Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 130

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.

130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
    ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
ನನ್ನ ಒಡೆಯನೇ, ನನಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲಿಸು.
ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
    ಒಬ್ಬನೂ ಜೀವಂತವಾಗಿ ಉಳಿಯಲಾರ.
ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
    ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.

ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
    ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
    ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
    ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
    ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
    ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.

ಯೆಹೆಜ್ಕೇಲ 36:8-15

“ಆದರೆ ಇಸ್ರೇಲಿನ ಪರ್ವತಗಳೇ, ನೀವು ಹೊಸ ಮರಗಳನ್ನು ಬೆಳೆಯಿಸಿ ನನ್ನ ಜನರಾದ ಇಸ್ರೇಲರಿಗೆ ಹಣ್ಣುಗಳನ್ನು ಒದಗಿಸುತ್ತೀರಿ. ನಾನು ನಿನ್ನೊಂದಿಗಿದ್ದು ಸಹಾಯಮಾಡುತ್ತೇನೆ. ಜನರು ನಿನ್ನ ನೆಲವನ್ನು ಉಳುವರು; ಬೀಜವನ್ನು ಬಿತ್ತುವರು. 10 ನಿನ್ನಲ್ಲಿ ಅನೇಕಾನೇಕ ಮಂದಿ ವಾಸಿಸುವರು. ಇಡೀ ಇಸ್ರೇಲ್ ಜನಾಂಗದವರು ಅಲ್ಲಿ ವಾಸಮಾಡುವರು. ಪಟ್ಟಣಗಳು ಜನಭರಿತವಾಗುವವು. ಹಾಳಾದ ಸ್ಥಳಗಳೆಲ್ಲಾ ತಿರುಗಿ ಕಟ್ಟಲ್ಪಡುವವು. 11 ನಾನು ನಿನಗೆ ಅನೇಕ ಜನರನ್ನೂ ಪ್ರಾಣಿಗಳನ್ನೂ ಕೊಡುವೆನು. ಪ್ರಾಣಿಗಳು ವೃದ್ಧಿಯಾಗುವವು ಮತ್ತು ಜನರು ಹೆಚ್ಚು ಮಕ್ಕಳನ್ನು ಪಡೆಯುವರು. ಹಿಂದಿನ ಕಾಲದಲ್ಲಿ ನಿನ್ನ ದೇಶ ಜನಭರಿತವಾಗಿದ್ದಂತೆ ಈಗಲೂ ಆಗುವ ಹಾಗೆ ನಾನು ಜನರನ್ನು ತರಿಸುವೆನು. ನಿನ್ನ ದೇಶವು ಹಿಂದೆ ಇದ್ದುದಕ್ಕಿಂತಲೂ ಉತ್ತಮ ದೇಶವನ್ನಾಗಿ ಮಾಡುವೆನು. ಆಗ ನಾನು ಯೆಹೋವನೆಂದು ನೀನು ತಿಳಿದುಕೊಳ್ಳುವೆ. 12 ಹೌದು, ನಾನು ಅನೇಕಾನೇಕ ಇಸ್ರೇಲ್ ಜನರನ್ನು ನಿನ್ನ ದೇಶಕ್ಕೆ ನಡೆಸುವೆನು. ನೀನು ಅವರ ಸೊತ್ತಾಗುವೆ. ಅವರ ಮಕ್ಕಳನ್ನು ನೀನು ಮತ್ತೆಂದಿಗೂ ತೆಗೆದುಹಾಕುವುದಿಲ್ಲ.”

13 ನನ್ನ ಒಡೆಯನಾದ ಯೆಹೋವನು ಹೇಳಿದ ಮಾತುಗಳಿವು, “ಇಸ್ರೇಲ್ ದೇಶವೇ, ಜನರು ನಿನ್ನ ವಿಷಯದಲ್ಲಿ ಕೆಟ್ಟ ಮಾತುಗಳನ್ನು ಆಡುತ್ತಾರೆ. ನೀನು ನಿನ್ನ ಜನರನ್ನು ನಾಶ ಮಾಡಿದಿ ಎಂದು ಹೇಳುತ್ತಾರೆ. ನಿನ್ನ ಮಕ್ಕಳನ್ನು ನೀನೇ ತೆಗೆದುಹಾಕಿದಿ ಎಂದು ಹೇಳುತ್ತಾರೆ. 14 ಆದರೆ ಇನ್ನು ಮುಂದೆ ನೀನು ಜನರನ್ನು ನಾಶಮಾಡುವುದಿಲ್ಲ. ಅವರ ಮಕ್ಕಳನ್ನು ನೀನು ತೆಗೆದುಬಿಡುವುದಿಲ್ಲ.” ಇದು ಒಡೆಯನಾದ ಯೆಹೋವನ ನುಡಿ. 15 “ನಾನು ಆ ಜನಾಂಗಗಳು ಇನ್ನು ಮೇಲೆ ನಿನ್ನನ್ನು ತುಚ್ಛೀಕರಿಸಲು ಬಿಡುವದಿಲ್ಲ. ಅವರ ಮಾತುಗಳಿಂದ ಇನ್ನು ನೀನು ಬೇಸರಪಟ್ಟುಕೊಳ್ಳಲಾರೆ. ನಿನ್ನ ಜನರಿಂದ ಮಕ್ಕಳನ್ನು ಕಿತ್ತುಕೊಳ್ಳಲಾರೆ.” ಇದು ನನ್ನ ಒಡೆಯನಾದ ಯೆಹೋವನ ನುಡಿ.

ಲೂಕ 24:44-53

44 ಯೇಸು ಅವರಿಗೆ, “ನಾನು ಮೊದಲು ನಿಮ್ಮ ಸಂಗಡ ಇದ್ದುದನ್ನು ಜ್ಞಾಪಕಮಾಡಿಕೊಳ್ಳಿರಿ. ನನ್ನ ವಿಷಯವಾಗಿ ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರವಾದಿಗಳ ಗ್ರಂಥಗಳಲ್ಲಿ, ಕೀರ್ತನೆಗಳಲ್ಲಿ ಬರೆದಿರುವ ಪ್ರತಿಯೊಂದು ಸಂಗತಿಯೂ ನೆರವೇರಬೇಕಾಗಿದೆ ಎಂದು ನಾನು ಹೇಳಿದೆನು” ಅಂದನು.

45 ಬಳಿಕ ಯೇಸು ಪವಿತ್ರ ಗ್ರಂಥವನ್ನು ತನ್ನ ಶಿಷ್ಯರಿಗೆ ವಿವರಿಸಿದನು. ತನ್ನ ಬಗ್ಗೆ ಬರೆದಿರುವ ಸಂಗತಿಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದನು. 46 ಬಳಿಕ ಯೇಸು ಅವರಿಗೆ, “ಕ್ರಿಸ್ತನು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಸತ್ತವರೊಳಗಿಂದ ಎದ್ದುಬರುವನು ಎಂದು ಬರೆಯಲ್ಪಟ್ಟಿದೆ. 47-48 ಈ ಸಂಗತಿಗಳು ನೆರವೇರುವುದನ್ನು ನೀವು ನೋಡಿದಿರಿ. ನೀವೇ ಇದಕ್ಕೆ ಸಾಕ್ಷಿಗಳು. ನೀವು ಜನರ ಬಳಿಗೆ ಹೋಗಿ, ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಳ್ಳುವವರಿಗೆ ಪಾಪಕ್ಷಮೆಯಾಗುತ್ತದೆ ಎಂದು ತಿಳಿಸಿರಿ. ನೀವು ಈ ಸುವಾರ್ತೆಯನ್ನು ಜೆರುಸಲೇಮಿನಲ್ಲಿ ಪ್ರಾರಂಭಿಸಿ ಲೋಕದ ಜನರೆಲ್ಲರಿಗೂ ನನ್ನ ಹೆಸರಿನಲ್ಲಿ ತಿಳಿಸಬೇಕು. 49 ಕೇಳಿರಿ! ನನ್ನ ತಂದೆ ನಿಮಗೆ ವಾಗ್ದಾನ ಮಾಡಿದ್ದನ್ನು ನಾನು ನಿಮಗೆ ಕಳುಹಿಸಿಕೊಡುತ್ತೇನೆ. ಆದರೆ ನೀವು ಪರಲೋಕದಿಂದ ಆ ಶಕ್ತಿಯನ್ನು ಪಡೆಯುವ ತನಕ ಜೆರುಸಲೇಮಿನಲ್ಲೇ ಕಾದುಕೊಂಡಿರಿ” ಅಂದನು.

ಯೇಸುವಿನ ಪರಲೋಕಾರೋಹಣ

(ಮಾರ್ಕ 16:19-20; ಅ.ಕಾ. 1:9-11)

50 ಯೇಸು ತನ್ನ ಶಿಷ್ಯರನ್ನು ಜೆರುಸಲೇಮಿನ ಹೊರಗೆ ಬೆಥಾನಿಯದ ಸಮೀಪಕ್ಕೆ ಕರೆದುಕೊಂಡು ಹೋದನು. ಯೇಸು ತನ್ನ ಕೈಗಳನ್ನು ಎತ್ತಿ ಶಿಷ್ಯರನ್ನು ಆಶೀರ್ವದಿಸಿದನು. 51 ಯೇಸು ಅವರನ್ನು ಆಶೀರ್ವದಿಸುತ್ತಿದ್ದಾಗ ಅವರಿಂದ ಬೇರ್ಪಟ್ಟು ಪರಲೋಕಕ್ಕೆ ಎತ್ತಲ್ಪಟ್ಟನು. 52 ಶಿಷ್ಯರು ಅಲ್ಲಿ ಆತನನ್ನು ಆರಾಧಿಸಿದರು. ಬಳಿಕ ಅವರು ಪಟ್ಟಣಕ್ಕೆ ಹಿಂತಿರುಗಿ ಹೋದರು. ಅವರು ಬಹಳ ಸಂತೋಷಗೊಂಡಿದ್ದರು. 53 ಅವರು ಯಾವಾಗಲೂ ದೇವಾಲಯದಲ್ಲಿ ದೇವರನ್ನು ಸ್ತುತಿಸುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International