Revised Common Lectionary (Semicontinuous)
ದೇವಾಯಲಕ್ಕೆ ಹೋಗುವಾಗ ಹಾಡುವ ಗೀತೆ.
134 ಯೆಹೋವನ ಸೇವಕರೆಲ್ಲರೇ, ಆತನನ್ನು ಕೊಂಡಾಡಿರಿ.
ರಾತ್ರಿಯೆಲ್ಲಾ ದೇವಾಲಯದಲ್ಲಿ ಸೇವೆ ಮಾಡಿದವರೇ, ಆತನಿಗೆ ಸ್ತೋತ್ರಮಾಡಿರಿ.
2 ಸೇವಕರೇ, ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದ ಕಡೆಗೆ ಎತ್ತಿ
ಯೆಹೋವನನ್ನು ಕೊಂಡಾಡಿರಿ.
3 ಯೆಹೋವನು ನಿಮ್ಮನ್ನು ಚೀಯೋನಿನಿಂದ ಆಶೀರ್ವದಿಸಲಿ.
ಆತನು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಮಾಡಿದನು.
32 “ಆದ್ದರಿಂದ ಮಕ್ಕಳೇ, ನನಗೆ ಕಿವಿಗೊಡಿರಿ!
ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರಾಗಿದ್ದಾರೆ.
33 ನನ್ನ ಉಪದೇಶಗಳನ್ನು ಕೇಳಿ ಜ್ಞಾನವಂತರಾಗಿರಿ.
ಕಿವಿಗೊಡದಿರಬೇಡಿ!
34 ನನಗೆ ಕಿವಿಗೊಡುವವನು ಧನ್ಯನಾಗಿದ್ದಾನೆ.
ಅವನು ಪ್ರತಿದಿನ ನನ್ನ ಮನೆಬಾಗಿಲುಗಳ ಬಳಿಯಲ್ಲೂ ನನ್ನ ಬಾಗಿಲಿನ ನಿಲುವುಗಳ ಬಳಿಯಲ್ಲೂ ಕಾದುಕೊಂಡಿರುತ್ತಾನೆ.
35 ನನ್ನನ್ನು ಕಂಡುಕೊಂಡಂಥವನು ಜೀವವನ್ನು ಕಂಡುಕೊಳ್ಳುತ್ತಾನೆ.
ಅವನಿಗೆ ಯೆಹೋವನ ಕೃಪೆಯು ದೊರೆಯುತ್ತದೆ.
36 ಆದರೆ ನನ್ನನ್ನು ಕಂಡುಕೊಳ್ಳಲಾರದವನು
ತನಗೇ ಕೇಡುಮಾಡಿಕೊಳ್ಳುವನು.
ನನ್ನನ್ನು ದ್ವೇಷಿಸುವ ಜನರೆಲ್ಲರೂ ಮರಣವನ್ನು ಪ್ರೀತಿಸುವರು.”
ಜ್ಞಾನ ಮತ್ತು ಮೂರ್ಖತನ
9 ಜ್ಞಾನವೆಂಬಾಕೆ ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. ಆಕೆ ಅದಕ್ಕೆ ಏಳು ಕಂಬಗಳನ್ನು ಹಾಕಿದ್ದಾಳೆ. 2 ಜ್ಞಾನವೆಂಬಾಕೆ ಮಾಂಸದ ಅಡಿಗೆಯನ್ನೂ ದ್ರಾಕ್ಷಾರಸವನ್ನೂ ತಯಾರಿಸಿದ್ದಾಳೆ. ಆಕೆ ತನ್ನ ಮೇಜಿನ ಮೇಲೆ ಆಹಾರವನ್ನು ಇಟ್ಟಿದ್ದಾಳೆ. 3 ಆಮೇಲೆ ಆಕೆ, ತನ್ನ ಸೇವಕಿಯರನ್ನು ಕಳುಹಿಸಿ ನಗರದ ಎತ್ತರವಾದ ಸ್ಥಳದಿಂದ, 4 “ಕಲಿತುಕೊಳ್ಳಬೇಕಾಗಿರುವ ಜನರೇ, ಬನ್ನಿರಿ” ಎಂದು ಕೂಗುತ್ತಾಳೆ. ಆಕೆಯು ಬುದ್ಧಿಹೀನರಿಗೆ, 5 “ಬನ್ನಿರಿ, ನನ್ನ ಜ್ಞಾನದ ಆಹಾರವನ್ನು ತಿನ್ನಿರಿ. ನಾನು ತಯಾರಿಸಿರುವ ದ್ರಾಕ್ಷಾರಸವನ್ನು ಕುಡಿಯಿರಿ. 6 ನಿಮ್ಮ ಮೂರ್ಖ ಮಾರ್ಗಗಳನ್ನು ತೊರೆದುಬಿಡಿ. ಆಗ ನಿಮಗೆ ಜೀವವು ದೊರೆಯುವುದು. ವಿವೇಕಮಾರ್ಗದಲ್ಲಿ ಮುಂದೆ ಸಾಗಿರಿ” ಎಂದು ಆಕೆ ಹೇಳಿದಳು.
ಜೀವಂತವಾದ ಕಲ್ಲು ಮತ್ತು ಪವಿತ್ರವಾದ ದೇಶ
2 ಆದ್ದರಿಂದ ಇತರ ಜನರಿಗೆ ಕೇಡುಮಾಡಬೇಡಿ, ಸುಳ್ಳಾಡದಿರಿ, ಜನರನ್ನು ಮೋಸಗೊಳಿಸಬೇಡಿ, ಹೊಟ್ಟೆಕಿಚ್ಚುಪಡದಿರಿ, ಜನರ ಬಗ್ಗೆ ಕೆಟ್ಟಮಾತುಗಳನ್ನು ಆಡದಿರಿ. ಇವುಗಳನ್ನೆಲ್ಲಾ ನಿಮ್ಮ ಜೀವಿತದಿಂದ ಹೊರಕ್ಕೆ ಹಾಕಿರಿ. 2 ಹೊಸದಾಗಿ ಹುಟ್ಟಿದ ಕೂಸುಗಳಂತಿರಿ. ನಿಮ್ಮ ಆತ್ಮವನ್ನು ಪೋಷಿಸುವಂಥ ಶುದ್ಧ ಹಾಲನ್ನು (ದೇವರ ವಾಕ್ಯವೆಂಬ) ಬಯಸಿರಿ. ನೀವು ಅದನ್ನು ಕುಡಿಯುವುದರಿಂದ ಬೆಳವಣಿಗೆ ಹೊಂದಿ ರಕ್ಷಿಸಲ್ಪಡುವಿರಿ. 3 ನೀವು ಈಗಾಗಲೇ ದೇವರ ಒಳ್ಳೆಯತನವನ್ನು ರುಚಿ ನೋಡಿದ್ದೀರಿ.
Kannada Holy Bible: Easy-to-Read Version. All rights reserved. © 1997 Bible League International