Revised Common Lectionary (Semicontinuous)
ಪೇತ್ರನ ಪ್ರಸಂಗ
14 ಬಳಿಕ ಪೇತ್ರನು ಉಳಿದ ಹನ್ನೊಂದು ಮಂದಿ ಅಪೊಸ್ತಲರೊಂದಿಗೆ ಎದ್ದುನಿಂತುಕೊಂಡನು. ಎಲ್ಲಾ ಜನರಿಗೆ ಕೇಳುವಂತೆ ಅವನು ಗಟ್ಟಿಯಾಗಿ ಹೀಗೆಂದನು: “ಯೆಹೂದ್ಯರೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರೇ, ನನಗೆ ಕಿವಿಗೊಡಿರಿ. ನೀವು ತಿಳಿದುಕೊಳ್ಳಬೇಕಾದ ಸಂಗತಿಯನ್ನು ನಾನು ನಿಮಗೆ ಹೇಳುತ್ತೇನೆ.
36 “ಆದ್ದರಿಂದ ಯೆಹೂದ್ಯರೆಲ್ಲರೂ ಇದನ್ನು ನಿಜವಾಗಿಯೂ ತಿಳಿದುಕೊಳ್ಳಬೇಕು. ದೇವರು ಯೇಸುವನ್ನು ಪ್ರಭುವನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆ. ನೀವು ಶಿಲುಬೆಗೇರಿಸಿದ ವ್ಯಕ್ತಿಯೇ ಆತನು!”
37 ಇದನ್ನು ಕೇಳಿದಾಗ, ಅವರ ಹೃದಯದಲ್ಲಿ ಅಲಗು ನೆಟ್ಟಂತಾಯಿತು. ಅವರು ಪೇತ್ರನನ್ನು ಮತ್ತು ಉಳಿದ ಅಪೊಸ್ತಲರನ್ನು, “ಈಗ ನಾವೇನು ಮಾಡಬೇಕು?” ಎಂದು ಕೇಳಿದರು.
38 ಪೇತ್ರನು ಅವರಿಗೆ, “ನಿಮ್ಮಲ್ಲಿ ಪ್ರತಿಯೊಬ್ಬರೂ ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಿರಿ. ಆಗ ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವನು. ಅಲ್ಲದೆ ದೇವರು ವಾಗ್ದಾನ ಮಾಡಿರುವ ಪವಿತ್ರಾತ್ಮನನ್ನು ಹೊಂದಿಕೊಳ್ಳುವಿರಿ. 39 ಈ ವಾಗ್ದಾನವನ್ನು ನಿಮಗೂ ನಿಮ್ಮ ಮಕ್ಕಳಿಗೂ ಬಹು ದೂರದಲ್ಲಿರುವ ಜನರಿಗೂ ಕೊಡಲಾಗಿದೆ. ನಮ್ಮ ದೇವರಾದ ಪ್ರಭುವು ತನ್ನ ಬಳಿಗೆ ಕರೆಯುವ ಪ್ರತಿಯೊಬ್ಬರಿಗೂ ಈ ವಾಗ್ದಾನವನ್ನು ಕೊಟ್ಟಿದ್ದಾನೆ” ಎಂದು ಹೇಳಿದನು.
40 ಪೇತ್ರನು ಇನ್ನೂ ಅನೇಕ ಮಾತುಗಳಿಂದ ಅವರನ್ನು ಎಚ್ಚರಿಸಿ, “ಈ ದುಷ್ಟ ಸಂತತಿಯಿಂದ ತಪ್ಪಿಸಿಕೊಳ್ಳಿ” ಎಂದು ಬೇಡಿಕೊಂಡನು. 41 ಪೇತ್ರನು ಹೇಳಿದ್ದನ್ನು ಸ್ವೀಕರಿಸಿಕೊಂಡ ಜನರು ದೀಕ್ಷಾಸ್ನಾನ ಮಾಡಿಸಿಕೊಂಡರು. ಆ ದಿನ ಸುಮಾರು ಮೂರುಸಾವಿರ ಜನರು ವಿಶ್ವಾಸಿಗಳ ಗುಂಪಿಗೆ ಸೇರಿದರು.
116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
ನಾನು ಆತನನ್ನು ಪ್ರೀತಿಸುತ್ತೇನೆ.
2 ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
ಆತನು ನನಗೆ ಕಿವಿಗೊಡುತ್ತಾನೆ.
3 ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
4 ಆಗ ನಾನು ಯೆಹೋವನ ಹೆಸರು ಹೇಳಿ,
“ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
ಜನರ ಮುಂದೆ ಆತನಿಗೆ ಸಲ್ಲಿಸುವೆನು.
15 ಯೆಹೋವನು ತನ್ನ ಭಕ್ತರ ಮರಣವನ್ನು
ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
ನಿನ್ನ ದಾಸಿಯರಲ್ಲೊಬ್ಬಳ ಮಗ.
ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
ಈ ಯಜ್ಞಗಳನ್ನು ಅರ್ಪಿಸುವೆನು.
ಯೆಹೋವನಿಗೆ ಸ್ತೋತ್ರವಾಗಲಿ!
17 ನೀವು ದೇವರಲ್ಲಿ ಪ್ರಾರ್ಥಿಸುವಾಗ ಆತನನ್ನು ತಂದೆಯೆಂದು ಕರೆಯುತ್ತೀರಿ. ದೇವರು ಪ್ರತಿಯೊಬ್ಬರಿಗೆ ಅವರವರ ಕೆಲಸಕ್ಕೆ ತಕ್ಕಂತೆ ತೀರ್ಪುಕೊಡುವನು. ನೀವು ಈ ಲೋಕದಲ್ಲಿ ಪ್ರವಾಸಿಗಳಾಗಿರುವುದರಿಂದ ದೇವರಿಗೆ ಭಯಪಟ್ಟು ಜೀವಿಸಿ. 18 ಮೊದಲು ನೀವು ನಿರರ್ಥಕವಾದ ರೀತಿಯಲ್ಲಿ ಜೀವಿಸುತ್ತಿದ್ದಿರೆಂಬುದು ನಿಮಗೇ ತಿಳಿದಿದೆ. ನಿಮಗಿಂತಲೂ ಮೊದಲು ಜೀವಿಸಿದ್ದವರಿಂದ ಅಂತಹ ಜೀವಿತವನ್ನು ಕಲಿತುಕೊಂಡಿರಿ. ಆದರೆ ಅದರಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿಬಂಗಾರಗಳಿಂದಲ್ಲ. 19 ಪೂರ್ಣಾಂಗವಾದ ಮತ್ತು ಪರಿಶುದ್ಧವಾದ ಕುರಿಮರಿಯಾದ ಕ್ರಿಸ್ತನ ಅಮೂಲ್ಯವಾದ ರಕ್ತದಿಂದ ನಿಮಗೆ ಬಿಡುಗಡೆಯಾಯಿತು. 20 ಈ ಲೋಕವು ಸೃಷ್ಟಿಯಾಗುವುದಕ್ಕೆ ಮೊದಲೇ ಕ್ರಿಸ್ತನು ಆರಿಸಲ್ಪಟ್ಟನು. ಆದರೆ ಆತನು ನಿಮಗೋಸ್ಕರ ಈ ಅಂತ್ಯಕಾಲದಲ್ಲಿ ಪ್ರತ್ಯಕ್ಷನಾದನು. 21 ನೀವು ಕ್ರಿಸ್ತನ ಮೂಲಕ ದೇವರನ್ನು ನಂಬಿದ್ದೀರಿ. ದೇವರು ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ನಂತರ ದೇವರು ಆತನಿಗೆ ಪ್ರಭಾವವನ್ನು ದಯಪಾಲಿಸಿದನು. ಆದ್ದರಿಂದ ನಿಮ್ಮ ನಂಬಿಕೆ ಮತ್ತು ನಿರೀಕ್ಷೆಗಳು ದೇವರಲ್ಲಿರಲಿ.
22 ನೀವು ಸತ್ಯಕ್ಕೆ ವಿಧೇಯರಾಗಿರುವುದರ ಮೂಲಕ ನಿಮ್ಮನ್ನು ಪರಿಶುದ್ಧರನ್ನಾಗಿ ಮಾಡಿಕೊಂಡಿದ್ದೀರಿ. ಈಗ ನಿಮ್ಮ ಸಹೋದರ ಸಹೋದರಿಯರನ್ನು ನಿಜವಾಗಿಯೂ ಪ್ರೀತಿಸಬಲ್ಲವರಾಗಿದ್ದೀರಿ. ಆದ್ದರಿಂದ ಒಬ್ಬರನ್ನೊಬ್ಬರು ಹೃದಯಪೂರ್ವಕವಾಗಿ[a] ಪ್ರೀತಿಸಿರಿ. 23 ನೀವು ಹೊಸದಾಗಿ ಹುಟ್ಟಿದವರಾಗಿದ್ದೀರಿ. ಈ ಹೊಸಜೀವವು ನಾಶವಾಗುವಂಥದ್ದರಿಂದ ಬರದೆ ನಾಶವಾಗದೆ ಇರುವಂಥದ್ದರಿಂದ ಬಂದದ್ದಾಗಿದೆ. ಸಜೀವವೂ ಶಾಶ್ವತವೂ ಆಗಿರುವ ದೇವರ ವಾಕ್ಯದ ಮೂಲಕ ನೀವು ಹೊಸದಾಗಿ ಹುಟ್ಟಿದ್ದೀರಿ.
ಎಮ್ಮಾಹುವಿನ ದಾರಿಯಲ್ಲಿ
(ಮಾರ್ಕ 16:12-13)
13 ಅದೇ ದಿನ ಯೇಸುವಿನ ಶಿಷ್ಯರಲ್ಲಿ ಇಬ್ಬರು ಎಮ್ಮಾಹು ಎಂಬ ಪಟ್ಟಣಕ್ಕೆ ಹೋಗುತ್ತಿದ್ದರು. ಅದು ಜೆರುಸಲೇಮಿನಿಂದ ಏಳು ಮೈಲಿ ದೂರದಲ್ಲಿತ್ತು. 14 ನಡೆದ ಪ್ರತಿಯೊಂದು ಸಂಗತಿಯ ಕುರಿತು ಅವರು ಮಾತಾಡುತ್ತಿದ್ದರು. 15 ಆಗ ಯೇಸು ತಾನೇ ಅವರ ಹತ್ತಿರಕ್ಕೆ ಬಂದು, ಅವರ ಜೊತೆಯಲ್ಲಿ ಹೋದನು. 16 (ಆದರೆ ಅವರಿಗೆ ಆತನ ಗುರುತು ಸಿಕ್ಕಲಿಲ್ಲ.) 17 ಯೇಸು ಅವರಿಗೆ, “ನೀವು ಯಾವ ಸಂಗತಿಗಳ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.
ಅವರಿಬ್ಬರು ಅಲ್ಲೇ ನಿಂತರು. ಅವರ ಮುಖಗಳು ಬಹಳ ದುಃಖದಿಂದ ತುಂಬಿಹೋಗಿದ್ದವು. 18 ಅವರಲ್ಲಿ ಕ್ಲೆಯೋಫನೆಂಬುವನು, “ಇತ್ತೀಚೆಗೆ ಜೆರುಸಲೇಮಿನಲ್ಲಿ ನಡೆದ ಸಂಗತಿಯನ್ನು ತಿಳಿಯದಿರುವ ವ್ಯಕ್ತಿ ಎಂದರೆ ನೀನೊಬ್ಬನೇ ಇರಬೇಕು” ಎಂದು ಉತ್ತರಿಸಿದನು.
19 ಯೇಸು ಅವರಿಗೆ, “ನೀವು ಯಾವುದರ ಬಗ್ಗೆ ಮಾತಾಡುತ್ತಿದ್ದೀರಿ?” ಎಂದು ಕೇಳಿದನು.
ಅವರು ಆತನಿಗೆ, “ನಜರೇತಿನ ಯೇಸುವಿನ ಬಗ್ಗೆ. ಆತನು ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಮಹಾಪ್ರವಾದಿಯಾಗಿದ್ದನು. ಆತನು ಅನೇಕ ಸಂಗತಿಗಳನ್ನು ಹೇಳಿದನು ಮತ್ತು ಅದ್ಭುತಕಾರ್ಯಗಳನ್ನು ಮಾಡಿದನು. 20 ನಮ್ಮ ನಾಯಕರು ಮತ್ತು ಮಹಾಯಾಜಕರು ಆತನಿಗೆ ಮರಣದಂಡನೆ ವಿಧಿಸಲು ಒಪ್ಪಿಸಿಕೊಟ್ಟು ಶಿಲುಬೆಗೆ ಜಡಿಸಿದರು. 21 ಯೇಸುವೇ ಇಸ್ರೇಲ್ ಜನರನ್ನು (ಯೆಹೂದ್ಯರನ್ನು) ಬಿಡಿಸುತ್ತಾನೆಂದು ನಾವು ನಿರೀಕ್ಷಿಸಿಕೊಂಡಿದ್ದೆವು. ಆದರೆ ಇದೆಲ್ಲಾ ನಡೆದುಹೋಯಿತು.
“ಈಗ ಮತ್ತೊಂದು ಸಂಗತಿಯಾಗಿದೆ. ಈಗಾಗಲೇ ಆತನು ಸತ್ತು ಮೂರು ದಿನಗಳಾದವು. 22 ಇಂದು ನಮ್ಮ ಕೆಲವು ಸ್ತ್ರೀಯರು ಆಶ್ಚರ್ಯಕರವಾದ ಸಂಗತಿಗಳನ್ನು ಹೇಳಿದರು. ಮುಂಜಾನೆ ಬೆಳಗಾಗುವಾಗ, ಯೇಸುವಿನ ದೇಹವನ್ನು ಇಟ್ಟಿದ್ದ ಸಮಾಧಿಯ ಬಳಿಗೆ ಆ ಸ್ತ್ರೀಯರು ಹೋಗಿದ್ದರು. 23 ಆದರೆ ಅವರು ಆತನ ದೇಹವನ್ನು ಅಲ್ಲಿ ಕಾಣಲಿಲ್ಲ. ಆ ಸ್ತ್ರೀಯರು ಹಿಂತಿರುಗಿ ಬಂದು ತಮಗೆ ದೇವದೂತರಿಬ್ಬರ ದರ್ಶನವಾಯಿತೆಂದೂ ಯೇಸು ಬದುಕಿದ್ದಾನೆಂದೂ ತಮಗೆ ಇದನ್ನು ದೇವದೂತರೇ ತಿಳಿಸಿದರೆಂದೂ ನಮಗೆ ಹೇಳಿದರು. 24 ಆದ್ದರಿಂದ ನಮ್ಮ ಗುಂಪಿನಲ್ಲಿದ್ದ ಕೆಲವರು ಸಹ ಸಮಾಧಿಯ ಬಳಿಗೆ ಹೋದರು. ಸ್ತ್ರೀಯರು ಹೇಳಿದ ಹಾಗೆಯೇ ಸಮಾಧಿಯು ಬರಿದಾಗಿತ್ತು. ನಾವು ಸುತ್ತಮುತ್ತ ನೋಡಿದೆವು. ಆದರೆ ನಮ್ಮಲ್ಲಿ ಯಾರಿಗೂ ಆತನು (ಯೇಸು) ಕಾಣಲಿಲ್ಲ” ಎಂದು ಹೇಳಿದರು.
25 ಆಗ ಯೇಸು ಅವರಿಗೆ, “ನೀವು ಬುದ್ಧಿಹೀನರು ಮತ್ತು ಸತ್ಯವನ್ನು ಗ್ರಹಿಸುವುದರಲ್ಲಿ ಮಂದಗತಿಗಳು! ಪ್ರವಾದಿಗಳು ಹೇಳಿದ ಪ್ರತಿಯೊಂದನ್ನೂ ನೀವು ನಂಬಬೇಕು. 26 ಕ್ರಿಸ್ತನು ತನ್ನ ಮಹಿಮೆಯನ್ನು ಪ್ರವೇಶಿಸುವ ಮೊದಲು ಇಂಥ ಶ್ರಮೆಗಳನ್ನು ಅನುಭವಿಸಬೇಕು ಎಂದು ಪ್ರವಾದಿಗಳು ಹೇಳಿದ್ದಾರೆ” ಅಂದನು. 27 ಬಳಿಕ ಯೇಸು ತನ್ನ ಬಗ್ಗೆ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದನ್ನೂ ವಿವರಿಸತೊಡಗಿದನು. ಯೇಸುವು ಮೋಶೆಯ ಗ್ರಂಥಗಳಿಂದ ಪ್ರಾರಂಭಿಸಿ ಪ್ರವಾದಿಗಳು ತನ್ನ ಬಗ್ಗೆ ಹೇಳಿದ ವಿಷಯಗಳ ಕುರಿತು ವಿವರಿಸಿದನು.
28 ಅವರು ಎಮ್ಮಾಹು ಊರಿನ ಹತ್ತಿರಕ್ಕೆ ಬಂದಾಗ ಆತನು ತಾನು ಅಲ್ಲಿ ಇಳಿದುಕೊಳ್ಳದವನಂತೆ ನಟಿಸಿದನು. 29 ಆದರೆ ಅವರು ಆತನಿಗೆ, “ಈಗ ಹೊತ್ತಾಯಿತು, ರಾತ್ರಿಯಾಗುತ್ತಾ ಬಂದಿದೆ. ನಮ್ಮೊಂದಿಗೆ ಇರು” ಎಂದು ಬೇಡಿಕೊಂಡರು. ಆದ್ದರಿಂದ ಆತನು ಅವರೊಂದಿಗಿರಲು ಊರೊಳಗೆ ಹೋದನು.
30 ಯೇಸು ಅವರ ಸಂಗಡ ಕುಳಿತುಕೊಂಡು ಸ್ವಲ್ಪ ರೊಟ್ಟಿಯನ್ನು ತೆಗೆದುಕೊಂಡನು. ಆತನು ಆಹಾರಕ್ಕಾಗಿ ದೇವರಿಗೆ ಸೋತ್ರಮಾಡಿ ಅದನ್ನು ಮುರಿದು ಅವರಿಗೆ ಕೊಟ್ಟನು. 31 ಆಗ ಅವರು ಯೇಸುವನ್ನು ಗುರುತಿಸಿದರು. ಆದರೆ ಆತನೇ ಯೇಸುವೆಂದು ಅವರು ತಿಳಿದಾಕ್ಷಣವೇ ಆತನು ಅವರ ಕಣ್ಣಿಗೆ ಮಾಯವಾದನು. 32 ಅವರಿಬ್ಬರು, “ಯೇಸು ದಾರಿಯಲ್ಲಿ ನಮ್ಮ ಸಂಗಡ ಮಾತಾಡಿದಾಗ ನಮ್ಮಲ್ಲಿ ಬೆಂಕಿ ಉರಿದಂತಾಯಿತಲ್ಲವೇ? ಪವಿತ್ರ ಗ್ರಂಥದ ನಿಜ ಅರ್ಥವನ್ನು ಆತನು ವಿವರಿಸಿದಾಗ, ಬಹಳ ರೋಮಾಂಚಕಾರಿಯಾಗಿರಲಿಲ್ಲವೇ?” ಎಂದು ಮಾತಾಡಿಕೊಂಡರು.
33 ಆ ಕೂಡಲೇ ಅವರಿಬ್ಬರೂ ಎದ್ದು ಜೆರುಸಲೇಮಿಗೆ ಹಿಂತಿರುಗಿ ಹೋದರು. ಜೆರುಲೇಮಿನಲ್ಲಿ ಯೇಸುವಿನ ಶಿಷ್ಯರು ಒಟ್ಟಾಗಿ ಸೇರಿಬಂದಿದ್ದರು. ಹನ್ನೊಂದು ಮಂದಿ ಅಪೊಸ್ತಲರು ಮತ್ತು ಅವರ ಸಂಗಡ ಇದ್ದ ಆ ಜನರು, 34 “ಪ್ರಭುವು (ಯೇಸು) ಸತ್ತವರೊಳಗಿಂದ ನಿಜವಾಗಿ ಎದ್ದಿದ್ದಾನೆ! ಆತನು ಸೀಮೋನನಿಗೆ (ಪೇತ್ರ) ಕಾಣಿಸಿಕೊಂಡನು” ಎಂದು ಹೇಳಿದರು.
35 ಆಗ ಆ ಇಬ್ಬರು ದಾರಿಯಲ್ಲಿ ನಡೆದ ಸಂಗತಿಗಳನ್ನು ತಿಳಿಸಿದರು. ಆತನು ರೊಟ್ಟಿ ಮುರಿದಾಗ ತಾವು ಆತನನ್ನು ಗುರುತಿಸಿದ್ದಾಗಿ ಅವರು ಹೇಳಿದರು.
Kannada Holy Bible: Easy-to-Read Version. All rights reserved. © 1997 Bible League International