Revised Common Lectionary (Semicontinuous)
116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
ನಾನು ಆತನನ್ನು ಪ್ರೀತಿಸುತ್ತೇನೆ.
2 ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
ಆತನು ನನಗೆ ಕಿವಿಗೊಡುತ್ತಾನೆ.
3 ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
4 ಆಗ ನಾನು ಯೆಹೋವನ ಹೆಸರು ಹೇಳಿ,
“ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
ಜನರ ಮುಂದೆ ಆತನಿಗೆ ಸಲ್ಲಿಸುವೆನು.
15 ಯೆಹೋವನು ತನ್ನ ಭಕ್ತರ ಮರಣವನ್ನು
ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
ನಿನ್ನ ದಾಸಿಯರಲ್ಲೊಬ್ಬಳ ಮಗ.
ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
ಈ ಯಜ್ಞಗಳನ್ನು ಅರ್ಪಿಸುವೆನು.
ಯೆಹೋವನಿಗೆ ಸ್ತೋತ್ರವಾಗಲಿ!
ಸೇವಕರಿಗಾಗಿ ದೇವರ ಔತಣ
6 ಆ ಸಮಯದಲ್ಲಿ, ಸರ್ವಶಕ್ತನಾದ ಯೆಹೋವನು ಎಲ್ಲಾ ಜನರಿಗಾಗಿ ಈ ಪರ್ವತದ ಮೇಲೆ ಔತಣವನ್ನು ಏರ್ಪಡಿಸುವನು. ಅದು ಉತ್ಕೃಷ್ಟವಾದ ದ್ರಾಕ್ಷಾರಸದಿಂದಲೂ ಮೃಷ್ಠಾನ್ನದಿಂದಲೂ ಕೂಡಿರುವದು.
7 ಆದರೆ ಎಲ್ಲಾ ಜನಾಂಗಗಳನ್ನು ಮತ್ತು ಜನರನ್ನು ಮುಚ್ಚುವ ಒಂದು ಮುಸುಕು ಇದೆ. ಆ ಮುಸುಕು ಯಾವದೆಂದರೆ ಮರಣ. 8 ಆದರೆ ಮರಣವು ಎಂದೆಂದಿಗೂ ನಾಶಮಾಡಲ್ಪಡುವದು. ನನ್ನ ಒಡೆಯನಾಗಿರುವ ಯೆಹೋವನು ಪ್ರತೀ ಮುಖದಲ್ಲಿರುವ ಕಣ್ಣೀರನ್ನು ಒರೆಸುವನು. ಹಿಂದೆ ಆತನ ಜನರೆಲ್ಲಾ ದುಃಖಕ್ಕೆ ಒಳಗಾಗಿದ್ದರು. ಆದರೆ ದೇವರು ಆ ದುಃಖವನ್ನು ಈ ಭೂಮಿಯಿಂದಲೇ ತೆಗೆದುಹಾಕುವನು. ಇವೆಲ್ಲಾ ಯೆಹೋವನು ಹೇಳಿದಂತೆಯೇ ಸಂಭವಿಸುವದು.
9 ಆ ಸಮಯದಲ್ಲಿ ಜನರು,
“ನಮ್ಮ ದೇವರು ಇಲ್ಲಿದ್ದಾನೆ.
ಆತನಿಗಾಗಿಯೇ ನಾವು ಕಾಯುತ್ತಿದ್ದೆವು.
ಆತನು ನಮ್ಮನ್ನು ರಕ್ಷಿಸಲು ಬಂದಿದ್ದಾನೆ.
ನಾವು ನಮ್ಮ ದೇವರಾದ ಯೆಹೋವನಿಗಾಗಿ ಕಾಯುತ್ತಿದ್ದೆವು.
ಆತನು ನಮ್ಮನ್ನು ರಕ್ಷಿಸುವಾಗ ನಾವು ಹರ್ಷಭರಿತರಾಗಿ ಸಂತೋಷಿಸುವೆವು” ಎಂದು ಹೇಳುವರು.
ನಿಮಗೆ ಪ್ರತಿಫಲ ದೊರೆಯುವುದು
12 ಬಳಿಕ ಯೇಸು ತನ್ನನ್ನು ಆಮಂತ್ರಿಸಿದ ಫರಿಸಾಯನಿಗೆ, “ನೀನು ಮಧ್ಯಾಹ್ನದ ಊಟಕ್ಕೆ ಅಥವಾ ರಾತ್ರಿಯ ಊಟಕ್ಕೆ ನಿನ್ನ ಸ್ನೇಹಿತರನ್ನು, ಸಹೋದರರನ್ನು, ಸಂಬಂಧಿಕರನ್ನು ಮತ್ತು ಶ್ರೀಮಂತರಾದ ನೆರೆಯವರನ್ನು ಆಮಂತ್ರಿಸಿದರೆ, ಅವರೂ ನಿನ್ನನ್ನು ಮತ್ತೊಮ್ಮೆ ಊಟಕ್ಕೆ ಆಮಂತ್ರಿಸುವರು. ಆಗ ಅದೇ ನಿನಗೆ ಪ್ರತಿಫಲವಾಗುವುದು. 13 ಅದರ ಬದಲು, ನೀನು ಔತಣ ಮಾಡಿಸುವಾಗ ಬಡಜನರನ್ನು, ಕುಂಟರನ್ನು ಮತ್ತು ಕುರುಡರನ್ನು ಆಮಂತ್ರಿಸು. 14 ಆಗ ನಿನಗೆ ಆಶೀರ್ವಾದ ದೊರೆಯುವುದು. ಏಕೆಂದರೆ, ಈ ಜನರು ನಿನ್ನನ್ನು ಔತಣಕ್ಕೆ ಆಮಂತ್ರಿಸಲಾರರು. ಅವರಲ್ಲಿ ಏನೂ ಇಲ್ಲ. ಆದರೆ ನೀತಿವಂತರು ಜೀವಂತವಾಗಿ ಎದ್ದುಬರುವಾಗ, ನಿನಗೆ ಪ್ರತಿಫಲ ದೊರೆಯುವುದು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International