Revised Common Lectionary (Semicontinuous)
55 ಆದರೆ ಸ್ತೆಫನನು ಪವಿತ್ರಾತ್ಮಭರಿತನಾಗಿದ್ದನು. ಅವನು ಆಕಾಶದತ್ತ ಕಣ್ಣೆತ್ತಿ ನೋಡಿ, ದೇವರ ಮಹಿಮೆಯನ್ನೂ ಯೇಸುವು ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ಕಂಡು, 56 “ಇಗೋ, ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನು (ಯೇಸು) ದೇವರ ಬಲಗಡೆಯಲ್ಲಿ ನಿಂತಿರುವುದನ್ನೂ ನಾನು ನೋಡುತ್ತಿದ್ದೇನೆ!” ಎಂದು ಹೇಳಿದನು.
57 ಆಗ ಯೆಹೂದ್ಯನಾಯಕರೆಲ್ಲ ಗಟ್ಟಿಯಾಗಿ ಕೂಗಿ, ತಮ್ಮ ಕಿವಿಗಳನ್ನು ಕೈಗಳಿಂದ ಮುಚ್ಚಿಕೊಂಡರು. ಅವರೆಲ್ಲರು ಸ್ತೆಫನನ ಬಳಿಗೆ ಒಟ್ಟಾಗಿ ಓಡಿಬಂದು, 58 ಅವನನ್ನು ಪಟ್ಟಣದಿಂದ ಹೊರಗೆ ಎಳೆದೊಯ್ದು, ಅವನು ಸಾಯುವವರೆಗೂ ಅವನ ಮೇಲೆ ಕಲ್ಲುಗಳನ್ನು ಎಸೆದರು. ಸ್ತೆಫನನ ವಿರುದ್ಧವಾಗಿ ಸುಳ್ಳು ಹೇಳಿದ ಜನರು ತಮ್ಮ ಮೇಲಂಗಿಗಳನ್ನು ಬಿಚ್ಚಿ ಸೌಲನೆಂಬ ಯುವಕನಿಗೆ ಕೊಟ್ಟು, 59 ಸ್ತೆಫನನಿಗೆ ಕಲ್ಲುಗಳನ್ನು ಎಸೆದರು. ಆದರೆ ಸ್ತೆಫನನು ಪ್ರಾರ್ಥಿಸುತ್ತಾ, “ಪ್ರಭುವಾದ ಯೇಸುವೇ, ನನ್ನ ಆತ್ಮವನ್ನು ಸ್ವೀಕರಿಸಿಕೊ!” ಎಂದನು. 60 ಅವನು ಮೊಣಕಾಲೂರಿ, “ಪ್ರಭುವೇ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡ!” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು.
ರಚನೆಗಾರ: ದಾವೀದ.
31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
ನನ್ನನ್ನು ನಿರಾಶೆಗೊಳಿಸಬೇಡ.
ಕರುಣೆತೋರಿ ನನ್ನನ್ನು ರಕ್ಷಿಸು.
2 ನನಗೆ ಕಿವಿಗೊಡು.
ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
ನನ್ನನ್ನು ಕಾಪಾಡು!
3 ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
4 ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
ನೀನೇ ನನ್ನ ಆಶ್ರಯಸ್ಥಾನವಾಗಿರುವೆ.
5 ಯೆಹೋವನೇ, ನಮ್ಮ ಭರವಸೆಗೆ ಯೋಗ್ಯನಾದ ದೇವರು ನೀನೊಬ್ಬನೇ.
ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿರುವೆ.
ನನ್ನನ್ನು ರಕ್ಷಿಸು!
15 ನನ್ನ ಜೀವವು ನಿನ್ನ ಕೈಯಲ್ಲಿದೆ.
ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[a] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
ಕರುಣೆಯಿಂದ ನನ್ನನ್ನು ರಕ್ಷಿಸು!
2 ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. 3 ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.
4 ಪ್ರಭುವಾದ ಯೇಸುವೇ ಜೀವವುಳ್ಳ “ಕಲ್ಲು.” ಈ ಲೋಕದ ಜನರು ತಮಗೆ ಆ “ಕಲ್ಲು” (ಯೇಸು) ಬೇಡವೆಂದು ತೀರ್ಮಾನಿಸಿದರು. ಆದರೆ ಆತನು ದೇವರಿಂದ ಆರಿಸಲ್ಪಟ್ಟ “ಕಲ್ಲು.” ಆತನು ದೇವರಿಗೆ ಅಮೂಲ್ಯನಾಗಿದ್ದಾನೆ. ಆದ್ದರಿಂದ ಆತನ ಹತ್ತಿರಕ್ಕೆ ಬನ್ನಿರಿ. 5 ನೀವೂ ಸಹ ಜೀವವುಳ್ಳ ಕಲ್ಲುಗಳಾಗಿದ್ದೀರಿ. ಆತ್ಮಸಂಬಂಧವಾದ ದೇವಾಲಯವಾಗುವದಕ್ಕಾಗಿ ನೀವೇ ಕಟ್ಟಲ್ಪಡುತ್ತಿದ್ದೀರಿ; ದೇವರಿಂದ ಸ್ವೀಕೃತವಾಗುವಂಥ ಆತ್ಮಿಕ ಯಜ್ಞಗಳನ್ನು ಯೇಸು ಕ್ರಿಸ್ತನ ಮೂಲಕ ದೇವರಿಗೆ ಅರ್ಪಿಸುವ ಪವಿತ್ರ ಯಾಜಕರಾಗಿದ್ದೀರಿ. 6 ಪವಿತ್ರ ಗ್ರಂಥವು ಹೇಳುವುದೇನೆಂದರೆ,
“ನಾನು ಅಮೂಲ್ಯವಾದ ಮೂಲೆಗಲ್ಲನ್ನು ಆರಿಸಿದ್ದೇನೆ.
ನಾನು ಆ ಕಲ್ಲನ್ನು ಚಿಯೋನಿನಲ್ಲಿ ಇಟ್ಟಿರುವೆನು;
ಆತನನ್ನು ನಂಬುವವನು ಎಂದಿಗೂ ಆಶಾಭಂಗಪಡುವುದಿಲ್ಲ”(A)
7 ನಂಬಿಕೆಯುಳ್ಳ ಜನರಾದ ನಿಮಗೆ ಆ ಕಲ್ಲು (ಯೇಸು) ಹೆಚ್ಚು ಬೆಲೆಯುಳ್ಳದ್ದು. ಆದರೆ ನಂಬದ ಜನರಿಗೆ ಆತನು ಇಂತೆಂದಿದ್ದಾನೆ:
“ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
ಮೂಲೆಗಲ್ಲಾಯಿತು.”(B)
8 ನಂಬದಿರುವ ಜನರಿಗೆ ಆತನು:
“ಜನರನ್ನು ಮುಗ್ಗರಿಸುವ ಕಲ್ಲೂ
ಜನರನ್ನು ಬೀಳಿಸುವ ಕಲ್ಲೂ ಆಗಿದ್ದಾನೆ.”(C)
ದೇವರ ಮಾತಿಗೆ ಅವಿಧೇಯರಾಗುವುದರಿಂದಲೇ ಜನರು ಮುಗ್ಗರಿಸಿ ಬೀಳುವರು. ಆ ಜನರಿಗೆ ಹೀಗಾಗಬೇಕೆಂಬುದು ದೇವರ ಯೋಜನೆಯಾಗಿತ್ತು.
9 ನೀವಾದರೋ ದೇವರಾದುಕೊಂಡ ಜನಾಂಗವೂ ರಾಜವಂಶಸ್ಥರಾದ ಯಾಜಕರೂ ಮೀಸಲಾದ ಜನರೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೀರಿ. ದೇವರು ತಾನು ಮಾಡಿದ ಅತ್ಯಾಶ್ಚರ್ಯ ಸಂಗತಿಗಳನ್ನು ತಿಳಿಸಲು ನಿಮ್ಮನ್ನು ಅಂಧಕಾರದಿಂದ (ಪಾಪಗಳಿಂದ) ತನ್ನ ಅದ್ಭುತವಾದ ಬೆಳಕಿಗೆ ಕರೆತಂದನು.
10 ಒಂದು ಕಾಲದಲ್ಲಿ, ನೀವು ದೇವರ ಜನರಾಗಿರಲಿಲ್ಲ.
ಆದರೆ ಈಗ ನೀವು ದೇವರ ಜನರಾಗಿದ್ದೀರಿ.
ಮೊದಲು ನೀವು ಕರುಣೆಯನ್ನು ಹೊಂದಿರಲಿಲ್ಲ.
ಆದರೆ ಈಗ ನೀವು ದೇವರ ಕರುಣೆಯನ್ನು ಹೊಂದಿಕೊಂಡಿದ್ದೀರಿ.[a]
ಶಿಷ್ಯರಿಗೆ ಯೇಸುವಿನ ಆದರಣೆ ಮಾತುಗಳು
14 ಯೇಸು, “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿರಿ. ನನ್ನಲ್ಲಿಯೂ ವಿಶ್ವಾಸವಿಡಿರಿ. 2 ನನ್ನ ತಂದೆಯ ಮನೆಯಲ್ಲಿ ಅನೇಕ ಕೋಣೆಗಳಿವೆ. ಅದು ಸತ್ಯವಲ್ಲದಿದ್ದರೆ, ನಾನು ನಿಮಗೆ ಹೇಳುತ್ತಿರಲಿಲ್ಲ. ನಾನು ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಅಲ್ಲಿಗೆ ಹೋಗುತ್ತಿದ್ದೇನೆ. 3 ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಿದ ಮೇಲೆ ಹಿಂತಿರುಗಿ ಬಂದು, ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು. ಏಕೆಂದರೆ ನಾನಿರುವಲ್ಲಿ ನೀವೂ ಇರಬೇಕು. 4 ನಾನು ಹೋಗಲಿರುವ ಸ್ಥಳದ ದಾರಿಯು ನಿಮಗೆ ತಿಳಿದಿದೆ” ಎಂದು ಹೇಳಿದನು.
5 ತೋಮನು ಯೇಸುವಿಗೆ, “ಪ್ರಭುವೇ, ನೀನು ಹೋಗುತ್ತಿರುವುದು ಎಲ್ಲಿಗೆಂಬುದೇ ನಮಗೆ ಗೊತ್ತಿಲ್ಲ. ಹೀಗಿರಲು, ಆ ದಾರಿಯನ್ನು ನಾವು ಹೇಗೆ ತಿಳಿದುಕೊಳ್ಳಲಾದೀತು?” ಎಂದನು.
6 ಯೇಸು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ತಂದೆಯ ಬಳಿಗೆ ಹೋಗಲು ನಾನೇ ಏಕೈಕ ಮಾರ್ಗ. 7 ನೀವು ನನ್ನನ್ನು ನಿಜವಾಗಿಯೂ ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದುಕೊಳ್ಳುತ್ತಿದ್ದಿರಿ. ಆದರೆ ಈಗ ನೀವು ತಂದೆಯನ್ನು ತಿಳಿದಿದ್ದೀರಿ. ನೀವು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.
8 ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.
9 ಯೇಸು, “ಫಿಲಿಪ್ಪನೇ, ನಾನು ಇಷ್ಟು ಕಾಲದಿಂದ ನಿನ್ನೊಂದಿಗಿದ್ದರೂ ನೀನು ನನ್ನನ್ನು ತಿಳಿದುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ಸಹ ನೋಡಿದವನಾಗಿದ್ದಾನೆ. ಆದ್ದರಿಂದ, ‘ತಂದೆಯನ್ನು ನಮಗೆ ತೋರಿಸು’ ಎಂದು ಏಕೆ ಕೇಳುವಿರಿ? 10 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. 11 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂಬ ನನ್ನ ಮಾತನ್ನು ನಂಬಿರಿ. ಇಲ್ಲದಿದ್ದರೆ ನಾನು ಮಾಡಿದ ಅದ್ಭುತಕಾರ್ಯಗಳ ನಿಮಿತ್ತವಾದರೂ ನಂಬಿರಿ.
12 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ. 13 ಮತ್ತು ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. 14 ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.
Kannada Holy Bible: Easy-to-Read Version. All rights reserved. © 1997 Bible League International