Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 118:1-2

118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
    ಆತನು ಒಳ್ಳೆಯವನು.
    ಆತನ ಪ್ರೀತಿಯು ಶಾಶ್ವತವಾದದ್ದು!
ಇಸ್ರೇಲರೇ,
    “ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.

ಕೀರ್ತನೆಗಳು 118:14-24

14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
    ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
    ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.

17 ನಾನು ಸಾಯುವುದಿಲ್ಲ;
    ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
    ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
    ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
    ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
    ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.

22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
    ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
    ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.

ವಿಮೋಚನಕಾಂಡ 15:1-18

ಮೋಶೆಯ ಗೀತೆ

15 ಬಳಿಕ ಮೋಶೆ ಮತ್ತು ಇಸ್ರೇಲರು ಯೆಹೋವನಿಗೆ ಈ ಗೀತೆಯನ್ನು ಹಾಡತೊಡಗಿದರು:

“ನಾನು ಯೆಹೋವನಿಗೆ ಹಾಡುವೆನು.
    ಆತನು ಮಹಾಕಾರ್ಯಗಳನ್ನು ಮಾಡಿದ್ದಾನೆ.
ಆತನು ಕುದುರೆಗಳನ್ನೂ ಸವಾರರನ್ನೂ
    ಸಮುದ್ರದೊಳಗೆ ಮುಳುಗಿಸಿದನು.
ಯೆಹೋವನೇ ನನ್ನ ಬಲ,
    ಆತನು ನನ್ನನ್ನು ರಕ್ಷಿಸುತ್ತಾನೆ.
    ನನ್ನ ಬಲವೂ ಕೀರ್ತನೆಯೂ ಯಾಹುವೇ; ಆತನಿಂದ ನನಗೆ ರಕ್ಷಣೆ ಆಯಿತು.
ಯೆಹೋವನು ನನ್ನ ದೇವರು.
    ಮತ್ತು ನಾನು ಆತನನ್ನು ಸ್ತುತಿಸುತ್ತೇನೆ.
ಯೆಹೋವನೇ ನಮ್ಮ ಪೂರ್ವಿಕರ ದೇವರು.
    ನಾನು ಆತನನ್ನು ಸನ್ಮಾನಿಸುತ್ತೇನೆ.
ಯೆಹೋವನೇ ಯುದ್ಧವೀರನು.
    ಆತನ ನಾಮಧೇಯವು ಯೆಹೋವನೇ.
ಆತನು ಫರೋಹನ ರಥಗಳನ್ನೂ
    ಸೈನಿಕರನ್ನೂ ಸಮುದ್ರದೊಳಗೆ ಕೆಡವಿದನು;
ಫರೋಹನ ಮಹಾವೀರರನ್ನು
    ಕೆಂಪು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಸಾಗರವು ಅವರನ್ನು ಮುಚ್ಚಿಕೊಂಡಿತು;
    ಆಳವಾದ ನೀರಿನಲ್ಲಿ ಅವರು ಬಂಡೆಗಳಂತೆ ಮುಳುಗಿದರು.

“ನಿನ್ನ ಭುಜಬಲವು ಎಷ್ಟೋ ಶಕ್ತಿಯುಳ್ಳದ್ದಾಗಿದೆ.
    ಯೆಹೋವನೇ, ನಿನ್ನ ಭುಜಬಲವು ವೈರಿಯನ್ನು ನುಚ್ಚುನೂರು ಮಾಡಿತು.
ನೀನು ಅತ್ಯಧಿಕ ಮಹತ್ವವುಳ್ಳವನಾಗಿ,
    ನಿನಗೆದುರು ನಿಲ್ಲುವವರನ್ನು ನಾಶಗೊಳಿಸಿದೆ.
ಬೆಂಕಿಯು ಹುಲ್ಲನ್ನು ಸುಡುವಂತೆ
    ನಿನ್ನ ಕೋಪವು ಅವರನ್ನು ನಾಶಮಾಡಿತು.
ನೀನು ಊದಿದ ಮಹಾಗಾಳಿಯಿಂದ
    ನೀರು ಒತ್ತಟ್ಟಿಗೆ ಸೇರಿತು.
ವೇಗವಾಗಿ ಹರಿಯುವ ನೀರು ಗಟ್ಟಿಯಾದ ಗೋಡೆಯಾಯಿತು.
    ಸಾಗರಗರ್ಭದೊಳಗಿನ ಜಲವು ಗಟ್ಟಿಯಾಯಿತು.

“‘ನಾವು ಅವರನ್ನು ಬೆನ್ನಟ್ಟಿ ಹಿಡಿಯುವೆವು;
    ನಾವು ಅವರ ಸಂಪತ್ತನ್ನೆಲ್ಲಾ ತೆಗೆದುಕೊಳ್ಳುವೆವು.
ನಾವು ಖಡ್ಗದಿಂದ ಅವರನ್ನು ಸಂಹರಿಸುವೆವು.
    ನಮ್ಮ ಭುಜಬಲದಿಂದ ಅವರ ಸ್ವತ್ತುಗಳನ್ನೆಲ್ಲಾ ವಶಪಡಿಸಿಕೊಳ್ಳುವೆವು’
    ಎಂದುಕೊಂಡರು ವೈರಿಗಳು.
10 ಆದರೆ ನೀನು ಅವರ ಮೇಲೆ ಊದಿದ ಗಾಳಿಯಿಂದ
    ಸಮುದ್ರವು ಅವರನ್ನು ಮುಚ್ಚಿಕೊಂಡಿತು;
ಅವರು ಸೀಸದಂತೆ
    ಅಗಾಧವಾದ ಸಮುದ್ರದಲ್ಲಿ ಮುಳುಗಿದರು.

11 “ಯೆಹೋವನೇ, ದೇವರುಗಳಲ್ಲಿ ನಿನಗೆ ಸಮಾನರು ಯಾರು?
    ಪರಿಶುದ್ಧತೆಯಲ್ಲಿ ನೀನೇ ಸರ್ವೋತ್ತಮನು.
    ಭಯಂಕರ ಕಾರ್ಯಗಳನ್ನು ಮಾಡಿ ಪ್ರಖ್ಯಾತಿಹೊಂದಿದವನೂ ನೀನೇ.
    ಅದ್ಭುತಕಾರ್ಯಗಳನ್ನು ಮಾಡುವಾತನೂ ನೀನೇ.
12 ನೀನು ನಿನ್ನ ಬಲಗೈಯನ್ನು ಚಾಚಿದಾಗ
    ಭೂಮಿಯು ಶತ್ರುಗಳನ್ನು ನುಂಗಿಬಿಟ್ಟಿತು!
13 ನೀನು ಬಿಡುಗಡೆ ಮಾಡಿದ ನಿನ್ನ ಜನರನ್ನು
    ಪ್ರೀತಿಯಿಂದ ನಡೆಸುವೆ.
ನಿನ್ನ ಬಲದಿಂದ ನೀನು ಈ ಜನರನ್ನು
    ನಿನ್ನ ಪವಿತ್ರವಾದ ದೇಶಕ್ಕೆ ನಡಿಸುವೆ.

14 “ಬೇರೆ ಜನಾಂಗಗಳವರು ಇದನ್ನು ಕೇಳಿ ಭಯಭೀತರಾಗುವರು;
    ಫಿಲಿಷ್ಟಿಯರು ಭಯದಿಂದ ತಲ್ಲಣಿಸುವರು.
15 ಆಗ ಎದೋಮಿನ ಕುಟುಂಬಗಳು ಭಯಭೀತರಾಗುವರು.
    ಮೋವಾಬಿನ ನಾಯಕರು ಭಯದಿಂದ ನಡುಗುವರು.
    ಕಾನಾನಿನ ಜನರು ತಮ್ಮ ಧೈರ್ಯವನ್ನು ಕಳೆದುಕೊಳ್ಳುವರು.
16 ನಿನ್ನ ಭುಜಬಲವನ್ನು ಅವರು ಕಂಡು
    ಭಯಭೀತರಾಗುವರು.
ಯೆಹೋವನ ಜನರು ದಾಟಿ ಹೋಗುವವರೆಗೆ,
    ನೀನು ರೂಪಿಸಿದ ಜನರು ದಾಟಿ ಹೋಗುವವರೆಗೆ, ಅವರು ಬಂಡೆಯಂತೆ ಮೌನವಾಗಿರುವರು.
17 ನೀನು ನಿನ್ನ ಜನರನ್ನು
    ನಿನ್ನ ಬೆಟ್ಟದ ಸೀಮೆಗೂ
ನಿನ್ನ ಸಿಂಹಾಸನಕ್ಕಾಗಿ ನೀನು ಸಿದ್ಧಮಾಡಿದ ಸ್ಥಳಕ್ಕೂ ನಡಿಸುವೆ.
    ಯೆಹೋವನೇ, ಒಡೆಯನೇ, ನಿನ್ನ ಕೈಗಳಿಂದ ನಿನ್ನ ಆಲಯವನ್ನು ಕಟ್ಟು.

18 “ಯೆಹೋವನು ಎಂದೆಂದಿಗೂ ಆಳುವನು!”

ಕೊಲೊಸ್ಸೆಯವರಿಗೆ 3:12-17

ಇತರರೊಂದಿಗೆ ನಿಮ್ಮ ಹೊಸ ಜೀವನ

12 ದೇವರು ನಿಮ್ಮನ್ನು ಆರಿಸಿಕೊಂಡಿದ್ದಾನೆ ಮತ್ತು ನಿಮ್ಮನ್ನು ತನ್ನ ಪವಿತ್ರ ಜನರನ್ನಾಗಿಸಿದ್ದಾನೆ. ಆತನು ನಿಮ್ಮನ್ನು ಪ್ರೀತಿಸುತ್ತಾನೆ. ಹೀಗಿರಲಾಗಿ ಕನಿಕರ, ದಯೆ, ದೀನತೆ, ವಿನಯಶೀಲತೆ, ಶಾಂತಿ, ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. 13 ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಬೇರೆಯವರ ಮೇಲೆ ಹೇಳುವಂಥ ದೂರುಗಳು ನಿಮ್ಮಲ್ಲಿದ್ದರೂ ಕ್ಷಮಿಸಿಬಿಡಿರಿ. ಪ್ರಭುವು ನಿಮ್ಮನ್ನು ಕ್ಷಮಿಸಿದ್ದರಿಂದ ನೀವೂ ಇತರರನ್ನು ಕ್ಷಮಿಸಿರಿ. 14 ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮಲ್ಲಿ ಪ್ರೀತಿಯಿರಲಿ. ಪ್ರೀತಿಯು ನಿಮ್ಮನ್ನೆಲ್ಲರನ್ನೂ ಸಂಪೂರ್ಣವಾದ ಒಗ್ಗಟ್ಟಿನಲ್ಲಿರಿಸುವುದು. 15 ಕ್ರಿಸ್ತನು ನೀಡುವ ಶಾಂತಿಯು ನಿಮ್ಮ ಆಲೋಚನಗಳನ್ನೆಲ್ಲ ತನ್ನ ಹತೋಟಿಯಲ್ಲಿಟ್ಟುಕೊಂಡಿರಲಿ. ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರಾದ್ದರಿಂದ ಶಾಂತಿಯಿಂದಿರಲು ಕರೆಯಲ್ಪಟ್ಟಿದ್ದೀರಿ. ಯಾವಾಗಲು ಕೃತಜ್ಞರಾಗಿರಿ.

16 ಕ್ರಿಸ್ತನ ಉಪದೇಶವು ನಿಮ್ಮ ಅಂತರಂಗದಲ್ಲಿ ಸಮೃದ್ಧವಾಗಿ ನೆಲಸಿರಲಿ. ನೀವು ದೇವರಿಂದ ಕಲಿತುಕೊಂಡದ್ದನ್ನು ಉಪದೇಶಿಸುವುದಕ್ಕೂ ಒಬ್ಬರನ್ನೊಬ್ಬರು ಬಲಪಡಿಸುವುದಕ್ಕೂ ಉಪಯೋಗಿಸಿರಿ. ನಿಮ್ಮ ಹೃದಯದಲ್ಲಿ ದೇವರಿಗೆ ಕೃತಜ್ಞರಾಗಿದ್ದು ಹಾಡುಗಳನ್ನು, ಕೀರ್ತನೆಗಳನ್ನು, ಸಂಗೀತಗಳನ್ನು ಹಾಡಿರಿ. 17 ನೀವು ನುಡಿಯಿಂದಾಗಲಿ, ನಡೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಿಮ್ಮ ಪ್ರಭುವಾದ ಯೇಸುವಿಗಾಗಿ ಮಾಡಿರಿ. ನೀವು ಏನು ಮಾಡಿದರೂ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International