Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
130 ಯೆಹೋವನೇ, ಮಹಾ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದೇನೆ;
ಸಹಾಯಕ್ಕಾಗಿ ನಿನ್ನನ್ನೇ ಕೂಗಿಕೊಳ್ಳುತ್ತಿದ್ದೇನೆ.
2 ನನ್ನ ಒಡೆಯನೇ, ನನಗೆ ಕಿವಿಗೊಡು.
ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ನೀನು ಮನುಷ್ಯರನ್ನು ಅವರೆಲ್ಲರ ಪಾಪಗಳಿಗೆ ತಕ್ಕಂತೆ ದಂಡಿಸಿದರೆ
ಒಬ್ಬನೂ ಜೀವಂತವಾಗಿ ಉಳಿಯಲಾರ.
4 ಯೆಹೋವನೇ, ನಿನ್ನ ಜನರನ್ನು ಕ್ಷಮಿಸು.
ಆಗ, ನಿನ್ನನ್ನು ಆರಾಧಿಸುವುದಕ್ಕೆ ಜನರಿರುವರು.
5 ನಾನು ಯೆಹೋವನ ಸಹಾಯಕ್ಕಾಗಿ ಕಾಯುತ್ತಿದ್ದೇನೆ.
ನನ್ನ ಪ್ರಾಣವು ಆತನಿಗಾಗಿ ಕಾದುಕೊಂಡಿರುವುದು.
ಆತನು ನುಡಿಯನ್ನು ನಂಬಿಕೊಂಡಿದ್ದೇನೆ.
6 ನಾನು ನನ್ನ ಒಡೆಯನಿಗಾಗಿ ಮುಂಜಾನೆಗೋಸ್ಕರ ಎದುರುನೋಡುತ್ತಿರುವ
ಕಾವಲುಗಾರರಂತೆ ನಿರೀಕ್ಷಿಸುತ್ತಿದ್ದೇನೆ.
7 ಇಸ್ರೇಲೇ, ಯೆಹೋವನಲ್ಲಿ ಭರವಸವಿಡು.
ಆತನಲ್ಲಿ ಮಾತ್ರ ನಿಜವಾದ ಪ್ರೀತಿಯಿದೆ.
ಆತನು ನಮ್ಮನ್ನು ಯಾವಾಗಲೂ ರಕ್ಷಿಸುವನು.
8 ಆತನೇ ಇಸ್ರೇಲರ ಎಲ್ಲಾ ಪಾಪಗಳನ್ನು ಕ್ಷಮಿಸುವನು.
ದೇವರು ಮನುಷ್ಯರನ್ನು ನಾಶಮಾಡಲು ಇಷ್ಟಪಡುವುದಿಲ್ಲ
10 “ಆದ್ದರಿಂದ ನರಪುತ್ರನೇ, ನನ್ನ ಪರವಾಗಿ ಇಸ್ರೇಲ್ ಜನರೊಂದಿಗೆ ಮಾತನಾಡು. ‘ನಾವು ಪಾಪಮಾಡಿದ್ದೇವೆ. ಕಟ್ಟಳೆಗಳನ್ನು ಮೀರಿದ್ದೇವೆ. ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ. ನಾವು ಆ ಪಾಪಗಳಿಂದಾಗಿ ಕ್ಷೀಣಿಸುತ್ತಿದ್ದೇವೆ. ನಾವು ಜೀವಿಸಬೇಕಾದರೆ ಏನು ಮಾಡಬೇಕು?’ ಎಂದು ಅವರು ಕೇಳಿಯಾರು.
11 “ಆಗ ನೀನು ಅವರಿಗೆ ಹೀಗೆ ಹೇಳಬೇಕು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನನ್ನ ಜೀವದಾಣೆ, ನಾನು ಜನರು ಸಾಯುವುದನ್ನು ನೋಡಲು ಇಷ್ಟಪಡುವದಿಲ್ಲ; ದುಷ್ಟರು ಸಾಯುವದರಲ್ಲಿಯೂ ನನಗೆ ಇಷ್ಟವಿಲ್ಲ. ಆ ದುಷ್ಟರು ನನ್ನ ಕಡೆಗೆ ತಿರುಗಬೇಕೆಂದು ನಾನು ಇಷ್ಟಪಡುತ್ತೇನೆ. ಅವರು ತಮ್ಮ ದುರ್ನಡತೆಯನ್ನು ಬಿಟ್ಟು ನಿಜವಾದ ಜೀವನವನ್ನು ನಡೆಸಬೇಕು. ಆದ್ದರಿಂದ ನನ್ನ ಬಳಿಗೆ ಹಿಂದಿರುಗಿ ಬನ್ನಿರಿ. ದುಷ್ಟತನವನ್ನು ಬಿಟ್ಟುಬಿಡಿರಿ. ಇಸ್ರೇಲ್ ಜನರೇ, ನೀವು ಯಾಕೆ ಸಾಯುತ್ತೀರಿ?’
12 “ನರಪುತ್ರನೇ, ನಿನ್ನ ಜನರಿಗೆ ಹೀಗೆ ಹೇಳು: ‘ಒಬ್ಬನು ಒಳ್ಳೆಯವನಾಗಿದ್ದುಕೊಂಡು ನಂತರ ದುಷ್ಟತನವನ್ನು ನಡಿಸಿದರೆ ಅವನ ಸತ್ಕಾರ್ಯಗಳು ಅವನನ್ನು ರಕ್ಷಿಸಲಾರವು. ಒಬ್ಬನು ದುಷ್ಕೃತ್ಯಗಳನ್ನು ಮಾಡಿ ತನ್ನ ದುಷ್ಟತ್ವದಿಂದ ತಿರುಗಿದರೆ ಅವನು ನಾಶವಾಗುವದಿಲ್ಲ. ಆದ್ದರಿಂದ ಹಿಂದೆ ಮಾಡಿದ್ದ ಪುಣ್ಯಕಾರ್ಯಗಳು ಒಬ್ಬ ಪಾಪಿಯನ್ನು ರಕ್ಷಿಸಲಾರದೆಂಬುದನ್ನು ಜ್ಞಾಪಕದಲ್ಲಿಟ್ಟುಕೊ.’
13 “ಒಂದುವೇಳೆ ‘ನೀನು ಜೀವಿಸುವಿ’ ಎಂದು ಒಬ್ಬ ಒಳ್ಳೆಯ ಮನುಷ್ಯನಿಗೆ ನಾನು ಹೇಳಬಹುದು. ಅವನು ತಾನು ಮಾಡಿದ ಒಳ್ಳೆಯ ಕಾರ್ಯಗಳ ನಿಮಿತ್ತ ತಾನು ರಕ್ಷಿಸಲ್ಪಟ್ಟಿದ್ದೇನೆ ಎಂದು ನೆನಸಬಹುದು. ಆ ಬಳಿಕ ಅವನು ದುಷ್ಕೃತ್ಯಗಳನ್ನು ಮಾಡಲು, ನಾನು ಅವನ ಪುಣ್ಯಕಾರ್ಯಗಳನ್ನು ನೋಡದೆ ಅವನ ದುಷ್ಕೃತ್ಯಗಳ ನಿಮಿತ್ತ ಅವನನ್ನು ಸಾಯಿಸುವೆನು.
14 “ಒಂದುವೇಳೆ ನಾನು ಒಬ್ಬ ದುಷ್ಟನಿಗೆ ನೀನು ಸಾಯುವಿ ಎಂದು ಹೇಳಿದರೆ ಅವನು ತನ್ನ ಜೀವಿತವನ್ನು ಬದಲಾಯಿಸಿ, ದುಷ್ಟತ್ವವನ್ನು ನಿಲ್ಲಿಸಿ, ಅವನು ನೀತಿವಂತನಾಗಿ ಬಾಳಿ 15 ಒತ್ತೆ ತೆಗೆದುಕೊಂಡಿದ್ದ ವಸ್ತುಗಳನ್ನು ಹಿಂದಕ್ಕೆ ಕೊಟ್ಟು, ತಾನು ಕದ್ದುಕೊಂಡದ್ದನ್ನು ಹಿಂದಕ್ಕೆ ಕೊಟ್ಟು, ಜೀವಕರವಾದ ಕಟ್ಟಳೆಗಳನ್ನು ಅನುಸರಿಸಿದರೆ ಆ ಮನುಷ್ಯನು ಖಂಡಿತವಾಗಿ ಬದುಕುವನು. ಅವನನ್ನು ಸಾಯಿಸುವುದಿಲ್ಲ. 16 ಅವನು ಹಿಂದೆ ಮಾಡಿದ ದುಷ್ಕೃತ್ಯಗಳನ್ನು ನಾನು ನನ್ನ ನೆನಪಿಗೆ ತರುವದಿಲ್ಲ. ಯಾಕೆಂದರೆ ಈಗ ಅವನು ಶಿಷ್ಟನಾಗಿ ಬಾಳುತ್ತಿದ್ದಾನೆ. ಆದುದರಿಂದ ಅವನು ಜೀವಿಸುವನು.
ಏಳನೆಯ ತುತೂರಿ
15 ಏಳನೆಯ ದೇವದೂತನು ತನ್ನ ತುತೂರಿಯನ್ನು ಊದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳು ಉಂಟಾದವು. ಆ ಶಬ್ದಗಳು ಹೀಗೆ ಹೇಳಿದವು:
“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರ್ಪಾಟಾಯಿತು.
ಆತನು ಯುಗಯುಗಾಂತರಗಳಲ್ಲಿಯೂ ಆಳುವನು.”
16 ನಂತರ ಇಪ್ಪತ್ನಾಲ್ಕು ಮಂದಿ ಹಿರಿಯರು ಮೊಣಕಾಲೂರಿ ದೇವರನ್ನು ಆರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. 17 ಆ ಹಿರಿಯರು ಹೀಗೆ ಹೇಳಿದರು:
“ಪ್ರಭುವೇ, ಸರ್ವಶಕ್ತನಾದ ದೇವರೇ, ಭೂತಕಾಲದಲ್ಲಿ ಇದ್ದಾತನೇ,
ವರ್ತಮಾನ ಕಾಲದಲ್ಲಿ ಇರುವಾತನೇ, ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
ನೀನು ನಿನ್ನ ಮಹಾ ಅಧಿಕಾರವನ್ನು ಉಪಯೋಗಿಸಿ ನಿನ್ನ ಆಡಳಿತವನ್ನು
ಆರಂಭಿಸಿದ್ದರಿಂದ ನಿನಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
18 ಲೋಕದ ಜನರು ಕೋಪಗೊಂಡಿದ್ದರು.
ಆದರೆ ಇದು ನಿನ್ನ ಕೋಪದ ಸಮಯ.
ಸತ್ತವರಿಗೆ ತೀರ್ಪು ನೀಡುವ ಸಮಯವಿದು.
ನಿನ್ನ ಸೇವಕರಾದ ಪ್ರವಾದಿಗಳಿಗೂ
ನಿನ್ನ ಪರಿಶುದ್ಧ ಜನರಿಗೂ ನಿನ್ನನ್ನು ಗೌರವಿಸುವ
ದೊಡ್ಡವರಿಗೂ ಚಿಕ್ಕವರಿಗೂ ಪ್ರತಿಫಲ ನೀಡುವ ಸಮಯವಿದು.
ಲೋಕನಾಶಕರನ್ನು ನಾಶಪಡಿಸುವ ಸಮಯವಿದು.”
19 ನಂತರ ಪರಲೋಕದಲ್ಲಿರುವ ದೇವರ ಆಲಯವು ತೆರೆಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಒಡಂಬಡಿಕೆಯನ್ನು ಇಟ್ಟಿದ್ದ ಪೆಟ್ಟಿಗೆಯು ಆತನ ಆಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೊಳೆದವು, ಶಬ್ದಗಳಾದವು, ಗುಡುಗುಗಳಾದವು, ಭೂಕಂಪಗಳಾದವು ಮತ್ತು ಆಲಿಕಲ್ಲಿನ ಮಳೆಯೂ ಸುರಿಯಿತು.
Kannada Holy Bible: Easy-to-Read Version. All rights reserved. © 1997 Bible League International