Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 31:9-16

ಯೆಹೋವನೇ, ನನಗೆ ಅನೇಕ ಇಕ್ಕಟ್ಟುಗಳಿವೆ;
    ನನ್ನನ್ನು ಕರುಣಿಸು.
ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ,
    ನನ್ನ ಗಂಟಲು ನೋಯುತ್ತಿದೆ, ಹೊಟ್ಟೆಯೂ ನೋಯುತ್ತಿದೆ.
10 ನನ್ನ ಜೀವಿತವು[a] ದುಃಖದಲ್ಲಿ ಕೊನೆಗೊಳ್ಳುತ್ತಿದೆ.
    ನನ್ನ ವರ್ಷಗಳು ನಿಟ್ಟುಸಿರಿನಲ್ಲೇ ಕಳೆದುಹೋಗುತ್ತಿವೆ.
ನನ್ನ ಇಕ್ಕಟ್ಟುಗಳು ನನ್ನ ಶಕ್ತಿಯನ್ನು ಕುಂದಿಸುತ್ತಿವೆ.
    ನನ್ನ ಬಲವು ನನ್ನನ್ನು ಬಿಟ್ಟುಹೋಗುತ್ತಿದೆ.[b]
11 ವೈರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ;
    ನನ್ನ ನೆರೆಹೊರೆಯವರೂ ನನ್ನನ್ನು ನಿಂದಿಸುವರು;
ನನ್ನ ಸಂಬಂಧಿಕರೂ ನನ್ನ ವಿಷಯದಲ್ಲಿ ಭಯಪಡುವರು;
    ನನ್ನನ್ನು ದಾರಿಯಲ್ಲಿ ಕಂಡರೂ ಕಾಣದಂತೆ ಹೊರಟುಹೋಗುವರು.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು.
    ಕಳೆದುಹೋದ ಉಪಕರಣದಂತೆ ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ.
13 ಜನರು ನನ್ನನ್ನು ಕುರಿತು ಭಯಂಕರವಾದ ಸಂಗತಿಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ.
    ಅವರು ದಂಗೆಯೆದ್ದು ನನ್ನನ್ನು ಕೊಲ್ಲಬೇಕೆಂದುಕೊಂಡಿದ್ದಾರೆ.

14 ಯೆಹೋವನೇ, ನಾನಂತೂ ನಿನ್ನಲ್ಲೇ ಭರವಸವಿಟ್ಟಿದ್ದೇನೆ.
    ನೀನೇ ನನ್ನ ದೇವರು.
15 ನನ್ನ ಜೀವವು ನಿನ್ನ ಕೈಯಲ್ಲಿದೆ.
    ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[c] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
    ಕರುಣೆಯಿಂದ ನನ್ನನ್ನು ರಕ್ಷಿಸು!

ಯೋಬನು 13:13-19

13 “ಸುಮ್ಮನಿರಿ, ಮಾತಾಡಲು ನನಗೆ ಅವಕಾಶ ಕೊಡಿ!
    ನನಗೆ ಏನಾಗಬೇಕೋ ಆಗಲಿ.
14 ನಾನು ನನ್ನನ್ನು ಅಪಾಯಕ್ಕೊಡ್ಡುವೆನು;
    ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.
15 ದೇವರು ನನ್ನನ್ನು ಕೊಂದರೂ ಆತನಲ್ಲಿಯೇ ಭರವಸವಿಟ್ಟಿರುವೆನು.
    ನನ್ನ ನಡತೆಯ ಕುರಿತು ಆತನ ಮುಂದೆ ವಾದಿಸುವೆನು.
16 ನಾನು ನಿರಪರಾಧಿಯೆಂದು ಆಗ ರುಜುವಾತಾಗುವುದು.
    ಯಾಕೆಂದರೆ, ದೇವರನ್ನು ಮುಖಾಮುಖಿಯಾಗಿ ಸಂಧಿಸಲು ದುಷ್ಟನಿಗೆ ಸಾಧ್ಯವೇ ಇಲ್ಲ.
17 ನಾನು ಹೇಳುವುದನ್ನು ಗಮನವಿಟ್ಟು ಕೇಳಿ.
    ನನ್ನ ವಿವರಣೆಯನ್ನು ನಿಮ್ಮ ಕಿವಿಗಳು ಕೇಳಲಿ.
18 ನನ್ನ ಪರವಾಗಿ ವಾದಿಸಲು ಈಗ ಸಿದ್ಧವಾಗಿದ್ದೇನೆ.
    ನಾನು ನಿರಪರಾಧಿಯೆಂದು ನನಗೆ ಗೊತ್ತದೆ.
19 ನಾನು ತಪ್ಪಿತಸ್ಥನೆಂದು ಯಾವನೂ ನಿರೂಪಿಸಲಾರನು.
    ನಿರೂಪಿಸಬಲ್ಲವನಿದ್ದರೆ ಬಾಯಿ ಮುಚ್ಚಿಕೊಳ್ಳುವೆನು.

ಫಿಲಿಪ್ಪಿಯವರಿಗೆ 1:21-30

21 ನನಗಂತೂ ಬದುಕುವುದೆಂದರೆ ಕ್ರಿಸ್ತನೇ, ಸಾಯುವುದೆಂದರೆ ಲಾಭವೇ. 22 ನಾನು ಜೀವದಿಂದಿದ್ದರೆ ಫಲಫಲಿಸುವ ಕೆಲಸ ನನಗಿರುತ್ತದೆ. ಆದರೆ ನಾನು ಸಾಯಬೇಕೇ? ಅಥವಾ ಬದುಕಬೇಕೇ? ಏನನ್ನು ಆರಿಸಿಕೊಳ್ಳಬೇಕೋ ನನಗೆ ಗೊತ್ತಿಲ್ಲ. 23 ಇವೆರಡರಲ್ಲಿ ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಕಷ್ಟ. ನಾನು ಈ ಜೀವಿತವನ್ನು ಬಿಟ್ಟು ಆತನೊಂದಿಗಿರಲು ಅಪೇಕ್ಷಿಸುತ್ತೇನೆ. ಅದೇ ಉತ್ತಮವಾದದ್ದು. 24 ಆದರೆ ನಾನಿಲ್ಲಿ ಇಹಲೋಕದ ಶರೀರದಲ್ಲಿರುವುದು ನಿಮಗೆ ಅಗತ್ಯವಾಗಿದೆ. 25 ಆದ್ದರಿಂದ ನಾನು ಜೀವದಿಂದುಳಿದು ನಿಮ್ಮೊಂದಿಗೆ ಇರುತ್ತೇನೆಂದು ನನಗೆ ಗೊತ್ತಿದೆ. ನೀವು ನಂಬಿಕೆಯಲ್ಲಿ ವೃದ್ಧಿಯಾಗಿರಲು ಆನಂದವಾಗಿರಲು ನಿಮಗೆ ನೆರವಾಗಬೇಕೆಂತಲೂ 26 ನಾನು ಮತ್ತೆ ನಿಮ್ಮೊಂದಿಗಿರುವಾಗ ನೀವು ಕ್ರಿಸ್ತಯೇಸುವಿನಲ್ಲಿ ನನ್ನ ವಿಷಯವಾಗಿ ಹೆಮ್ಮೆಪಡಲು ಮತ್ತಷ್ಟು ಕಾರಣಗಳಿರುತ್ತವೆ.

27 ಅದೇನೇ ಇರಲಿ, ಕ್ರಿಸ್ತನ ಸುವಾರ್ತೆಗೆ ಯೋಗ್ಯರಾಗಿ ಬಾಳಿರಿ. ಆಗ ನಾನು ನಿಮ್ಮ ಬಳಿಗೆ ಬಂದರೂ ಸರಿ, ನಿಮ್ಮಿಂದ ದೂರದಲ್ಲಿದ್ದರೂ ಸರಿ, ನಿಮ್ಮ ವಿಷಯದಲ್ಲಿ ಒಳ್ಳೆಯ ಸಂಗತಿಗಳನ್ನು ಕೇಳುತ್ತೇನೆ. ನೀವು ಒಂದೇ ಉದ್ದೇಶದಿಂದ ದೃಢವಾಗಿದ್ದೀರೆಂದೂ ಸುವಾರ್ತೆಯಿಂದ ಉಂಟಾದ ನಂಬಿಕೆಗೋಸ್ಕರ ಏಕಮನಸ್ಸಿನಿಂದ ಕೆಲಸ ಮಾಡುತ್ತಿದ್ದೀರೆಂದೂ ಕೇಳುತ್ತಲೇ ಇರುತ್ತೇನೆ. 28 ಅಲ್ಲದೆ ನಿಮ್ಮನ್ನು ವಿರೋಧಿಸುವ ಜನರಿಗೆ ನೀವು ಹೆದರಿಕೊಳ್ಳುವುದಿಲ್ಲ. ನಿಮ್ಮ ರಕ್ಷಣೆಗೂ ನಿಮ್ಮ ವೈರಿಗಳ ನಾಶಕ್ಕೂ ಇವುಗಳು ದೇವರಿಂದಾದ ಪ್ರಮಾಣಗಳಾಗಿವೆ. 29 ನೀವು ಕ್ರಿಸ್ತನಲ್ಲಿ ನಂಬಿಕೆಯಿಟ್ಟದ್ದು ದೇವರ ಅನುಗ್ರಹದಿಂದಲೇ. ಅಷ್ಟು ಮಾತ್ರವೇ ಅಲ್ಲ, ಕ್ರಿಸ್ತನಿಗೋಸ್ಕರ ಕಷ್ಟಪಡುವುದೂ ಸಹ ನಿಮಗೆ ಅನುಗ್ರಹವಾಗಿ ದೊರೆಯಿತು. ಇವೆರಡೂ ಕ್ರಿಸ್ತನಿಗೆ ಮಹಿಮೆಯನ್ನು ಉಂಟುಮಾಡುತ್ತವೆ. 30 ನಾನು ನಿಮ್ಮ ಮಧ್ಯದಲ್ಲಿದ್ದಾಗ ಸುವಾರ್ತೆಗೆ ವಿರುದ್ಧವಾಗಿದ್ದ ಜನರೊಂದಿಗೆ ಮಾಡಿದ ಹೋರಾಟವನ್ನು ನೋಡಿದ್ದೀರಿ. ಈಗಲೂ ನನಗಿರುವ ಹೋರಾಟದ ಬಗ್ಗೆ ಕೇಳುತ್ತಿದ್ದೀರಿ. ಸ್ವತಃ ನೀವೇ ಈ ರೀತಿಯ ಹೋರಾಟವನ್ನು ಹೊಂದಿದ್ದೀರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International