನಾನು ಆಪತ್ತುಗಳಲ್ಲಿರುವಾಗ ನನಗೆ ವಿಮುಖನಾಗಬೇಡ, ನನಗೆ ಕಿವಿಗೊಡು.
ಸಹಾಯಕ್ಕಾಗಿ ಮೊರೆಯಿಡುವಾಗ ಬೇಗನೆ ಸದುತ್ತರವನ್ನು ದಯಪಾಲಿಸು.
3 ನನ್ನ ಜೀವಮಾನವು ಹೊಗೆಯಂತೆ ಕಣ್ಮರೆಯಾಗುತ್ತಿದೆ.
ನನ್ನ ಎಲುಬುಗಳು ಬೆಂಕಿಯಂತೆ ಸುಟ್ಟುಹೋಗುತ್ತಿವೆ.
4 ನಾನು ನಿರ್ಬಲನಾಗಿ ಒಣಗಿಹೋಗುತ್ತಿರುವ ಹುಲ್ಲಿನಂತಿದ್ದೇನೆ.
ನಾನು ಊಟವನ್ನೂ ಮರೆತುಬಿಡುವೆನು.
5 ದೀರ್ಘ ದುಃಖದಿಂದಾಗಿ
ನನ್ನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡಿವೆ.
6 ಅರಣ್ಯದಲ್ಲಿರುವ ಗೂಬೆಯಂತೆ ಒಬ್ಬಂಟಿಗನಾಗಿದ್ದೇನೆ.
ಪಾಳುಬಿದ್ದ ಕಟ್ಟಡಗಳಲ್ಲಿರುವ ಗೂಬೆಯಂತೆ ನಾನು ಒಬ್ಬಂಟಿಗನಾಗಿದ್ದೇನೆ.
7 ನನಗೆ ನಿದ್ರೆಯೂ ಬಾರದು.
ಮೇಲ್ಛಾವಣಿಗೆಯ ಮೇಲಿರುವ ಏಕಾಂಗಿಯಾದ ಪಕ್ಷಿಯಂತೆ ನಾನಿದ್ದೇನೆ.
8 ನನ್ನ ವೈರಿಗಳು ನನಗೆ ಅವಮಾನ ಮಾಡುತ್ತಲೇ ಇರುವರು.
ಅವರು ನನ್ನನ್ನು ದೃಷ್ಟಾಂತಮಾಡಿ ಶಪಿಸುವರು.
9 ನನ್ನ ದುಃಖವೇ ನನಗೆ ಆಹಾರವಾಯಿತು.
ಕಣ್ಣೀರು ನನ್ನ ಪಾನೀಯದೊಳಗೆ ತೊಟ್ಟಿಕ್ಕುತ್ತಿದೆ.
10 ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ.
ನೀನು ನನ್ನನ್ನು ಮೇಲೆತ್ತಿ ಎಸೆದುಬಿಟ್ಟೆಯಲ್ಲಾ!
11 ನನ್ನ ಜೀವಮಾನವು ಸಂಜೆಯ ನೆರಳಿನಂತೆ ಕೊನೆಗೊಂಡಿದೆ.
ನಾನು ಒಣಗಿ ಸಾಯುತ್ತಿರುವ ಹುಲ್ಲಿನಂತಿದ್ದೇನೆ.
12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.
13 ಜ್ಞಾನವನ್ನು ಕಂಡುಕೊಂಡು ವಿವೇಕವನ್ನು ಸಂಪಾದಿಸಿಕೊಳ್ಳುವವನೇ ಭಾಗ್ಯವಂತನು. 14 ಜ್ಞಾನವು ಬೆಳ್ಳಿಗಿಂತಲೂ ಲಾಭದಾಯಕ. ಅದರ ಆದಾಯವು ಬಂಗಾರಕ್ಕಿಂತಲೂ ಅಧಿಕ. 15 ಜ್ಞಾನವು ರತ್ನಕ್ಕಿಂತಲೂ ಅಮೂಲ್ಯವಾದದ್ದು. ನಿನ್ನ ಇಷ್ಟ ವಸ್ತುಗಳಲ್ಲಿ ಯಾವುದೂ ಅದಕ್ಕೆ ಸಮವಿಲ್ಲ.
16 ಜ್ಞಾನವೆಂಬಾಕೆಯ ಬಲಗೈಯಿಂದ ದೀರ್ಘಾಯುಷ್ಯವೂ ಎಡಗೈಯಿಂದ ಐಶ್ವರ್ಯವೂ ಘನತೆಯೂ ಬರುವವು. 17 ಜ್ಞಾನವು ನಿನ್ನ ಜೀವನವನ್ನು ಸುಖಕರವನ್ನಾಗಿ ಮಾಡುತ್ತದೆ; ಸಮಾಧಾನವನ್ನು ಬರಮಾಡುತ್ತದೆ. 18 ಜ್ಞಾನವು ತನ್ನನ್ನು ಅವಲಂಬಿಸಿಕೊಳ್ಳುವವರಿಗೆ ಜೀವದಾಯಕ ಮರದಂತಿದೆ. ಅದನ್ನು ಹೊಂದಿರುವವರು ಧನ್ಯರಾಗಿದ್ದಾರೆ.
ಪಾಪವಿಮೋಚನೆಯ ಬಗ್ಗೆ ಯೇಸುವಿನ ಉಪದೇಶ
31 ಆದ್ದರಿಂದ ಯೇಸು ತನ್ನಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ, “ನೀವು ನನ್ನ ಉಪದೇಶಕ್ಕೆ ವಿಧೇಯರಾಗಿದ್ದರೆ, ನೀವು ನಿಜವಾಗಿಯೂ ನನ್ನ ಹಿಂಬಾಲಕರಾಗಿದ್ದೀರಿ. 32 ನೀವು ಸತ್ಯವನ್ನು ತಿಳಿದುಕೊಳ್ಳುವಿರಿ. ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವುದು” ಎಂದು ಹೇಳಿದನು.
33 ಯೆಹೂದ್ಯರು, “ನಾವು ಅಬ್ರಹಾಮನ ಮಕ್ಕಳು. ನಾವೆಂದೂ ಯಾರ ಗುಲಾಮರೂ ಆಗಿರಲಿಲ್ಲ. ಹೀಗಿದ್ದರೂ, ನಮಗೆ ಬಿಡುಗಡೆ ಆಗುವುದೆಂದು ನೀನು ಹೇಳುವುದೇಕೆ?” ಎಂದು ಉತ್ತರಕೊಟ್ಟರು.
34 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಪಾಪಮಾಡುವ ಪ್ರತಿಯೊಬ್ಬನೂ ಪಾಪಕ್ಕೆ ಗುಲಾಮನಾಗಿದ್ದಾನೆ. ಪಾಪವು ಅವನ ಯಜಮಾನನಾಗಿದೆ. 35 ಗುಲಾಮನು ಒಂದು ಮನೆಯಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಮಗನು ಕುಟುಂಬಕ್ಕೆ ಶಾಶ್ವತವಾಗಿ ಸೇರಿದವನಾಗಿದ್ದಾನೆ. 36 ಆದ್ದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ, ನೀವು ನಿಜವಾಗಿಯೂ ಬಿಡುಗಡೆಯಾಗಿರುವಿರಿ. 37 ನೀವು ಅಬ್ರಹಾಮನ ಮಕ್ಕಳೆಂದು ನನಗೆ ಗೊತ್ತಿದೆ. ಆದರೆ ನೀವು ನನ್ನನ್ನು ಕೊಲ್ಲಬೇಕೆಂದಿದ್ದೀರಿ. ಏಕೆಂದರೆ ನನ್ನ ಉಪದೇಶವನ್ನು ಸ್ವೀಕರಿಸಿಕೊಳ್ಳಲು ನಿಮಗೆ ಇಷ್ಟವಿಲ್ಲ. 38 ನನ್ನ ತಂದೆಯು ನನಗೆ ತೋರಿಸಿರುವುದನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ನೀವಾದರೋ ನಿಮ್ಮ ತಂದೆ ನಿಮಗೆ ಹೇಳಿದ ಸಂಗತಿಗಳನ್ನೇ ಮಾಡುತ್ತೀರಿ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International