Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಅಪೊಸ್ತಲರ ಕಾರ್ಯಗಳು 2:42-47

ಅನ್ಯೋನ್ಯ ಜೀವನ

42 ಇವರೆಲ್ಲರೂ ಅಪೊಸ್ತಲರ ಬೋಧನೆಯನ್ನು ಕೇಳುವುದರಲ್ಲಿಯೂ ಸಹೋದರರ ಅನ್ಯೋನ್ಯತೆಯಲ್ಲಿಯೂ ರೊಟ್ಟಿ ಮುರಿಯುವುದರಲ್ಲಿಯೂ ಪ್ರಾರ್ಥನೆಗಳಲ್ಲಿಯೂ ನಿರತರಾಗಿದ್ದರು. 43 ಅಪೊಸ್ತಲರು ಅನೇಕ ಶಕ್ತಿಯುತ ಮತ್ತು ಅದ್ಭುತಕಾರ್ಯಗಳನ್ನು ಮಾಡುತ್ತಿದ್ದರು; ಮತ್ತು ಪ್ರತಿಯೊಬ್ಬರಿಗೂ ದೇವರಲ್ಲಿ ಭಯಭಕ್ತಿ ಉಂಟಾಯಿತು. 44 ಎಲ್ಲಾ ವಿಶ್ವಾಸಿಗಳು ಒಟ್ಟಾಗಿ ವಾಸಿಸುತ್ತಿದ್ದರು. ಅವರು ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಿದ್ದರು. 45 ತಮ್ಮ ಜಮೀನನ್ನು ಮತ್ತು ತಾವು ಹೊಂದಿದ್ದ ವಸ್ತುಗಳನ್ನು ಮಾರಿ, ಬಂದ ಹಣವನ್ನೆಲ್ಲಾ ಕೊರತೆಯಲ್ಲಿದ್ದವರಿಗೆ ಹಂಚಿಕೊಡುತ್ತಿದ್ದರು; 46 ಪ್ರತಿದಿನ ದೇವಾಲಯದಲ್ಲಿ ಸೇರಿಬರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. ಅವರು ತಮ್ಮ ಮನೆಗಳಲ್ಲಿ ರೊಟ್ಟಿ ಮುರಿದು ಒಟ್ಟಾಗಿ ಊಟ ಮಾಡುತ್ತಿದ್ದರು. ಅವರ ಹೃದಯಗಳು ಆನಂದದಿಂದ ತುಂಬಿದ್ದವು. 47 ಅವರು ದೇವರನ್ನು ಕೊಂಡಾಡುತ್ತಿದ್ದರು ಮತ್ತು ಜನರೆಲ್ಲರೂ ಅವರನ್ನು ಇಷ್ಟಪಡುತ್ತಿದ್ದರು. ಪ್ರತಿದಿನವೂ ಹೆಚ್ಚುಹೆಚ್ಚು ಜನರು ರಕ್ಷಣೆ ಹೊಂದುತ್ತಿದ್ದರು; ಪ್ರಭುವು ಅವರನ್ನೆಲ್ಲಾ ವಿಶ್ವಾಸಿಗಳ ಸಭೆಗೆ ಸೇರಿಸುತ್ತಿದ್ದನು.

ಕೀರ್ತನೆಗಳು 23

ರಚನೆಗಾರ: ದಾವೀದ.

23 ಯೆಹೋವನೇ ನನಗೆ ಕುರುಬನು.
    ನನಗೆ ಕೊರತೆಯೇ ಇಲ್ಲ.
ಆತನು ನನ್ನನ್ನು ಹಸಿರುಗಾವಲುಗಳಲ್ಲಿ ತಂಗಿಸುವನು.
    ಪ್ರಶಾಂತವಾದ ನೀರಿನ ತೊರೆಗಳ ಬಳಿಯಲ್ಲಿ ನನ್ನನ್ನು ನಡೆಸುವನು.
ಆತನು ತನ್ನ ಹೆಸರಿಗೆ ತಕ್ಕಂತೆ ನನ್ನ ಪ್ರಾಣಕ್ಕೆ ಚೈತನ್ಯ ನೀಡಿ
    ನೀತಿಮಾರ್ಗದಲ್ಲಿ ನನ್ನನ್ನು ನಡೆಸುವನು.
ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ
    ನೀನು ನನ್ನೊಂದಿಗಿರುವುದರಿಂದ ಭಯಪಡುವುದಿಲ್ಲ.
    ನಿನ್ನ ದೊಣ್ಣೆಯೂ ಊರುಗೋಲೂ ನನ್ನನ್ನು ಸಂತೈಸುತ್ತವೆ.
ವೈರಿಗಳ ಎದುರಿನಲ್ಲಿ ನೀನು ನನಗೆ ಔತಣವನ್ನು ಸಿದ್ಧಪಡಿಸಿರುವೆ;
    ನನ್ನ ತಲೆಗೆ ಎಣ್ಣೆಯನ್ನು ಹಚ್ಚಿರುವೆ.
    ನನ್ನ ಪಾತ್ರೆಯು ತುಂಬಿ ಹೊರಸೂಸುತ್ತಿದೆ.
ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಕೃಪೆಯೂ ನನ್ನೊಂದಿಗಿರುತ್ತವೆ.
    ನನ್ನ ಜೀವಮಾನವೆಲ್ಲಾ ಯೆಹೋವನ ಆಲಯದಲ್ಲೇ ವಾಸಿಸುವೆನು.

1 ಪೇತ್ರನು 2:19-25

19 ಒಬ್ಬನು ಅನ್ಯಾಯವಾಗಿ ಸಂಕಟಕ್ಕೆ ಒಳಗಾದಾಗ ದೇವರಿಗಾಗಿ ಅದನ್ನು ಸಹಿಸಿಕೊಂಡರೆ ದೇವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. 20 ಆದರೆ ನಿಮ್ಮ ತಪ್ಪಿಗಾಗಿ ನೀವು ದಂಡಿಸಲ್ಪಟ್ಟರೆ ಆ ದಂಡನೆಯನ್ನು ನೀವು ಅನುಭವಿಸಿದ್ದಕ್ಕೆ ನಿಮಗೇನೂ ಕೀರ್ತಿ ಬರುವುದಿಲ್ಲ. ಆದರೆ ನೀವು ಒಳ್ಳೆಯದನ್ನು ಮಾಡಿದ್ದರಿಂದ ಸಂಕಟಕ್ಕೆ ಒಳಗಾಗಿ ಅದನ್ನು ತಾಳ್ಮೆಯಿಂದ ಸಹಿಸಿಕೊಂಡರೆ ಅದು ದೇವರನ್ನು ಸಂತೋಷ ಪಡಿಸುತ್ತದೆ. 21 ಇದಕ್ಕಾಗಿಯೇ ನಿಮ್ಮನ್ನು ಕರೆಯಲಾಯಿತು. ನೀವು ಅನುಸರಿಸತಕ್ಕ ಮಾದರಿಯು ಕ್ರಿಸ್ತನೇ ಆಗಿದ್ದಾನೆ. ಆತನು ಮಾಡಿದಂತೆ ನೀವೂ ಮಾಡಿರಿ. ನೀವು ಸಂಕಟವನ್ನು ಅನುಭವಿಸುವಾಗ ತಾಳ್ಮೆಯಿಂದಿರಬೇಕು, ಏಕೆಂದರೆ ಕ್ರಿಸ್ತನು ನಿಮಗಾಗಿ ಸಂಕಟಪಟ್ಟನು.

22 “ಆತನು (ಕ್ರಿಸ್ತನು) ಪಾಪವನ್ನು ಮಾಡಲಿಲ್ಲ.
    ಆತನ ಬಾಯಿಂದ ಯಾವ ಸುಳ್ಳು ಮಾತೂ ಬರಲಿಲ್ಲ.”(A)

23 ಜನರು ಕ್ರಿಸ್ತನನ್ನು ಬಯ್ದರೂ ಆತನು ಅವರನ್ನು ಬಯ್ಯಲಿಲ್ಲ. ಆತನು ಸಂಕಟವನ್ನು ಅನುಭವಿಸಿದರೂ ಜನರನ್ನು ಹೆದರಿಸಲಿಲ್ಲ. ಆತನು ತನ್ನ ಕಾರ್ಯವನ್ನು ದೇವರಿಗೆ ವಹಿಸಿದನು. ಸರಿಯಾದ ನ್ಯಾಯತೀರ್ಪು ನೀಡುವಾತನು ದೇವರೊಬ್ಬನೇ. 24 ಕ್ರಿಸ್ತನು ನಮ್ಮ ಪಾಪಗಳನ್ನೆಲ್ಲಾ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನೇರಿದನು. ನಾವು ಪಾಪಕ್ಕೋಸ್ಕರ ಜೀವಿಸದೆ, ನೀತಿವಂತರಾಗಿ ಜೀವಿಸಬೇಕೆಂಬುದೇ ಆತನ ಉದ್ದೇಶವಾಗಿತ್ತು. ಆತನ (ಕ್ರಿಸ್ತನ) ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 25 ನೀವು ದಾರಿ ತಪ್ಪಿದ ಕುರಿಗಳಾಗಿದ್ದಿರಿ. ಆದರೆ ಈಗ ನೀವು ನಿಮ್ಮ ಕುರುಬನ ಬಳಿಗೆ ಅಂದರೆ ನಿಮ್ಮ ಆತ್ಮಗಳನ್ನು ಕಾಪಾಡುವಾತನ ಬಳಿಗೆ ಹಿಂತಿರುಗಿ ಬಂದಿರುವಿರಿ.

ಯೋಹಾನ 10:1-10

ಕುರುಬನು ಮತ್ತು ಅವನ ಕುರಿಗಳು

10 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಕುರಿಹಟ್ಟಿಯೊಳಗೆ ಪ್ರವೇಶಿಸುವಾಗ ಬಾಗಿಲಿನ ಮೂಲಕ ಪ್ರವೇಶಿಸಬೇಕು. ಮತ್ತೆಲ್ಲಿಂದಾದರೂ ಹತ್ತಿ ಬರುವವನು ಸುಲಿಗೆಗಾರನಾಗಿದ್ದಾನೆ; ಕುರಿಗಳನ್ನು ಕದ್ದುಕೊಳ್ಳಲು ಪ್ರಯತ್ನಿಸುವವನಾಗಿದ್ದಾನೆ. ಆದರೆ ಕುರುಬನು ಬಾಗಿಲ ಮೂಲಕ ಪ್ರವೇಶಿಸುತ್ತಾನೆ. ಕಾವಲುಗಾರನು ಕುರುಬನಿಗೆ ಬಾಗಿಲನ್ನು ತೆರೆಯುತ್ತಾನೆ. ಕುರಿಗಳು ಅವನ ಸ್ವರಕ್ಕೆ ಕಿವಿಗೊಡುತ್ತವೆ. ಕುರುಬನು ತನ್ನ ಸ್ವಂತ ಕುರಿಗಳನ್ನು ಹೆಸರು ಹಿಡಿದು ಕರೆದು ಹೊರಗೆ ಬಿಡುತ್ತಾನೆ. ಆ ಬಳಿಕ ಅವುಗಳ ಮುಂದೆ ಹೋಗುತ್ತಾ ಅವುಗಳಿಗೆ ಮಾರ್ಗದರ್ಶನ ಮಾಡುತ್ತಾನೆ. ಕುರಿಗಳು ಅವನನ್ನು ಹಿಂಬಾಲಿಸುತ್ತವೆ; ಏಕೆಂದರೆ ಅವು ಅವನ ಸ್ವರವನ್ನು ತಿಳಿದಿವೆ. ಆದರೆ ಕುರಿಗಳು ತಮಗೆ ಗೊತ್ತಿಲ್ಲದ ವ್ಯಕ್ತಿಯನ್ನು ಎಂದಿಗೂ ಹಿಂಬಾಲಿಸುವುದಿಲ್ಲ. ಅವುಗಳು ಆ ವ್ಯಕ್ತಿಯ ಬಳಿಯಿಂದ ಓಡಿಹೋಗುತ್ತವೆ. ಏಕೆಂದರೆ ಅವುಗಳು ಅವನ ಸ್ವರವನ್ನು ತಿಳಿದಿಲ್ಲ” ಎಂದು ಹೇಳಿದನು.

ಯೇಸು ಹೇಳಿದ ಈ ಸಾಮ್ಯದ ಅರ್ಥವನ್ನು ಜನರು ಗ್ರಹಿಸಿಕೊಳ್ಳಲಿಲ್ಲ.

ಯೇಸು ಒಳ್ಳೆಯ ಕುರುಬ

ಆದ್ದರಿಂದ ಯೇಸು ಮತ್ತೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನೇ ಕುರಿಗಳಿಗೆ ಬಾಗಿಲಾಗಿದ್ದೇನೆ. ನಾನು ಬರುವುದಕ್ಕಿಂತ ಮೊದಲು ಬಂದವರೆಲ್ಲರೂ ಕಳ್ಳರಾಗಿದ್ದರು ಮತ್ತು ಸುಲಿಗೆಗಾರರಾಗಿದ್ದರು. ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ನಾನೇ ಬಾಗಿಲಾಗಿದ್ದೇನೆ. ನನ್ನ ಮೂಲಕವಾಗಿ ಪ್ರವೇಶಿಸುವವರು ರಕ್ಷಣೆ ಹೊಂದುವರು. ಅವರು ಒಳಗೆ ಬರಬಲ್ಲರು. ಹೊರಗೆ ಹೋಗಬಲ್ಲರು ಮತ್ತು ಹುಲ್ಲುಗಾವಲನ್ನು ಕಂಡುಕೊಳ್ಳುವರು. 10 ಕಳ್ಳನು ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ ಬರುತ್ತಾನೆ. ನಾನಾದರೋ ಸಮೃದ್ಧಿಕರವಾದ ಜೀವವನ್ನು ಕೊಡಲು ಬಂದೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International