Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 100

ಕೃತಜ್ಞತಾ ಸ್ತುತಿಗೀತೆ.

100 ಸಮಸ್ತ ಭೂನಿವಾಸಿಗಳೇ,
    ಯೆಹೋವನಿಗೆ ಗಾಯನ ಮಾಡಿರಿ!
ಯೆಹೋವನ ಸೇವೆಯನ್ನು ಸಂತೋಷದಿಂದ ಮಾಡಿರಿ;
    ಹರ್ಷಗೀತೆಗಳೊಡನೆ ಆತನ ಸನ್ನಿಧಿಗೆ ಬನ್ನಿರಿ!
ಯೆಹೋವನೇ ದೇವರೆಂದು ತಿಳಿದುಕೊಳ್ಳಿರಿ.
    ನಮ್ಮನ್ನು ಸೃಷ್ಟಿಸಿದವನು ಆತನೇ, ನಾವು ಆತನವರು.
    ನಾವು ಆತನ ಜನರೂ ಮಂದೆಯೂ ಆಗಿದ್ದೇವೆ.
ಕೃತಜ್ಞತಾಗೀತೆಗಳೊಡನೆ ಆತನ ಪಟ್ಟಣಕ್ಕೆ ಬನ್ನಿರಿ.
    ಸ್ತುತಿಗೀತೆಗಳೊಡನೆ ಆತನ ಆಲಯಕ್ಕೆ ಬನ್ನಿರಿ.
    ಆತನನ್ನು ಸನ್ಮಾನಿಸುತ್ತಾ ಆತನ ಹೆಸರನ್ನು ಕೊಂಡಾಡಿರಿ.
ಯೆಹೋವನು ಒಳ್ಳೆಯವನು!
    ಆತನ ಪ್ರೀತಿಯು ಶಾಶ್ವತವಾದದ್ದು,
    ಆತನ ನಂಬಿಗಸ್ತಿಕೆಯು ನಿರಂತರವಾದದ್ದು.

ಯೆಹೆಜ್ಕೇಲ 34:17-23

17 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಮಂದೆಯೇ, ನಾನು ಒಂದೊಂದು ಕುರಿಗಳ ನ್ಯಾಯತೀರಿಸುತ್ತೇನೆ. ಟಗರುಗಳನ್ನೂ ಹೋತಗಳನ್ನೂ ನ್ಯಾಯವಿಚಾರಣೆ ಮಾಡುವೆನು. 18 ನೀವು ಒಳ್ಳೆಯ ದೇಶದಲ್ಲಿ ಬೆಳೆಯುವ ಹುಲ್ಲನ್ನು ಮೇಯಬಹುದು. ಆದ್ದರಿಂದ ಬೇರೆ ಕುರಿಗಳು ಮೇಯಬೇಕಾದ ಹುಲ್ಲನ್ನು ನೀವು ಯಾಕೆ ತುಳಿದು ಹಾಳುಮಾಡುವಿರಿ? ನೀವು ಶುದ್ಧವಾದ ನೀರು ಬೇಕಾದಷ್ಟು ಕುಡಿಯಬಹುದು. ಆದರೆ ಬೇರೆ ಕುರಿಗಳು ನೀರು ಕುಡಿಯದಂತೆ ಯಾಕೆ ನೀರನ್ನು ಕದಡಿಸುತ್ತೀರಿ. 19 ನೀವು ತುಳಿದು ಹಾಳುಮಾಡಿದ ಹುಲ್ಲನ್ನು ನನ್ನ ಕುರಿಗಳು ಮೇಯಬೇಕು. ನೀವು ಕಾಲಿನಿಂದ ಕೆದಕಿ ಕೆಸರು ಮಾಡಿದ ನೀರನ್ನು ನನ್ನ ಕುರಿಗಳು ಕುಡಿಯಬೇಕು.”

20 ಆದ್ದರಿಂದ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, “ನಾನು ಕೊಬ್ಬಿದ ಕುರಿಗಳಿಗೂ ಬಲಹೀನ ಕುರಿಗಳಿಗೂ ನ್ಯಾಯತೀರಿಸುವೆನು. 21 ನೀವು ನಿಮ್ಮ ಶಕ್ತಿಯಿಂದ ಬೇರೆ ಕುರಿಗಳನ್ನು ದೂಡಿಬಿಡುವಿರಿ. ನಿಮ್ಮ ಕೊಂಬುಗಳಿಂದ ಬಲಹೀನ ಕುರಿಗಳನ್ನು ಹಾದುಬಿಡುವಿರಿ. ಅವುಗಳು ಆ ಸ್ಥಳದಿಂದ ಓಡಿಬಿಡುವಂತೆ ಮಾಡುವಿರಿ. 22 ಆದ್ದರಿಂದ ನಾನು ನನ್ನ ಕುರಿಗಳನ್ನು ರಕ್ಷಿಸುವೆನು. ಅವುಗಳನ್ನು ಕಾಡುಪ್ರಾಣಿಗಳು ಇನ್ನು ಮುಂದೆ ಹಿಡಿಯಲಾರವು. ಅವುಗಳಲ್ಲಿ ಪ್ರತಿಯೊಂದಕ್ಕೂ ನಾನು ನ್ಯಾಯತೀರಿಸುವೆನು. 23 ಆಮೇಲೆ ನಾನು ಅವರಿಗೆ ಒಬ್ಬ ಕುರುಬನನ್ನು ನೇಮಿಸುವೆನು. ಅವನು ನನ್ನ ಸೇವಕನಾದ ದಾವೀದನು; ಅವನು ಅವರನ್ನು ಮೇಯಿಸುವನು ಮತ್ತು ಅವರಿಗೆ ಕುರುಬನಾಗುವನು.

1 ಪೇತ್ರನು 5:1-5

ದೇವರ ಮಂದೆ

ನಿಮ್ಮ ಸಭಾಹಿರಿಯರಿಗೆ ನಾನು ಈಗ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನಾನೂ ಒಬ್ಬ ಹಿರಿಯನಾಗಿದ್ದೇನೆ. ನಾನು ಕ್ರಿಸ್ತನ ಬಾಧೆಗಳನ್ನು ಕಣ್ಣಾರೆ ನೋಡಿದ್ದೇನೆ. ನಮಗೆ ಪ್ರತ್ಯಕ್ಷವಾಗುವ ಪ್ರಭಾವದಲ್ಲಿ ನಾನೂ ಪಾಲುಗಾರನಾಗಿದ್ದೇನೆ. ನೀವು ಜವಾಬ್ದಾರಿ ವಹಿಸಿಕೊಂಡಿರುವ ಸಭೆಯನ್ನು ಪರಿಪಾಲಿಸಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಅವರು ದೇವರ ಮಂದೆ. ನೀವು ಆ ಮಂದೆಯನ್ನು ಕಾಯಿರಿ, ಏಕೆಂದರೆ ಅದು ನಿಮ್ಮ ಬಯಕೆಯಾಗಿದೆ; ಅದು ಬಲವಂತದಿಂದ ಹೊರಿಸಿದ ಹೊರೆಯಲ್ಲ. ದೇವರು ಅದನ್ನೇ ಇಷ್ಟಪಡುತ್ತಾನೆ. ನೀವು ಆ ಮಂದೆಯನ್ನು ಕಾಯುವುದು ಹಣದ ನಿಮಿತ್ತವಲ್ಲ, ದೇವರ ಸೇವೆ ಮಾಡಲು ನಿಮಗಿರುವ ಸಂತಸದ ನಿಮಿತ್ತವಾಗಿಯೇ. ನೀವು ಜವಾಬ್ದಾರರಾಗಿರುವ ಆ ಮಂದೆಯ ಮೇಲೆ ದಬ್ಬಾಳಿಕೆ ಮಾಡಬೇಡಿ. ನೀವು ಅವರಿಗೆ ಉತ್ತಮ ಮಾದರಿಯಾಗಿರಿ. ಪ್ರಧಾನ ಕುರುಬನು (ಕ್ರಿಸ್ತನು) ಪ್ರತ್ಯಕ್ಷನಾದಾಗ, ನಿಮಗೆ ಕಿರೀಟವು ಲಭಿಸುವುದು. ಮಹಾ ಪ್ರಭಾವವನ್ನು ಹೊಂದಿರುವ ಆ ಕಿರೀಟವು ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದೇ ಇಲ್ಲ.

ಯುವಕರೇ, ನಾನು ನಿಮಗೂ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ನೀವು ಹಿರಿಯರಿಗೆ ಅಧೀನರಾಗಿರಬೇಕು. ನೀವೆಲ್ಲರೂ ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದುಕೊಳ್ಳಬೇಕು.

“ದೇವರು ಅಹಂಕಾರಿಗಳಿಗೆ ವಿರುದ್ಧನಾಗಿದ್ದಾನೆ.
    ಆದರೆ ಆತನು ನಮ್ರತೆಯಿಂದ ಇರುವ ಜನರಿಗೆ ಕೃಪೆಯನ್ನು ದಯಪಾಲಿಸುವನು.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International