Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:14-24

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

ಯೆಹೋಶುವನು 3

ಜೋರ್ಡನ್ ನದಿಯಲ್ಲಿ ಅದ್ಭುತಕಾರ್ಯ

ಮರುದಿನ, ಬೆಳಗಿನ ಜಾವದಲ್ಲಿ ಯೆಹೋಶುವನು ಮತ್ತು ಎಲ್ಲಾ ಇಸ್ರೇಲರು ಎದ್ದು ಆಕಾಶಿಯದಿಂದ ಹೊರಟು ಜೋರ್ಡನ್ ನದಿಯವರೆಗೆ ಬಂದರು. ಅವರು ಜೋರ್ಡನ್ ನದಿಯನ್ನು ದಾಟುವ ಮೊದಲು ಅಲ್ಲಿ ಪಾಳೆಯ ಮಾಡಿಕೊಂಡರು. ಮೂರು ದಿನಗಳ ತರುವಾಯ ಜನನಾಯಕರು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ, “ಯಾಜಕರು ಮತ್ತು ಲೇವಿಯರು ನಿಮ್ಮ ದೇವರಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವುದನ್ನು ನೀವು ಕಾಣುವಾಗ ಅವರನ್ನು ಹಿಂಬಾಲಿಸಿರಿ. ನಿಮಗೂ ಒಡಂಬಡಿಕೆಯ ಪೆಟ್ಟಿಗೆಗೂ ಮೂರು ಸಾವಿರ ಅಡಿ ಅಂತರವಿರಲಿ. ಅದರ ಸಮೀಪ ನೀವು ಹೋಗಕೂಡದು. ಈ ದಾರಿಯಲ್ಲಿ ನೀವು ಹಿಂದೆಂದೂ ಪ್ರಯಾಣ ಮಾಡಿಲ್ಲ. ಆದರೆ ನೀವು ಅವರನ್ನು ಹಿಂಬಾಲಿಸಿದರೆ ಎಲ್ಲಿಗೆ ಹೋಗಬೇಕೆಂದು ನಿಮಗೆ ತಿಳಿಯುತ್ತದೆ” ಎಂದು ಸಾರಿದರು.

“ನಿಮ್ಮನ್ನು ನೀವು ಶುದ್ಧೀಕರಿಸಿಕೊಳ್ಳಿರಿ. ನಾಳೆ ನಿಮ್ಮ ದೇವರಾದ ಯೆಹೋವನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುತ್ತಾನೆ” ಎಂದು ಯೆಹೋಶುವನು ಜನರಿಗೆ ತಿಳಿಸಿದನು.

ಬಳಿಕ ಯೆಹೋಶುವನು ಯಾಜಕರಿಗೆ, “ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಜನಗಳ ಮುಂದೆ ನದಿಯ ಕಡೆಗೆ ನಡೆಯಿರಿ” ಎಂದನು. ಯಾಜಕರು ಪೆಟ್ಟಿಗೆಯನ್ನು ಹೊತ್ತುಕೊಂಡು ಜನರ ಮುಂದೆ ನಡೆದರು.

ಆಗ ಯೆಹೋವನು ಯೆಹೋಶುವನಿಗೆ, “ನಾನು ನಿನ್ನನ್ನು ಇಂದಿನಿಂದ ಎಲ್ಲಾ ಇಸ್ರೇಲರ ಮುಂದೆ ಘನವಂತನನ್ನಾಗಿ ಮಾಡುವೆನು. ನಾನು ಮುಂಚೆ ಮೋಶೆಯ ಸಂಗಡ ಇದ್ದಂತೆಯೇ ನಿನ್ನ ಸಂಗಡವೂ ಇದ್ದೇನೆಂಬುದು ಆಗ ಜನರಿಗೆ ತಿಳಿಯುತ್ತದೆ. ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಯಾಜಕರಿಗೆ, ‘ನೀವು ಜೋರ್ಡನ್ ನದಿಯ ತೀರಕ್ಕೆ ಹೋಗಿ, ನೀರಿನೊಳಗೆ ಕಾಲಿಡದೆ ಅದರ ಅಂಚಿನಲ್ಲೇ ನಿಂತುಕೊಳ್ಳಿರಿ’ ಎಂದು ಹೇಳು” ಅಂದನು.

ಆಗ ಯೆಹೋಶುವನು ಇಸ್ರೇಲರಿಗೆ, “ಇಲ್ಲಿ ಬನ್ನಿರಿ; ನಿಮ್ಮ ದೇವರಾದ ಯೆಹೋವನ ಮಾತುಗಳನ್ನು ಕೇಳಿರಿ. 10 ಚೈತನ್ಯಸ್ವರೂಪನಾದ ದೇವರು ನಿಜವಾಗಿಯೂ ನಿಮ್ಮ ಸಂಗಡ ಇದ್ದಾನೆ ಎಂಬುದಕ್ಕೆ ಇಲ್ಲಿ ಒಂದು ಸಾಕ್ಷಿ ಇದೆ. ಆತನು ನಿಜವಾಗಿಯೂ ನಿಮ್ಮ ವೈರಿಗಳನ್ನು ಸೋಲಿಸುತ್ತಾನೆ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ. ಕಾನಾನ್ಯರು, ಹಿತ್ತಿಯರು, ಹಿವ್ವಿಯರು, ಪೆರಿಜೀಯರು, ಗಿರ್ಗಾಷಿಯರು, ಅಮೋರಿಯರು, ಯೆಬೂಸಿಯರು, ಇವರನ್ನೆಲ್ಲಾ ಆತನು ಸೋಲಿಸುತ್ತಾನೆ. ಆ ದೇಶದಿಂದ ಅವರನ್ನು ಬಲವಂತವಾಗಿ ಹೊರಗಟ್ಟುತ್ತಾನೆ. 11 ಇದೋ ಇಲ್ಲಿದೆ ಸಾಕ್ಷಿ. ನೀವು ಜೋರ್ಡನ್ ನದಿಯನ್ನು ದಾಟುವಾಗ ಸರ್ವಲೋಕದ ಒಡೆಯನಾದ ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯು ನಿಮ್ಮ ಮುಂದೆ ಹೋಗುವುದು. 12 ಈಗ ಇಸ್ರೇಲರ ಕುಲಗಳಿಂದ ಪ್ರತಿಕುಲಕ್ಕೆ ಒಬ್ಬನಂತೆ ಹನ್ನೆರಡು ಮಂದಿಯನ್ನು ಆರಿಸಿಕೊಳ್ಳಿರಿ. 13 ಯಾಜಕರು ಯೆಹೋವನ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುವರು. ಯೆಹೋವನು ಸರ್ವಲೋಕದ ಒಡೆಯನಾಗಿದ್ದಾನೆ. ಅವರು ಆ ಪೆಟ್ಟಿಗೆಯನ್ನು ನಿಮ್ಮ ಮುಂದೆ ಜೋರ್ಡನ್ ನದಿಯಲ್ಲಿ ತೆಗೆದುಕೊಂಡು ಹೋಗುವರು. ಅವರು ನೀರಿನಲ್ಲಿ ಪ್ರವೇಶ ಮಾಡಿದಾಗ ಜೋರ್ಡನ್ ನದಿಯ ನೀರು ಹರಿಯದೆ ನಿಂತುಬಿಡುವುದು. ನೀರು ಮುಂದಕ್ಕೆ ಹರಿಯದೆ ಹರಡಿಕೊಂಡು ಸರೋವರದಂತೆ ತೋರುವುದು” ಎಂದು ತಿಳಿಸಿದನು.

14 ಯಾಜಕರು ಒಡಂಬಡಿಕೆಯ ಪೆಟ್ಟಿಗೆಯನ್ನು ಹೊತ್ತುಕೊಂಡು ನಡೆದರು. ಜನರು ತಾವು ಪಾಳೆಯ ಮಾಡಿಕೊಂಡಿದ್ದ ಸ್ಥಳದಿಂದ ಹೊರಟು ಜೋರ್ಡನ್ ನದಿಯ ಕಡೆಗೆ ಹೋದರು. 15 (ಆಗ ಸುಗ್ಗಿಕಾಲವಾದ್ದರಿಂದ ಜೋರ್ಡನ್ ನದಿಯು ದಡಮೀರಿ ಹರಿಯುತ್ತಿತ್ತು.) ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ನದಿಯ ತೀರಕ್ಕೆ ಬಂದರು. ಅವರು ನೀರಿನಲ್ಲಿ ಹೆಜ್ಜೆ ಇಟ್ಟರು. 16 ಆಗ ನೀರು ಹರಿಯದೆ ನಿಂತುಬಿಟ್ಟಿತು. ಆ ಸ್ಥಳದ ಹಿಂಭಾಗದಲ್ಲಿ ಒಂದು ಸರೋವರದಂತೆ ನೀರು ತುಂಬಿಕೊಂಡಿತು. ನೀರು ಬಹುದೂರದಲ್ಲಿರುವ ಆದಾಮ್ ಊರು ಅಂದರೆ ಜಾರೆತಾನಿನ ಹತ್ತಿರ ಇರುವ ಒಂದು ಊರಿನವರೆಗೂ ರಾಶಿರಾಶಿಯಾಗಿ ನಿಂತುಕೊಂಡಿತು. ಜನರು ಜೆರಿಕೊವಿನ ಹತ್ತಿರ ನದಿಯನ್ನು ದಾಟಿದರು. 17 ಆ ಸ್ಥಳದಲ್ಲಿ ನೆಲವು ಒಣಗಿತ್ತು; ಯಾಜಕರು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯನ್ನು ನದಿಯ ಮಧ್ಯದವರೆಗೆ ತೆಗೆದುಕೊಂಡು ಹೋಗಿ ಅಲ್ಲಿ ನಿಂತುಕೊಂಡರು. ಯಾಜಕರು ಅಲ್ಲಿಯೇ ನಿಂತುಕೊಂಡಿರಲಾಗಿ ಎಲ್ಲಾ ಇಸ್ರೇಲರು ಒಣನೆಲದ ಮೇಲೆ ನಡೆದುಕೊಂಡು ಹೋಗಿ ಜೋರ್ಡನ್ ನದಿಯನ್ನು ದಾಟಿದರು.

ಮತ್ತಾಯ 28:1-10

ಯೇಸುವಿನ ಪುನರುತ್ಥಾನ

(ಮಾರ್ಕ 16:1-8; ಲೂಕ 24:1-12; ಯೋಹಾನ 20:1-10)

28 ಸಬ್ಬತ್ ದಿನ ಕಳೆದಿತ್ತು. ಭಾನುವಾರ ಬೆಳಗಾಗುವುದರಲ್ಲಿತ್ತು. ಮಗ್ಧಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಹೋದರು.

ಆಗ ಭೀಕರ ಭೂಕಂಪವಾಯಿತು. ಪ್ರಭುವಿನ ದೂತನೊಬ್ಬನು ಆಕಾಶದಿಂದ ಇಳಿದುಬಂದನು. ಆ ದೇವದೂತನು ಸಮಾಧಿಯ ಬಳಿಗೆ ಹೋಗಿ, ಸಮಾಧಿಯ ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಆ ಬಂಡೆಯ ಮೇಲೆ ಕುಳಿತುಕೊಂಡನು. ದೇವದೂತನು ಮಿಂಚಿನಂತೆ ಪ್ರಕಾಶಿಸುತ್ತಿದ್ದನು. ಅವನ ಬಟ್ಟೆಗಳು ಮಂಜಿನಂತೆ ಬಿಳುಪಾಗಿದ್ದವು. ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.

ದೇವದೂತನು ಆ ಸ್ತ್ರೀಯರಿಗೆ, “ಹೆದರಬೇಡಿ, ಶಿಲುಬೆಗೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರೆಂಬುದು ನನಗೆ ತಿಳಿದಿದೆ. ಆದರೆ ಯೇಸು ಇಲ್ಲಿಲ್ಲ. ಆತನು ತಾನು ತಿಳಿಸಿದ್ದಂತೆಯೇ ಪುನರುತ್ಥಾನ ಹೊಂದಿದ್ದಾನೆ. ಬನ್ನಿ, ಆತನ ದೇಹವಿದ್ದ ಸ್ಥಳವನ್ನು ನೋಡಿ. ಬೇಗನೆ ಹೋಗಿ ಆತನ ಶಿಷ್ಯರಿಗೆ, ‘ಯೇಸು ಪುನರುತ್ಥಾನ ಹೊಂದಿದ್ದಾನೆ. ಆತನು ಗಲಿಲಾಯಕ್ಕೆ ಹೋಗುತ್ತಿದ್ದಾನೆ. ನಿಮಗಿಂತ ಮುಂಚೆಯೇ ಆತನು ಅಲ್ಲಿರುತ್ತಾನೆ. ನೀವು ಆತನನ್ನು ಅಲ್ಲಿ ನೋಡುತ್ತೀರಿ’ ಎಂದು ಹೇಳಿರಿ. ನಾನು ನಿಮಗೆ ತಿಳಿಸಬೇಕಾದ ಸಮಾಚಾರ ಇದೇ, ಮರೆಯದಿರಿ” ಎಂದನು.

ಕೂಡಲೇ ಆ ಸ್ತ್ರೀಯರು ಭಯದಿಂದಲೂ ಸಂತೋಷದಿಂದಲೂ ಸಮಾಧಿಯಿಂದ ಹೊರಟರು. ನಡೆದ ಸಂಗತಿಯನ್ನು ಶಿಷ್ಯರಿಗೆ ತಿಳಿಸಲು ಅವರು ಓಡಿಹೋಗುತ್ತಿರಲು, ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು. 10 ಯೇಸು ಆ ಸ್ತ್ರೀಯರಿಗೆ, “ಹೆದರಬೇಡಿ, ನನ್ನ ಸಹೋದರರ ಬಳಿಗೆ ಹೋಗಿ ಗಲಿಲಾಯಕ್ಕೆ ಬರಲು ತಿಳಿಸಿರಿ. ಅವರು ನನ್ನನ್ನು ಅಲ್ಲಿ ಕಾಣುವರು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International