Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 31:9-16

ಯೆಹೋವನೇ, ನನಗೆ ಅನೇಕ ಇಕ್ಕಟ್ಟುಗಳಿವೆ;
    ನನ್ನನ್ನು ಕರುಣಿಸು.
ಅತ್ತುಅತ್ತು ನನ್ನ ಕಣ್ಣುಗಳು ನೋಯುತ್ತಿವೆ,
    ನನ್ನ ಗಂಟಲು ನೋಯುತ್ತಿದೆ, ಹೊಟ್ಟೆಯೂ ನೋಯುತ್ತಿದೆ.
10 ನನ್ನ ಜೀವಿತವು[a] ದುಃಖದಲ್ಲಿ ಕೊನೆಗೊಳ್ಳುತ್ತಿದೆ.
    ನನ್ನ ವರ್ಷಗಳು ನಿಟ್ಟುಸಿರಿನಲ್ಲೇ ಕಳೆದುಹೋಗುತ್ತಿವೆ.
ನನ್ನ ಇಕ್ಕಟ್ಟುಗಳು ನನ್ನ ಶಕ್ತಿಯನ್ನು ಕುಂದಿಸುತ್ತಿವೆ.
    ನನ್ನ ಬಲವು ನನ್ನನ್ನು ಬಿಟ್ಟುಹೋಗುತ್ತಿದೆ.[b]
11 ವೈರಿಗಳು ನನ್ನನ್ನು ಕೀಳಾಗಿ ಕಾಣುತ್ತಿದ್ದಾರೆ;
    ನನ್ನ ನೆರೆಹೊರೆಯವರೂ ನನ್ನನ್ನು ನಿಂದಿಸುವರು;
ನನ್ನ ಸಂಬಂಧಿಕರೂ ನನ್ನ ವಿಷಯದಲ್ಲಿ ಭಯಪಡುವರು;
    ನನ್ನನ್ನು ದಾರಿಯಲ್ಲಿ ಕಂಡರೂ ಕಾಣದಂತೆ ಹೊರಟುಹೋಗುವರು.
12 ನಾನು ಸತ್ತವರಂತೆ ಯಾರ ಜ್ಞಾಪಕಕ್ಕೂ ಬಾರದವನಾದೆನು.
    ಕಳೆದುಹೋದ ಉಪಕರಣದಂತೆ ಅವರು ನನ್ನನ್ನು ಮರೆತೇಬಿಟ್ಟಿದ್ದಾರೆ.
13 ಜನರು ನನ್ನನ್ನು ಕುರಿತು ಭಯಂಕರವಾದ ಸಂಗತಿಗಳನ್ನು ಮಾತಾಡಿಕೊಳ್ಳುತ್ತಿದ್ದಾರೆ.
    ಅವರು ದಂಗೆಯೆದ್ದು ನನ್ನನ್ನು ಕೊಲ್ಲಬೇಕೆಂದುಕೊಂಡಿದ್ದಾರೆ.

14 ಯೆಹೋವನೇ, ನಾನಂತೂ ನಿನ್ನಲ್ಲೇ ಭರವಸವಿಟ್ಟಿದ್ದೇನೆ.
    ನೀನೇ ನನ್ನ ದೇವರು.
15 ನನ್ನ ಜೀವವು ನಿನ್ನ ಕೈಯಲ್ಲಿದೆ.
    ವೈರಿಗಳಿಂದ ನನ್ನನ್ನು ರಕ್ಷಿಸು; ನನ್ನನ್ನು ಅಟ್ಟಿಸಿಕೊಂಡು[c] ಬರುತ್ತಿರುವ ಜನರಿಂದ ನನ್ನನ್ನು ರಕ್ಷಿಸು.
16 ದಯವಿಟ್ಟು ನಿನ್ನ ಸೇವಕನನ್ನು ಸ್ವೀಕರಿಸಿಕೊ.
    ಕರುಣೆಯಿಂದ ನನ್ನನ್ನು ರಕ್ಷಿಸು!

1 ಸಮುವೇಲನು 16:11-13

11 ನಂತರ ಸಮುವೇಲನು ಇಷಯನನ್ನು, “ನಿನಗೆ ಇರುವ ಮಕ್ಕಳು ಇಷ್ಟೆಯೋ?” ಎಂದು ಕೇಳಿದನು.

ಇಷಯನು, “ಇಲ್ಲ, ನನಗೆ ಇನ್ನೊಬ್ಬ ಕಿರಿಯ ಮಗನಿದ್ದಾನೆ. ಅವನು ಕುರಿಮೇಯಿಸುವದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು.

ಆಗ ಸಮುವೇಲನು, “ಅವನನ್ನು ಕರೆಕಳುಹಿಸು. ಅವನನ್ನು ಇಲ್ಲಿಗೆ ಬರಹೇಳು. ಅವನು ಬರುವತನಕ ನಾವು ಊಟಕ್ಕೆ ಕುಳಿತುಕೊಳ್ಳುವುದು ಬೇಡ” ಎಂದು ಹೇಳಿದನು.

12 ಇಷಯನು ಕಿರಿಯ ಮಗನನ್ನು ಕರೆತರಲು ಒಬ್ಬನನ್ನು ಕಳುಹಿಸಿದನು. ಇವನಾದರೋ ಕೆಂಬಣ್ಣದವನೂ ಸುಂದರನೇತ್ರನೂ ನೋಟಕ್ಕೆ ರಮಣೀಯನೂ ಆಗಿದ್ದನು.

ಯೆಹೋವನು ಸಮುವೇಲನಿಗೆ, “ಮೇಲೆದ್ದು ನಿಲ್ಲು, ಅವನನ್ನು ಅಭಿಷೇಕಿಸು. ಇವನನ್ನೇ ನಾನು ಆರಿಸಿದ್ದು” ಎಂದು ಆಜ್ಞಾಪಿಸಿದನು.

13 ಸಮುವೇಲನು ಎಣ್ಣೆಯಿದ್ದ ಕೊಂಬನ್ನು ತೆಗೆದುಕೊಂಡು, ಅದರಲ್ಲಿದ್ದ ವಿಶೇಷವಾದ ಎಣ್ಣೆಯನ್ನು ಇಷಯನ ಕಿರಿಮಗನ ಮೇಲೆ, ಅವನ ಸೋದರರ ಎದುರಿನಲ್ಲೇ ಸುರಿದನು. ಆ ದಿನದಿಂದ ಯೆಹೋವನ ಆತ್ಮವು ಮಹಾಶಕ್ತಿಯೊಡನೆ ದಾವೀದನಲ್ಲಿ ನೆಲೆಸಿತು. ಅನಂತರ ಸಮುವೇಲನು ರಾಮಕ್ಕೆ ಹಿಂದಿರುಗಿದನು.

ಫಿಲಿಪ್ಪಿಯವರಿಗೆ 1:1-11

ಯೇಸು ಕ್ರಿಸ್ತನ ದಾಸರಾದ ಪೌಲನು ತಿಮೊಥೆಯನು ಫಿಲಿಪ್ಪಿಯವರಿಗೆ ಬರೆಯುವ ಪತ್ರ. ಯೇಸು ಕ್ರಿಸ್ತನ ಮೂಲಕ ದೇವರ ಪರಿಶುದ್ಧ ಜನರಾಗಿರುವವರಿಗೂ ಎಲ್ಲಾ ಹಿರಿಯರಿಗೂ ಸಭಾಸೇವಕರಿಗೂ ನಾವು ಈ ಪತ್ರವನ್ನು ಬರೆಯತ್ತಿದ್ದೇವೆ.

ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ಉಂಟಾಗಲಿ.

ಪೌಲನ ಪ್ರಾರ್ಥನೆ

ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ. ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ. ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ.

ನಿಮ್ಮೆಲ್ಲರ ವಿಷಯದಲ್ಲಿ ಈ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ. ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ.

ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ:

ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು. 10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು. 11 ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International