Revised Common Lectionary (Semicontinuous)
ಕೃತಜ್ಞತಾ ಸ್ತುತಿಗೀತೆ.
100 ಸಮಸ್ತ ಭೂನಿವಾಸಿಗಳೇ,
ಯೆಹೋವನಿಗೆ ಗಾಯನ ಮಾಡಿರಿ!
2 ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
3 ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
4 ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
5 ಯೆಹೋವನು ಒಳ್ಳೆಯವನು!
ಆತನ ಪ್ರೀತಿಯು ಶಾಶ್ವತವಾದದ್ದು,
ಆತನ ನಂಬಿಗಸ್ತಿಕೆಯು ನಿರಂತರವಾದದ್ದು.
23 ಆಮೇಲೆ ನಾನು ಅವರಿಗೆ ಒಬ್ಬ ಕುರುಬನನ್ನು ನೇಮಿಸುವೆನು. ಅವನು ನನ್ನ ಸೇವಕನಾದ ದಾವೀದನು; ಅವನು ಅವರನ್ನು ಮೇಯಿಸುವನು ಮತ್ತು ಅವರಿಗೆ ಕುರುಬನಾಗುವನು. 24 ಯೆಹೋವನಾದ ನಾನು ಅವರಿಗೆ ದೇವರಾಗಿರುವೆನು. ನನ್ನ ಸೇವಕನಾದ ದಾವೀದನು ಅವರೊಂದಿಗೆ ವಾಸಿಸುತ್ತಾ ಅವರನ್ನು ಆಳುವನು. ಇದು ಯೆಹೋವನಾದ ನನ್ನ ನುಡಿ.
25 “ನಾನು ನನ್ನ ಕುರಿಗಳೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡುವೆನು. ಕೆಟ್ಟ ಕುರಿಗಳನ್ನು ನಾನು ದೇಶದೊಳಗಿಂದ ತೆಗೆದುಬಿಡುವೆನು. ಆಮೇಲೆ ನನ್ನ ಕುರಿಗಳು ಅಡವಿಯಲ್ಲಿ ಸುರಕ್ಷಿತವಾಗಿದ್ದು ಕಾಡುಗಳಲ್ಲಿ ಮಲಗಿಕೊಳ್ಳುವವು. 26 ನಾನು ನನ್ನ ಕುರಿಗಳನ್ನೂ ನನ್ನ ಬೆಟ್ಟದ ಸುತ್ತಲೂ ಇರುವ ಸ್ಥಳಗಳನ್ನೂ ಆಶೀರ್ವದಿಸುವೆನು. ಸರಿಯಾದ ಸಮಯಕ್ಕೆ ಮಳೆ ಬೀಳುವಂತೆ ಮಾಡುವೆನು. ಮತ್ತು ಅದನ್ನು ಆಶೀರ್ವಾದದ ಸುರಿಮಳೆಯಂತೆ ಸುರಿಸುವೆನು. 27 ಹೊಲದಲ್ಲಿ ಬೆಳೆಯುವ ಮರಗಳು ಫಲವನ್ನಿಯುವವು. ಭೂಮಿಯು ಬೆಳೆಯನ್ನು ಕೊಡುವದು. ಆಗ ಕುರಿಗಳು ಅವರ ದೇಶದಲ್ಲಿ ಸುರಕ್ಷಿತವಾಗಿರುವವು. ಅವರ ಮೇಲಿರುವ ನೊಗಗಳನ್ನು ನಾನು ಮುರಿದುಬಿಡುವೆನು. ಅವರನ್ನು ಗುಲಾಮರನ್ನಾಗಿ ಮಾಡಿದ ದೇಶದವರ ಶಕ್ತಿಯನ್ನೆ ಮುರಿಯುವೆನು. ನಾನು ಯೆಹೋವನೆಂದು ಆಗ ಅವರಿಗೆ ತಿಳಿಯುವದು. 28 ಬೇರೆ ದೇಶಗಳು ಅವರನ್ನು ಪ್ರಾಣಿಗಳನ್ನು ಹಿಡಿಯುವಂತೆ ಇನ್ನು ಹಿಡಿಯುವದಿಲ್ಲ. ಅವರು ಅವುಗಳನ್ನು ಇನ್ನು ಮುಂದಕ್ಕೆ ತಿನ್ನುವದಿಲ್ಲ. ಅವರು ಸುರಕ್ಷಿತವಾಗಿ ಜೀವಿಸುವರು. ಯಾರೂ ಅವರನ್ನು ಇನ್ನು ಹೆದರಿಸುವುದಿಲ್ಲ. 29 ನಾನು ಅವರಿಗೆ ಭೂಮಿಯನ್ನು ಕೊಡುವೆನು. ಅದರಲ್ಲಿ ಅವರು ತೋಟವನ್ನು ಮಾಡುವರು. ಆ ನಾಡಿನಲ್ಲಿ ಅವರು ಇನ್ನೆಂದಿಗೂ ಹಸಿವೆಯಿಂದ ಸಂಕಟಪಡುವುದಿಲ್ಲ. ಇತರ ಜನಾಂಗದವರಿಂದ ಇನ್ನು ಮುಂದೆ ಅವಮಾನ ಹೊಂದುವುದಿಲ್ಲ. 30 ಆಗ ನಾನು ಅವರ ದೇವರೆಂದೂ ನಾನು ಅವರೊಂದಿಗೆ ಇದ್ದೇನೆ ಎಂದೂ ಅವರು ತಿಳಿದುಕೊಳ್ಳುವರು. ಇಸ್ರೇಲ್ ಜನಾಂಗವು ಸಹ ತಾವು ನನ್ನ ಜನರು ಎಂದು ತಿಳಿದುಕೊಳ್ಳುವರು.” ಇದು ಒಡೆಯನಾದ ಯೆಹೋವನ ನುಡಿ.
31 “ನೀವು ನನ್ನ ಕುರಿಗಳು, ಹಸಿರುಗಾವಲಿನ ಕುರಿಗಳು. ನೀವು ಮಾನವರಷ್ಟೇ. ನಾನು ನಿಮ್ಮ ದೇವರು.” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.
20-21 ಶಾಂತಿಸ್ವರೂಪನಾದ ದೇವರು ನಿಮಗೆ ಬೇಕಾದ ತನ್ನ ವರದಾನಗಳನ್ನು ದಯಪಾಲಿಸಲಿ ಎಂದು ನಾನು ಆತನಲ್ಲಿ ಪ್ರಾರ್ಥಿಸುತ್ತೇನೆ. ಏಕೆಂದರೆ ಆಗ ನೀವು ಆತನ ಇಷ್ಟಕ್ಕನುಸಾರವಾದವುಗಳನ್ನೆಲ್ಲಾ ಮಾಡಲು ಸಾಧ್ಯವಾಗುವುದು. ತನ್ನ ರಕ್ತವನ್ನು ಸುರಿಸಿ ಸಭೆಯೆಂಬ ಹಿಂಡಿಗೆ ಮಹಾಕುರುಬನಾಗಿರುವ ನಮ್ಮ ಪ್ರಭುವಾದ ಯೇಸುವನ್ನು ಸತ್ತವರೊಳಗಿಂದ ಮೇಲಕ್ಕೆ ಎಬ್ಬಿಸಿದವನು ದೇವರೇ. ಆತನ ರಕ್ತವು ಶಾಶ್ವತವಾದ ಹೊಸ ಒಡಂಬಡಿಕೆಯನ್ನಾರಂಭಿಸಿತು. ದೇವರು ತನಗೆ ಸಂತೋಷವನ್ನು ಉಂಟುಮಾಡುವ ಕಾರ್ಯಗಳನ್ನು ಯೇಸು ಕ್ರಿಸ್ತನ ಮೂಲಕ ನಮ್ಮಲ್ಲಿ ನಡೆಸಲಿ. ಯೇಸುವಿಗೆ ಎಂದೆಂದಿಗೂ ಮಹಿಮೆಯಾಗಲಿ. ಆಮೆನ್.
Kannada Holy Bible: Easy-to-Read Version. All rights reserved. © 1997 Bible League International