Revised Common Lectionary (Semicontinuous)
114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
ಯಾಕೋಬ್ಯರು ಪರದೇಶದಿಂದ ಹೊರಟರು.
2 ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
ಇಸ್ರೇಲ್ ಆತನ ರಾಜ್ಯವಾಯಿತು.
3 ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
4 ಬೆಟ್ಟಗಳು ಟಗರುಗಳಂತೆಯೂ
ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.
5 ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
6 ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?
7 ಯಾಕೋಬನ ದೇವರೂ ಒಡೆಯನೂ ಆಗಿರುವ
ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
8 ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.
ಯೋನನ ಪ್ರಾರ್ಥನೆ
2 ಯೋನನು ಮೀನಿನ ಹೊಟ್ಟೆಯೊಳಗಿದ್ದಾಗ ದೇವರಾದ ಯೆಹೋವನಿಗೆ ಪ್ರಾರ್ಥಿಸಿ ಹೀಗೆಂದನು:
2 “ನಾನು ದೊಡ್ಡ ಆಪತ್ತಿನಲ್ಲಿದ್ದೆನು.
ಸಹಾಯಕ್ಕಾಗಿ ನಾನು ಯೆಹೋವನಿಗೆ ಮೊರೆಯಿಟ್ಟೆನು.
ಆತನು ನನಗೆ ಉತ್ತರ ದಯಪಾಲಿಸಿದನು.
ನಾನು ಆಳವಾದ ಸಮಾಧಿಯೊಳಗಿದ್ದೆನು.
ನಾನು ನಿನಗೆ ಮೊರೆಯಿಟ್ಟಾಗ,
ಯೆಹೋವನೇ, ನೀನು ನನ್ನ ಸ್ವರವನ್ನು ಕೇಳಿದೆ.
3 “ನೀನು ನನ್ನನ್ನು ಸಮುದ್ರಕ್ಕೆ ಎಸೆದೆ.
ನಿನ್ನ ಬಲವಾದ ತೆರೆಗಳು ನನ್ನ ಮೇಲೆ ಅಪ್ಪಳಿಸಿದವು.
ನಾನು ನೀರಿನ ಆಳವಾದ ಸ್ಥಳಕ್ಕೆ ಮುಳುಗಿಹೋದೆ.
ನಾನು ಸಮುದ್ರದ ನೀರಿನಿಂದ ಆವರಿಸಲ್ಪಟ್ಟೆನು.
4 ಆಗ ನಾನು, ‘ನಾನು ನಿನ್ನ ಕಣ್ಣೆದುರಿನಿಂದ ಹೊರದೂಡಲ್ಪಟ್ಟಿದ್ದೇನೆ’ ಅಂದುಕೊಂಡೆನು.
ಆದರೂ ನಾನು ನಿನ್ನ ಪರಿಶುದ್ಧಾಲಯದ ಕಡೆಗೆ ನೋಡುವೆನು.
5 “ಸಮುದ್ರದ ನೀರು ನನ್ನನ್ನು ಮುಚ್ಚಿಬಿಟ್ಟಿತು.
ನೀರು ನನ್ನ ಬಾಯಿಯನ್ನು ಮುಚ್ಚಿತು.
ಆಗ ನನಗೆ ಉಸಿರಾಡಲಾಗಲಿಲ್ಲ.
ನಾನು ಮುಳುಗುತ್ತಾ ಮುಳುಗುತ್ತಾ ಸಮುದ್ರದ ಆಳಕ್ಕೆ ಹೋದೆನು.
ಸಮುದ್ರ ಪಾಚಿಗಳು ನನ್ನ ತಲೆಯನ್ನು ಸುತ್ತುಹಾಕಿದವು.
6 ನಾನು ಸಮುದ್ರದ ತಳದಲ್ಲಿದ್ದೆನು.
ಅಲ್ಲಿಂದ ಪರ್ವತಗಳು ಉಗಮವಾಗುತ್ತವೆ.
‘ನಾನು ಈ ಸೆರೆಮನೆಯಲ್ಲಿ ಎಂದೆಂದಿಗೂ ಬಂಧಿತನಾದೆನು’ ಎಂದು ನೆನಸಿದೆನು.
ಆದರೆ ನನ್ನ ದೇವರಾದ ಯೆಹೋವನು ಸಮಾಧಿಯಿಂದ ನನ್ನನ್ನು ಹೊರತಂದನು.
ಯೆಹೋವನೇ ನೀನು ಪುನಃ ನನಗೆ ಜೀವ ಕೊಟ್ಟೆ.
7 “ನನ್ನ ಆತ್ಮಕ್ಕೆ ಯಾವ ನಿರೀಕ್ಷೆಯೂ ಇರಲಿಲ್ಲ.
ಆಗ ನಾನು ಯೆಹೋವನನ್ನು ಸ್ಮರಿಸಿದೆನು.
ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದೆನು.
ನೀನು ನಿನ್ನ ಪವಿತ್ರ ಆಲಯದಿಂದ ನನ್ನ ಪ್ರಾರ್ಥನೆಯನ್ನು ಕೇಳಿದೆ.
8 “ಕೆಲವು ಜನರು ಪ್ರಯೋಜನವಿಲ್ಲದ ವಿಗ್ರಹಗಳನ್ನು ಪೂಜಿಸುತ್ತಾರೆ.
ಆದರೆ ಆ ವಿಗ್ರಹಗಳು ಅವರಿಗೆ ಸಹಾಯ ಮಾಡುವುದಿಲ್ಲ.
9 ರಕ್ಷಣೆಯು ಯೆಹೋವನಿಂದಲೇ ಉಂಟಾಗುವದು.
ಯೆಹೋವನೇ, ನಾನು ನಿನಗೆ ಯಜ್ಞವನ್ನರ್ಪಿಸುವೆನು.
ನಾನು ನಿನ್ನನ್ನು ಕೊಂಡಾಡಿ ಸ್ತೋತ್ರಸಲ್ಲಿಸುವೆನು.
ನಾನು ನಿನಗೆ ವಿಶೇಷವಾದ ಹರಕೆಗಳನ್ನು ಮಾಡುವೆನು.
ನಾನು ಕೊಟ್ಟ ವಚನಗಳನ್ನು ಪಾಲಿಸುವೆನು.”
10 ಆಗ ಯೆಹೋವನು ಆ ಮೀನಿಗೆ ಆಜ್ಞಾಪಿಸಲು ಆ ಮೀನು ಯೋನನನ್ನು ಒಣನೆಲದಲ್ಲಿ ತನ್ನ ಹೊಟ್ಟೆಯೊಳಗಿಂದ ಕಾರಿಬಿಟ್ಟಿತು.
ಸೂಚಕಕಾರ್ಯಕ್ಕಾಗಿ ಯೆಹೂದ್ಯರ ಬೇಡಿಕೆ
(ಮಾರ್ಕ 8:11-12; ಲೂಕ 11:29-32)
38 ಆಗ ಕೆಲವು ಫರಿಸಾಯರು ಮತ್ತು ಧರ್ಮೋಪದೇಶಕರು ಯೇಸುವಿಗೆ, “ಬೋಧಕನೇ, ನೀನು ಹೇಳಿದ್ದನ್ನು ನಿರೂಪಿಸುವುದಕ್ಕಾಗಿ ಒಂದು ಸೂಚಕಕಾರ್ಯವನ್ನು ಮಾಡು” ಎಂದು ಹೇಳಿದರು.
39 ಯೇಸು, “ದುಷ್ಟರು ಮತ್ತು ಪಾಪಿಗಳು ಸೂಚಕಕಾರ್ಯವನ್ನು ಅಪೇಕ್ಷಿಸುತ್ತಾರೆ. ಆದರೆ ಅವರಿಗೆ ಒಂದು ಸೂಚಕಕಾರ್ಯವನ್ನೂ ಗುರುತಿಗಾಗಿ ತೋರಿಸಲಾಗುವುದಿಲ್ಲ. 40 ಪ್ರವಾದಿಯಾದ ಯೋನನು ಮೂರು ದಿವಸ ಹಗಲಿರುಳು ಒಂದು ದೊಡ್ಡ ಮೀನಿನ ಹೊಟ್ಟೆಯಲ್ಲಿ ಹೇಗಿದ್ದನೋ ಅದೇ ರೀತಿಯಲ್ಲಿ ಮನುಷ್ಯಕುಮಾರನು ಸಮಾಧಿಯಲ್ಲಿ ಮೂರು ದಿನ ಹಗಲಿರುಳು ಇರುವನು. ಇದಲ್ಲದೆ ಬೇರೆ ಯಾವ ಸೂಚಕಕಾರ್ಯವನ್ನು ಅವರಿಗೆ ತೋರಿಸಲಾಗುವುದಿಲ್ಲ. 41 ನ್ಯಾಯವಿಚಾರಣೆಯ ದಿನದಂದು ನಿನೆವೆ ಪಟ್ಟಣದ ಜನರು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ನಿಂತುಕೊಂಡು ನಿಮ್ಮನ್ನು ಅಪರಾಧಿಗಳೆಂದು ಘೋಷಿಸುವರು. ಏಕೆಂದರೆ ಯೋನನು ಬೋಧಿಸಿದಾಗ ಅವರು ತಮ್ಮ ಜೀವಿತವನ್ನು ಬದಲಾವಣೆ ಮಾಡಿಕೊಂಡರು. ಆದರೆ ನಾನು ನಿಮಗೆ ಹೇಳುವುದೇನೆಂದರೆ ನಾನು ಯೋನನಿಗಿಂತಲೂ ಹೆಚ್ಚಿನವನಾಗಿರುತ್ತೇನೆ.
42 “ನ್ಯಾಯತೀರ್ಪಿನ ದಿನದಂದು ದಕ್ಷಿಣ ದೇಶದ ರಾಣಿಯು ಇಂದು ಜೀವಿಸುತ್ತಿರುವ ನಿಮ್ಮೊಂದಿಗೆ ಎದ್ದುನಿಂತು ನಿಮ್ಮನ್ನು ತಪ್ಪಿತಸ್ಥರೆಂದು (ಅಪರಾಧಿಗಳು) ನಿರೂಪಿಸುವಳು. ಏಕೆಂದರೆ, ಆ ರಾಣಿಯು ಸೊಲೊಮೋನನ ಜ್ಞಾನದ ಬೋಧನೆಯನ್ನು ಕೇಳಲು ಬಹಳ ದೂರದಿಂದ ಬಂದಳು. ನಾನಾದರೋ ಸೊಲೊಮೋನನಿಗಿಂತಲೂ ಹೆಚ್ಚಿನವನಾಗಿದ್ದೇನೆ ಎಂದು ನಿಮಗೆ ಹೇಳುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International