Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 16

ರಚನೆಗಾರ: ದಾವೀದ.

16 ದೇವರೇ, ನನ್ನನ್ನು ಕಾಪಾಡು. ಯಾಕೆಂದರೆ ನಾನು ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನಾನು ಯೆಹೋವನಿಗೆ, “ನೀನೇ ನನ್ನ ಒಡೆಯನು.
    ನನ್ನಲ್ಲಿರುವ ಒಳ್ಳೆಯದನ್ನೆಲ್ಲ ದಯಪಾಲಿಸಿದಾತನು ನೀನೇ” ಎಂದು ಹೇಳಿದೆನು.
ಯೆಹೋವನು ಭೂಲೋಕದಲ್ಲಿರುವ ತನ್ನ ಭಕ್ತರಿಗೆ ಅತಿಶಯವಾದವುಗಳನ್ನು ಮಾಡುವನು;
    ಅವರ ಮೇಲೆ ತನಗಿರುವ ನಿಜವಾದ ಪ್ರೀತಿಯನ್ನು ತೋರ್ಪಡಿಸುವನು.

ಆದರೆ ಅನ್ಯದೇವರುಗಳನ್ನು ಆಶ್ರಯಿಸಿಕೊಂಡವರಿಗೆ ಕೇಡುಗಳು ಹೆಚ್ಚಾಗುತ್ತವೆ.
    ಅವರು ಆ ವಿಗ್ರಹಗಳಿಗೆ ಅರ್ಪಿಸುವ ರಕ್ತದ ಕಾಣಿಕೆಗಳಲ್ಲಿ ನಾನು ಪಾಲುಗಾರನಾಗುವುದಿಲ್ಲ,
    ಆ ವಿಗ್ರಹಗಳ ಹೆಸರುಗಳನ್ನೂ ನಾನು ಉಚ್ಚರಿಸುವುದಿಲ್ಲ.
ನನ್ನ ಪಾಲೂ ನನ್ನ ಪಾತ್ರೆಯೂ ಯೆಹೋವನಿಂದಲೇ ಬರುತ್ತವೆ.
    ನನಗೆ ಆಧಾರವಾಗಿದ್ದು ನನ್ನ ಪಾಲನ್ನು ದಯಪಾಲಿಸುವಾತನು ನೀನೇ.
ನನ್ನ ಪಾಲು[a] ರಮಣೀಯವಾಗಿದೆ.
    ನನ್ನ ಸ್ವಾಸ್ತ್ಯವು[b] ಬಹು ಸುಂದರವಾಗಿದೆ.
ನನ್ನ ಆಲೋಚನಾಕರ್ತನಾದ ಯೆಹೋವನನ್ನು ಕೊಂಡಾಡುವೆನು;
    ರಾತ್ರಿಯಲ್ಲಿಯೂ, ಆತನು ತನ್ನ ಆಲೋಚನೆಗಳನ್ನು ನನ್ನ ಅಂತರಾತ್ಮದಲ್ಲಿ ಬೇರೂರಿಸುವನು.

ನಾನು ಯೆಹೋವನನ್ನು ಯಾವಾಗಲೂ ನನ್ನ ಎದುರಿನಲ್ಲೇ ಇಟ್ಟುಕೊಂಡಿದ್ದೇನೆ;
    ಆತನು ನನ್ನ ಬಲಗಡೆಯಲ್ಲಿರುವುದರಿಂದ ನಾನೆಂದಿಗೂ ಕದಲುವುದಿಲ್ಲ.
ಆದ್ದರಿಂದ ನನ್ನ ಹೃದಯವೂ ಆತ್ಮವೂ ಉಲ್ಲಾಸಪಡುತ್ತವೆ.
    ನನ್ನ ದೇಹವೂ ಸುರಕ್ಷಿತವಾಗಿರುವುದು.
10 ಯಾಕೆಂದರೆ, ನೀನು ನನ್ನ ಆತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ.
    ನಿನ್ನ ಪವಿತ್ರನನ್ನು ಸಮಾಧಿಯಲ್ಲಿ ಕೊಳೆಯಲು ಬಿಡುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ಉಪದೇಶಿಸುವೆ.
    ನಿನ್ನ ಸನ್ನಿಧಿಯಲ್ಲಿದ್ದರೆ ಪರಿಪೂರ್ಣ ಸಂತೋಷವಿರುವುದು;
    ನಿನ್ನ ಬಲಗಡೆಯಲ್ಲಿದ್ದರೆ ಶಾಶ್ವತವಾದ ಆನಂದವಿರುವುದು.

ಪರಮ ಗೀತ 5:9-6:3

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿಯೇ,
    ನಿನ್ನ ಪ್ರಿಯನ ಅತಿಶಯವೇನು?
ನೀನು ಹೀಗೆ ನಮ್ಮಿಂದ ಪ್ರಮಾಣ ಮಾಡಿಸಲು
    ನಿನ್ನ ಪ್ರಿಯನ ಅತಿಶಯವೇನು?

ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ

10 ನನ್ನ ಪ್ರಿಯನದು ಹೊಳಪಾದ ಕಂದುಬಣ್ಣ.
    ಹತ್ತು ಸಾವಿರ ಪುರುಷರಲ್ಲಿ ಅವನೇ ಆಕರ್ಷಕ ಪುರುಷ.
11 ಅವನ ತಲೆಯು ಚೊಕ್ಕ ಬಂಗಾರದಂತಿದೆ;
    ಅವನ ಗುಂಗುರು ಕೂದಲು ಕಾಗೆಯಷ್ಟೇ ಕಪ್ಪಾಗಿದೆ.
12 ಅವನ ಕಣ್ಣುಗಳು
    ಹಾಲಿನಲ್ಲಿ ಸ್ನಾನಮಾಡಿದ ಪಾರಿವಾಳಗಳಂತೆಯೂ
    ಆಭರಣದಲ್ಲಿ ಜೋಡಿಸಿರುವ ಮುತ್ತಿನಂತೆಯೂ ಇವೆ.
13 ಅವನ ಕೆನ್ನೆಗಳು ಸುಗಂಧಸಸ್ಯಗಳ ದಿಬ್ಬಗಳಂತೆಯೂ
    ಸುವಾಸನೆಯುಳ್ಳ ಹೂವುಗಳಂತೆಯೂ ಇವೆ.
ಅವನ ತುಟಿಗಳು ಕೆಂದಾವರೆಗಳಂತಿವೆ;
    ಅವನ ತುಟಿಗಳಲ್ಲಿ ಗೋಲರಸವು ತೊಟ್ಟಿಕ್ಕುತ್ತದೆ.
14 ಅವನ ಕೈಗಳು ಪೀತರತ್ನದಿಂದ ಕೂಡಿದ
    ಬಂಗಾರದ ಸಲಾಕೆಯಂತಿವೆ;
ಅವನ ದೇಹವು ನೀಲಿಬಣ್ಣದ ಕಲ್ಲುಗಳಿಂದ ಕೂಡಿದ
    ನಯವಾದ ದಂತದಂತಿದೆ.
15 ಅವನ ಕಾಲುಗಳು ಬಂಗಾರದ ಪಾದಗಳುಳ್ಳ
    ಅಮೃತ ಶಿಲೆಯ ಕಂಬಗಳಂತಿವೆ.
ಅವನು ಲೆಬನೋನಿನ
    ದೇವದಾರು ವೃಕ್ಷದಂತೆ ಎತ್ತರವಾಗಿದ್ದಾನೆ.
16 ಹೌದು, ಜೆರುಸಲೇಮಿನ ಸ್ತ್ರೀಯರೇ,
    ನನ್ನ ಪ್ರಿಯನು ಅತ್ಯಂತ ಮನೋಹರನು;
ಅವನ ನುಡಿ ಬಹು ಇಂಪು.
    ಅವನೇ ನನ್ನ ಪ್ರಿಯನು; ಅವನೇ ನನ್ನ ಕಾಂತನು.

ಜೆರುಸಲೇಮಿನ ಸ್ತ್ರೀಯರು ಪ್ರಿಯತಮೆಗೆ

ನಿನ್ನ ಪ್ರಿಯನು ಎಲ್ಲಿಗೆ ಹೋದನು?
    ನೀನು ಸ್ತ್ರೀಯರಲ್ಲಿ ಅತ್ಯಂತ ಸೌಂದರ್ಯವತಿ.
ನಿನ್ನ ಪ್ರಿಯನು ಯಾವ ಕಡೆಗೆ ಹೋದನು?
    ನೀನು ಹೇಳಿದರೆ, ನಾವು ನಿನಗೋಸ್ಕರ ಅವನನ್ನು ಹುಡುಕುವೆವು.

ಪ್ರಿಯತಮೆಯು ಜೆರುಸಲೇಮಿನ ಸ್ತ್ರೀಯರಿಗೆ

ನನ್ನ ಪ್ರಿಯನು ತನ್ನ ತೋಟದಲ್ಲಿರುವ
    ಸುಗಂಧಸಸ್ಯಗಳ ದಿಬ್ಬಗಳಿಗೆ ಹೋಗಿದ್ದಾನೆ;
ತೋಟಗಳಲ್ಲಿ ಮಂದೆಯನ್ನು ಮೇಯಿಸುವುದಕ್ಕೂ
    ನೆಲದಾವರೆಗಳನ್ನು ಕೊಯ್ಯುವುದಕ್ಕೂ ಹೋಗಿದ್ದಾನೆ.
ನನ್ನ ಪ್ರಿಯನು ನನ್ನವನೇ; ನಾನು ಅವನವಳೇ.
    ಅವನು ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.

1 ಕೊರಿಂಥದವರಿಗೆ 15:1-11

ಕ್ರಿಸ್ತನ ವಿಷಯವಾದ ಸುವಾರ್ತೆ

15 ಸಹೋದರ ಸಹೋದರಿಯರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನೀವು ಜ್ಞಾಪಿಸಿಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿಕೊಂಡಿರಿ ಮತ್ತು ಅದರಲ್ಲಿ ದೃಢವಾಗಿದ್ದೀರಿ. ನೀವು ಆ ಸಂದೇಶದ ಮೂಲಕ ರಕ್ಷಣೆ ಹೊಂದಿದ್ದೀರಿ. ನಾನು ನಿಮಗೆ ತಿಳಿಸಿದ ಸಂದೇಶದಲ್ಲಿ ನಿಮಗೆ ದೃಢವಾದ ನಂಬಿಕೆ ಇರಲೇಬೇಕು. ನೀವು ಹೀಗೆ ಮಾಡದಿದ್ದರೆ, ನಿಮ್ಮ ನಂಬಿಕೆಯು ನಿರರ್ಥಕವಾಗುವುದು.

ನಾನು ಸ್ವೀಕರಿಸಿಕೊಂಡ ಸಂದೇಶವನ್ನು ನಾನು ನಿಮಗೆ ತಿಳಿಸಿದೆನು. ಆ ಸಂಗತಿಗಳು ಬಹಳ ಮುಖ್ಯವಾದುವುಗಳಾಗಿವೆ. ಪವಿತ್ರ ಗ್ರಂಥವು ಹೇಳುವಂತೆ, ಕ್ರಿಸ್ತನು ನಮ್ಮ ಪಾಪಗಳಿಗೋಸ್ಕರವಾಗಿ ಸತ್ತು ಹೂಳಲ್ಪಟ್ಟು ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದುಬಂದನು. ಬಳಿಕ ಕ್ರಿಸ್ತನು ಪೇತ್ರನಿಗೆ ಕಾಣಿಸಿಕೊಂಡನು. ಅನಂತರ ಹನ್ನೆರಡು ಮಂದಿ ಅಪೊಸ್ತಲರಿಗೆ ಕಾಣಿಸಿಕೊಂಡನು. ತರುವಾಯ, ಒಂದೇ ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು. ಈ ಸಹೋದರರಲ್ಲಿ ಬಹುಮಂದಿ ಇಂದಿನವರೆಗೂ ಬದುಕಿದ್ದಾರೆ. ಆದರೆ ಕೆಲವರು ಸತ್ತುಹೋದರು. ಬಳಿಕ ಕ್ರಿಸ್ತನು ಯಾಕೋಬನಿಗೆ ಕಾಣಿಸಿಕೊಂಡನು. ಅನಂತರ ಮತ್ತೊಮ್ಮೆ ಎಲ್ಲಾ ಅಪೊಸ್ತಲರಿಗೆ ಕಾಣಿಸಿಕೊಂಡನು. ಕಟ್ಟಕಡೆಗೆ, ಕ್ರಿಸ್ತನು, ದಿನ ತುಂಬುವ ಮೊದಲೇ ಹುಟ್ಟಿದಂತಿದ್ದ ನನಗೆ ಕಾಣಿಸಿಕೊಂಡನು.

ಉಳಿದೆಲ್ಲಾ ಅಪೊಸ್ತಲರು ನನಗಿಂತಲೂ ಶ್ರೇಷ್ಠರಾಗಿದ್ದಾರೆ. ಇದಕ್ಕೆ ಕಾರಣವೇನೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು. ಆದ್ದರಿಂದ ಅಪೊಸ್ತಲನೆಂದು ಕರೆಸಿಕೊಳ್ಳುವುದಕ್ಕೂ ನಾನು ಯೋಗ್ಯನಲ್ಲ. 10 ಆದರೆ, ದೇವರ ಕೃಪೆಯಿಂದ ನಾನು ಅಪೊಸ್ತಲನಾಗಿದ್ದೇನೆ. ಆತನು ನನಗೆ ತೋರಿದ ಕೃಪೆಯು ನಿಷ್ಛಲವಾಗಲಿಲ್ಲ. ಉಳಿದೆಲ್ಲ ಅಪೊಸ್ತಲರಿಗಿಂತ ನಾನು ಹೆಚ್ಚು ಕಷ್ಟಪಟ್ಟು ಸೇವೆ ಮಾಡಿದ್ದೇನೆ. (ಆದರೆ ಸೇವೆ ಮಾಡುತ್ತಿದ್ದವನು ನಿಜವಾಗಿಯೂ ನಾನಲ್ಲ ದೇವರ ಕೃಪೆಯೇ ನನ್ನೊಂದಿಗಿತ್ತು.) 11 ಆದ್ದರಿಂದ ನಾನು ಬೋಧನೆ ಮಾಡಿದೆನೊ ಅಥವಾ ಇತರ ಅಪೊಸ್ತಲರು ಬೋಧನೆ ಮಾಡಿದರೊ ಎಂಬುದು ಮುಖ್ಯವಲ್ಲ. ನಾವೆಲ್ಲರೂ ಒಂದೇ ಸಂದೇಶವನ್ನು ಬೋಧಿಸುತ್ತೇವೆ ಮತ್ತು ನೀವು ನಂಬಿರುವುದೂ ಅದನ್ನೇ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International