Revised Common Lectionary (Semicontinuous)
118 ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
ಆತನು ಒಳ್ಳೆಯವನು.
ಆತನ ಪ್ರೀತಿಯು ಶಾಶ್ವತವಾದದ್ದು!
2 ಇಸ್ರೇಲರೇ,
“ಆತನ ಪ್ರೀತಿ ಶಾಶ್ವತವಾದದ್ದು” ಎಂದು ಹೇಳಿರಿ.
14 ನನ್ನ ಬಲವೂ ಜಯಗೀತೆಯೂ ಯೆಹೋವನೇ.
ಆತನೇ ನನ್ನನ್ನು ರಕ್ಷಿಸುವನು!
15 ಜಯೋತ್ಸವವು ನೀತಿವಂತರ ಮನೆಗಳಲ್ಲಿ ಕೇಳಿಬರುತ್ತಿದೆ.
ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿಸಿದ್ದಾನೆ.
16 ಯೆಹೋವನ ಬಲಗೈ ಜಯಗಳಿಸಿದೆ.
ಯೆಹೋವನು ತನ್ನ ಮಹಾಶಕ್ತಿಯನ್ನು ಮತ್ತೆ ತೋರಿದ್ದಾನೆ.
17 ನಾನು ಸಾಯುವುದಿಲ್ಲ;
ನಾನು ಜೀವದಿಂದಿದ್ದು ಯೆಹೋವನ ಕಾರ್ಯಗಳ ಕುರಿತು ಹೇಳುತ್ತೇನೆ.
18 ಯೆಹೋವನು ನನ್ನನ್ನು ಶಿಕ್ಷಿಸಿದರೂ
ಸಾವಿಗೀಡುಮಾಡಲಿಲ್ಲ.
19 ನೀತಿಯ ಬಾಗಿಲುಗಳೇ, ನನಗೋಸ್ಕರ ತೆರೆಯಿರಿ,
ನಾನು ಒಳಗೆ ಬಂದು ಯೆಹೋವನನ್ನು ಆರಾಧಿಸುತ್ತೇನೆ.
20 ಅವು ಯೆಹೋವನ ಬಾಗಿಲುಗಳು.
ನೀತಿವಂತರು ಮಾತ್ರ ಆ ಬಾಗಿಲುಗಳ ಮೂಲಕ ಹೋಗಬಲ್ಲರು.
21 ಯೆಹೋವನೇ, ನನ್ನ ಪ್ರಾರ್ಥನೆಗೆ ನೀನು ಉತ್ತರಿಸಿ
ನನ್ನನ್ನು ರಕ್ಷಿಸಿದ್ದಕ್ಕೋಸ್ಕರ ನಿನಗೆ ಕೃತಜ್ಞತಾಸ್ತುತಿ ಮಾಡುವೆನು.
22 ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮೂಲೆಗಲ್ಲಾಯಿತು.
23 ಇದು ಯೆಹೋವನಿಂದಲೇ ಆಯಿತು.
ನಮಗಂತೂ ಇದು ಆಶ್ಚರ್ಯಕರವಾಗಿದೆ!
24 ಈ ದಿನವನ್ನು ಮಾಡಿದಾತನು ಯೆಹೋವನೇ.
ಇಂದೇ ನಾವು ಉಲ್ಲಾಸದಿಂದ ಆನಂದಿಸೋಣ.
10 ಫರೋಹನೂ ಅವನ ಸೈನ್ಯವೂ ತಮ್ಮ ಕಡೆಗೆ ಬರುತ್ತಿರುವುದನ್ನು ಇಸ್ರೇಲರು ಕಂಡು ಬಹಳ ಭಯಪಟ್ಟರು. ಅವರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಟ್ಟರು. 11 ಅವರು ಮೋಶೆಗೆ, “ನೀನು ಯಾಕೆ ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದೆ? ನಮ್ಮನ್ನು ಅರಣ್ಯದಲ್ಲಿ ಸಾಯಿಸುವುದಕ್ಕೆ ನೀನು ನಮ್ಮನ್ನು ಕರೆದುಕೊಂಡು ಬಂದೆಯಾ? ನಾವು ಈಜಿಪ್ಟಿನಲ್ಲಿಯೇ ಸಮಾಧಾನದಿಂದ ಸಾಯಬಹುದಾಗಿತ್ತಲ್ಲವೆ? ಈಜಿಪ್ಟಿನಲ್ಲಿ ಸಾಕಷ್ಟು ಸಮಾಧಿಗಳಿದ್ದವು. 12 ನಾವು ನಿನಗೆ ಈಜಿಪ್ಟಿನಲ್ಲೇ, ‘ದಯಮಾಡಿ ನಮ್ಮ ಗೊಡವೆಗೆ ಬರಬೇಡ. ನಾವು ಇಲ್ಲಿದ್ದುಕೊಂಡು ಈಜಿಪ್ಟಿನವರ ಸೇವೆಮಾಡಲು ಬಿಡು’ ಎಂದು ಹೇಳಿದ್ದೆವು. ನಾವು ಇಲ್ಲಿಗೆ ಬಂದು ಅರಣ್ಯದಲ್ಲಿ ಸಾಯುವುದಕ್ಕಿಂತ, ಅಲ್ಲೇ ಗುಲಾಮರಾಗಿ ಇದ್ದಿದ್ದರೆ ಒಳ್ಳೆಯದಾಗಿರುತ್ತಿತ್ತು” ಎಂದು ಹೇಳಿದರು.
13 ಆದರೆ ಮೋಶೆ ಆ ಜನರಿಗೆ, “ಭಯಪಡಬೇಡಿರಿ! ಓಡಿಹೋಗಬೇಡಿರಿ! ಇಲ್ಲೇ ಇದ್ದು ಯೆಹೋವನು ಈ ದಿನ ನಿಮ್ಮನ್ನು ರಕ್ಷಿಸುವುದನ್ನು ನೋಡಿರಿ. ಈ ದಿನದ ನಂತರ ನೀವು ಇನ್ನೆಂದಿಗೂ ಈ ಈಜಿಪ್ಟಿನವರನ್ನು ನೋಡುವುದಿಲ್ಲ. 14 ಯೆಹೋವನು ನಿಮಗೋಸ್ಕರ ಯುದ್ಧಮಾಡುವನು. ಆದ್ದರಿಂದ ನೀವು ಸುಮ್ಮನೆ ಇರಿ” ಎಂದು ಹೇಳಿದನು.
15 ಆಗ ಯೆಹೋವನು ಮೋಶೆಗೆ, “ನೀನು ನನಗೆ ಮೊರೆಯಿಡುತ್ತಿರುವುದೇಕೆ? ಇಸ್ರೇಲರಿಗೆ ಮುಂದೆ ಹೋಗಲು ಆಜ್ಞಾಪಿಸು. 16 ನಿನ್ನ ಕೈಯಲ್ಲಿರುವ ಊರುಗೋಲನ್ನು ಕೆಂಪುಸಮುದ್ರದ ಮೇಲೆ ಚಾಚು. ಆಗ ಸಮುದ್ರವು ಇಬ್ಭಾಗವಾಗುವುದು. ಜನರು ಒಣನೆಲದ ಮೇಲೆ ಸಮುದ್ರವನ್ನು ದಾಟಬಹುದು. 17 ಈಜಿಪ್ಟಿನವರು ನಿಮ್ಮನ್ನು ಬೆನ್ನಟ್ಟುವಂತೆ ನಾನು ಅವರ ಹೃದಯಗಳನ್ನು ಕಠಿಣಗೊಳಿಸುವುದರಿಂದ ನಾನು ಫರೋಹನಿಗಿಂತಲೂ ಅವನ ಎಲ್ಲಾ ರಾಹುತರುಗಳಿಗಿಂತಲೂ ರಥಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ನಿಮಗೆ ತೋರಿಸುವೆನು. 18 ಆಗ ನಾನೇ ಯೆಹೋವನೆಂದು ಈಜಿಪ್ಟಿಗೆ ತಿಳಿಯುವುದು. ನಾನು ಫರೋಹನನ್ನೂ ಅವನ ರಾಹುತರನ್ನೂ ರಥಗಳನ್ನೂ ಸೋಲಿಸಿದಾಗ ಅವರು ನನ್ನನ್ನು ಸನ್ಮಾನಿಸುವರು” ಎಂದು ಹೇಳಿದನು.
ಯೆಹೋವನು ಈಜಿಪ್ಟಿನ ಸೈನ್ಯವನ್ನು ಸೋಲಿಸಿದನು
19 ಆ ಸಮಯದಲ್ಲಿ ಯೆಹೋವನ ದೂತನು ತನ್ನ ಸ್ಥಳವನ್ನು ಬಿಟ್ಟು ಅವರ ಹಿಂದಕ್ಕೆ ಬಂದನು. ಆದ್ದರಿಂದ ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅವರ ಹಿಂಭಾಗಕ್ಕೆ ಹೋಯಿತು. 20 ಹೀಗೆ ಮೋಡವು ಈಜಿಪ್ಟಿನವರಿಗೂ ಇಸ್ರೇಲರಿಗೂ ನಡುವೆ ನಿಂತಿತು. ಅಲ್ಲಿ ಇಸ್ರೇಲರಿಗೆ ಬೆಳಕಿತ್ತು. ಆದರೆ ಈಜಿಪ್ಟಿನವರಿಗೆ ಕತ್ತಲಿತ್ತು. ಆದ್ದರಿಂದ ಈಜಿಪ್ಟಿನವರು ಆ ರಾತ್ರಿ ಇಸ್ರೇಲರ ಸಮೀಪಕ್ಕೆ ಬರಲಿಲ್ಲ.
21 ಮೋಶೆಯು ತನ್ನ ಕೈಯನ್ನು ಕೆಂಪುಸಮುದ್ರದ ಮೇಲೆ ಚಾಚಿದನು; ಆಗ ಯೆಹೋವನು ಪೂರ್ವದಿಂದ ಬಲವಾದ ಗಾಳಿಯನ್ನು ಬೀಸುವಂತೆ ಮಾಡಿದನು. ಗಾಳಿಯು ರಾತ್ರಿಯೆಲ್ಲಾ ಬೀಸಿತು. ಸಮುದ್ರವು ಇಬ್ಭಾಗವಾಗಿ ಮಧ್ಯದಲ್ಲಿ ಒಣನೆಲವಾಯಿತು. 22 ಇಸ್ರೇಲರು ಒಣನೆಲದ ಮೇಲೆ ಸಮುದ್ರವನ್ನು ದಾಟಿದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತು. 23 ಆಗ ಫರೋಹನು ತನ್ನ ಎಲ್ಲಾ ರಥಗಳೊಡನೆ ಮತ್ತು ರಾಹುತರೊಡನೆ ಅವರನ್ನು ಹಿಂಬಾಲಿಸಿ ಸಮುದ್ರದೊಳಕ್ಕೆ ಹೋದನು. 24 ಬೆಳಗಿನ ಜಾವ ಇನ್ನೂ ಮೊಬ್ಬಿರುವಾಗ, ಯೆಹೋವನು ಎತ್ತರವಾದ ಮೇಘಸ್ತಂಭದಿಂದ ಮತ್ತು ಅಗ್ನಿಸ್ತಂಭದಿಂದ ಈಜಿಪ್ಟಿನ ಸೈನ್ಯವನ್ನು ದೃಷ್ಟಿಸಿದನು. ಆಗ ಯೆಹೋವನು ಅವರ ಮೇಲೆ ಧಾಳಿಮಾಡಿ ಅವರ ಪಾಳೆಯದಲ್ಲಿ ಗಲಿಬಿಲಿಮಾಡಿದನು. 25 ರಥಗಳ ಚಕ್ರಗಳು ನೆಲಕ್ಕೆ ಅಂಟಿಕೊಂಡವು. ರಥಗಳನ್ನು ನಡಿಸುವುದು ಬಹುಕಷ್ಟವಾಗಿತ್ತು. ಈಜಿಪ್ಟಿನವರು “ನಾವು ಇಲ್ಲಿಂದ ಹೋಗೋಣ. ಯೆಹೋವನು ಈಜಿಪ್ಟಿನ ವಿರುದ್ಧವಾಗಿ ಯುದ್ಧಮಾಡುತ್ತಿದ್ದಾನೆ. ಯೆಹೋವನು ಇಸ್ರೇಲರಿಗಾಗಿ ಯುದ್ಧ ಮಾಡುತ್ತಿದ್ದಾನೆ” ಎಂದು ಕೂಗಿಕೊಂಡರು.
26 ಆಗ ಯೆಹೋವನು ಮೋಶೆಗೆ, “ನಿನ್ನ ಕೈಯನ್ನು ಸಮುದ್ರದ ಮೇಲೆ ಚಾಚು; ನೀರು ಈಜಿಪ್ಟಿನವರ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಕೊಳ್ಳುವುದು” ಎಂದು ಹೇಳಿದನು.
27 ಆದ್ದರಿಂದ ಹಗಲಿನ ಬೆಳಕು ಪ್ರಕಾಶಿಸುವುದಕ್ಕಿಂತ ಸ್ವಲ್ಪ ಮೊದಲು, ಮೋಶೆಯು ತನ್ನ ಕೈಯನ್ನು ಸಮುದ್ರದ ಮೇಲೆ ಚಾಚಿದನು. ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿತು. ಈಜಿಪ್ಟಿನವರು ನೀರಿನಿಂದ ಓಡಿಹೋಗಲು ಬಹಳವಾಗಿ ಪ್ರಯತ್ನಿಸಿದರು. ಆದರೆ ಯೆಹೋವನು ಈಜಿಪ್ಟಿನವರನ್ನು ಸಮುದ್ರದಲ್ಲಿ ಕೆಡವಿಬಿಟ್ಟನು. 28 ನೀರು ತನ್ನ ಸರಿಯಾದ ಮಟ್ಟಕ್ಕೆ ಹಿಂತಿರುಗಿ ರಥಗಳನ್ನು ಮತ್ತು ರಾಹುತರನ್ನು ಮುಚ್ಚಿಬಿಟ್ಟಿತು. ಸಮುದ್ರದೊಳಗೆ ಹೋಗಿದ್ದ ಇಸ್ರೇಲರನ್ನು ಬೆನ್ನಟ್ಟಿದ ಫರೋಹನ ಸೈನ್ಯವೆಲ್ಲಾ ನಾಶವಾಯಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ.
29 ಆದರೆ ಇಸ್ರೇಲರು ಒಣನೆಲದಲ್ಲಿ ಸಮುದ್ರವನ್ನು ದಾಟಿದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತು. 30 ಆದ್ದರಿಂದ ಆ ದಿನ ಯೆಹೋವನು ಇಸ್ರೇಲರನ್ನು ಈಜಿಪ್ಟಿನವರಿಂದ ರಕ್ಷಿಸಿದನು. ಇಸ್ರೇಲರು ಕೆಂಪುಸಮುದ್ರದ ದಡದಲ್ಲಿ ಬಿದ್ದಿದ್ದ ಈಜಿಪ್ಟಿನವರ ಹೆಣಗಳನ್ನು ನೋಡಿದರು. 31 ಈಜಿಪ್ಟಿನವರನ್ನು ಯೆಹೋವನು ಸೋಲಿಸಿದಾಗ ಇಸ್ರೇಲರು ಆತನ ಮಹಾಶಕ್ತಿಯನ್ನು ನೋಡಿದರು. ಆದ್ದರಿಂದ ಜನರು ಯೆಹೋವನನ್ನು ಸನ್ಮಾನಿಸಿ ಆತನ ಸೇವಕನಾದ ಮೋಶೆಯಲ್ಲಿ ಭರವಸವಿಟ್ಟರು.
20 ಆರೋನನ ಅಕ್ಕ ಮಿರ್ಯಾಮಳು ಪ್ರವಾದಿನಿಯಾಗಿದ್ದು ದಮ್ಮಡಿಯನ್ನು ಕೈಯಲ್ಲಿ ತೆಗೆದುಕೊಂಡಳು. ಮಿರ್ಯಾಮಳು ಮತ್ತು ಸ್ತ್ರೀಯರು ಹಾಡುವುದಕ್ಕೂ ಕುಣಿಯುವುದಕ್ಕೂ ಪ್ರಾರಂಭಿಸಿದರು. 21 ಮಿರ್ಯಾಮಳು ಅವರ ಹಾಡಿಗೆ ಹೀಗೆ ಪಲ್ಲವಿ ಹಾಡಿದಳು:
“ಯೆಹೋವನಿಗೆ ಗಾನಮಾಡಿರಿ;
ಆತನು ಮಹಾಜಯಶಾಲಿಯಾದನು.
ಕುದುರೆಗಳನ್ನೂ ರಾಹುತರನ್ನೂ
ಸಮುದ್ರದೊಳಗೆ ಮುಳುಗಿಸಿ ನಾಶಮಾಡಿದನು…”
5 ಆದ್ದರಿಂದ ದುಷ್ಕೃತ್ಯಗಳಾದ ಲೈಂಗಿಕ ಪಾಪ, ದುರಾಚಾರ, ಕಾಮಾಭಿಲಾಷೆ, ದುರಾಶೆ ಮತ್ತು ಸ್ವಾರ್ಥತೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. ಸ್ವಾರ್ಥವು ವಿಗ್ರಹಾರಾಧನೆಗೆ ಸಮವಾಗಿದೆ. 6 ಇವು ದೇವರನ್ನು ಕೋಪಗೊಳಿಸುತ್ತವೆ. 7 ಪೂರ್ವಕಾಲದ ನಿಮ್ಮ ದುಷ್ಟಜೀವನದಲ್ಲಿ ಈ ಕಾರ್ಯಗಳನ್ನೆಲ್ಲ ನೀವು ಮಾಡಿರುವಿರಿ.
8 ಈಗಲಾದರೋ ಕೋಪ, ಕ್ರೋಧ, ಮತ್ಸರ, ಚುಚ್ಚು ಮಾತು ಮತ್ತು ದುರ್ಭಾಷೆಗಳನ್ನು ನಿಮ್ಮ ಜೀವಿತದಿಂದ ತೆಗೆದುಹಾಕಿರಿ. 9 ಒಬ್ಬರಿಗೊಬ್ಬರು ಸುಳ್ಳು ಹೇಳಬೇಡಿ. ಏಕೆಂದರೆ ನೀವು ನಿಮ್ಮ ಹಳೆಯ ಪಾಪಪೂರಿತ ಜೀವನವನ್ನು ಮತ್ತು ನಿಮ್ಮ ಮೊದಲಿನ ಕಾರ್ಯಗಳನ್ನು ಬಿಟ್ಟುಬಿಟ್ಟಿದ್ದೀರಿ. 10 ನೀವು ಹೊಸ ಜೀವನವನ್ನು ಆರಂಭಿಸಿರುವಿರಿ. ಈ ಹೊಸ ಜೀವನದಲ್ಲಿ ನೀವು ನಿಮ್ಮನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ನೂತನರಾಗುತ್ತಿದ್ದೀರಿ. ದೇವರ ಬಗ್ಗೆ ನಿಜವಾದ ತಿಳುವಳಿಕೆಯನ್ನು ಈ ಹೊಸ ಜೀವನ ಕೊಡುತ್ತದೆ. 11 ಈ ಹೊಸ ಜೀವನದಲ್ಲಿ ಗ್ರೀಕರ ಮತ್ತು ಯೆಹೂದ್ಯರ ಮಧ್ಯದಲ್ಲಾಗಲಿ, ಸುನ್ನತಿಯನ್ನು ಮಾಡಿಸಿಕೊಂಡಿರುವ ಮತ್ತು ಮಾಡಿಸಿಕೊಂಡಿಲ್ಲದ ಜನರ ಮಧ್ಯದಲ್ಲಾಗಲಿ ಪರದೇಶದವರ ಅಥವಾ ಅನಾಗರೀಕರ ಮಧ್ಯದಲ್ಲಾಗಲಿ, ಗುಲಾಮರ ಅಥವಾ ಸ್ವತಂತ್ರರಾದ ಜನರ ಮಧ್ಯದಲ್ಲಾಗಲಿ ಯಾವ ಭೇದವೂ ಇಲ್ಲ. ಎಲ್ಲಾ ವಿಶ್ವಾಸಿಗಳಲ್ಲಿಯೂ ಕ್ರಿಸ್ತನಿದ್ದಾನೆ. ಅವರಿಗೆ ಕ್ರಿಸ್ತನೊಬ್ಬನೇ ಅಗತ್ಯ.
Kannada Holy Bible: Easy-to-Read Version. All rights reserved. © 1997 Bible League International