Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 31:1-5

ರಚನೆಗಾರ: ದಾವೀದ.

31 ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿದ್ದೇನೆ.
    ನನ್ನನ್ನು ನಿರಾಶೆಗೊಳಿಸಬೇಡ.
    ಕರುಣೆತೋರಿ ನನ್ನನ್ನು ರಕ್ಷಿಸು.
    ನನಗೆ ಕಿವಿಗೊಡು.
    ಬೇಗನೆ ಬಂದು, ನನ್ನನ್ನು ರಕ್ಷಿಸು.
ನನಗೆ ಬಂಡೆಯೂ ನನ್ನ ಆಶ್ರಯಸ್ಥಾನವೂ ಕೋಟೆಯೂ ಆಗಿದ್ದು
    ನನ್ನನ್ನು ಕಾಪಾಡು!
ನೀನೇ ನನ್ನ ಬಂಡೆಯೂ ಕೋಟೆಯೂ ಆಗಿರುವುದರಿಂದ
    ನಿನ್ನ ಹೆಸರಿನ ಘನತೆಗಾಗಿ ನನ್ನನ್ನು ನಡೆಸು; ನನಗೆ ಮಾರ್ಗದರ್ಶನ ನೀಡು.
ನನ್ನ ವೈರಿಗಳು ನನಗೆ ಬಲೆಬೀಸಿದ್ದಾರೆ.
    ಅವರ ಬಲೆಗೆ ಸಿಕ್ಕಿಬೀಳದಂತೆ ನನ್ನನ್ನು ರಕ್ಷಿಸು.
    ನೀನೇ ನನ್ನ ಆಶ್ರಯಸ್ಥಾನವಾಗಿರುವೆ.
ಯೆಹೋವನೇ, ನಮ್ಮ ಭರವಸೆಗೆ ಯೋಗ್ಯನಾದ ದೇವರು ನೀನೊಬ್ಬನೇ.
    ನನ್ನ ಜೀವವನ್ನು ನಿನ್ನ ಕೈಗಳಲ್ಲಿ ಇಟ್ಟಿರುವೆ.
    ನನ್ನನ್ನು ರಕ್ಷಿಸು!

ಕೀರ್ತನೆಗಳು 31:15-16

15 ನನ್ನ ಜೀವವು ನಿನ್ನ ಕೈಯಲ್ಲಿದೆ.
    ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[a] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
    ಕರುಣೆಯಿಂದ ನನ್ನನ್ನು ರಕ್ಷಿಸು!

ಯೆರೆಮೀಯ 26:20-24

20 ಮೊದಲು ಯೆಹೋವನ ಸಂದೇಶವನ್ನು ಪ್ರವಾದಿಸುವ ಇನ್ನೊಬ್ಬ ಮನುಷ್ಯನಿದ್ದನು. ಅವನ ಹೆಸರು ಊರೀಯ. ಅವನು ಶಮಾಯನ ಮಗ. ಊರೀಯನು ಕಿರ್ಯತ್‌ಯಾರೀಮ್ ಎಂಬ ಊರಿನವನು. ಈ ನಗರದ ಬಗ್ಗೆ ಮತ್ತು ಪ್ರದೇಶದ ಬಗ್ಗೆ ಯೆರೆಮೀಯನು ಪ್ರವಾದಿಸಿದ್ದನ್ನೇ ಊರೀಯನು ಪ್ರವಾದಿಸಿದ್ದನು. 21 ರಾಜನಾದ ಯೆಹೋಯಾಕೀಮನೂ ಅವನ ಸೇನೆಯ ಅಧಿಕಾರಿಗಳೂ ಯೆಹೂದದ ನಾಯಕರೂ ಊರೀಯನ ಪ್ರವಾದನೆಯನ್ನು ಕೇಳಿದರು. ಅವರಿಗೆ ಕೋಪಬಂದಿತು. ರಾಜನಾದ ಯೆಹೋಯಾಕೀಮನು ಊರೀಯನನ್ನು ಕೊಲ್ಲಬಯಸಿದನು. ಆದರೆ ಯೆಹೋಯಾಕೀಮನು ತನ್ನನ್ನು ಕೊಲ್ಲಬಯಸುತ್ತಾನೆಂದು ಊರೀಯನು ಕೇಳಿದನು. ಊರೀಯನು ಭಯಪಟ್ಟು ತಪ್ಪಿಸಿಕೊಂಡು ಈಜಿಪ್ಟ್ ದೇಶಕ್ಕೆ ಹೋದನು. 22 ಆದರೆ ರಾಜನಾದ ಯೆಹೋಯಾಕೀಮನು ಎಲ್ನಾತಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನು ಈಜಿಪ್ಟಿಗೆ ಕಳುಹಿಸಿದನು. ಎಲ್ನಾತಾನನು ಅಕ್ಬೋರನ ಮಗ. 23 ಅವರು ಊರೀಯನನ್ನು ಈಜಿಪ್ಟಿನಿಂದ ತಂದರು. ಅವರು ಊರೀಯನನ್ನು ರಾಜನಾದ ಯೆಹೋಯಾಕೀಮನ ಹತ್ತಿರ ತೆಗೆದುಕೊಂಡು ಹೋದರು. ಯೆಹೋಯಾಕೀಮನು ಕತ್ತಿಯಿಂದ ಊರೀಯನ ಕೊಲೆಮಾಡಬೇಕೆಂದು ಆಜ್ಞಾಪಿಸಿದನು. ಊರೀಯನ ದೇಹವನ್ನು ಬಡವರ ಸ್ಮಶಾನದಲ್ಲಿ ಎಸೆಯಲಾಯಿತು.

24 ಶಾಫಾನನ ಮಗನಾದ ಅಹೀಕಾಮನು ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. ಅಹೀಕಾಮನು ಯೆರೆಮೀಯನಿಗೆ ಬೆಂಬಲ ಕೊಟ್ಟನು; ಯಾಜಕರು ಮತ್ತು ಪ್ರವಾದಿಗಳು ಅವನನ್ನು ಕೊಲ್ಲದಂತೆ ಕಾಪಾಡಿದರು.

ಯೋಹಾನ 8:48-59

ತನ್ನ ಮತ್ತು ಅಬ್ರಹಾಮನ ಬಗ್ಗೆ ಯೇಸುವಿನ ಹೇಳಿಕೆ

48 ಯೆಹೂದ್ಯರು, “ನಾವು ನಿನ್ನನ್ನು ಸಮಾರ್ಯದವನೆಂದು ಹೇಳುತ್ತೇವೆ! ನಿನ್ನೊಳಗೆ ದೆವ್ವವು ಸೇರಿಕೊಂಡು ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ” ಎಂದು ಉತ್ತರಕೊಟ್ಟರು.

49 ಯೇಸು, “ನನ್ನೊಳಗೆ ದೆವ್ವವಿಲ್ಲ. ನನ್ನ ತಂದೆಗೆ ನಾನು ಗೌರವ ಕೊಡುತ್ತೇನೆ, ಆದರೆ ನೀವು ನನಗೆ ಗೌರವ ಕೊಡುವುದಿಲ್ಲ. 50 ನನಗಾಗಿ ಗೌರವವನ್ನು ಪಡೆದುಕೊಳ್ಳಲು ನಾನು ಪ್ರಯತ್ನಿಸುತ್ತಿಲ್ಲ. ನನಗೆ ಗೌರವ ದೊರೆಯಬೇಕೆಂದು ಬಯಸುವ ಒಬ್ಬಾತನಿದ್ದಾನೆ. ಆತನೇ ನ್ಯಾಯಾಧಿಪತಿ. 51 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ವಾಕ್ಯಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ” ಎಂದು ಉತ್ತರಕೊಟ್ಟನು.

52 ಯೆಹೂದ್ಯರು ಆತನಿಗೆ, “ನಿನ್ನೊಳಗೆ ದೆವ್ವವಿದೆ ಎಂದು ಈಗ ನಮಗೆ ತಿಳಿಯಿತು! ಅಬ್ರಹಾಮನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಆದರೆ ‘ನನ್ನ ಉಪದೇಶಕ್ಕೆ ವಿಧೇಯನಾಗುವವನು ಎಂದಿಗೂ ಸಾಯುವುದಿಲ್ಲ’ ಎಂದು ನೀನು ಹೇಳುತ್ತಿರುವೆ. 53 ನಮ್ಮತಂದೆಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡವನೆಂದು ಭಾವಿಸಿಕೊಂಡಿರುವೆಯಾ? ಅಬ್ರಹಾಮನು ಸತ್ತುಹೋದನು ಮತ್ತು ಪ್ರವಾದಿಗಳು ಸಹ ಸತ್ತುಹೋದರು. ಹೀಗಿರಲು, ನೀನು ನಿನ್ನನ್ನು ಯಾರೆಂದು ಭಾವಿಸಿಕೊಂಡಿರುವೆ?” ಎಂದು ಕೇಳಿದರು.

54 ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ, ಆ ಮಹಿಮೆಗೆ ಯಾವ ಬೆಲೆಯೂ ಇಲ್ಲ. ನನ್ನ ತಂದೆಯೇ ನನ್ನನ್ನು ಮಹಿಮೆಪಡಿಸುವನು. ನೀವು ಆತನನ್ನೇ ನಿಮ್ಮ ದೇವರೆಂದು ಹೇಳಿಕೊಳ್ಳುತ್ತೀರಿ. 55 ಆದರೆ ನೀವು ಆತನನ್ನು ನಿಜವಾಗಿಯೂ ತಿಳಿದಿಲ್ಲ. ನಾನು ಆತನನ್ನು ಬಲ್ಲೆನು. ನಾನು ಆತನನ್ನು ತಿಳಿದಿಲ್ಲವೆಂದು ಹೇಳಿದರೆ ನಿಮ್ಮಂತೆ ನಾನು ಸಹ ಸುಳ್ಳುಗಾರನಾಗುತ್ತೇನೆ. ನಾನು ಆತನನ್ನು ಬಲ್ಲೆನು. ನಾನು ಆತನ ವಾಕ್ಯಕ್ಕೆ ವಿಧೇಯನಾಗುತ್ತೇನೆ. 56 ನಾನು ಬರುವ ದಿನವನ್ನು ತಾನು ನೋಡುವುದಾಗಿ ನಿಮ್ಮ ತಂದೆಯಾದ ಅಬ್ರಹಾಮನು ಬಹು ಸಂತೋಷಪಟ್ಟನು. ಅವನು ಆ ದಿನವನ್ನು ಕಂಡು ಬಹು ಸಂತೋಷಗೊಂಡನು” ಎಂದು ಉತ್ತರಕೊಟ್ಟನು.

57 ಯೆಹೂದ್ಯರು ಯೇಸುವಿಗೆ, “ಏನು? ನೀನು ಅಬ್ರಹಾಮನನ್ನು ನೋಡಿರುವಿಯೋ? ನಿನಗೆ ಐವತ್ತು ವರ್ಷವೂ ಆಗಿಲ್ಲ!” ಎಂದು ಹೇಳಿದರು.

58 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಅಬ್ರಹಾಮನು ಹುಟ್ಟುವುದಕ್ಕಿಂತ ಮೊದಲಿಂದಲೂ ನಾನು ಇದ್ದೇನೆ!” ಎಂದು ಉತ್ತರಿಸಿದನು. 59 ಇದನ್ನು ಕೇಳಿದ ಕೂಡಲೇ ಜನರು ಆತನತ್ತ ಬೀರಲು ಕಲ್ಲುಗಳನ್ನು ತೆಗೆದುಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದಿಂದ ಹೊರಟುಹೋದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International