Revised Common Lectionary (Semicontinuous)
ಹಿಂಸೆ ಸಂಕಟಗಳಲ್ಲಿರುವವನ ಪ್ರಾರ್ಥನೆ.
102 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
ಸಹಾಯಕ್ಕಾಗಿ ನಾನಿಡುವ ಮೊರೆಯನ್ನು ಲಾಲಿಸು.
2 ಯೆಹೋವನೇ, ನಾನು ಆಪತ್ತುಗಳಲ್ಲಿರುವಾಗ ನನಗೆ ವಿಮುಖನಾಗಬೇಡ, ನನಗೆ ಕಿವಿಗೊಡು.
ಸಹಾಯಕ್ಕಾಗಿ ಮೊರೆಯಿಡುವಾಗ ಬೇಗನೆ ಸದುತ್ತರವನ್ನು ದಯಪಾಲಿಸು.
3 ನನ್ನ ಜೀವಮಾನವು ಹೊಗೆಯಂತೆ ಕಣ್ಮರೆಯಾಗುತ್ತಿದೆ.
ನನ್ನ ಎಲುಬುಗಳು ಬೆಂಕಿಯಂತೆ ಸುಟ್ಟುಹೋಗುತ್ತಿವೆ.
4 ನಾನು ನಿರ್ಬಲನಾಗಿ ಒಣಗಿಹೋಗುತ್ತಿರುವ ಹುಲ್ಲಿನಂತಿದ್ದೇನೆ.
ನಾನು ಊಟವನ್ನೂ ಮರೆತುಬಿಡುವೆನು.
5 ದೀರ್ಘ ದುಃಖದಿಂದಾಗಿ
ನನ್ನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡಿವೆ.
6 ಅರಣ್ಯದಲ್ಲಿರುವ ಗೂಬೆಯಂತೆ ಒಬ್ಬಂಟಿಗನಾಗಿದ್ದೇನೆ.
ಪಾಳುಬಿದ್ದ ಕಟ್ಟಡಗಳಲ್ಲಿರುವ ಗೂಬೆಯಂತೆ ನಾನು ಒಬ್ಬಂಟಿಗನಾಗಿದ್ದೇನೆ.
7 ನನಗೆ ನಿದ್ರೆಯೂ ಬಾರದು.
ಮೇಲ್ಛಾವಣಿಗೆಯ ಮೇಲಿರುವ ಏಕಾಂಗಿಯಾದ ಪಕ್ಷಿಯಂತೆ ನಾನಿದ್ದೇನೆ.
8 ನನ್ನ ವೈರಿಗಳು ನನಗೆ ಅವಮಾನ ಮಾಡುತ್ತಲೇ ಇರುವರು.
ಅವರು ನನ್ನನ್ನು ದೃಷ್ಟಾಂತಮಾಡಿ ಶಪಿಸುವರು.
9 ನನ್ನ ದುಃಖವೇ ನನಗೆ ಆಹಾರವಾಯಿತು.
ಕಣ್ಣೀರು ನನ್ನ ಪಾನೀಯದೊಳಗೆ ತೊಟ್ಟಿಕ್ಕುತ್ತಿದೆ.
10 ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ.
ನೀನು ನನ್ನನ್ನು ಮೇಲೆತ್ತಿ ಎಸೆದುಬಿಟ್ಟೆಯಲ್ಲಾ!
11 ನನ್ನ ಜೀವಮಾನವು ಸಂಜೆಯ ನೆರಳಿನಂತೆ ಕೊನೆಗೊಂಡಿದೆ.
ನಾನು ಒಣಗಿ ಸಾಯುತ್ತಿರುವ ಹುಲ್ಲಿನಂತಿದ್ದೇನೆ.
12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.
ಈಜಿಪ್ಟಿನಿಂದ ಪ್ರಯಾಣ
17 ಇಸ್ರೇಲರು ಈಜಿಪ್ಟನ್ನು ಬಿಟ್ಟುಹೋಗುವಂತೆ ಫರೋಹನು ಅನುಮತಿ ನೀಡಿದನು. ಇಸ್ರೇಲರು ಫಿಲಿಷ್ಟಿಯರ ದೇಶದ ಮೂಲಕ ಹಾದುಹೋಗುವ ರಸ್ತೆಯಲ್ಲಿ ಹೋಗಲು ಯೆಹೋವನು ಅನುಮತಿ ನೀಡಲಿಲ್ಲ. ಸಮುದ್ರದ ಮೂಲಕ ಹಾದುಹೋಗುವ ಆ ರಸ್ತೆ ಬಹಳ ಹತ್ತಿರವಾಗಿತ್ತು. ಆದರೆ ಯೆಹೋವನು, “ಇಸ್ರೇಲರು ಆ ದಾರಿಯಲ್ಲಿ ಹೋದರೆ, ಯುದ್ಧಮಾಡಬೇಕಾಗುವುದು. ಆಗ ಅವರು ತಮ್ಮ ಮನಸ್ಸುಗಳನ್ನು ಬದಲಾಯಿಸಿ ಈಜಿಪ್ಟಿಗೆ ಹಿಂತಿರುಗಬಹುದು” ಅಂದುಕೊಂಡನು. 18 ಆದ್ದರಿಂದ ಯೆಹೋವನು ಅವರನ್ನು ಕೆಂಪು ಸಮುದ್ರದ ಅರಣ್ಯದ ಮೂಲಕ ನಡೆಸಿದನು. ಇಸ್ರೇಲರು ಈಜಿಪ್ಟನ್ನು ಬಿಟ್ಟಾಗ ಯುದ್ಧವಸ್ತ್ರಗಳನ್ನು ಧರಿಸಿಕೊಂಡಿದ್ದರು.
ಯೋಸೇಫನ ಎಲುಬುಗಳನ್ನು ತೆಗೆದುಕೊಂಡರು
19 ಮೋಶೆಯು ತನ್ನೊಡನೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. (ಯೋಸೇಫನು ಸಾಯುವ ಮೊದಲು, ತನಗಾಗಿ ಈ ಕಾರ್ಯವನ್ನು ಮಾಡುವಂತೆ ಇಸ್ರೇಲನ ಪುತ್ರರಿಂದ ಪ್ರಮಾಣ ಮಾಡಿಸಿದ್ದನು. ಯೋಸೇಫನು ಅವರಿಗೆ, “ಯೆಹೋವನು ನಿಮ್ಮನ್ನು ರಕ್ಷಿಸುವಾಗ, ಈಜಿಪ್ಟಿನಿಂದ ನನ್ನ ಎಲುಬುಗಳನ್ನು ತೆಗೆದುಕೊಂಡು ಹೋಗಲು ಮರೆಯಬೇಡಿ” ಎಂದು ಹೇಳಿದ್ದನು.)
ಯೆಹೋವನು ತನ್ನ ಜನರನ್ನು ಮುನ್ನಡೆಸಿದನು
20 ಇಸ್ರೇಲರು ಸುಕ್ಕೋತನ್ನು ಬಿಟ್ಟು ಏತಾಮಿನಲ್ಲಿ ಪಾಳೆಯ ಹಾಕಿದರು. ಏತಾಮು ಮರುಭೂಮಿಗೆ ಹತ್ತಿರವಾಗಿತ್ತು. 21 ಯೆಹೋವನು ದಾರಿಯನ್ನು ತೋರಿಸಿದನು. ಹಗಲಿನಲ್ಲಿ ಜನರನ್ನು ನಡಿಸಲು ಯೆಹೋವನು ಎತ್ತರವಾದ ಮೇಘಸ್ತಂಭವನ್ನು ಉಪಯೋಗಿಸಿದನು; ರಾತ್ರಿ ವೇಳೆಯಲ್ಲಿ ದಾರಿಯನ್ನು ತೋರಿಸಲು ಯೆಹೋವನು ಎತ್ತರವಾದ ಅಗ್ನಿಸ್ತಂಭವನ್ನು ಉಪಯೋಗಿಸಿದನು. ಈ ಬೆಂಕಿಯು ಅವರಿಗೆ ಬೆಳಕು ಕೊಟ್ಟಿದ್ದರಿಂದ ಅವರು ರಾತ್ರಿಯಲ್ಲಿ ಪ್ರಯಾಣ ಮಾಡಲು ಸಾಧ್ಯವಾಯಿತು. 22 ಹಗಲಿನಲ್ಲಿ ಎತ್ತರವಾದ ಮೇಘಸ್ತಂಭವೂ ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವೂ ಯಾವಾಗಲೂ ಅವರ ಮುಂಭಾಗದಲ್ಲಿ ಅವರೊಂದಿಗಿದ್ದವು.
17 “ಈಜಿಪ್ಟಿನಲ್ಲಿ ನಮ್ಮ ಜನರಾದ ಯೆಹೂದ್ಯರ ಸಂಖ್ಯೆಯು ಹೆಚ್ಚತೊಡಗಿತು. (ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ ಕಾಲ ಬಹು ಶೀಘ್ರದಲ್ಲೇ ಬರಲಿತ್ತು.) 18 ಬಳಿಕ, ಬೇರೊಬ್ಬ ರಾಜನು ಈಜಿಪ್ಟನ್ನು ಆಳಲಾರಂಭಿಸಿದನು. ಅವನಿಗೆ ಯೋಸೇಫನ ಬಗ್ಗೆ ಏನೂ ತಿಳಿದಿರಲಿಲ್ಲ. 19 ಈ ರಾಜನು ನಮ್ಮ ಜನರಿಗೆ ಮೋಸ ಮಾಡಿದನು. ಅವನು ನಮ್ಮ ಪಿತೃಗಳಿಗೆ ಕೇಡನ್ನು ಮಾಡಿದನು. ಅವರ ಕೂಸುಗಳನ್ನು ಸಾಯಿಸಬೇಕೆಂದು ಹೊರಗೆ ಹಾಕಿಸಿದನು.
20 “ಮೋಶೆಯು ಜನಿಸಿದ್ದು ಈ ಕಾಲದಲ್ಲೇ. ಅವನು ಬಹು ಸುಂದರನಾಗಿದ್ದನು. ಮೋಶೆಯನ್ನು ಅವನ ತಂದೆಯ ಮನೆಯಲ್ಲಿ ಮೂರು ತಿಂಗಳವರೆಗೆ ನೋಡಿಕೊಳ್ಳಲಾಯಿತು. 21 ಅವರು ಮೋಶೆಯನ್ನು ಹೊರಗೆ ಹಾಕಿದಾಗ ಫರೋಹನ ಮಗಳು ಅವನನ್ನು ತೆಗೆದುಕೊಂಡಳು. ಆಕೆಯು ಅವನನ್ನು ತನ್ನ ಸ್ವಂತ ಮಗನಂತೆ ಬೆಳೆಸಿದಳು. 22 ಈಜಿಪ್ಟಿನವರು ತಮಗೆ ಗೊತ್ತಿದ್ದ ಸಕಲ ವಿದ್ಯೆಗಳನ್ನು ಮೋಶೆಗೆ ಕಲಿಸಿದರು. ಅವನು ವಿಷಯಗಳನ್ನು ಹೇಳುವುದರಲ್ಲಿಯೂ ಕಾರ್ಯಗಳನ್ನು ಮಾಡುವು ದರಲ್ಲಿಯೂ ಬಹು ಸಮರ್ಥನಾಗಿದ್ದನು.
23 “ಮೋಶೆಗೆ ನಲವತ್ತು ವರ್ಷ ವಯಸ್ಸಾಗಿದ್ದಾಗ, ತನ್ನ ಸಹೋದರರಾದ ಯೆಹೂದ್ಯ ಜನರನ್ನು ಸಂದರ್ಶಿಸುವುದು ಒಳ್ಳೆಯದೆಂದು ಯೋಚಿಸಿಕೊಂಡನು. 24 ಈಜಿಪ್ಟಿನವನೊಬ್ಬನು ಯೆಹೂದ್ಯನೊಬ್ಬನಿಗೆ ಅನ್ಯಾಯ ಮಾಡಿ ಹಿಂಸಿಸುತ್ತಿರುವುದನ್ನು ಕಂಡ ಮೋಶೆಯು ಆ ಈಜಿಪ್ಟಿನವನಿಗೆ ಬಲವಾಗಿ ಹೊಡೆದು ಕೊಂದುಹಾಕಿದನು. 25 ತಮ್ಮನ್ನು ರಕ್ಷಿಸಲು ದೇವರು ಮೋಶೆಯನ್ನು ಉಪಯೋಗಿಸುತ್ತಿದ್ದಾನೆ ಎಂಬುದಾಗಿ ತನ್ನ ಯೆಹೂದ್ಯ ಸಹೋದರರು ಅರ್ಥಮಾಡಿಕೊಳ್ಳುತ್ತಾರೆ ಎಂದು ಮೋಶೆ ಭಾವಿಸಿಕೊಂಡನು. ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ.
26 “ಮರುದಿನ, ಇಬ್ಬರು ಯೆಹೂದ್ಯರು ಹೊಡೆದಾಡುವುದನ್ನು ಮೋಶೆಯು ಕಂಡನು. ಅವರನ್ನು ಸಮಾಧಾನಪಡಿಸಲು ಅವನು ಪ್ರಯತ್ನಿಸಿ ‘ಗೆಳೆಯರೇ, ನೀವು ಸಹೋದರರಾಗಿದ್ದೀರಿ! ನೀವು ಒಬ್ಬರಿಗೊಬ್ಬರು ಅನ್ಯಾಯ ಮಾಡುವುದೇಕೆ?’ ಎಂದು ಅವರನ್ನು ಕೇಳಿದನು. 27 ಮತ್ತೊಬ್ಬನಿಗೆ ಅನ್ಯಾಯ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ಯಾರಾದರೂ ಹೇಳಿದರೇ? ಇಲ್ಲ! 28 ನಿನ್ನೆ ಆ ಈಜಿಪ್ಟಿನವನನ್ನು ಕೊಂದಂತೆ ನನ್ನನ್ನೂ ಕೊಲ್ಲುವೆಯಾ?’(A) ಎಂದು ಹೇಳಿದನು. 29 ಇದನ್ನು ಕೇಳಿದ್ದೇ ಮೋಶೆಯು ಈಜಿಪ್ಟನ್ನು ಬಿಟ್ಟು ಮಿದ್ಯಾನ್ಯರ ನಾಡಿಗೆ ಹೋಗಿ ವಿದೇಶಿಯವನಂತೆ ವಾಸಿಸತೊಡಗಿದನು. ಅಲ್ಲಿ ಅವನಿಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು.
30 “ನಲವತ್ತು ವರ್ಷಗಳಾದ ಮೇಲೆ ಮೋಶೆಯು ಸಿನಾಯ್ ಬೆಟ್ಟದ ಸಮೀಪದಲ್ಲಿರುವ ಮರಳುಗಾಡಿನಲ್ಲಿದ್ದಾಗ ಉರಿಯುತ್ತಿದ್ದ ಪೊದೆಯ ಜ್ವಾಲೆಯಲ್ಲಿ ದೇವದೂತನೊಬ್ಬನು ಕಾಣಿಸಿಕೊಂಡನು. 31 ಮೋಶೆಯು ಆಶ್ಚರ್ಯದಿಂದ ನೋಡಲು ಸಮೀಪಕ್ಕೆ ಹೋದನು. ಆಗ ಮೋಶೆಗೆ ವಾಣಿಯೊಂದು ಕೇಳಿಸಿತು. ಅದು ಪ್ರಭುವಿನ ವಾಣಿಯಾಗಿತ್ತು. 32 ಪ್ರಭುವು ಅವನಿಗೆ, ‘ನಾನೇ ನಿನ್ನ ಪಿತೃಗಳ ದೇವರು. ನಾನೇ ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು’(B) ಎಂದು ಹೇಳಿದನು. ಮೋಶೆಯು ಭಯದಿಂದ ನಡುಗ ತೊಡಗಿದನು; ಪೊದೆಯನ್ನು ನೋಡಲು ಹೆದರಿದನು.
33 “ಪ್ರಭುವು ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ತೆಗೆದುಹಾಕು, ಈಗ ನೀನು ನಿಂತುಕೊಂಡಿರುವ ಸ್ಥಳ ಪರಿಶುದ್ಧವಾದದ್ದು. 34 ಜನರು ಈಜಿಪ್ಟಿನಲ್ಲಿ ಬಹಳ ಸಂಕಟಪಡುತ್ತಿರುವುದನ್ನು ನಾನು ನೋಡಿದ್ದೇನೆ; ನನ್ನ ಜನರ ಗೋಳಾಟವನ್ನು ನಾನು ಕೇಳಿದ್ದೇನೆ. ನಾನು ಅವರನ್ನು ರಕ್ಷಿಸುವುದಕ್ಕಾಗಿ ಇಳಿದುಬಂದಿದ್ದೇನೆ. ಮೋಶೆಯೇ, ಈಗ ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುತ್ತಿದ್ದೇನೆ’(C) ಎಂದು ಹೇಳಿದನು.
35 “ಆ ಯೆಹೂದ್ಯರಿಂದ ತಿರಸ್ಕೃತನಾದವನೇ ಈ ಮೋಶೆ. ಅವರು ಅವನಿಗೆ, ‘ನಿನ್ನನ್ನು ನಮ್ಮ ಅಧಿಪತಿ ಎಂದಾಗಲಿ ನ್ಯಾಯಾಧೀಶ ಎಂದಾಗಲಿ ನಿನಗೆ ಯಾರಾದರೂ ಹೇಳಿದರೇ?’ ಎಂದು ಪ್ರಶ್ನಿಸಿದ್ದರು. ಆದರೆ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ಕಳುಹಿಸಿದ್ದು ಆ ಮೋಶೆಯನ್ನೇ. ದೇವರು ತನ್ನ ದೂತನ ಮೂಲಕವಾಗಿ ಮೋಶೆಯನ್ನು ಕಳುಹಿಸಿದನು. ಉರಿಯುವ ಪೊದೆಯಲ್ಲಿ ಮೋಶೆಯು ಕಂಡದ್ದು ಈ ದೇವದೂತನನ್ನೇ. 36 ಆದ್ದರಿಂದ ಮೋಶೆಯು ಜನರನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದನು. ಅವನು ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಈಜಿಪ್ಟಿನಲ್ಲಿಯೂ ಕೆಂಪುಸಮುದ್ರದಲ್ಲಿಯೂ ಮತ್ತು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿಯೂ ಮಾಡಿದನು.
37 “ಈ ಮೋಶೆಯೇ ಯೆಹೂದ್ಯ ಜನರಿಗೆ, ‘ದೇವರು ನಿಮಗೊಬ್ಬ ಪ್ರವಾದಿಯನ್ನು ಕೊಡುವನು. ಆ ಪ್ರವಾದಿಯು ನಿಮ್ಮ ಸ್ವಜನರ ಮಧ್ಯದಿಂದಲೇ ಬರುವನು. ಅವನು ನನ್ನಂತೆಯೇ ಇರುವನು’(D) ಎಂದು ಹೇಳಿದನು. 38 ಅರಣ್ಯದಲ್ಲಿ ಯೆಹೂದ್ಯರ ಸಮೂಹದೊಂದಿಗೆ ಇದ್ದವನು ಈ ಮೋಶೆಯೇ. ಸಿನಾಯ್ ಬೆಟ್ಟದ ಬಳಿ ತನ್ನೊಂದಿಗೆ ಮಾತಾಡಿದ ದೇವದೂತನೊಂದಿಗೆ ಅವನಿದ್ದನು. ಅಲ್ಲದೆ ಅವನು ನಮ್ಮ ಪಿತೃಗಳೊಂದಿಗೆ ಇದ್ದನು. ಜೀವಕರವಾದ ಆಜ್ಞೆಗಳನ್ನು ಮೋಶೆಯು ದೇವರಿಂದ ಸ್ವೀಕರಿಸಿಕೊಂಡು ಅವುಗಳನ್ನು ನಮಗೆ ಕೊಟ್ಟನು.
39 “ಆದರೆ ಮೋಶೆಗೆ ವಿಧೇಯರಾಗಲು ನಮ್ಮ ಪಿತೃಗಳಿಗೆ ಇಷ್ಟವಿರಲಿಲ್ಲ. ಅವರು ಅವನನ್ನು ತಿರಸ್ಕರಿಸಿ, ಈಜಿಪ್ಟಿಗೆ ಹಿಂತಿರುಗಬೇಕೆಂದಿದ್ದರು. 40 ನಮ್ಮ ಪಿತೃಗಳು ಆರೋನನಿಗೆ, ‘ಮೋಶೆಯು ನಮ್ಮನ್ನು ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದನು. ಆದರೆ ಅವನಿಗೆ ಏನಾಯಿತೋ ನಮಗೆ ಗೊತ್ತಿಲ್ಲ. ಆದ್ದರಿಂದ ನಮ್ಮ ಮುಂದೆ ಹೋಗಲು ಮತ್ತು ನಮ್ಮನ್ನು ನಡೆಸಲು ಕೆಲವು ದೇವರುಗಳನ್ನು ಮಾಡು’(E) ಎಂದರು.
Kannada Holy Bible: Easy-to-Read Version. All rights reserved. © 1997 Bible League International