Revised Common Lectionary (Semicontinuous)
116 ಯೆಹೋವನು ನನ್ನ ಮೊರೆಯನ್ನು ಕೇಳಿದ್ದರಿಂದ
ನಾನು ಆತನನ್ನು ಪ್ರೀತಿಸುತ್ತೇನೆ.
2 ನಾನು ಆತನಿಗೆ ಮೊರೆಯಿಡುವಾಗಲೆಲ್ಲಾ
ಆತನು ನನಗೆ ಕಿವಿಗೊಡುತ್ತಾನೆ.
3 ಮರಣಕರವಾದ ಹಗ್ಗಗಳು ನನ್ನನ್ನು ಸುತ್ತಿಕೊಂಡಿದ್ದವು.
ಸಮಾಧಿಯು ನನ್ನನ್ನು ಮುಚ್ಚಿಕೊಳ್ಳುತ್ತಿತ್ತು.
ನಾನು ಭಯಗೊಂಡಿದ್ದೆನು; ಚಿಂತೆಗೊಳಗಾಗಿದ್ದೆನು.
4 ಆಗ ನಾನು ಯೆಹೋವನ ಹೆಸರು ಹೇಳಿ,
“ಯೆಹೋವನೇ, ನನ್ನನ್ನು ರಕ್ಷಿಸು!” ಎಂದು ಮೊರೆಯಿಟ್ಟೆನು.
12 ಯೆಹೋವನ ಮಹೋಪಕಾರಗಳಿಗೆ ಬದಲೇನು ಕೊಡಲಿ?
ನನ್ನಲ್ಲಿರುವುದೆಲ್ಲ ಯೆಹೋವನದೇ.
13 ನನ್ನನ್ನು ರಕ್ಷಿಸಿದ್ದರಿಂದ ಆತನಿಗೆ ಪಾನದ್ರವ್ಯವನ್ನು ಅರ್ಪಿಸುವೆನು.
ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
14 ನಾನು ಯೆಹೋವನಿಗೆ ಮಾಡಿದ ಹರಕೆಗಳನ್ನು
ಜನರ ಮುಂದೆ ಆತನಿಗೆ ಸಲ್ಲಿಸುವೆನು.
15 ಯೆಹೋವನು ತನ್ನ ಭಕ್ತರ ಮರಣವನ್ನು
ಅಲ್ಪವೆಂದು ಎಣಿಸುವುದಿಲ್ಲ.
16 ಯೆಹೋವನೇ, ನಾನು ನಿನ್ನ ಸೇವಕ.
ನಿನ್ನ ದಾಸಿಯರಲ್ಲೊಬ್ಬಳ ಮಗ.
ನೀನೇ ನನ್ನ ಪ್ರಥಮ ಉಪಾಧ್ಯಾಯ!
17 ನಾನು ನಿನಗೆ ಕೃತಜ್ಞತಾ ಕಾಣಿಕೆಯನ್ನು ಅರ್ಪಿಸುವೆನು.
ಆತನ ಹೆಸರಿನಲ್ಲಿ ಪ್ರಾರ್ಥಿಸುವೆನು.
18 ನನ್ನ ಹರಕೆಗಳನ್ನು
ಯೆಹೋವನಿಗೆ ಜನರ ಮುಂದೆ ಸಲ್ಲಿಸುವೆನು.
19 ಜೆರುಸಲೇಮಿನ ದೇವಾಲಯದ ಅಂಗಳಗಳಲ್ಲಿ
ಈ ಯಜ್ಞಗಳನ್ನು ಅರ್ಪಿಸುವೆನು.
ಯೆಹೋವನಿಗೆ ಸ್ತೋತ್ರವಾಗಲಿ!
ದೇವರಿಗೆ ಸ್ತೋತ್ರಗಾನ
25 ಯೆಹೋವನೇ, ನೀನೇ ನನ್ನ ದೇವರು.
ನಿನ್ನನ್ನು ಗೌರವಿಸಿ ನಿನ್ನ ನಾಮವನ್ನು ಸ್ತುತಿಸುವೆನು.
ನೀನು ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿರುವೆ.
ಬಹಳ ಕಾಲದ ಹಿಂದೆ ನೀನು ಹೇಳಿರುವ ವಿಷಯಗಳು ಸತ್ಯವೇ ಸರಿ.
ನೀನು ಮುಂತಿಳಿಸಿದಂತೆಯೇ ಎಲ್ಲವೂ ಸಂಭವಿಸಿದವು.
2 ನೀನು ವಿದೇಶದ ಪಟ್ಟಣವನ್ನು ಕೆಡವಿಹಾಕಿರುವೆ.
ಆ ಪಟ್ಟಣವು ಮಹಾಗೋಡೆಗಳಿಂದ ಸಂರಕ್ಷಿಸಲ್ಪಟ್ಟದ್ದಾಗಿತ್ತು.
ಆದರೆ ಈಗ ಅದು ಕೇವಲ ಕಲ್ಲುಗಳ ರಾಶಿ.
ಅರಮನೆಯು ಕೆಡವಲ್ಪಟ್ಟಿದೆ.
ಅದನ್ನು ತಿರುಗಿ ಕಟ್ಟಲು ಸಾಧ್ಯವೇ ಇಲ್ಲ.
3 ಬಲಾಢ್ಯ ದೇಶಗಳ ಜನರು ನಿನ್ನನ್ನು ಸನ್ಮಾನಿಸುವರು.
ಬಲಿಷ್ಠ ನಗರಗಳ ಬಲಶಾಲಿಗಳು ನಿನಗೆ ಭಯಪಡುವರು.
4 ಯೆಹೋವನೇ, ನೀನೇ ನಮ್ಮ ಆಶ್ರಯವು. ಬಡವರಿಗೆ ನೀನೇ ಆಧಾರ.
ಅವರ ಸಮಸ್ಯೆಗಳು ಅವರನ್ನು ಕಷ್ಟಕ್ಕೆ ಗುರಿಪಡಿಸುವವು. ಆದರೆ ನೀನು ಅವರನ್ನು ಸಂರಕ್ಷಿಸುವೆ.
ಯೆಹೋವನೇ, ಒಂದು ಮನೆಯ ಜನರನ್ನು ಪ್ರವಾಹದಿಂದಲೂ,
ಬಿಸಿಲಿನ ತಾಪದಿಂದಲೂ ಕಾಪಾಡುವಂತೆ ನೀನಿರುವೆ.
ಮುಂದಿನ ತೊಂದರೆಗಳು ಬಿರುಗಾಳಿಯಂತೆಯೂ ಮಳೆಯಂತೆಯೂ ಇವೆ.
ಮಳೆಯು ಗೋಡೆಗೆ ಬಡಿದು ಕೆಳಗೆ ಇಳಿಯುವದು. ಆದರೆ ಮನೆಯೊಳಗಿರುವವರಿಗೆ ಹಾನಿಯೇ ಆಗದು.
5 ವೈರಿಯು ಆರ್ಭಟಿಸುತ್ತಾ ಗದ್ದಲ ಮಾಡುತ್ತಾನೆ.
ಆ ಭಯಂಕರ ಶತ್ರುವು ಯುದ್ಧಕ್ಕೆ ಬಾ ಎಂದು ಸವಾಲು ಹಾಕುತ್ತಾನೆ.
ಆದರೆ ದೇವರೇ, ನೀನು ಅವನನ್ನು ತಡೆಯುವೆ.
ಬೇಸಿಗೆ ಕಾಲದಲ್ಲಿ ಮರುಭೂಮಿಯಲ್ಲಿರುವ ಸಸಿಗಳು ಬಾಡಿಹೋಗಿ ನೆಲದ ಮೇಲೆ ಬಿದ್ದುಹೋಗುವವು.
ಅದೇ ರೀತಿಯಲ್ಲಿ ನೀನು ವೈರಿಯನ್ನು ಸೋಲಿಸಿ ಅವನು ಮೊಣಕಾಲೂರುವಂತೆ ಮಾಡುವೆ.
ಕಾರ್ಮುಗಿಲು ಬೇಸಿಗೆಯ ತಾಪವನ್ನು ನಿವಾರಿಸುವದು.
ಅದೇ ರೀತಿಯಲ್ಲಿ ನೀನು ಶತ್ರುವಿನ ಆರ್ಭಟವನ್ನು ನಿಲ್ಲಿಸುವೆ.
8 ನೀವು ಕ್ರಿಸ್ತನನ್ನು ನೋಡದಿದ್ದರೂ ಆತನನ್ನು ಪ್ರೀತಿಸುವಿರಿ. ಈಗ ಆತನನ್ನು ನೋಡದಿದ್ದರೂ ಆತನಲ್ಲಿ ನಂಬಿಕೆಯಿಟ್ಟಿದ್ದೀರಿ. ನಿಮ್ಮಲ್ಲಿ ಹೇಳಲಾಗದಷ್ಟು ಆನಂದವು ತುಂಬಿಕೊಂಡಿದೆ. ಆ ಆನಂದವು ಪ್ರಭಾವಪೂರ್ಣವಾಗಿದೆ. 9 ನಿಮ್ಮ ನಂಬಿಕೆಗೆ ಒಂದು ಗುರಿಯಿದೆ. ನಿಮ್ಮ ಆತ್ಮವನ್ನು ರಕ್ಷಿಸಬೇಕೆಂಬುದೇ ಆ ಗುರಿ. ನಿಮ್ಮ ಗುರಿಯಾಗಿರುವ ರಕ್ಷಣೆಯನ್ನು ಹೊಂದಿಕೊಳ್ಳುವಿರಿ.
10 ಪ್ರವಾದಿಗಳು ಈ ರಕ್ಷಣೆಯನ್ನು ಕುರಿತು ಸೂಕ್ಷ್ಮವಾಗಿ ಹುಡುಕಿ ಪರಿಶೀಲಿಸಲು ಪ್ರಯತ್ನಿಸಿದರು. ನಿಮಗೆ ಮುಂದೆ ಬರಲಿರುವ ಕೃಪೆಯನ್ನು ಕುರಿತು ಅವರು ಮಾತನಾಡಿದರು. 11 ಕ್ರಿಸ್ತನ ಆತ್ಮನು ಅವರಲ್ಲಿದ್ದನು. ಆ ಆತ್ಮನು ಕ್ರಿಸ್ತನಿಗೆ ಸಂಭವಿಸಬಹುದಾದ ಸಂಕಟವನ್ನು ಮತ್ತು ಆ ಸಂಕಟಗಳ ನಂತರ ಬರಲಿದ್ದ ಮಹಿಮೆಯನ್ನು ಕುರಿತು ತಿಳಿಸುತ್ತಿದ್ದನು. ಆ ಪ್ರವಾದಿಗಳು ತಮಗೆ ಆತ್ಮನು ತೋರಿಸುತ್ತಿದ್ದುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು. ಆ ಸಂಗತಿಗಳು ಯಾವಾಗ ಸಂಭವಿಸುತ್ತವೆ ಹಾಗೂ ಆ ಕಾಲದಲ್ಲಿ ಈ ಲೋಕವು ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದರು.
12 ಆ ಪ್ರವಾದಿಗಳು ಮಾಡಿದ ಈ ಸೇವೆಯು ನಿಮಗೋಸ್ಕರವೇ ಹೊರತು ಅವರಿಗೋಸ್ಕರವಲ್ಲ ಎಂಬುದು ಅವರಿಗೆ ಪ್ರಕಟವಾಯಿತು. ಈಗ ನೀವು ಕೇಳಿದ ಸಂಗತಿಗಳನ್ನು ಅವರು ತಿಳಿಸಿದಾಗ ಅವರು ನಿಮ್ಮ ಸೇವೆಯನ್ನೇ ಮಾಡುತ್ತಿದ್ದರು. ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಸಹಾಯದಿಂದ ನಿಮಗೆ ಸುವಾರ್ತೆಯನ್ನು ತಿಳಿಸಿದವರೇ ನಿಮಗೆ ಆ ಸಂಗತಿಗಳನ್ನು ತಿಳಿಸಿದರು. ನಿಮಗೆ ತಿಳಿಸಿದ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ದೇವದೂತರೂ ಕಾತುರರಾಗಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International