Revised Common Lectionary (Semicontinuous)
114 ಇಸ್ರೇಲರು ಈಜಿಪ್ಟಿನಿಂದ ಹೊರಟರು.
ಯಾಕೋಬ್ಯರು ಪರದೇಶದಿಂದ ಹೊರಟರು.
2 ಆಗ ಯೆಹೂದದ ಜನರು ದೇವರ ವಿಶೇಷ ಪ್ರಜೆಯಾದರು;
ಇಸ್ರೇಲ್ ಆತನ ರಾಜ್ಯವಾಯಿತು.
3 ಕೆಂಪು ಸಮುದ್ರವು ಇದನ್ನು ಕಂಡು ಓಡಿಹೋಯಿತು.
ಜೋರ್ಡನ್ ನದಿಯು ಹಿಂತಿರುಗಿ ಓಡಿಹೋಯಿತು.
4 ಬೆಟ್ಟಗಳು ಟಗರುಗಳಂತೆಯೂ
ಗುಡ್ಡಗಳು ಕುರಿಮರಿಗಳಂತೆಯೂ ನೃತ್ಯಮಾಡಿದವು.
5 ಕೆಂಪು ಸಮುದ್ರವೇ, ನೀನೇಕೆ ಓಡಿಹೋದೆ?
ಜೋರ್ಡನ್ ನದಿಯೇ ನೀನೇಕೆ ಹಿಂತಿರುಗಿ ಓಡಿಹೋದೆ?
6 ಬೆಟ್ಟಗಳೇ, ನೀವೇಕೆ ಟಗರುಗಳಂತೆಯೂ
ಗುಡ್ಡಗಳೇ, ನೀವೇಕೆ ಕುರಿಮರಿಗಳಂತೆಯೂ ನೃತ್ಯಮಾಡಿದಿರಿ?
7 ಯಾಕೋಬನ ದೇವರೂ ಒಡೆಯನೂ ಆಗಿರುವ
ಯೆಹೋವನ ಎದುರಿನಲ್ಲಿ ಭೂಮಿಯು ನಡುಗಿತು.
8 ಬಂಡೆಯೊಳಗಿಂದ ನೀರು ಹರಿದುಬರುವಂತೆ ಮಾಡಿದವನು ಆತನೇ.
ಗಟ್ಟಿಯಾದ ಬಂಡೆಯೊಳಗಿಂದ ನೀರಿನ ಒರತೆಯನ್ನು ಬರಮಾಡಿದವನು ಆತನೇ.
36 ಆಗ ಗಿದ್ಯೋನನು ದೇವರಿಗೆ, “ಇಸ್ರೇಲಿನ ಜನರನ್ನು ರಕ್ಷಿಸಲು ನೀನು ನನಗೆ ಸಹಾಯ ಮಾಡುವುದಾಗಿ ಹೇಳಿರುವೆ. ಅದಕ್ಕೆ ಸಾಕ್ಷ್ಯವನ್ನು ಈಗ ಒದಗಿಸು. 37 ನಾನು ಕಣದಲ್ಲಿ ಕುರಿಯ ತುಪ್ಪಟವನ್ನು ಹಾಸುತ್ತೇನೆ. ನೆಲವೆಲ್ಲ ಒಣಗಿದ್ದು ಕೇವಲ ಕುರಿಯ ತುಪ್ಪಟದ ಮೇಲೆ ಇಬ್ಬನಿ ಬಿದ್ದರೆ, ನೀನು ಹೇಳಿದಂತೆಯೇ ಇಸ್ರೇಲನ್ನು ರಕ್ಷಿಸಲು ನನ್ನನ್ನು ಬಳಸುವೆ ಎಂದು ಅರಿತುಕೊಳ್ಳುವೆ” ಅಂದನು.
38 ಹಾಗೆಯೇ ಆಯಿತು. ಗಿದ್ಯೋನನು ಮರುದಿನ ಬೆಳಿಗ್ಗೆ ಬೇಗ ಎದ್ದು ಕುರಿಯ ತುಪ್ಪಟವನ್ನು ಹಿಂಡಿದನು. ಆ ಕುರಿಯ ತುಪ್ಪಟದಿಂದ ಒಂದು ಬಟ್ಟಲು ತುಂಬ ನೀರು ಬಂದಿತು.
39 ಆಗ ಗಿದ್ಯೋನನು ದೇವರಿಗೆ, “ನನ್ನ ಮೇಲೆ ಕೋಪಿಸಿಕೊಳ್ಳಬೇಡ. ನಾನು ಇನ್ನೊಂದು ಸಾಕ್ಷ್ಯವನ್ನು ಕೇಳುತ್ತೇನೆ. ಇನ್ನೊಂದು ಸಲ ಕುರಿಯ ತುಪ್ಪಟದಿಂದ ನಿನ್ನನ್ನು ಪರೀಕ್ಷಿಸುತ್ತೇನೆ. ಈ ಸಲ, ಸುತ್ತಮುತ್ತಲಿನ ಭೂಮಿಯ ಮಂಜಿನಿಂದ ಹಸಿಯಾಗಿ, ಕುರಿಯ ತುಪ್ಪಟ ಮಾತ್ರ ಒಣಗಿರಲಿ” ಎಂದು ಪ್ರಾರ್ಥಿಸಿದನು.
40 ಆ ರಾತ್ರಿ ದೇವರು ಹಾಗೆಯೇ ಮಾಡಿದನು. ಕೇವಲ ಕುರಿಯ ತುಪ್ಪಟ ಮಾತ್ರ ಒಣಗಿದಂತಿದ್ದು ಸುತ್ತಲಿರುವ ನೆಲವೆಲ್ಲಾ ಮಂಜಿನ ನೀರಿನಿಂದ ಹಸಿಯಾಗಿತ್ತು.
ನಾವು ಪುನರುತ್ಥಾನ ಹೊಂದುವೆವು
12 ಕ್ರಿಸ್ತನು ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ನಾವು ಬೋಧಿಸಿದ್ದೇವೆ. ಹೀಗಿರಲಾಗಿ, ಜನರಿಗೆ ಪುನರುತ್ಥಾನವಿಲ್ಲವೆಂದು ನಿಮ್ಮಲ್ಲಿ ಕೆಲವರು ಹೇಳುತ್ತಿರುವುದೇಕೆ? 13 ಜನರಿಗೆ ಪುನರುತ್ಥಾನವಿಲ್ಲದಿದ್ದರೆ ಕ್ರಿಸ್ತನು ಸಹ ಸತ್ತವರೊಳಗಿಂದ ಎದ್ದೇಬಂದಿಲ್ಲ. 14 ಕ್ರಿಸ್ತನು ಎದ್ದೇಬಂದಿಲ್ಲವಾದರೆ ನಮ್ಮ ಬೋಧನೆಗೂ ನಿಮ್ಮ ನಂಬಿಕೆಗೂ ಯಾವ ಬೆಲೆಯೂ ಇಲ್ಲ. 15 ಅಲ್ಲದೆ, ದೇವರ ಬಗ್ಗೆ ನಾವು ಸುಳ್ಳುಸಾಕ್ಷಿ ಹೇಳಿದಂತಾಗುವುದು. ಏಕೆಂದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಿದನೆಂದು ನಾವು ದೇವರ ಬಗ್ಗೆ ಬೋಧಿಸಿದೆವು. ಜನರು ಜೀವಂತವಾಗಿ ಎದ್ದುಬರದಿದ್ದರೆ, ದೇವರು ಕ್ರಿಸ್ತನನ್ನು ಜೀವಂತವಾಗಿ ಎಬ್ಬಿಸಲೇ ಇಲ್ಲ. 16 ಸತ್ತುಹೋದ ಜನರು ಎಬ್ಬಿಸಲ್ಪಡದಿದ್ದರೆ, ಕ್ರಿಸ್ತನು ಸಹ ಎಬ್ಬಿಸಲ್ಪಡಲೇ ಇಲ್ಲ. 17 ಕ್ರಿಸ್ತನು ಜೀವಂತವಾಗಿ ಎಬ್ಬಿಸಲ್ಪಟ್ಟಿಲ್ಲದಿದ್ದರೆ, ನಿಮ್ಮ ನಂಬಿಕೆಯು ನಿಷ್ಪ್ರಯೋಜಕವಾಗಿದೆ ಮತ್ತು ನೀವು ನಿಮ್ಮ ಪಾಪಗಳಿಂದ ಇನ್ನೂ ಅಪರಾಧಿಗಳಾಗಿದ್ದೀರಿ. 18 ಇದಲ್ಲದೆ ಕ್ರಿಸ್ತನಲ್ಲಿದ್ದು ಸತ್ತುಹೋದವರು ನಾಶವಾಗಿದ್ದಾರೆ. 19 ನಮಗೆ ಕ್ರಿಸ್ತನಲ್ಲಿರುವ ನಿರೀಕ್ಷೆಯು ಈ ಲೋಕಕ್ಕೆ ಮಾತ್ರ ಸೀಮಿತವಾಗಿದ್ದರೆ, ನಾವು ಬೇರೆಲ್ಲ ಜನರಿಗಿಂತಲೂ ದುಃಖಕ್ಕೆ ಪಾತ್ರರಾಗಿದ್ದೇವೆ.
20 ಆದರೆ ಕ್ರಿಸ್ತನು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದಿದ್ದಾನೆ. ನಿದ್ರೆಹೋದವರಲ್ಲಿ ಅಂದರೆ ಸತ್ತುಹೋದ ಎಲ್ಲಾ ವಿಶ್ವಾಸಿಗಳಲ್ಲಿ ಆತನೇ ಪ್ರಥಮ ಫಲವಾದನು.
Kannada Holy Bible: Easy-to-Read Version. All rights reserved. © 1997 Bible League International